Love Li Review:ಕಂಚಿನ ಕಂಠ ಮಾಸ್ ಹೀರೊನಾ 'ಲವ್ ಲಿ'ಯಾಗಿ ನೋಡಬಹುದೇ?
ಕನ್ನಡದ ಕಂಚಿನ ಕಂಠ ನಟ ವಸಿಷ್ಠ ಸಿಂಹ ಹೀರೊ ಆಗಿ ನಟಿಸಿರುವ ಸಿನಿಮಾ 'ಲವ್ ಲಿ' ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹರಿಪ್ರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾವಿದು. ಬಿಡುಗಡೆಗೂ ಮುನ್ನವೇ ಸಿನಿಮಾ ಟೀಸರ್, ಟ್ರೈಲರ್‌ನಿಂದ ಸಿನಿ ಪ್ರಿಯರನ್ನು ಸೆಳೆದಿತ್ತು. ಹೀಗಾಗಿ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರಿದ್ದರು.
ವಸಿಷ್ಠ ಸಿಂಹ ಮಾಸ್ ಹೀರೊ. ಆದರೆ, ಸಿನಿಮಾ ಟೈಟಲ್ ಕ್ಲಾಸ್ ಆಗಿದೆ. ಹೀಗಾಗಿ ಮಾಸ್ ಹಾಗೂ ಕ್ಲಾಸ್ ಎರಡನ್ನೂ ಒಟ್ಟಿಗೆ ಸೇರಿಸಿ ನಿರ್ದೇಶಕ ಚೇತನ್ ಕೇಶವ್ ಕಥೆ ಹೆಣೆದಿರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸಿದ್ದಾರೆ. ಹಾಗೇ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಸಿಲುಕಿರುವಾಗಲೇ ವಸಿಷ್ಠ ಸಿಂಹ ನಟನೆಯ ಸಿನಿಮಾ 'ಲವ್ ಲಿ' ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅಂತಹದ್ದೇನಿದೆ? ಸಿನಿಮಾದ ಕಥೆಯೇನು? ಪ್ಲಸ್ ಏನು? ಮೈನಸ್ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ..
'ಲವ್ ಲಿ'ಯಾಗಿದೆಯಾ ಕಥೆ?
'ಲವ್ ಲಿ' ಒಬ್ಬ ಮುಗ್ಧ ರಾಕ್ಷಸನ ಕಥೆ ಎನ್ನಬಹುದು. ಇಲ್ಲಿ ಮಾಸೂ ಇದೆ. ಕ್ಲಾಸೂ ಇದೆ. ಸಿನಿಮಾದ ಆರಂಭದ ದೃಶ್ಯದಿಂದಲೇ ವಸಿಷ್ಠ ಸಿಂಹ ಪಾತ್ರಕ್ಕೆ ಬಿಲ್ಡಪ್ ಕೊಡಲಾಗಿದೆ. ವಸಿಷ್ಠ ಸಿಂಹ ಬಿಲ್ಡಪ್‌ಗಳ ಮೂಲಕವೇ ಎಂಟ್ರಿ ಕೊಡುತ್ತಾರೆ. ಹೀರೊ ಎಂಟ್ರಿಗಿಂತ ಮುನ್ನವೇ ವಿಲನ್‌ಗಳು ಅವನೊಬ್ಬ ರಾಕ್ಷಸ. ಅವನ ಸಹವಾಸಕ್ಕೆ ಯಾಕೆ ಹೋಗುತ್ತೀರಾ ಅಂತಾನೇ ಪ್ರೇಕ್ಷಕರಿಗೆ ಹೀರೋ ಪರಿಚಯ ಮಾಡಿಸುತ್ತಾರೆ. ತಂದೆ ತಾಯಿ ಇಲ್ಲದ ವಸಿಷ್ಠನನ್ನು ನೋಡಿ ನಾಯಕಿಗೆ ಲವ್ ಆಗುತ್ತೆ. ಬಳಿಕ ಒಂದಿಷ್ಟು ಗೋಳಾಡಿಸಿ ಪ್ರೀತಿ ಮಾಡಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗುತ್ತಾರೆ. ಬೆಂಗಳೂರು ಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಸುಂದರ ಸಂಸಾರವನ್ನು ಕಟ್ಟಿಕೊಳ್ಳುತ್ತಾರೆ.
ಫಸ್ಟ್‌ನಲ್ಲಿ 'ಲವ್ ಲಿ' ಟ್ವಿಸ್ಟ್
ಇಬ್ಬರದ್ದೂ ಸುಂದರ ಸಂಸಾರ. ನಾಯಕಿಯನ್ನು ಅತಿಯಾಗಿ ಪ್ರೀತಿಸುತ್ತಾನೆ. ಇಲ್ಲಿ ನಾಯಕಿ ಪಾತ್ರದಲ್ಲಿ ಸ್ಟೆಪಿ ಪಟೇಲ್ ನಟಿಸಿದ್ದಾರೆ. ಮಗು ಬೇಡ ಅಂದುಕೊಂಡಿದ್ದ ವಸಿಷ್ಠ ಸಿಂಹ ಪತ್ನಿ ಆಸೆಗೆ ಕರಗುತ್ತಾನೆ. ಬಳಿಕ ಆ ಮಗುವಿನ ಜೊತೆ ಆನಂದದ ಜೀವನ ಕಳೆಯುತ್ತಿರುತ್ತಾನೆ. ಕೆಲವು ವರ್ಷಗಳ ಬಳಿಕ ಹೆಂಡತಿ ಆರೋಗ್ಯ ಹದಗೆಡುತ್ತೆ. ಆಗ ನಾಯಕನಿಗೆ ಶಾಕ್ ಆಗುವಂತಹ ಸಂಗತಿ ಗೊತ್ತಾಗುತ್ತೆ. ಇಂಟರ್‌ವಲ್‌ನಲ್ಲಿ ಇದೇ ಸಿನಿಮಾಗೆ ಸಿಗುವ ಟ್ವಿಸ್ಟ್. ಇಲ್ಲಿಂದ ಕಥೆ ದಿಕ್ಕು ಹೇಗೆ ಸಾಗುತ್ತೆ ಅನ್ನೋದೇ ಸಿನಿಮಾ.

