Vettaiyan Review: ಗುರಿ ತಪ್ಪದ 'ವೆಟ್ಟೆಯಾನ್' ಬೇಟೆ.. ಪ್ರೇಕ್ಷಕರಿಗೆ ಮನರಂಜನೆಯ ಭರಾಟೆ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ತೆರೆಗಪ್ಪಳಿಸಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಒಂದೊಳ್ಳೆ ಸಂದೇಶದೊಂದಿಗೆ ಜ್ಞಾನವೇಲ್ ಕಟ್ಟಿಕೊಟ್ಟಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.
ರಜನಿಕಾಂತ್ ಜೊತೆಗೆ ಅಮಿತಾಬ್ ಬಚ್ಚನ್, ಮಂಜು ವಾರಿಯರ್, ರಾಣಾ, ಫಹಾದ್ ಫಾಸಿಲ್, ಕಿಶೋರ್ ರೀತಿಯ ಘಟಾನುಘಟಿ ಕಲಾವಿದರು 'ವೆಟ್ಟೆಯಾನ್' ಬಳಗದಲ್ಲಿದ್ದಾರೆ. ಎನ್‌ಕೌಂಟರ್ ಸರೀನಾ? ತಪ್ಪಾ? ಎನ್ನುವ ಚರ್ಚೆಯೇ ಮೇಲೆ ಇಡೀ ಸಿನಿಮಾ ಕಥೆ ನಿಂತಿದೆ. ತಪ್ಪು ಎಂದರೆ ಯಾಕೆ ತಪ್ಪು? ಸರಿ ಎಂದರೆ ಯಾಕೆ ಸರಿ? ಎನ್ನುವ ವಿಶ್ಲೇಷಣೆಯನ್ನು ಚಿತ್ರದಲ್ಲಿ ಮಾಡಲಾಗಿದೆ. ಇತ್ತ ಕಮರ್ಷಿಯಲ್ ಅಂಶಗಳನ್ನು ಬಿಡದೇ ಅತ್ತ ಒಂದೊಳ್ಳೆ ಕಥೆ ಹೇಳುವುದನ್ನು ಮರೆಯದೇ ಬ್ಯಾಲೆನ್ಸ್ ಆಗಿ ಜ್ಞಾನವೇಲ್ ಸಿನಿಮಾ ಕಟ್ಟಿದ್ದಾರೆ.

'ಜೈಲರ್' ಬಳಿಕ ಮತ್ತೊಂದು ಹಿಟ್ ಸಿನಿಮಾ ರಜನಿಕಾಂತ್ ಖಾತೆಗೆ ಬಿದ್ದಂತಾಗಿದೆ. ಅಷ್ಟಕ್ಕೂ 'ವೆಟ್ಟೆಯಾನ್' ಕಥೆಯೇನು? ಸಿನಿಮಾ ಹೇಗಿದೆ? ಯಾರ ಅಭಿನಯ ಹೇಗಿದೆ? ಇಲ್ಲಿದೆ ಕಂಪ್ಲೀಟ್ ರಿವ್ಯೂ ರಿಪೋರ್ಟ್.
'ವೆಟ್ಟೆಯಾನ್' ಕಥೆ
ಅಥಿಯನ್ IPS(ರಜನಿಕಾಂತ್) ಕನ್ಯಾ ಕುಮಾರಿಯಲ್ಲಿ ಎಸ್‌ಪಿ ಆಗಿ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುತ್ತಾನೆ. ತಪ್ಪಿತಸ್ಥರು ಕಾನೂನಿಕ ಕಣ್ಣಿನಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಾರೆ. ಅಂತವರನ್ನು ಎನ್‌ಕೌಂಟರ್ ಮೂಲಕ ಮಟ್ಟ ಹಾಕಿದರೆ ಮತ್ತೊಬ್ಬರಿಗೆ ತಪ್ಪು ಮಾಡಲು ಭಯ ಬರುತ್ತದೆ ಎಂದು ನಂಬಿದವನು. ಕಳ್ಳನಾದರೂ ಫ್ಯಾಟ್ರಿಕ್(ಫಹಾದ್ ಫಾಸಿಲ್) ಬಳಿಕ ಪೋಲಿಸ್ ಇನ್‌ಫಾರ್ಮರ್ ಆಗಿ ಅಥಿಯನ್ ಆಪರೇಷನ್‌ಗಳಲ್ಲಿ ಸಹಾಯ ಮಾಡುತ್ತಿರುತ್ತಾನೆ.

