Pepe Movie Review: ನೀರು.. ಜಾತಿ ಸಂಘರ್ಷ.. ಮಹಿಳಾ ದೌರ್ಜನ್ಯದ ಕಿಡಿ; 'ಪೆಪೆ' ಪಾಪನಾ? ಕೋಪಿಷ್ಠನಾ?
'ಪೆಪೆ' ಹೆಸರು ಕೇಳಿದ ಕೂಡಲೇ ಕೆಲವು ಕ್ರಾಂತಿಕಾರಿಗಳ ಹೆಸರು ಹಾಗೆ ಕಣ್ಮುಂದೆ ಪಾಸ್ ಆಗಿ ಹೋಗಬಹುದು. ಈ ಸಿನಿಮಾ ಫಸ್ಟ್ ಲುಕ್, ಟೀಸರ್, ಟ್ರೈಲರ್ ನೋಡಿದಾಗಲೂ ಸ್ಯಾಂಡಲ್‌ವುಡ್‌ಗೆ ಒಬ್ಬ ಕ್ರಾಂತಿಕಾರಿ ಸಿಕ್ಕೇಬಿಟ್ಟ ಅನ್ನೋ ನಂಬಿಕೆ ಬಂದಿತ್ತು. ಇಲ್ಲಿವರೆಗೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ವಿನಯ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಮಾಸ್ ಅವತಾರವೆತ್ತಿದ್ದರು.
ರಕ್ತದೊಕುಳಿಯಲ್ಲಿ ಮಿಂದೆದ್ದಿರುವ ವಿನಯ್ ರಾಜ್‌ಕುಮಾರ್ 'ಪೆಪೆ' ಅವತಾರದಲ್ಲಿ ಗೆದ್ದರೇ? ಕಲ್ಟ್ ಸಿನಿಮಾಗಳ ಪಟ್ಟಿಗೆ 'ಪೆಪೆ' ಸೇರಿಕೊಂಡಿತಾ? ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಸೇರಿಕೊಳ್ಳುತ್ತಾ? ಕನ್ನಡ ಚಿತ್ರರಂಗದ ಮಾಸ್ ಹೀರೋ ಆಗಬಹುದೇ ವಿನಯ್ ರಾಜ್‌ಕುಮಾರ್? ಇಂತಹ ಹಲವು ಪ್ರಶ್ನೆಗಳಿಗೆ ಈ ಸಿನಿಮಾ ಉತ್ತರ ಕೊಟ್ಟಿದೆ.

'ಪೆಪೆ' ಕಥೆಯೇನು?
'ಪೆಪೆ' ಅಲಿಯಾಸ್ ಪ್ರದೀಪ್ ಪಾತ್ರವನ್ನೇ ಕೇಂದ್ರವಾಗಿಟ್ಟಿಕೊಂಡು ಹೆಣೆದಿರುವ ಕಥೆ. ಎರಡು ವಿಭಿನ್ನ ಜಾತಿಯ ಪೋಷಕರ ಮಗ ತನ್ನ ಹಕ್ಕುಗಳು ಹಾಗೂ ಸಾಂಪ್ರದಾಯಿಕ ನಂಬಿಕೆಗಳಿಗಾಗಿ ಹೋರಾಡುತ್ತಾನೆ. ಕೊಡಗಿನ ಗ್ರಾಮವೊಂದರಲ್ಲಿ ನಡೆಯುವ ಈ ಕಾಲ್ಪನಿಕ ಕಥೆಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ನೀರಿಗಾಗಿ ನಡೆಯುವ ಸಂಘರ್ಷವಿದೆ. ಮೇಲ್ಜಾತಿ ಹಾಗೂ ಕೆಳಜಾತಿಗಳ ನಡುವಿನ ಹೋರಾಟ 'ಪೆಪೆ' ಕಥೆಯ ಎಳೆ.
ವಿನಯ್ ಮಾಸ್ ಹೀರೋ ಅನ್ನಬಹುದೇ?
ಸಿನಿಮಾದ ಕಥೆಯಲ್ಲಿ ಹೊಸತೇನು ಇಲ್ಲ. ಆದರೆ, ನಿರ್ದೇಶಕರು ಅದೇ ಕಥೆಯನ್ನು ಜನರಿಗೆ ಹೇಳಲು ಹೊರಟ ರೀತಿ ವಿಭಿನ್ನವಾಗಿದೆ. ಅದಕ್ಕಾಗಿ ನಾಯಕನನ್ನು ರಕ್ತದೋಕುಳಿಯಲ್ಲಿ ಮಿಂದೆದ್ದವನಂತೆ ಮಾಸ್ ಆಗಿ ತೋರಿಸಬೇಕು ಅಂತ ನಿರ್ಧರಿಸಿದಂತೆ ಕಾಣುತ್ತೆ. ಇಲ್ಲಿವರೆಗೂ ಸಾಪ್ಟ್ ಪಾತ್ರಗಳಲ್ಲಿ ಕಂಡಿದ್ದ ವಿನಯ್‌ಗೆ ಮಾಸ್ ಅವತಾರ ಕೂಡ ಸೂಟ್ ಆಗುತ್ತೆ. ರಗಡ್ ಲುಕ್‌ನಲ್ಲಿ ಬಡಿದಾಡುವ ದೃಶ್ಯಗಳೇ ಇದಕ್ಕೆ ಸಾಕ್ಷಿ. ಹಾಗೇ ಸಿನಿಮಾದ ಉದ್ದಕ್ಕೂ ಗಂಭೀರವಾಗಿಯೇ ಕಾಣಿಸಿಕೊಳ್ಳುತ್ತಾರೆ.
ಪಾತ್ರಗಳ ಪರ್ಫಾಮೆನ್ಸ್ ಹೇಗಿದೆ?
ವಿನಯ್ ರಾಜ್‌ಕುಮಾರ್ ಮಾಸ್ ಲುಕ್ ಇಷ್ಟ ಆದರೆ, ಇವರೊಂದಿಗೆ ನಟಿಸಿದ ಇನ್ನೂ ಹಲವು ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಮಯೂರ್ ಪಟೇಲ್ ಈ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಕಾಜಲ್ ಕುಂದರ್, ಮೇದಿನಿ ಕೆಳಮನಿ, ಅರುಣಾ ಬಾಲ್‌ರಾಜ್, ಸಂಧ್ಯಾ ಅರಕೆರೆ ಪಾತ್ರಗಳು ಕೂಡ ಅಷ್ಟೇ ಪವರ್‌ಫುಲ್ ಆಗಿವೆ. ಅದರಲ್ಲೂ ಕಾಜಲ್ ಕುಂದರ್ ಪಾತ್ರವಂತೂ ಸಿಕ್ಕಾಪಟ್ಟೆ ರಗಡ್ ಅಂತ ಅನಿಸುತ್ತೆ.