'ಲವ್ ಲಿ'ಯಾಗಿವೇ ಪಾತ್ರಗಳು
ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ಇಂಪ್ರೆಸಿವ್ ಅನಿಸುತ್ತಾರೆ. ಸಾಧು ಕೋಕಿಲಾ ಇದ್ಮೇಲೆ ಕಾಮಿಡಿಗೆ ಬರವಿಲ್ಲ. ಇನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡ ಪ್ರೇಕ್ಷಕರನ್ನು ನಗಿಸಿ ಮನಗೆದ್ದಿದ್ದಾರೆ. ಒಂದು ಕಂಪನಿಯಲ್ಲಿ ವಸಿಷ್ಠ ಡಿಸೈನರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಅದಕ್ಕೆ ಸಾಧು ಕೋಕಿಲ ಮ್ಯಾನೇಜರ್. ಇನ್ನು ಮ್ಯಾನೇಜರ್ ಅಂದ್ಮೇಲೆ ಕಾಮಿಡಿಗೇನು ಕೊರತೆ ಇರುವುದಿಲ್ಲ. ಕಾಮಿಡಿ ಕಿಲಾಡಿಗಳು ಸೂರಜ್ ಕಾಮಿಡಿ ಕೂಡ ಹೈಲೈಟ್ ಆಗುತ್ತೆ. ಹಾಗೇ ಅಚ್ಯುತ್ ಕುಮಾರ್, ದತ್ತಣ್ಣ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ.
'ಲವ್ ಲಿ' ಪ್ಲಸ್ ಏನು?
ವಸಿಷ್ಠ ಸಿಂಹ ಡಬಲ್ ಶೇಡ್ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಎಂದಿನಂತೆ ಅವರ ಕಂಠ ಇಷ್ಟ ಆಗಿತ್ತೆ. ವಸಿಷ್ಠ ಸಿಂಹ ಹಾಗೂ ಸ್ಟೆಪಿ ಪಟೇಲ್ ಜೋಡಿ ಇಷ್ಟ ಆಗುತ್ತೆ. ಸಾಧು ಕೋಕಿಲಾ ಹಾಗೂ ಸೂರಜ್ ಕಾಮಿಡಿ ಚೆನ್ನಾಗಿದೆ. ಅಚ್ಯುತ್ ಅವರನ್ನು ಇನ್ನಷ್ಟು ಬಳಿಸಿಕೊಳ್ಳಬಹುದಿತ್ತು ಅನಿಸುತ್ತೆ. ದತ್ತಣ್ಣ ಅವರ ಪಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಒಂದು ಐಟಂ ಸಾಂಗ್ ಇದೆ. ಅದು ಪ್ರೇಕ್ಷಕರಿಗೆ ಚೆನ್ನಾಗಿದೆ ಅಂತ ಅನಿಸುವುದರಲ್ಲಿ ಅನುಮಾನವಿಲ್ಲ.
'ಲವ್ ಲಿ' ಮೈನಸ್ ಏನು?
ಈ ಸಿನಿಮಾದ ಫಸ್ಟ್ ಹಾಫ್ ಸ್ವಲ್ಪ ಎಳೆದಿದ್ದಾರೆ ಅಂತ ಫೀಲ್ ಆಗುತ್ತೆ. ಅಲ್ಲದೆ ಸಿನಿಮಾ ಸಾಗುವಾಗ ಸಡನ್ ಆಗಿ ಹುಡುಗಿ ಫ್ಲ್ಯಾಶ್‌ಬ್ಯಾಕ್‌ಗೆ ಹೋಗುತ್ತಾಳೆ. ಆಗ ಪ್ರೇಕ್ಷಕರು ಸಡನ್ ಆಗಿ ಕನ್ಫ್ಯೂಸ್ ಆಗುತ್ತಾರೆ. ಸಹಜವಾಗಿ ಸಾಗುತ್ತಿದ್ದ ಸಿನಿಮಾದಲ್ಲಿ ಡಿಢೀರ್ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತೆ. ಇನ್ನು ಅನೂಪ್ ಸೀಳೀನ್ ಅವರ ಹಾಡುಗಳು ನೆನಪಿನಲ್ಲಿ ಉಳಿಯುವಂತಿಲ್ಲ. ಹಿನ್ನೆಲೆ ಸಂಗೀತ ಕೂಡ ಆಕ್ಷನ್ ಸೀನ್‌ಗಳಲ್ಲಿ ರಿಪೀಟ್ ಆಗಿದೆ ಅಂತ ಅನಿಸುತ್ತವೆ.


Click it and Unblock the Notifications











