Kushi Review: ಸಂಸಾರ ಸಾಗರದಲ್ಲಿ ಪ್ರೀತಿ- ನೋವಿನ ಮಂಥನ 'ಖುಷಿ': ಇಲ್ಲಿದೆ ಕಂಪ್ಲೀಟ್ ರಿವ್ಯೂ

Rating:
3.0/5
Star Cast: ವಿಜಯ್ ದೇವರಕೊಂಡ, ಸಮಂತಾ, ಮುರಳಿ ಶರ್ಮಾ, ಸಚಿನ್ ಖಡೇಕರ್, ಜಯರಾಂ, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್ ಮುಂತಾದವರು
Director: ಶಿವ ನಿರ್ವಾಣ

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಲೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ವಿಜಯ್- ಸ್ಯಾಮ್ ಇಬ್ಬರಿಗೂ ಈ ಸಿನಿಮಾ ಒಂದೊಳ್ಳೆ ಬ್ರೇಕ್ ಕೊಡುವ ಸುಳಿವು ಸಿಗುತ್ತಿದೆ. 'ನಿನ್ನು ಕೋರಿ', 'ಮಜಿಲಿ' ರೀತಿಯ ಫೀಲ್ ಗುಡ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕರ ಮತ್ತೊಂದು ಪ್ರಯತ್ನ 'ಖುಷಿ'. ಕಥೆ ಹಳೇಯದ್ದೆ ಅನಿಸಿದರೂ ಪ್ರೀತಿ ಜೊತೆಗೆ ನೋವನ್ನು ಸೇರಿಸಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.

ಆಧುನಿಕ ಯುಗದಲ್ಲಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವಂತೆ ದಾಂಪತ್ಯದಲ್ಲಿ ವಿರಸ, ಜಗಳ ಹೆಚ್ಚುತ್ತಿದೆ. ಇದು ಮುಂದೆ ಡಿವೋರ್ಸ್‌ವರೆಗೂ ಕೊಂಡೊಯ್ಯುತ್ತಿದೆ. ಅದೇ ಕಾರಣಕ್ಕೆ ಇತ್ತೀಚೆಗೆ ಡಿವೋರ್ಸ್ ಅನ್ನೋದು ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಇದೇ ವಿಚಾರವನ್ನಿಟ್ಟಿಕೊಂಡು 'ಖುಷಿ' ಎನ್ನುವ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವನ್ನು ತೆರೆಗೆ ತರಲಾಗಿದೆ.

Vijay Devarakonda, Samantha Starrer Kushi Review in Kannada along with Ratings

'ಖುಷಿ' ಕಥೆ

ದೂರದ ಕಾಶ್ಮೀರದಲ್ಲಿ 'ಖುಷಿ' ಸಿನಿಮಾ ಕತೆ ಶುರುವಾಗುತ್ತದೆ. ಬುರ್ಖಾ ಧರಿಸಿ ಕಾಣಿಸಿಕೊಳ್ಳುವ ಬೇಗಂ(ಸಮಂತಾ)ನ ನೋಡಿ ಮೊದಲ ನೋಟದಲ್ಲೇ ವಿಪ್ಲವ್‌(ವಿಜಯ್ ದೇವರಕೊಂಡ)ಗೆ ಪ್ರೀತಿ ಹುಟ್ಟುತ್ತದೆ. ಕಾರಣಾಂತರಗಳಿಂದ ಬ್ರಾಹ್ಮಣ ಮನೆಯ ಹುಡುಗಿ ಆರಾಧ್ಯ ಮುಸ್ಲಿಂ ಯುವತಿಯಾಗಿ ಬದಲಾಗಬೇಕಾಗಿ ಬಂದಿರುತ್ತದೆ. ಹಿಂದೂ ಪ್ರವಚನಕಾರ ಚಂದ್ರರಂಗಂ (ಮುರಳಿಶರ್ಮ) ಅವರ ಹುಡುಗಿ ಆರಾಧ್ಯ ಪ್ರೀತಿಗಾಗಿ ನಾಸ್ತಿಕನಾದ ಲೆನಿನ್ ಸತ್ಯಂ (ಸಚಿನ್ ಖಡೇಕರ್) ಅವರ ಮಗ ಮಗ ವಿಪ್ಲವ್ ದೊಡ್ಡ ಹೋರಾಟವನ್ನೇ ಮಾಡುತ್ತಾನೆ. ಕೊನೆಗೆ ಗೆಲ್ತಾನೆ. ಆರಾಧ್ಯಳದ್ದು ಪಕ್ಕಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ವಿಪ್ಲವ್‌ದು ಅದಕ್ಕೆ ತದ್ವಿರುದ್ಧ. ಹಾಗಾಗಿ ಪೋಷಕರು ಸಂಬಂಧ ಬೆಳೆಸಲು ಒಪ್ಪುವುದಿಲ್ಲ. ಪೋಷಕರ ವಿರೋಧದ ನಡುವೆಯೂ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಅಸಲಿ ಕಥೆ ಶುರುವಾಗುತ್ತದೆ.

