Sankranthiki Vasthunam Review: ನಗಿಸೋದಷ್ಟೆ ಸಂಕ್ರಾಂತಿಗೆ ಬಂದವರ ಪರಮೋದ್ದೇಶ
ಜೀವನದ ಜಂಜಾಟ ಮರೆತು 2 ಗಂಟೆ ನಗಬೇಕು, ಎಂಜಾಯ್ ಮಾಡಬೇಕು ಎಂದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗುತ್ತಾರೆ. ಅವರು ಕೊಟ್ಟ ಹಣಕ್ಕೆ ಮೋಸ ಆಗಬಾರದು. ಲಾಜಿಕ್ ಮುಖ್ಯನಾ? ಮನರಂಜನೆ ಮುಖ್ಯನಾ? ಅಂದ್ರೆ ಕೆಲವರು ಮನರಂಜನೆಯೇ ಮುಖ್ಯ ಸಿನಿಮಾಗಳಲ್ಲಿ ಲಾಜಿಕ್ ಕಟ್ಟಿಕೊಂಡು ನಮಗೇನು ಆಗಬೇಕು ಎಂದು ಕೆಲವರು ಕೇಳುತ್ತಾರೆ.
ಸುಗ್ಗಿ ಸಂಭ್ರಮದಲ್ಲಿ ಬಂದಿರುವ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸಣ್ಣ ಎಳೆ ಇಟ್ಟುಕೊಂಡು ನಿರ್ದೇಶಕ ಅನಿಲ್ ರಾವಿಪುಡಿ ಫನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ವಿಕ್ಟರಿ ವೆಂಕಟೇಶ್ ಕ್ರೇಜ್ ಕಮ್ಮಿ ಆಗಿದೆ. ಒಂದ್ಕಾಲದಲ್ಲಿ ಸೂಪರ್ ಹಿಟ್ ಫ್ಯಾಮಿಲಿ ಹಿಟ್ ಸಿನಿಮಾಗಳನ್ನು ವೆಂಕಿ ಕೊಟ್ಟಿದ್ದರು. ಬಹಳ ವರ್ಷಗಳ ಬಳಿಕ ಮತ್ತೆ ತಮ್ಮ ಲಯಕ್ಕೆ ಮರಳಿದಂತೆ ಕಾಣುತ್ತಿದೆ. ಅಷ್ಟಕ್ಕೂ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಕಥೆಯೇನು? ಹೇಗಿದೆ ಸಿನಿಮಾ? ಮುಂದೆ ಓದಿ.
ಸಿನಿಮಾ ಕಥೆ
ಅಮೆರಿಕಾದ ದೊಡ್ಡ ಕಂಪೆನಿ ಸಿಇಓ ಆಕೇಳ್ಳ ಸತ್ಯಂ(ಅವಸರಾಲ ಶ್ರೀನಿವಾಸ್) ಹೈದರಾಬಾದ್‌ಗೆ ಬಂದಿರುತ್ತಾನೆ. ಆತನನ್ನು ಮತ್ತೆ ಕ್ಷೇಮವಾಗಿ ವಾಪಸ್ ಕಳುಹಿಸಬೇಕಾದ್ದು ತೆಲಂಗಾಣ ಸಿಎಂ ಜವಾಬ್ದಾರಿ. ಅಷ್ಟರಲ್ಲಿ ಆ ಸಿಇಓ ಅಪಹರಣವಾಗುತ್ತದೆ. ತಮ್ಮ ಗ್ಯಾಂಗ್ ಸದಸ್ಯ ಪಾಪ ಪಾಂಡೆ ತಮಗೆ ಒಪ್ಪಿಸಿದರೆ ಮಾತ್ರ ಆತನನ್ನು ಬಿಡುಗಡೆ ಮಾಡುವುದಾಗಿ ಬಿಜು ಪಾಂಡೆ ಬೇಡಿಕೆ ಇಡುತ್ತಾನೆ.

