»   » ಕೊಚ್ಚೆಗೆ ಸೆಂಟು ಚಿಮುಕಿಸುವ ನಿರ್ದೇಶಕರ ಈ ಯತ್ನದಲ್ಲಿ , ಊರಿನ ಹುಡುಗಿಯರೆಲ್ಲ ತನಗೇ ಬೇಕೆಂದು ಚಾಲೆಂಜು ಸ್ವೀಕರಿಸುವ ನವರಸನಾಯಕ ನಟಿಸಿದ್ದಕ್ಕಿಂತ ಕಿಸಿದದ್ದೇ ಹೆಚ್ಚು.

ಕೊಚ್ಚೆಗೆ ಸೆಂಟು ಚಿಮುಕಿಸುವ ನಿರ್ದೇಶಕರ ಈ ಯತ್ನದಲ್ಲಿ , ಊರಿನ ಹುಡುಗಿಯರೆಲ್ಲ ತನಗೇ ಬೇಕೆಂದು ಚಾಲೆಂಜು ಸ್ವೀಕರಿಸುವ ನವರಸನಾಯಕ ನಟಿಸಿದ್ದಕ್ಕಿಂತ ಕಿಸಿದದ್ದೇ ಹೆಚ್ಚು.

Posted By:
Subscribe to Filmibeat Kannada

ಹುಡುಗಿಯರೆಂದರೆ ಬಾಯಿ ಬಾಯಿ ಬಿಡುವ ಇಂಥವನನ್ನೂ ‘ವಂಶಕ್ಕೊಬ್ಬ’ ಎಂದು ಕರೆದದ್ದು ಯಾವ ಪಾಪಕ್ಕಾಗಿ ಎಂಬುದು ಪ್ರೇಕ್ಷಕರ ಅರ್ಜಂಟ್‌ ಅವಗಾಹನೆಗೆ ಬಂದು ಬಿಟ್ಟಿದೆ. ಇಂತಿಪ್ಪ ನಮ್ಮ ನಾಯಕನ ರಾಸಲೀಲೆಯ ಕತೆಯೇ ಒಂಥರಾ ಅಯೋಮಯ.

ತೋರಿಕೆಗೆ ಇದು ಪ್ರೇಮಕತೆ

ಇಲ್ಲಿ ಬರುವ ಪಾತ್ರಗಳಿಗೆ ಹೀಗೇ ಇರಬೇಕೆಂಬ ನಿಯಮವಿಲ್ಲ. ಗಾಳಿ ಎತ್ತ ಬೀಸುತ್ತೋ ಅತ್ತ ತೂರಿಕೊಳ್ಳುವ ಗುಣಗಳನ್ನು ಹುಟ್ಟುತ್ತಲೇ ಪಡೆದಂತಿವೆ. ಅದು ಒತ್ತಟ್ಟಿಗಿರಲಿ. ಕತೆಯಾದರೂ ಏನು ತಂದೆ ಎಂದು ಪ್ರೇಕ್ಷಕ ಎಷ್ಟೇ ಹಲುಬಿದರೂ ಅದನ್ನು ಸಿನಿಮಾ ಮುಗಿದ ಮೇಲೂ ಸಸ್ಪೆನ್ಸ್‌ನಲ್ಲಿಡುತ್ತಾರೆ ನಿರ್ದೇಶಕ ಬಾಲಾಜಿ ಸಿಂಗ್‌. ತೋರಿಕೆಗೆ ಪ್ರೇಮಕತೆಯಂತೆ ಕಾಣಿಸಿದರೂ ಮೂಲತಃ ಇದೊಂದು ಕಾಮಕತೆ.

ಜಗ್ಗೇಶ್‌ ನಟನೆ ಬಗ್ಗೆ ಏನೂ ಹೇಳಿದರೂ ಅದು ಕಡಿಮೆ ಅನಿಸೋದು ನಿಜ. ಆದರೂ ಈ ‘ರಸ’ ನಾಯಕ ನಟಿಸಿದ್ದಕ್ಕಿಂತ ಕಿಸಿದದ್ದೇ ಹೆಚ್ಚು. ಹಾಸ್ಯದ ಹೆಸರಿನಲ್ಲಿ ಹೊಲಸು ಶಬ್ದ ಗಳಿಗೆ ಜೀವ ಕೊಟ್ಟಿದ್ದೇ ಈ ಪುಣ್ಯಾತ್ಮನಿಗೆ ಸಿಕ್ಕುವ ಕ್ರೆಡಿಟ್ಟು. ಮಣಿ ಚಂದನ ಹೆಸರಿನ ಹುಡುಗಿಯಿ ಮೈಯೇ ಚಿತ್ರದುದ್ದಕ್ಕೂ ಮಾತಾಡುತ್ತದೆ. ಯಾರು ಏನೇ ಹೇಳುತ್ತಿದ್ದರೂ, ದೆವ್ವ ಕಂಡವಳಂತೆ ಮೂಗರಳಿಸಿ, ಕಣ್ಣಗಲಿಸಿ, ಈಕೆ ಮಿಕಮಿಕಿ ನೋಡುತ್ತಾಳೆ. ಯಾಕೆಂದರೆ ಈಕೆಯದು ಭಾಷಾ ಸಮಸ್ಯೆ. ಕನ್ನಡ ತಿಳಿಯುತುವುದಿಲ್ಲ ಅನಿಸುತ್ತೆ ತ್ಚು...ತ್ಚು..