ವಿಪ್ಲವ್- ಆರಾಧ್ಯ ಜಾತಕದಲ್ಲಿ ಸಮಸ್ಯೆಯಿದೆ. ಇಬ್ಬರು ಮದುವೆ ಆದರೆ ಸಮಸ್ಯೆ ಎದುರಾಗುತ್ತದೆ ಎಂದು ಆರಾಧ್ಯ ತಂದೆ ಚಂದುರಂಗಂ ಎಚ್ಚರಿಸುತ್ತಾನೆ. ಆದರೆ ಅದನ್ನು ಒಪ್ಪದೇ ನಮ್ಮಂತ ದಂಪತಿ ಪ್ರಪಂಚದಲ್ಲೇ ಇಲ್ಲ ಎಂದು ನಿರೂಪಿಸೋಣ ಎಂದು ಇಬ್ಬರು ಮನೆಬಿಟ್ಟು ಬಂದು ಮದುವೆಯಾಗಿ ಹೊಸ ಸಂಸಾರ ಶುರು ಮಾಡುತ್ತಾರೆ. ಅಲ್ಲಿಗೆ ಎಲ್ಲಾ ಸಮಸ್ಯೆ ಮುಗಿಯಿತು ಎಂದುಕೊಳ್ಳುತ್ತಿದ್ದಂತೆ ನವ ದಂಪತಿ ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ? ಇಬ್ಬರ ಪ್ರೇಮ್ ಕಹಾನಿ ಸುಖಾಂತ್ಯ ಆಯ್ತ? ಅಥವಾ ಇಬ್ಬರೂ ದೂರಾಗುತ್ತಾರಾ? ಅನ್ನೋದನ್ನು ತೆರೆಮೇಲೆ ನೋಡಬೇಕು.

ಸಿನಿಮಾ ಹೇಗಿದೆ?

ನಾವು ಎಂದು ಶುರುವಾಗುವ ಪ್ರೀತಿ ಮುಂದೆ ನಾನೇ ಸರಿ ಎಂದು ಮುಂದುವರೆದಾಗ ದೊಡ್ಡ ಕಂಪನ ಸೃಷ್ಟಿಸುತ್ತದೆ. ಪ್ರೀತಿಯ ಜೊತೆಗೆ ನೋವು ಕೂಡ ಬಳುವಳಿಯಾಗಿ ಬಂದು ಏನೆಲ್ಲಾ ಆಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರೀತಿ ಮತ್ತು ನಂಬಿಕೆಯ ಮೇಲೆ ಇಡೀ ಕಥೆಯನ್ನು ಹೆಣೆಯಲಾಗಿದೆ. ಕೇಳೋದಕ್ಕೆ ಹಳೇ ಕತೆ ಅನ್ನಿಸಿದರೂ ಕೂಡ ಸಿನಿಮಾ ನೋಡುಗರಿಗೆ ಹತ್ತಿರವಾಗುತ್ತದೆ. ಕತೆಗೆ ಕನೆಕ್ಟ್ ಆಗುವವರಿಗೆ ಬಹಳ ಹತ್ತಿರವಾಗುತ್ತದೆ. ಅಲ್ಲಲ್ಲಿ ಕೆಲವೊಮ್ಮೆ ಬೋರ್ ಎನಿಸಿದರೂ ಸಿನಿಮಾ ಕೊನೆಯವರೆಗೂ ನೋಡಿಸಿಕೊಳ್ಳುತ್ತದೆ. ಅದಕ್ಕೆ ಮುರಳಿ ಛಾಯಾಗ್ರಹಣ, ಹೇಷಮ್ ಅಬ್ದುಲ್ ವಹಾಬ್ ಸಂಗೀತದ ಸಾಥ್ ಸಿಕ್ಕಿದೆ.