ಮತ್ತೊಂದು ಕಡೆ ಸಸ್ಪೆಂಡ್ ಆಗಿರುವ ಡಿಸಿಪಿ ಯಾದಗಿರಿ ದಾಮೋದರ ರಾಜು(ವೆಂಕಟೇಶ್) ರಾಜಮಂಡ್ರಿಯಲ್ಲಿ ಮದುವೆಯಾಗಿ ಮಡದಿ ಮಕ್ಕಳ ಜೊತೆ ಸಂತೋಷವಾಗಿರುತ್ತಾನೆ. ಐಪಿಎಸ್ ಮೀನಾಕ್ಷಿ(ಮೀನಾಕ್ಷಿ ಚೌಧರಿ) ಸಲಹೆಯಂತೆ ಸಿಇಓ ಆಕೇಳ್ಳನನ್ನು ಬಿಡಿಸಿಕೊಂಡು ಬರುವ ಜವಾಬ್ದಾರಿ ರಾಜು ಹೆಗಲೇರುತ್ತದೆ. ಅಂದಹಾಗೆ ರಾಜು ಮಾಜಿ ಪ್ರೇಯಸಿಯೇ ಮೀನಾಕ್ಷಿ. ಈ ವಿಷಯ ಆತನ ಪತ್ನಿ(ಐಶ್ವರ್ಯ ರಾಜೇಶ್) ಭಾಗ್ಯಗೆ ಗೊತ್ತಾಗಿ ಆಕೆ ಕೂಡ ಈ ಆಪರೇಷನ್‌ಗೆ ಬರ್ತಾಳೆ. ಮುಂದೇನು ಎನ್ನುವುದು ಸಿನಿಮಾ ಕಥೆ.
ಸಿನಿಮಾ ಹೇಗಿದೆ?
ಒನ್‌ಲೈನ್ ಸ್ಟೋರಿ ಕೇಳಿದರೆ ಇಲ್ಲಿ ಲಾಜಿಕ್ ಇಲ್ಲವೇ ಇಲ್ಲ ಎನಿಸುತ್ತದೆ. ಸಿನಿಮ್ಯಾಟಿಕ್ ಲಿಬರ್ಟಿ ತೆಗೆದುಕೊಂಡು ಪ್ರೇಕ್ಷಕರನ್ನು ರಂಜಿಸಲು ತಮಗೆ ಬೇಕಾದಂತೆ ಕಥೆಯನ್ನು ಹೇಳುತ್ತಾ ಸಾಗಿದ್ದಾರೆ ನಿರ್ದೇಶಕರು. ಎಲ್ಲವನ್ನು ವಿಜೃಂಭಿಸಿ ಪ್ರೇಕ್ಷಕರ ನಗಿಸೋ ಸಾಹಸ ಮಾಡಿದ್ದಾರೆ. ಕಥೆ ಹಳೆಯದ್ದೇ ಅನ್ನಿಸಿದರೂ ಅದನ್ನು ಹೊಸ ರೀತಿಯಲ್ಲಿ ಪ್ರಸೆಂಟ್ ಮಾಡುವ ಪ್ರಯತ್ನ ನಡೆದಿದೆ.
ಕಥೆ ಏನು? ಮುಂದೆ ಏನು ಆಗುತ್ತದೆ? ಎಂದು ಗೊತ್ತಾದ ಮೇಲೆ ಕೂಡ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ನಗಿಸುತ್ತದೆ. ನಿರ್ದೇಶಕ ಅನಿಲ್ ರಾವಿಪುಡಿ ತಮ್ಮದೇ ಶೈಲಿಯ ಜೋಕ್‌ಗಳ ಮೂಲಕ ನಗಿಸೋ ಕಸರತ್ತು ಮಾಡಿದ್ದಾರೆ. ಅಲ್ಲಲ್ಲಿ ಅದು ವರ್ಕ್ ಕೂಡ ಆಗಿದೆ. ಇನ್ನು ಪತ್ನಿ ಎದುರು ಮಾಜಿ ಪ್ರೇಯಸಿ ಬಂದರೆ ಹೈಡ್ರಾಮಾ ಹೇಗಿರುತ್ತದೆ ಎಂದು ತಮಾಷೆಯಾಗಿಯೇ ಚಿತ್ರಿಸಿದ್ದಾರೆ.
ಗಂಭೀರ ಸನ್ನಿವೇಶಗಳಲ್ಲಿ ಕೂಡ ಕಾಮಿಡಿ ಹೈಲೆಟ್ ಆಗಿದೆ. ರಾಜು ಮಗ ಬುಲ್ಲಿರಾಜು ತೆರೆಮೇಲೆ ಬಂದಾಗ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಇತ್ತೀಚೆಗೆ ಬರೀ ಮಾಸ್ ಸಿನಿಮಾಗಳನ್ನು ನೋಡಿದವರಿಗೆ 'ಸಂಕ್ರಾಂತಿಕಿ ವಸ್ತುನ್ನಾಂ' ದೊಡ್ಡ ರಿಲೀಫ್ ಎನಿಸುತ್ತದೆ. ಆಕ್ಷನ್ ಇಲ್ಲದೇ ಬರೀ ಕಾಮಿಡಿಯಲ್ಲೇ ಇಡೀ ಸಿನಿಮಾ ಮುಗಿಸಿ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಆಕ್ಷನ್ ಸನ್ನಿವೇಶ ಇಟ್ಟಿದ್ದಾರೆ.
ಮಡದಿ ಹಾಗೂ ಮಾಜಿ ಪ್ರೇಯಸಿ ನಡುವೆ ಸಿಲುಕಿ ರಾಜು ಪಡುವ ಪಜೀತಿಯನ್ನು ಫನ್ನಿಯಾಗಿ ಕಟ್ಟಿಕೊಡಲಾಗಿದೆ. ಆ ಫಸ್ಟ್ರೇಷನ್‌ನಲ್ಲಿ ನಾಯಕ ಏನೆಲ್ಲಾ ಮಾಡ್ತಾನೆ? ಮಾಜಿ ಪ್ರೇಯಸಿ ಕೊನೆಗೆ ನೀನೇ ಬೇಕು ಅಂತ ಬಂದಾಗ ರಾಜು ಸಂಕಟ ಏನು ಎನ್ನುವುದನ್ನು ಮಜವಾಗಿ ತೋರಿಸಲಾಗಿದೆ. ಕೊನೆಯಲ್ಲಿ ಆಕ್ಷನ್ ಮುಗಿದು ಶುಭಂ ಕಾರ್ಡ್ ಬೀಳುವ ಸಮಯದಲ್ಲಿ ಜೀವನದ ಪಾಠ ಕಲಿಸಿದ ಗುರುಗಳನ್ನು ಮರೆಯಬಾರದು ಎನ್ನುವ ಸಂದೇಶವನ್ನು ಸೇರಿಸಲಾಗಿದೆ.
ಕಲಾವಿದರ ಅಭಿನಯ
ವಿಕ್ಟರಿ ವೆಂಕಟೇಶ್ ಎಂದಿನಂತೆ ಲೀಲಾಜಾಲವಾಗಿ ನಟಿಸಿದ್ದಾರೆ. ಆದರೆ ಇಡೀ ಕಥೆಯಲ್ಲಿ ಕಲಾವಿದರೆಲ್ಲಾ ನಿರ್ದೇಶಕ ಅನಿಲ್ ರಾವಿಪುಡಿ ಹೇಳಿದಂತೆ ಕೇಳಿದ್ದಾರೆ. ಎಲ್ಲರೂ ನಟಿಸಿದ್ದಾರೆ ಎನ್ನುವುದಕ್ಕಿಂತ ಅವರು ಬರೆದುಕೊಂಡ ಪಾತ್ರಗಳಂತೆ ವರ್ತಿಸುತ್ತಾ ಹೋಗಿದ್ದಾರೆ. ವೆಂಕಟೇಶ್ ಸೇರಿ ಎಲ್ಲರೂ ನಿರ್ದೇಶಕರ ಕಲಾವಿದರಾಗಿಬಿಟ್ಟಿದ್ದಾರೆ.