‘ಕೇಳೆನೋ ಹರಿ...ತಾಳೆನು ’

ಇದ್ದುದರಲ್ಲಿ ಸುಜಿತಾ ಪರವಾಗಿಲ್ಲ. ಕೊಟ್ಟದ್ದನ್ನು ಕೊಟ್ಟಷ್ಟೇ ಚೆಂದವಾಗಿ ಮಾಡಿ ಕೊನೆಗೆ ಇಂಥ ‘ವಂಶ’ ದಲ್ಲಿ ಇರುವುದೇ ಬೇಡ ಎಂದು ಪರಮಾತ್ಮನ ಪಾದ ಸೇರುತ್ತಾಳೆ ! ಪ್ರೇಕ್ಷಕರಿಗೆ ಮತ್ತೊಂದು ಶಾಕ್‌ ನೀಡುವವರು ಸಂಭಾಷಣೆ ಬರೆದ ಕೋಟಗಾನ ಹಳ್ಳಿ ರಾಮಯ್ಯ.

‘ಸಂಕ್ರಾಂತಿ’ಯಂಥ ಧಾರವಾಹಿಗೆ ಮಾತು ಕೊಟ್ಟು ಹೆಸರು ಗಳಿಸಿದ ರಾಮಯ್ಯ ಇಲ್ಲಿ ಅದಕ್ಕೆ ಸಂಪೂರ್ಣ ಎಳ್ಳು ನೀರು ಬಿಟ್ಟಿದ್ದಾರೆ. ಹುಡುಗಿಯರಿಗೆ ‘ಪಟಾಕಿ’ಎನ್ನುವ ಹೊಸ ಶಬ್ದ ಕೊಟ್ಟಿದ್ದಲ್ಲದೆ ಇನ್ನು ಮುಂದೆ ಜಗ್ಗೇಶ್‌ ಚಿತ್ರಗಳಿಗೆ ಖಾಯಂ ಸಂಭಾಷಣೆಗಾರರಾಗುವ ಹಂಡ್ರೆಡ್‌ ಪರ್ಸೆಂಟ್‌ ಭರವಸೆ ಹುಟ್ಟಿಸಿದ್ದಾರೆ.

‘ ಬಿತ್ತರಿ ಬಿತ್ತರಿ ನಿನಗೆ ನಾನು ಕತ್ತರಿ’ ಇದು ಹಾಡೊಂದರ ಮೊದಲ ಸಾಲು. ಹೀಗಾಗಿ ಹಾಡುಗಳ ಗುಣಮಟ್ಟ ನಿರ್ಧರಿಸುವ ಶಕ್ತಿ ನಮಗಂತೂ ಇಲ್ಲ. ಫೋಟೋಗ್ರಫಿ ಬಗ್ಗೆ ಹೇಳದಿರೋದು ಅವರ ಆರೋಗ್ಯಕ್ಕೆ ಒಳ್ಳೆಯದು. ಏನು ಕೊಟ್ಟರೂ, ಹೇಗೆ ಕೊಟ್ಟರೂ ಪ್ರೇಕ್ಷಕ ನೋಡುತ್ತಾನೆ ಎನ್ನುವ ತಪ್ಪು ಅಭಿಪ್ರಾಯಕ್ಕೆ ಇಡೀ ಚಿತ್ರ ತಂಡ ಸಿಕ್ಕಂತಿದೆ. ಕೊಚ್ಚೆಯನ್ನು ತಂದು ಅದಕ್ಕೆ ಸೆಂಟು ಚಿಮುಕಿಸಿ ತೋರಿಸುವ ಯತ್ನವನ್ನಂತೂ ಕೈ ಬಿಟ್ಟರೆ, ಕನ್ನಡ ಪ್ರೇಕ್ಷಕ ಇಂಥವರಿಗೆ ಅಭಾರಿಯಾಗಿರುತ್ತಾನೆ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada