Vidaamuyarchi Review: ಹಾಲಿವುಡ್ ಸ್ಟೈಲ್ ಆಕ್ಷನ್ ಥ್ರಿಲ್ಲರ್ 'ವಿಡಮುಯರ್ಚಿ' .. ಆದರೆ
ಕಾಲಿವುಡ್‌ನಲ್ಲಿ ಚಿತ್ರಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ದಳಪತಿ ವಿಜಯ್ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ಕಮಲ್ ಹಾಸನ್, ರಜನಿಕಾಂತ್ ಇಬ್ಬರಿಗೂ ವಯಸ್ಸಾಯ್ತು. ಧನುಷ್, ಸೂರ್ಯ, ಕಾರ್ತಿ ರೀತಿಯ ನಟರು ಸದ್ಯ ಸದ್ದು ಮಾಡುತ್ತಿದ್ದಾರೆ. ಅಜಿತ್ ಆಗೊಮ್ಮೆ ಈಗೊಮ್ಮೆ ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರೆ.
ಥಲಾ ಅಜಿತ್ ನಟನೆಯ 'ವಿಡಮುಯರ್ಚಿ' ಸಿನಿಮಾ ಈ ವಾರ ತೆರೆಗೆ ಬಂದಿದೆ. ಸ್ಟೈಲಿಶ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಭಿಮಾನಿಗಳು ದೊಡ್ಡದಾಗಿಯೇ ಚಿತ್ರವನ್ನು ಸ್ವಾಗತಿಸಿದ್ದಾರೆ. ಮಗಿಳ್ ತಿರುಮೇನಿ ನಿರ್ದೇಶನದ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಜಿತ್ ಜೋಡಿಯಾಗಿ ತ್ರಿಷಾ ನಟಿಸಿದ್ದಾರೆ. ಅಷ್ಟಕ್ಕೂ 'ವಿಡಮುಯರ್ಚಿ' ಕಥೆಯೇನು? ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.

'ವಿಡಮುಯರ್ಚಿ' ಕಥೆ
ಅರ್ಜುನ್(ಅಜಿತ್ ಕುಮಾರ್) ಹಾಗೂ ಕಯಲ್(ತ್ರಿಷಾ) ಪರಸ್ಪರ ಪ್ರೀತಿಸಿ ಮದುವೆ ಆಗುತ್ತಾರೆ. ಮುಂದೆ ಕಯಲ್ ಮತ್ತೊಬ್ಬನ ಪ್ರೀತಿಯಲ್ಲಿ ಬೀಳುತ್ತಾಳೆ. ಈ ವಿಚಾರ ಹೇಳಿ ಆಕೆ ಅರ್ಜುನ್ ಬಳಿ ಡಿವೋರ್ಸ್ ಕೇಳುತ್ತಾಳೆ. ಒಲ್ಲದ ಮನಸ್ಸಿನಿಂದಲೇ ಅದಕ್ಕೆ ಒಪ್ಪುತ್ತಾನೆ. ಡಿವೋರ್ಸ್ ಸಿಗುವರೆಗೂ ತಾನು ತಮ್ಮ ತಾಯಿ ಮನೆಯಲ್ಲಿ ಇರುವುದಾಗಿ ಕಯಲ್ ಹೇಳಿದಾಗ ತಾನೇ ಖುದ್ದು ಕರೆದುಕೊಂಡು ಹೋಗಿ ಬಿಡಲು ಅರ್ಜುನ್ ಮುಂದಾಗುತ್ತಾನೆ.
ರಸ್ತೆ ಮಾರ್ಗವಾಗಿ ಪತ್ನಿಯನ್ನು ಅತ್ತೆ ಮನೆಗೆ ಕರೆದುಕೊಂಡು ಕಾರಿನಲ್ಲಿ ಹೊರಡುತ್ತಾನೆ. ಈ ಹಾದಿಯಲ್ಲಿ ರಕ್ಷಿತ್(ಅರ್ಜುನ್ ಸರ್ಜಾ) ಹಾಗೂ ದೀಪಿಕಾ(ರೆಜಿನಾ ಕಸೆಂದ್ರಾ) ದಂಪತಿಯ ಪರಿಚಯವಾಗುತ್ತದೆ. ಅರ್ಜುನ್ ಕಾರು ಕೆಟ್ಟು ನಿಂತಾಗ ರಕ್ಷಿತ್ ಹಾಗೂ ದೀಪಿಕಾ ಜೊತೆ ಕಯಲ್ ಹೊರಡುತ್ತಾಳೆ. ಇದ್ದಕ್ಕಿದಂತೆ ಆಕೆಯ ಅಪರಹರಣವಾಗುತ್ತದೆ. ಅಷ್ಟಕ್ಕೂ ಕಯಲ್ ಕಣ್ಮರೆ ಆಗಿದ್ದು ಹೇಗೆ? ಕಾರಣ ಯಾರು? ಪತ್ನಿಯನ್ನು ಮರಳಿ ಕರೆದುಕೊಂಡು ಬರಲು ಅರ್ಜುನ್ ಮಾಡುವ ಸಾಹಸ ಇನ್ನುಳಿದ ಕಥೆ.