ಪೊಲೀಸ್ ಆಫೀಸರ್ ಆಗಿ ಖಡಕ್ ಆಗಿ ಅಬ್ಬರಿಸುವ ವೆಂಕಿ, ಫ್ಯಾಮಿಲಿಮ್ಯಾನ್ ಆಗಿ ರಂಜಿಸುತ್ತಾರೆ. ಇನ್ನು ಪತಿಯನ್ನು ತುಂಬಾ ಪ್ರೀತಿಸುವ ಪತ್ನಿಯಾಗಿ ಐಶ್ವರ್ಯ ಗಮನ ಸೆಳೆಯುತ್ತಾರೆ. ತಾನು ಪ್ರೀತಿಸಿದವನು ಮತ್ತೊಬ್ಬಳನ್ನು ಮದುವೆ ಆಗಿದ್ದಾನೆ ಎಂದು ತಿಳಿದು ಹೊಟ್ಟೆಕಿಚ್ಚು ಪಡುವ ಹುಡುಗಿಯಾಗಿ ಮೀನಾಕ್ಷಿ ಒಳ್ಳೆ ಅಂಕ ಗಿಟ್ಟಿಸುತ್ತಾರೆ.
ಟೆಕ್ನಿಕಲಿ ಸಿನಿಮಾ
ಸಿಂಪಲ್ ಕಥೆಯನ್ನು ಕಾಮಿಡಿ ಟಚ್ ಕೊಟ್ಟು ಹೇಳಿ ಅನಿಲ್ ರಾವಿಪುಡಿ ಗೆದ್ದಿದ್ದಾರೆ. ಕೆಲವೊಮ್ಮೆ ಪೇಲವ ಎನಿಸಿಬಿಡುವ ಸನ್ನಿವೇಶಗಳನ್ನು ತಮ್ಮ ಬರವಣಿಗೆಯಿಂದ ಮೇಲೆತ್ತಿದ್ದಾರೆ. ಅದಕ್ಕೆ ಡೈಲಾಗ್ಸ್ ಪ್ಲಸ್ ಆಗಿದೆ. ಛಾಯಾಗ್ರಹಣ ಹೈಲೆಟ್ ಆಗಿದೆ. ಸಂಗೀತ ಚೆನ್ನಾಗಿದೆ. ನಿರ್ಮಾಪಕರು ಬಹಳ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಿಸಿದ್ದಾರೆ.
ಕೊನೆ ಮಾತು
ಒಮ್ಮೆ ನೋಡಿ ನಕ್ಕು ಮರೆತುಬಿಡಬಹುದಾದ ಕಾಮಿಡಿ ಎಂಟರ್‌ಟೈನರ್ 'ಸಂಕ್ರಾಂತಿಕಿ ವಸ್ತುನ್ನಾಂ'. ಲಾಜಿಕ್ ಪಕ್ಕಕ್ಕಿಟ್ಟು ನೋಡಿದರೆ ಮಾತ್ರ ಸಿನಿಮಾ ಮಜಾ ಕೊಡುತ್ತದೆ. ಸಂಕ್ರಾಂತಿ ಸಂಭ್ರಮದಲ್ಲಿ ಬಂದ ದೊಡ್ಡ ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿ ಈ ಕಾಮಿಡಿ ಎಂಟರ್‌ಟೈನರ್ ಸದ್ದು ಮಾಡ್ತಿದೆ.


Click it and Unblock the Notifications