ಕಲಾವಿದರ ಅಭಿನಯ

ಮತ್ತೆ ಲವ್ ಸ್ಟೋರಿ ಸಿನಿಮಾಗಳನ್ನು ಮಾಡುವುದಿಲ್ಲ ಎಂದಿದ್ದ ವಿಜಯ್ ದೇವರಕೊಂಡನ 'ಖುಷಿ' ಕತೆ ಹೇಳಿ ನಿರ್ದೇಶಕರು ಒಪ್ಪಿಸಿದರು. ಇನ್ನು ನೋವಿನ ಪ್ರೇಮಕತೆಗಳಿಗೆ ಹೇಳಿಮಾಡಿಸಿದಂತೆ ನಟಿ ಸಮಂತಾ. ಇವರಿಬ್ಬರನ್ನು ಒಟ್ಟಿಗೆ ಸೇರಿಸಿದಾಗಲೇ ನಿರ್ದೇಶಕರು ಅರ್ಧ ಗೆದ್ದುಬಿಟ್ಟಿದ್ದರು ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ. ಇಬ್ಬರು ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಇನ್ನುಳಿದಂತೆ ವಿಪ್ಲವ್ ತಂದೆ ಪಾತ್ರದಲ್ಲಿ ಸಚಿನ್ ಖಡೇಕರ್, ಆರಾಧ್ಯ ತಂದೆ ಪಾತ್ರದಲ್ಲಿ ಮುರಳಿ ಶರ್ಮ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಮನೆ ಬಿಟ್ಟು ಬಂದು ಹೊಸ ಸಂಸಾರ ಆರಂಭಿಸುವ ದಂಪತಿಗೆ ಬೆನ್ನುಲುಬಾಗಿ ನಿಲ್ಲುವ ಜೋಡಿಯಾಗಿದ ಜಯರಾಂ ಹಾಗೂ ರೋಹಿಣಿ ಪಾತ್ರಗಳು ಇಷ್ಟವಾಗುತ್ತದೆ.

ಕೊನೆ ಮಾತು

ದಾಂಪತ್ಯದಲ್ಲಿ ಸಮಸ್ಯೆ ಬಂದೇ ಬರುತ್ತದೆ. ಬಂದಾಗ ಅದನ್ನು ಒಟ್ಟಿಗೆ ಎದುರಿಸಬೇಕು. ಯಾವುದಕ್ಕೂ ದೂರ ಓಡಿ ಹೋಗಬಾರದು. ಅರಿತು ಬೆರೆತು ಬದುಕಿದರೆ ಜೀವನ ದಾಂಪತ್ಯ ಜೀವನ ಯಶಸ್ವಿಯಾಗುತ್ತದೆ. ಶಾಸ್ತ್ರ ಸಿದ್ದಾಂತಕ್ಕಿಂತ ಪ್ರೀತಿ ಶ್ರೇಷ್ಠ ಎನ್ನುವ ಸಂದೇಶವನ್ನು ಹೊತ್ತು ಖುಷಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ನಿರ್ದೇಶಕರು ಚಿತ್ರವನ್ನು ಚೆನ್ನಾಗಿ ತಿದ್ದಿ ತೀಡಿದ್ದಾರೆ. ಅಲ್ಲಲ್ಲಿ ಸಿನಿಮಾ ಬೋರ್ ಎನಿಸಿದರೂ ಕೆಲ ಸನ್ನಿವೇಶಗಳು ಚೆನ್ನಾಗಿವೆ. ಹಳೇ ಕತೆ, ಕೊಂಚ ಕಾಲಾವಧಿ ಹೆಚ್ಚಾಯ್ತು ಅನ್ನೋದು ಬಿಟ್ಟರೆ ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ. ವಿಜಯ್ ದೇವರಕೊಂಡ- ಸಮಂತಾ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗುತ್ತದೆ.

More from Filmibeat

English summary
Check Out Kushi Movie Review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X