ಸರ್ಕಾರಿ ಶಾಲೆಯ ಶಿಕ್ಷಕಿ ಶರಣ್ಯ(ದುಶಾರ ವಿಜಯನ್) ತಮ್ಮ ಶಾಲೆಯನ್ನೇ ಕೇಂದ್ರವಾಗಿಸಿಕೊಂಡು ಅಕ್ರಮವಾಗಿ ಗಾಂಜಾ ದಂಧೆ ನಡೆಯುತ್ತಿರುವ ಬಗ್ಗೆ ಎಸ್‌ಪಿ ಅಥಿಯನ್ ಗಮನಕ್ಕೆ ತಂದು ಅದನ್ನು ನಿಲ್ಲಿಸುತ್ತಾನೆ. ಬಳಿಕ ಆಕೆ ಚೆನ್ನೈ ಶಾಲೆಗೆ ಶಿಕ್ಷಕಿಯಾಗಿ ಬರುತ್ತಾಳೆ. ಇದ್ದಕ್ಕಿಂದಂತೆ ಆಕೆಯ ಅತ್ಯಾಚಾರ ಹಾಗೂ ಕೊಲೆ ನಡೆಯುತ್ತದೆ. ಗುಣ ಎಂಬ ಯುವಕನೇ ಇದಕ್ಕೆಲ್ಲಾ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗುತ್ತದೆ.
ವಿಚಾರಣೆ ನಡುವೆಯೇ ಆತ ತಪ್ಪಿಸಿಕೊಂಡಾಗ ಅಥಿಯಾನ್ ಆ ಪ್ರಕರಣ ಕೈಗೆತ್ತಿಕೊಂಡು ಆತನನ್ನು ಎನ್‌ಕೌಂಟರ್ ಮಾಡುತ್ತಾನ. ಮೊದಲಿನಿಂದ ವಿಶೇಷ ನ್ಯಾಯಾಧೀಶ ಸತ್ಯದೇವ್(ಅಮಿತಾಬ್ ಬಚ್ಚನ್) ಪೊಲೀಸ್ ಎನ್‌ಕೌಂಟರ್ ಅನ್ನು ವಿರೋಧಿಸುತ್ತಾ ಬರುತ್ತಿರುತ್ತಾನೆ. ಶರಣ್ಯ ಸಾವಿಗೆ ಗುಣ ಕಾರಣ ಅಲ್ಲ ಎಂದು ಗೊತ್ತಾಗುತ್ತದೆ. ಹಾಗಾದರೆ ಅಥಿಯಾನ್ ಫೇಕ್ ಎನ್‌ಕೌಂಟರ್ ಮಾಡಿದ್ನಾ? ಶರಣ್ಯ ಸಾವಿಗೆ ಕಾರಣ ಯಾರು? NAT ಕೋಚಿಂಗ್ ಸೆಂಟರ್ ಅಕಾಡೆಮಿಗೂ ಶರಣ್ಯ ಅಂತ್ಯಕ್ಕೂ ಇರುವ ನಂಟೇನು? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ 'ವೆಟ್ಟೆಯಾನ್' ಸಿನಿಮಾ.
'ವೆಟ್ಟೆಯಾನ್' ಸಿನಿಮಾ ಹೇಗಿದೆ?
