Don't Miss!
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- News
Economic Survey: 2024ರಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 6.5: ಆರ್ಥಿಕ ಸಮೀಕ್ಷೆ
- Sports
Ind Vs Aus Test: ಟೆಸ್ಟ್ ಸರಣಿಗೆ ತಯಾರಿ: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್
- Automobiles
ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vadhandhi Web Series Review : ಸುಂದರಿ 'ವೆಲೋನಿ' ನಿಗೂಢ ಸಾವು; ಅವರ್ ಬಿಟ್, ಇವರ್ ಬಿಟ್ ಕೊಂದವರಾರು?
ವೆಬ್ ಸರಣಿ ಹೆಸರು: ವದಂದಿ/ವದಂತಿ - ದ ಫ್ಯಾಬಲ್ ಆಫ್ ವೆಲೋನಿ ( ತಮಿಳು )
ತಾರಾಗಣ: ಎಸ್ ಜೆ ಸೂರ್ಯ, ಲೈಲಾ, ಸಂಜನಾ ಹಾಗೂ ನಝರ್
ಎಪಿಸೋಡ್ಸ್: 8
ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೊ
ಆವೃತ್ತಿಗಳು: ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ.
ನಿರ್ದೇಶಕರು: ಆಂಡ್ರ್ಯೂ ಲೂಯಿಸ್
ವದಂದಿ ಅಥವಾ ವದಂತಿ ತಮಿಳಿನ ನೂತನ ವೆಬ್ ಸರಣಿ. ಡಿಸೆಂಬರ್ 2ರಿಂದ ಅಮೆಜಾನ್ ಪ್ರೈಮ್ ವಿಡಿಯೊನಲ್ಲಿ ಪ್ರಸಾರವಾಗುತ್ತಿರುವ ಈ ಸರಣಿ ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್. ನಿಗೂಢ ಸಾವಿನ ಸುತ್ತ ಸುತ್ತುವ ಈ ಸರಣಿ ಕ್ರೈಮ್ ಸಸ್ಟೆನ್ಸ್ ಥ್ರಿಲ್ಲರ್ ಇಷ್ಟಪಡುವ ವೀಕ್ಷಕರಿಗೆ ಹೇಳಿ ಮಾಡಿಸಿದ್ದು. ಪ್ರತಿ ಸಸ್ಪೆನ್ಸ್ ಥ್ರಿಲ್ಲರ್ ರೀತಿ ಈ ಸರಣಿ ಟಿಪಿಕಲ್ ಥ್ರಿಲ್ಲರ್ ಎನಿಸಿಕೊಳ್ಳದೇ ವಿಭಿನ್ನವಾಗಿ ನಿಲ್ಲಲಿದೆ. ಇದಕ್ಕೆ ಕಾರಣ ಅಚ್ಚುಕಟ್ಟಾದ, ಗೊಂದಲಕ್ಕೆ ದೂಡಿ ಕುತೂಹಲ ಹೆಚ್ಚಿಸುವ ಹಾಗೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವ ಬರವಣಿಗೆ. ಇನ್ನು ಪೊಲೀಸ್ ತನಿಖೆ ಎಷ್ಟು ಕಷ್ಟ, ಎಷ್ಟು ಗೊಂದಲದಿಂದ ಕೂಡಿರಲಿದೆ, ಆತ ಇದರಿಂದ ಎದುರಿಸುವ ಸಮಸ್ಯೆಗಳೇನು ಎಂಬುದನ್ನೂ ಸಹ ಚೆನ್ನಾಗಿ ತೋರಿಸಲಾಗಿದೆ. ಪೊಲೀಸ್ ತನಿಖಾ ದೃಷ್ಟಿಕೋನದಿಂದ ಸರಣಿ ನೋಡಿದವರಿಗೆ ಇದು ಮತ್ತಷ್ಟು ಕಿಕ್ ನೀಡಬಹುದು.
ಹೌದು, ಸರಣಿಯಲ್ಲಿನ ಎಂಟು ಎಪಿಸೋಡುಗಳೂ ಸಹ ಟ್ವಿಸ್ಟ್‌ಗಳಿಂದಲೇ ಕೂಡಿವೆ. ಮೊದಲ ಎಪಿಸೋಡ್ ಆದ 'ದ ಡೆಡ್ ಸ್ಟಾರ್' ನಟಿಯೋರ್ವಳ ಶವ ಚಿತ್ರೀಕರಣದ ಸ್ಥಳದಲ್ಲಿ ಸಿಗುವುದರಿಂದ ಆರಂಭವಾಗುತ್ತದೆ ಹಾಗೂ ನಟಿಯ ಕೊಲೆಯಾಗಿದೆ ಎಂದು ದೊಡ್ಡ ಸುದ್ದಿಯೂ ಆಗುತ್ತದೆ. ಆದರೆ ಕೆಲ ಸಮಯದಲ್ಲೇ ನಟಿ ಸುದ್ದಿ ನೋಡಿ ಕರೆ ಮಾಡಿ ಚಿತ್ರತಂಡಕ್ಕೆ ನಾನು ಬದುಕಿದ್ದೇನೆ ಎಂದು ಬೆಳವಣಿಗೆಯ ಕುರಿತು ಆಕ್ರೋಶ ಹೊರಹಾಕಿದಾಗ ಆ ಶವ ನಟಿಯದ್ದಲ್ಲ ಎಂಬ ಟ್ವಿಸ್ಟ್ ಜತೆ ವಿಷಯ ತಿಳಿಯುತ್ತೆ. ಹೆಸರು, ಗುರುತು ಇಲ್ಲದ ಆ ಯುವತಿ ಶವ ಯಾರದ್ದು ಎಂಬುದನ್ನು ಚಿತ್ರಗಾರನ ಸಹಾಯದಿಂದ ಚಿತ್ರ ಬಿಡಿಸಿ ದಿನಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಪತ್ತೆ ಹಚ್ಚಲಾಗುತ್ತೆ.
ಹೀಗೆ ಚಿತ್ರೀಕರಣದ ಸ್ಥಳದಲ್ಲಿ ಸಿಕ್ಕ ಆ ಶವ ವೆಲೋನಿ ಎಂಬ ಸುಂದರ ಹದಿ ಹರೆಯದ ಯುವತಿಯದ್ದು ಎಂಬುದು ತಿಳಿದು ಬರುತ್ತದೆ. ಆರು ವರ್ಷ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಅಮ್ಮನೊಂದಿಗೆ ಬೆಳೆದ ವೆಲೋನಿ ಕೊಲೆಯಾಗಿದ್ದಾದರೂ ಏಕೆ, ಆಕೆಯನ್ನು ಕೊಲೆ ಮಾಡುವಂತ ದ್ವೇಷ ಇದ್ದದ್ದು ಯಾರಿಗೆ, ಹೀನಾಯವಾಗಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದವರು ಯಾರು ಎಂಬುದೇ ವದಂತಿ ವೆಬ್ ಸರಣಿಯ ಕತೆ.

ಟ್ವಿಸ್ಟ್.. ಟ್ವಿಸ್ಟ್.. ಟ್ವಿಸ್ಟ್..
ಇನ್ನು ವದಂತಿ ವೆಬ್ ಸರಣಿ ಥ್ರಿಲ್ಲರ್ ವೀಕ್ಷಿಸುವವರಿಗೆ ಇಷ್ಟವಾಗುತ್ತೆ ಎಂದು ವಿಶ್ವಾಸದಿಂದ ಹೇಳಲು ಕಾರಣ ಸರಣಿಯುದ್ದಕ್ಕೂ ಇರುವ ಅಪಾರವಾದ ಟ್ವಿಸ್ಟ್ ಎನ್ನಬಹುದು. ವೆಲೋನಿ ಕೊಲೆ ಯಾರು ಮಾಡಿರಬಹುದು ಎಂದು ತನಿಖೆ ಆರಂಭಿಸುವ ಪೊಲೀಸರಿಗೆ ವೆಲೋನಿ ಗುಣವೇ ಸರಿ ಇಲ್ಲ ಎಂಬ ಅಂಶಗಳು ಸಿಗುತ್ತವೆ. ವೆಲೋನಿ ಅಮ್ಮ ಲಾಡ್ಜ್ ವ್ಯವಹಾರ ನಡೆಸುತ್ತಿದ್ದು ಅಲ್ಲಿ ತಂಗಲು ಬರುವ ಕೆಲವರ ಜತೆ ವೆಲೋನಿ ಸಲಿಗೆಯಿಂದ ಇದ್ದ ಅಂಶಗಳು ಆಕೆಯ ಮೇಲಿನ ಸಂಶಯ ಹೆಚ್ಚಾಗುವಂತೆ ಪೊಲೀಸರಿಗೂ ಮಾಡುತ್ತದೆ ಹಾಗೂ ಪೊಲೀಸರಿಗೂ ಮಾಡುತ್ತದೆ. ಹೀಗೆ ವೆಲೋನಿಯೇ ಸರಿ ಇಲ್ಲ ಎಂದು ವೀಕ್ಷಕ ನಿರ್ಧಾರ ಮಾಡುವ ಸಮಯಕ್ಕೆ ಸರಿಯಾಗಿ ಟ್ವಿಸ್ಟ್ ಬರಲಿದ್ದು, ಮತ್ತೆ ಪ್ರೇಕ್ಷಕ ಅಯ್ಯೋ ಪಾಪ ವೆಲೋನಿ ಎಂದುಕೊಳ್ಳುತ್ತಾನೆ. ಇನ್ನು ಲಾಡ್ಜ್‌ಗೆ ತಂಗಲು ಬರುವ ತಂದೆ ವಯಸ್ಸಿನ ಓರ್ವ ಸಾಹಿತಿ ಜತೆ ವೆಲೋನಿ ನಡೆದುಕೊಳ್ಳುವ ಕೆಲ ದೃಶ್ಯ ಹಾಗೂ ಇನ್ನಿತರ ವ್ಯಕ್ತಿಗಳ ಜತೆ ಮುಕ್ತವಾಗಿ ನಗುನಗುತ್ತಾ ಮಾತನಾಡುವ ದೃಶಗಳು ಮತ್ತೆ ವೆಲೋನಿ ಮೇಲಿನ ಅನುಮಾನವನ್ನು ಹೆಚ್ಚಾಗುವಂತೆ ಮಾಡುತ್ತವೆ. ಅಂತಿಮವಾಗಿ ವೆಲೋನಿ ನಿಜಕ್ಕೂ ಕೆಟ್ಟವಳಾ, ಅವಳ ನಡವಳಿಕೆಯೇ ಅವಳನ್ನು ಸಾವಿನ ದವಡೆಗೆ ತಳ್ಳಿತಾ ಎಂಬ ನಿಮ್ಮ ಕುತೂಹಲ ಬಗೆಹರಿಯಬೇಕೆಂದರೆ ನೀವು ವದಂತಿ ಸರಣಿಯನ್ನು ವೀಕ್ಷಿಸಬೇಕು.

ಎಲ್ಲರ ನಟನೆ ಅದ್ಭುತ
ವೆಬ್ ಸರಣಿಯಲ್ಲಿ ಎರಡನೇ ಸಂಚಿಕೆಯಿಂದಲೇ ಟ್ವಿಸ್ಟ್‌ಗಳು ಆರಂಭವಾಗುವ ಕಾರಣ ಹೆಚ್ಚೇನೂ ಕತೆಯನ್ನು ನಾನು ಇಲ್ಲಿ ಬಿಚ್ಚಿಡಲು ಹೋಗುತ್ತಿಲ್ಲ. ಹೀಗಾಗಿ ವೆಲೋನಿ ಸಾವು ಸಂಶಯ ಹುಟ್ಟಿಸುವ ಅಂಶವನ್ನಷ್ಟೇ ಹೈಲೈಟ್ ಮಾಡಿದ್ದೇನೆ. ಇನ್ನು ಈ ಸರಣಿಯಲ್ಲಿ ವೆಬ್ ಸರಣಿಯಲ್ಲಿ ವೆಲೋನಿ ಪಾತ್ರವನ್ನು ಸಂಜನಾ ಎಂಬ ಯುವ ನಟಿ ಅದ್ಭುತವಾಗಿ ನಿರ್ವಹಿಸಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆ ಪಡೆದುಕೊಳ್ಳುತ್ತಿದ್ದಾಳೆ. ಇನ್ನು ವೆಲೋನಿ ತಾಯಿ ಪಾತ್ರದಲ್ಲಿ ಲೈಲಾ ಹಾಗೂ ಸಾಹಿತಿ ಪಾತ್ರದಲ್ಲಿ ನಸ್ಸರ್ ಅಭಿನಯ ಸೂಪರ್. ವೆಲೋನಿ ಕೊಲೆ ಕೇಸ್ ಅನ್ನು ನಿರ್ವಹಿಸುವ ಪೊಲೀಸ್ ಆಗಿ ಎಸ್ ಜೆ ಸೂರ್ಯ ನಟನೆ ಅಮೋಘ, ಅದ್ಭುತ. ಅದರಲ್ಲಿಯೂ ಐದನೇ ಸಂಚಿಕೆಯ 32 ನಿಮಿಷದಿಂದ 35 ನಿಮಿಷದವರೆಗೆ ಎಸ್ ಜೆ ಸೂರ್ಯ ಮಾಡಿರುವ ಮೂರು ನಿಮಿಷಗಳ ಸಿಂಗಲ್ ಟೇಕ್ ನಟನೆ ಜಸ್ಟ್ ವಾವ್ ಎನ್ನಬಹುದು. ಈ ಪಾತ್ರಗಳು ಮಾತ್ರವಲ್ಲದೇ ಸರಣಿಯಲ್ಲಿ ಬರುವ ಅಲೆಕ್ಸ್, ವಲನ್, ರಾಮರ್, ವಿಘ್ಮೇಶ್ ಹಾಗೂ ಇನ್ನಿತರ ಪಾತ್ರಗಳೂ ಸಹ ವೀಕ್ಷಕರ ಮನ ಮುಟ್ಟಲಿವೆ.