ಸಿನಿಮಾ ಹೇಗಿದೆ?
ಟೀಸರ್ ಬಿಡುಗಡೆ ಆದ ದಿನದಿಂದಲೂ ಇದು ಹಾಲಿವುಡ್ 'ಬ್ರೇಕ್‌ಡೌನ್' ಚಿತ್ರದ ರೀಮೇಕ್ ಎನ್ನುವ ಚರ್ಚೆ ಶುರುವಾಗಿತ್ತು. ಸಿನಿಮಾ ನೋಡಿದ ಬಳಿಕ ಅದಕ್ಕೆ ಸ್ಪಷ್ಟನೆ ಸಿಕ್ಕಿದೆ. ಅದೇ ಚಿತ್ರದ ಒನ್‌ಲೈನ್ ಸ್ಟೋರಿ ತೆಗೆದುಕೊಂಡು ಅದಕ್ಕೆ ಹೊಸ ಸ್ಕ್ರೀನ್‌ಪ್ಲೇ ಬರೆದು 'ವಿಡಮುಯರ್ಚಿ' ಚಿತ್ರ ಮಾಡಿದ್ದಾರೆ. ಹಾಲಿವುಡ್ ಸಿನಿಮಾಗಳ ರೀತಿಯಲ್ಲೇ ಬಹಳ ಸ್ಟೈಲಿಶ್ ಆಗಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಟೆಕ್ನಿಕಲಿ ಸಿನಿಮಾ ಬಹಳ ರಿಚ್ ಆಗಿದೆ. ಆದರೆ ಭಾವನಾತ್ಮಕವಾಗಿ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ.
ಥೇಟ್ ಹಾಲಿವುಡ್ ಸಿನಿಮಾ ರೀತಿಯಲ್ಲೇ 'ವಿಡಮುಯರ್ಚಿ' ಚಿತ್ರದ ಟ್ರೀಟ್‌ಮೆಂಟ್ ಇದೆ. ಅಜೆರ್ಬೈಜಾನ್ ಸುತ್ತಾಮುತ್ತಾ ಕತೆ ಸಾಗುವುದರಿಂದ ಅಲ್ಲಿನ ಭಾಷೆ, ನೇಟಿವಿಟಿ ಹಾಗೆ ಉಳಿಸಿಕೊಳ್ಳಲಾಗಿದೆ. ಫಸ್ಟ್ ಹಾಫ್ ಬಹಳ ರೋಚಕವಾಗಿ ಸಾಗುತ್ತದೆ. ಅರ್ಜುನ್- ಕಯಲ್ ಲವ್‌ಸ್ಟೋರಿಯಿಂದ ಶುರುವಾಗುತ್ತದೆ. ಇಂಟರ್‌ವಲ್ ಟ್ವಿಸ್ಟ್ ಚೆನ್ನಾಗಿದೆ. ಆ ಬಳಿಕ ಸೆಕೆಂಡ್ ಹಾಫ್ ಮೇಲೆ ಭಾರೀ ನಿರೀಕ್ಷೆ ಮೂಡುತ್ತದೆ.
ಫಸ್ಟ್ ಹಾಫ್ ಕೊಟ್ಟ ಮಜಾ ಸೆಕೆಂಡ್ ಹಾಫ್ ಕೊಡಲ್ಲ, ಇದೇ ಚಿತ್ರದ ಮೈನಸ್ ಪಾಯಿಂಟ್. ಅಷ್ಟರಲ್ಲಾಗಲೇ ಸಿನಿಮಾ ಕಥೆ ಏನು ಎನ್ನುವುದು ಪ್ರೇಕ್ಷಕರಿಗೆ ಅರ್ಥವಾಗಿಬಿಟ್ಟಿರುತ್ತದೆ. ಆದರೆ ಅಲ್ಲಿಂದ ಮುಂದೆ ನಿಧಾನವಾಗಿ ಸಾಗುವ ಸಿನಿಮಾ ನಿರಾಸೆ ಮೂಡಿಸುತ್ತದೆ. ಇನ್ನು ನಾಯಕ-ನಾಯಕಿರ ಲವ್ ಸ್ಟೋರಿ ಕೂಡ ರೊಟೀನ್ ಎನಿಸಿಬಿಡುತ್ತದೆ.
'ಬ್ರೇಕ್‌ಡೌನ್' ಚಿತ್ರದಿಂದ ಫಸ್ಟ್ ಹಾಫ್‌ಗೆ ಸ್ಫೂರ್ತಿ ಪಡೆದಿರುವ ನಿರ್ದೇಶಕರು ಸೆಕೆಂಡ್ ಹಾಫ್‌ಗೆ ಹಾಲಿವುಡ್‌ನ ಮತ್ತೊಂದು ಸಿನಿಮಾ 'ಲಾಸ್ಟ್‌ಸೀನ್ ಅಲೈವ್' ಚಿತ್ರದಿಂದ ಪ್ರೇರಣೆಗೊಂಡಿರುವುದು ಗೊತ್ತಾಗುತ್ತದೆ. ಆಕ್ಷನ್ ಅಂತೂ ಚಿತ್ರದ ಹೈಲೆಟ್ ಆಗಿದೆ. ಎಂದಿನಂತೆ ಅಜಿತ್ ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು ನಟಿಸಿರುವುದು ಗೊತ್ತಾಗುತ್ತದೆ.