'ಪೆಪೆ' ಪ್ಲಸ್ ಏನು?
ಹೊಸ ಪ್ರಯೋಗಗಳು ಆಗುತ್ತಿರಬೇಕು. ಅದರಲ್ಲಿ ಸೋಲಬಹುದು, ಇಲ್ಲವೇ ಗೆಲ್ಲಬಹುದು ಅದು ಬೇರೆ ವಿಷಯ. ಇಲ್ಲೂ ನಿರ್ದೇಶಕ ಶ್ರೀಲೇಶ್ ಎಸ್. ನಾಯರ್ ಇಂತಹದ್ದೇ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಕಥೆ ಥ್ರಿಲ್ಲಿಂಗ್ ಆಗಿ ಹೇಳಬೇಕು ಅನ್ನುವ ಭರಾಟೆಯಲ್ಲಿ ಚಿತ್ರಕಥೆಯಲ್ಲಿ ಪ್ರಯೋಗ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಹಲವು ಕಡೆ ಎಡವಿರುವುದು ಗಮನಕ್ಕೆ ಬರುತ್ತೆ. ಈ ಸಿನಿಮಾದಲ್ಲಿ ನಟಿಸಿದ ಬಹುತೇಕ ಎಲ್ಲಾ ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತಾರೆ. ಇದು ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಸಿನಿಮಾದ ಹಿನ್ನೆಲೆ ಸಂಗೀತ ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತೆ.
'ಪೆಪೆ' ಮೈನಸ್ ಏನು?
'ಪೆಪೆ' ಕಥೆಯನ್ನು ಒಮ್ಮೆಗೆ ಬಿಟ್ಟು ಕೊಡಬಾರದು ಅಂತ ಹಂತ ಹಂತವಾಗಿ ಹೇಳುವ ವಿಧಾನ ಕೈ ಕೊಟ್ಟಿದೆ. ಪ್ರೇಕ್ಷಕರಿಗೆ ರಿಲೀಫ್ ಕೊಡುವುದಕ್ಕೆ ಸೆಳೆಯುವ ಹಾಡುಗಳು ಬೇಕಿತ್ತು. ಸಿನಿಮಾದ ಉದ್ದಕ್ಕೂ ಗಂಭೀರ ವಿಷಯವನ್ನೇ ಹೇಳುವುದಕ್ಕಿಂತ ಮಧ್ಯದಲ್ಲಿ ಹಾಸ್ಯದ ಸನ್ನಿವೇಶ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅಂತ ಅನಿಸುತ್ತೆ. ಫಸ್ಟ್ ಹಾಫ್ ಅನ್ನು ಕೇವಲ ಬೇಸ್ ಲೈನ್ ಹೇಳುವುದಕ್ಕೆ ತೆಗೆದುಕೊಂಡಿದ್ದಾರೆ.
'ಪೆಪೆ' ನೋಡ್ಬೇಕಾ? ಬೇಡ್ವಾ?
ಸಿನಿಮಾಗಳಲ್ಲಿ ಪ್ರಯೋಗಗಳು ಆಗಬೇಕು ಅನ್ನೋರು 'ಪೆಪೆ' ನೋಡಬೇಕು. ಮಾಸ್ ಕಲ್ಟ್ ಸಿನಿಮಾ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬಹುದು. ಮಾಸ್ ಅವತಾರದಲ್ಲಿ ವಿನಯ್ ರಾಜ್‌ಕುಮಾರ್ ನೋಡಬೇಕು ಅಂದುಕೊಂಡವರೂ ಈ ಸಿನಿಮಾ ನೋಡಬಹುದು. ಆಗಾಗ ಕಥೆಯನ್ನು ಎಳೆದಿದ್ದಾರೇನೋ ಅಂತ ಅನಿಸಬಹುದು. ಸಿನಿಪ್ರೇಮಿಗಳಿಗೆ ಇದೆಲ್ಲವೂ ಕಲಾವಿದರ ಪರ್ಫಾಮೆನ್ಸ್ ಮುಂದೆ ಪ್ರಭಾವ ಬೀರಲಾರದೇನೋ...


Click it and Unblock the Notifications