ಫಸ್ಟ್ ಹಾಫ್ ಬಹಳ ವೇಗವಾಗಿ ಸಾಗುತ್ತದೆ. ಅಥಿಯಾನ್ ಆರ್ಭಟ ಹೇಗಿರುತ್ತದೆ ಎನ್ನುವುದನ್ನು ತೋರಿಸಲು ಒಂದಷ್ಟು ಕಮರ್ಷಿಯಲ್ ಸನ್ನಿವೇಶಗಳನ್ನು ಹೆಣೆಯುತ್ತಾ ಹೋಗಿದ್ದಾರೆ. ಶರಣ್ಯ ಪಾತ್ರದ ಸಾವಿನೊಂದಿಗೆ ಚಿತ್ರಕ್ಕೆ ತಿರುವು ಸಿಗುತ್ತದೆ. ಇಂಟರ್‌ವಲ್ ವೇಳೆಗೆ ಗುಣ ತಪ್ಪಿತ್ಥಸ್ಥ ಅಲ್ಲ, ಆತನದ್ದು ಒಂದರ್ಥದಲ್ಲಿ ಫೇಕ್ ಎನ್‌ಕೌಂಟರ್ ಎನ್ನುವುದು ಗೊತ್ತಾಗುವುರೊಂದಿಗೆ ಫಸ್ಟಾಫ್ ಮುಕ್ತಾಯವಾಗಿ ಸೆಕೆಂಡ್ ಆಫ್ ಕುತೂಹಲ ಮೂಡಿಸುತ್ತದೆ.
ಸೆಕೆಂಡ್ ಕೊಂಚ ಸ್ಲೋ ಆಗುತ್ತದೆ. ಪದೇ ಪದೇ ಸನ್ನಿವೇಶಗಳ ರಿಪೀಟ್ ಆಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ. NAT ಅಕಾಡೆಮಿ ಮುಖ್ಯಸ್ಥ ವೈಟ್ ಕಾಲರ್ ವಿಲನ್ ನಟರಾಜ್(ರಾಣಾ) ಎಂಟ್ರಿ ಬಹಳ ತಡವಾಗಿ ಆಗುತ್ತದೆ. ಬಳಿಕ ಅಥಿಯಾನ್ ಹಾಗೂ ನಟರಾಜ್ ಏಟು, ಎದಿರೇಟು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತದೆ. ಬಹಳ ಬೇಗ ಮುಗಿಸಬಹುದಾದ ಕಥೆಯನ್ನು ಕೊನೆ ಕೊನೆಗೆ ಚೂಯಿಂಗ್ ಗಮ್ ರೀತಿ ಎಳೆದಂತೆ ಭಾಸವಾಗುತ್ತದೆ. ಆದರೆ ರಜನಿಕಾಂತ್ ಪರ್ಫಾರ್ಮನ್ಸ್ ಅದೆಲ್ಲವನ್ನು ಮರೆಸುತ್ತಾ ಸಾಗುತ್ತದೆ.
ರೆಗ್ಯುಲರ್ ಪೊಲೀಸ್ ಡ್ರಾಮಾ ಎಂದುಕೊಂಡಿದ್ದ ಪ್ರೇಕ್ಷಕರಿಗೆ 'ವೆಟ್ಟೆಯಾನ್' ಒಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಎನ್ನುವುದು ಗೊತ್ತಾಗುತ್ತದೆ. 'ಜೈಭೀಮ್' ಚಿತ್ರದಲ್ಲಿ ವಿಚಾರಣೆ ವೇಳೆ ಆರೋಪಿಗಳ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ಎನ್‌ಕೌಂಟರ್ ಎಷ್ಟು ಸರಿ? ಎನ್ನುವ ವಿಚಾರವನ್ನು ಜ್ಞಾನವೇಲ್ ಹೇಳಿದ್ದರು. 'ವೆಟ್ಟೆಯಾನ್' ಚಿತ್ರದಲ್ಲೂ ಅದನ್ನೇ ಮತ್ತೊಂದು ಬಹಳ ವಿಭಿನ್ನವಾಗಿ ಹೇಳಿದ್ದಾರೆ. ಆದರೆ ಚಿಂತನ ಮಂಥನ ಬಹಳ ಸೊಗಸಾಗಿಯೇ ನಡೆದಿದೆ. ಒಂದಷ್ಟು ಎಲಿವೇಷನ್ ಸೀನ್ಸ್ ಜೊತೆಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಹೆಣೆದಿದ್ದಾರೆ.