ಅತ್ತ ಸಂಪೂರ್ಣವಾಗಿ ಹಾಲಿವುಡ್ ಅಲ್ಲದ ಇತ್ತ ತಮಿಳು ನೆಟಿವಿಟಿಗೂ ಹೊಂದದ ಸಿನಿಮಾ 'ವಿಡಮುಯರ್ಚಿ'. ಎರಡನ್ನು ಬ್ಲೆಂಡ್ ಮಾಡಿ ಕಥೆ ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಮಗಿಳ್ ತಿರುಮೇನಿ ಒಂದು ಹಂತಕ್ಕೆ ಮಾತ್ರ ಗೆದ್ದಿದ್ದಾರೆ. ಇಡೀ ಚಿತ್ರವನ್ನು ಅಜಿತ್ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಕಲಾವಿದರ ಅಭಿನಯ
ನಟನೆಯಲ್ಲಿ ಎಂದಿನಂತೆ ಅಜಿತ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಅಷ್ಟೇ ಕಿಕ್ ಕೊಡುತ್ತಾರೆ. ಯಾವುದೇ ಹೀರೊಯಿಸಂ ಇಲ್ಲದೇ ಪತ್ನಿಗಾಗಿ ಹೋರಾಡುವ ಕಾಮನ್‌ಮ್ಯಾನ್ ಆಗಿ ಅಜಿತ್ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಹೀರೊಯಿಸಂ ನೋಡಬಹುದು. ಭಾವನಾತ್ಮಕ ಸನ್ನಿವೇಶಗಳಲ್ಲಿ ಕೂಡ ಇಷ್ಟವಾಗುತ್ತಾರೆ.
ನಾಯಕಿಯಾಗಿ ತ್ರಿಷಾಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇನ್ನುಳಿದಂತೆ ಅರ್ಜುನ್ ಸರ್ಜಾ, ರೆಜಿನಾ ಕಸೆಂದ್ರಾ ಇಬ್ಬರೂ ಈ ಹಿಂದೆ ಮಾಡಿರದಂತಹ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಪಾತ್ರಗಳೇ ಕಥೆಗೆ ದೊಡ್ಡ ತಿರುವು ಕೊಡುತ್ತದೆ. ಆರವ್ ಸೇರಿದಂತೆ ಇನ್ನುಳಿದ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟೆಕ್ನಿಕಲಿ ಸಿನಿಮಾ
ಓಂ ಪ್ರಕಾಶ್ ಛಾಯಾಗ್ರಹಣ ಚಿತ್ರದ ಹೈಲೆಟ್. ಚಿತ್ರದ ಫ್ರೇಮ್‌ಗಳು ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. ಅನಿರುದ್ಧ್ ಸಾಮಾನ್ಯ ತಮಿಳು ಸಿನಿಮಾಗಳಿಗೆ ಇಂಗ್ಲೀಷ್ ಸಾಂಗ್ಸ್ ರೀತಿ ಟ್ಯೂನ್, ಬಿಜಿಎಂ ಬಳುತ್ತಿರುತ್ತಾರೆ. ಇಲ್ಲಿ ಏಕಾಏಕಿ ಹಾಲಿವುಡ್ ಸ್ಟೈಲ್ ಸಿನಿಮಾ ಸಿಕ್ಕಿದೆ. ಚಿತ್ರಕ್ಕೆ ಬೇಕಾದ ಫೀಲ್ ಅನಿರುದ್ಧ್ ಸಂಗೀತದಲ್ಲಿ ಸಿಗುತ್ತದೆ. ಇನ್ನು ಲೈಕಾ ಸಂಸ್ಥೆ ಬಹಳ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಿಸಿದೆ.
ಕೊನೆ ಮಾತು
'ವಿಡಮುಯರ್ಚಿ' ಒಂದೊಳ್ಳೆ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನಿಸುತ್ತದೆ. ಆದರೆ ಸಂಪೂರ್ಣವಾಗಿ ಪ್ರೇಕ್ಷಕರನ್ನು ತೃಪ್ತಿಪಡಿಸುವಲ್ಲಿ ಸಿನಿಮಾ ವಿಫಲವಾಗಿದೆ ಎನ್ನಬಹುದು. ಅಜಿತ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಬಹುದು. ಇನ್ನುಳಿದಂತೆ ಒಂದು ಆವರೇಜ್ ಆಕ್ಷನ್ ಸಿನಿಮಾ ಅನಿಸಿಕೊಳ್ಳುತ್ತದೆ.


Click it and Unblock the Notifications