ಪಾಸಿಟಿವ್ ಪಾಯಿಂಟ್ಸ್
ವದಂತಿ ವೆಬ್ ಸರಣಿಯ ದೊಡ್ಡ ಆಸ್ತಿಯೇ ಸ್ಕ್ರೀನ್ ಪ್ಲೇ ಹಾಗೂ ಟ್ವಿಸ್ಟ್. ಜತೆಗೆ ಹಿನ್ನೆಲೆ ಸಂಗೀತ ದೃಶ್ಯಗಳ ಇಂಪ್ಯಾಕ್ಟ್ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಛಾಯಾಗ್ರಹಣ ಚೆನ್ನಾಗಿದ್ದು, ಒಂದೊಳ್ಳೆ ಗ್ರೀನರಿ ಇರುವ ಕಡೆ ಚಿತ್ರೀಕರಿಸುವುದರಿಂದ ದೃಶ್ಯಗಳು ನೋಡಗರಿಗೆ ಇಷ್ಟವಾಗುತ್ತವೆ. ಎಸ್ ಜೆ ಸೂರ್ಯ, ಲೈಲಾ ಹಾಗೂ ಸಂಜನಾ ನಟನೆ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್‌ಗಳು ಎಂದರೆ ತಪ್ಪಾಗಲಾರದು. ಇನ್ನು ಒಂದು ಕೊಲೆ ನಡೆದಾಗ ಅದರ ಸುತ್ತ ಎಷ್ಟೆಲ್ಲಾ ವದಂತಿಗಳು ಹಬ್ಬಲಿವೆ ಎಂಬುದನ್ನು ತೋರಿಸಿ ಪ್ರಸ್ತುತ ಪ್ರಪಂಚ ಹೀಗಿದೆ ಎಂಬುದನ್ನು ಬಿಚ್ಚಿಟ್ಟಿರುವುದಕ್ಕೆ ಒಂದು ಎಕ್ಸ್‌ಟ್ರಾ ಮಾರ್ಕ್ಸ್.

ಮೈನಸ್ ಪಾಯಿಂಟ್
ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಇಷ್ಟಪಡುವವರಿಗೆ ವದಂತಿ ಸರಣಿಯಲ್ಲಿ ಹೆಚ್ಚೇನೂ ಮೈನಸ್ ಪಾಯಿಂಟ್ ಇಲ್ಲ ಎನಿಸಬಹುದು. ಆದರೆ ಸರಣಿ ಮೇಲೆ ಕುತೂಹಲ ಮೂಡಲು ಹಾಗೂ ಕೊನೆ ತನಕ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಬೇಕಂತಲೇ ಕೆಲ ಟ್ವಿಸ್ಟ್ ಇಟ್ಟಿರುವುದು ಸಾಮಾನ್ಯ ಪ್ರೇಕ್ಷಕನಿಗೆ ಹಿಡಿಸದೇ ಮೈನಸ್ ಪಾಯಿಂಟ್ ಎನಿಸಬಹುದು. ಆದರೆ ಇಂತಹ ಟ್ವಿಸ್ಟ್ ಇಟ್ಟು ಕೊನೆಯವರೆಗೂ ಕಾತರತೆಯಿಂದ ಸರಣಿ ವೀಕ್ಷಿಸುವ ಹಾಗೆ ಕತೆ ಹೆಣೆದಿರುವುದು ನಿರ್ದೇಶಕ ಆಂಡ್ರೂ ಲೂಯಿಸ್ ಅವರ ಜಾಣ್ಮೆಯೇ ಸರಿ..