ಸಾಮಾನ್ಯ ಜನರ ಕನಸುಗಳನ್ನು ಬಂಡವಾಳ ಮಾಡಿಕೊಂಡ ಖಾಸಗಿ ಸಂಸ್ಥೆಗಳು. ಕೋಚಿಂಗ್ ಸೆಂಟರ್‌ಗಳ ಹೆಸರಿನಲ್ಲಿ ಜನರ ಜೀವನದ ಜೊತೆ ಆಟ ಆಡುವುದು, ಜನರು ಕೂಡ ಕನಸಿನ ಬೆನ್ನೇರಿ ಆಮಿಷಕ್ಕೆ ಒಳಗಾಗುವುದು. ಹಣ, ಅಧಿಕಾರ ಇರುವವರು ಜನರಿಗೆ ಮೋಸ ಮಾಡುವುದು. ಹಣ ಬಲದಿಂದ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ತಪ್ಪು ಮಾಡುತ್ತಾ ಹೋಗುವುದು, ಅಮಾಯಕರನ್ನು ಸಿಲುಕಿಸಿ ತಪ್ಪಿಸಿಕೊಳ್ಳುವುದು ಹೀಗೆ ಸಾಕಷ್ಟು ಅಂಶಗಳ ಬಗ್ಗೆ ಚಿತ್ರದಲ್ಲಿ ಮಾತನಾಡಲಾಗಿದೆ. ಇನ್ನು ಪೊಲೀಸರ ಕೈಗೆ ಬಂದೂಕು ಕೊಟ್ಟಿರುವುದು ಆರೋಪಿಗಳನ್ನು ಕೊಲ್ಲುವುದಕ್ಕೆ ಅಲ್ಲ. ಜನ ಹಿಂದೆ ಮುಂದೆ ಆಲೋಚಿಸದೇ ಎನ್‌ಕೌಂಟರ್ ಮಾಡುವಂತೆ ಒತ್ತಾಸುವುದು ಸರಿಯಲ್ಲ ಪೊಲೀಸರು ಅಂದ್ರೆ ಬೇಟೆಗಾರರಲ್ಲ, ರಕ್ಷಕರು ಎನ್ನುವ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆ.
ಕಲಾವಿದರ ಅಭಿನಯ
ಸಾಮಾನ್ಯವಾಗಿ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಇದ್ದಷ್ಟೂ ಹೊತ್ತು ಬೇರೆಯವರೆಲ್ಲಾ ಗೌಣವಾಗಿ ಬಿಡುತ್ತಾರೆ. ಆದರೆ 'ವೆಟ್ಟೆಯಾನ್' ಸಿನಿಮಾದಲ್ಲಿ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಬರೆದುಕೊಂಡಿರುವ ನಿರ್ದೇಶಕರು ಅದನ್ನು ಸುದೀರ್ಘವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಕಾಲಾವಧಿ ಸುಧೀರ್ಘವಾಗುತ್ತಾ ಹೋಗಿದೆ. ಇನ್ನು ಎಸ್‌ಪಿ ಅಥಿಯಾನ್ ಆಗಿ ತಲೈವಾ ಅಭಿನಯ ಪ್ರೇಕ್ಷಕರಿಗೆ ಹಬ್ಬ,
ಅಥಿಯಾನ್ ಮಡದಿಯಾಗಿ ಮಂಜು ವಾರಿಯರ್ ಗಮನ ಸೆಳೆಯುತ್ತಾರೆ. 'ವೆಟ್ಟೆಯಾನ್' ಚಿತ್ರದ ಸ್ಪೆಷಲ್ ಅಟ್ರಾಕ್ಷನ್ ಫಹಾದ್ ಫಾಸಿಲ್. ಗಂಭೀರ ಸನ್ನಿವೇಶಗಳಲ್ಲಿ ಕೂಡ ತಮ್ಮ ಅಭಿನಯದಿಂದ ಫಹಾದ್ ನಗೆಬುಗ್ಗೆ ಉಕ್ಕಿಸುತ್ತಾರೆ. ಸತ್ಯದೇವ್ ಆಗಿ ಗಂಭೀರ ಪಾತ್ರದಲ್ಲಿ ಅಮಿತಾಬ್ ಚಿತ್ರಕ್ಕೆ ತೂಕ ತಂದಿದ್ದಾರೆ. ಇನ್ನು ಪೊಲೀಸ್ ಆಫೀಸರ್ ಆಗಿ ಕಿಶೋರ್ ನಟನೆ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ನೆಗೆಟಿವ್ ರೋಲ್‌ನಲ್ಲಿ ರಾಣಾ ದಗ್ಗುಬಾಟಿ ಇಷ್ಟವಾಗುತ್ತಾರೆ.
ತಾಂತ್ರಿಕವಾಗಿ ಸಿನಿಮಾ
ಕಧೀರ್ ಛಾಯಾಗ್ರಹಣ 'ವೆಟ್ಟೆಯಾನ್' ಚಿತ್ರಕ್ಕೆ ಪೂರಕವಾಗಿದೆ. ಅನ್ಬರಿವ್ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. 70 ವರ್ಷ ವಯಸ್ಸಿನ ರಜನಿಕಾಂತ್ ಇತಿಮಿತಿಗಳನ್ನು ಅರಿತು ಆಕ್ಷನ್ ಸನ್ನಿವೇಶಗಳನ್ನು ಡಿಸೈನ್ ಮಾಡಿದ್ದಾರೆ. ಪ್ರೇಕ್ಷಕರಿಗೆ ನಿರಾಸೆಯಾಗದಂತೆಯೂ ನೋಡಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಇಡೀ ಚಿತ್ರವನ್ನು ತಮ್ಮ ಹಿನ್ನೆಲೆ ಸಂಗೀತದಿಂದಲೇ ಮೇಲೆತ್ತಿದ್ದಾರೆ. ಸಂಕಲನಕಾರ ಫಿಲೋಮಿನ್ ರಾಜ್ ಮತ್ತಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿ ಚಿತ್ರದ ಕಾಲಾವಧಿ ತಗ್ಗಿಸುವ ಅವಕಾಶವಿತ್ತು.
ಕೊನೆ ಮಾತು
ಒಂದೊಳ್ಳೆ ವಿಚಾರವನ್ನು ಚರ್ಚಿಸಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವ ಸಿನಿಮಾ 'ವೆಟ್ಟೆಯಾನ್'. ಎಲ್ಲದಕ್ಕೂ ಎನ್‌ಕೌಂಟರ್ ಒಂದೇ ಪರಿಹಾರ ಅಲ್ಲ, ಕಾನೂನು ನ್ಯಾಯ ವ್ಯವಸ್ಥೆಯಿದೆ ಎನ್ನುವ ಸಂದೇಶವು ಚಿತ್ರದಲ್ಲಿದೆ. ಸಣ್ಣ ಪುಟ್ಟ ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಚಿತ್ರದ ಕಾಲಾವಧಿಯೇ ಕೊಂಚ ಅತಿಯಾಯಿತು ಎನ್ನುವುದು ಬಿಟ್ಟರೆ ಕೊಟ್ಟ ಕಾಸಿಗೆ ಸಿನಿಮಾ ಮೋಸ ಮಾಡಲ್ಲ.


Click it and Unblock the Notifications











