Welcome To The Jungle Review : ಜಂಗಲ್‌ನಲ್ಲಿ ಸ್ಟಾರ್‌ಗಳ ಹಾವಳಿ,ಮನರಂಜನೆಯ ಫುಲ್ ಮೀಲ್ಸ್ -ಹೇಗಿದೆ ಸಿನಿಮಾ?ಇಲ್ಲಿದೆ ವಿಮರ್ಶೆ
ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್‌ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್‌ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗ. ಹೀಗೆ ಈ ಭಾಗಗಳು ಮುಂದುವರೆಯುತ್ತಲೇ ಇವೆ.
ಆದರೆ. ಅಪ್ಪಿ.. ತಪ್ಪಿ.. ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಚಿತ್ರ ಪಾತಾಳಕ್ಕೆ ಬೀಳುವ ಸಾಧ್ಯತೆ ಇರುತ್ತೆ. ಕೇವಲ ಸ್ಟಾರ್ ವ್ಯಾಲ್ಯೂ ಎನ್ ಕ್ಯಾಶ್ ಮಾಡಿಕೊಂಡು ಇಂದಿನ ಕಾಲದಲ್ಲಿ ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಇದಕ್ಕೆ ಕೈಗನ್ನಡಿ ಎಂಬಂತೆ ''ವಾರ್ 2''.. ''ಧಡಕ್ 2''.. ''ಸರ್ದಾರ್ 2''.. ''ಕೇಸರಿ 2''..

ಹೀಗೆ ಹಲವು ಚಿತ್ರಗಳು ಮಕಾಡೆ ಮಲಗಿವೆ. ಆದರೂ ಈ ಸೀಕ್ವೆಲ್ ಜ್ವರ ಮಾತ್ರ ಕಡಿಮೆಯಾಗ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ವೆಲ್ಕಮ್'' ಫ್ರಾಂಚೈಸಿಯ ಮೂರನೇ ಭಾಗ ಬಂದಿದೆ. ಅದರ ಹೆಸರು ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ''ವೆಲ್ಕಮ್ ಟು ದಿ ಜಂಗಲ್''. ಹಾಗಿದ್ದರೆ ಹೇಗಿದೆ ಸಿನಿಮಾ..? ಚಿತ್ರದ ಕಥಾಹಂದರವೇನು..? ಚಿತ್ರ ಕಾಮಿಡಿ ಕಿಕ್ಕೇರಿಸುತ್ತಾ..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ನೆನಪಿಸುವ ಉದ್ಯಮಿಯ ಹಿನ್ನೆಲೆಯಲ್ಲಿ ಕಥೆ ತೆರೆದುಕೊಳ್ಳುತ್ತೆ. ಆತನ ಹತ್ತಿರ ಇರುವ 2000 ಕೋಟಿ ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಮಾಡಲು ಆಪ್ತ ಕಾರ್ಯದರ್ಶಿ ಪ್ಲಾನ್ ಮಾಡುತ್ತಾನೆ. ಚಿತ್ರರಂಗದಲ್ಲಿ ವರ್ಷಾನು ವರ್ಷ ಸೈಕಲ್ ಹೊಡೆಯುತ್ತಿರುವ ಸೋತು ಕಂಗಾಲಾದವರನ್ನೆಲ್ಲ ಒಂದು ಕಡೆ ಸೇರಿಸಿ ಚಿತ್ರ ಮಾಡುವ ಐಡಿಯಾ ಕೊಡುತ್ತಾನೆ. ಇಲ್ಲಿಂದ ಸಿನಿಮಾದಲ್ಲೊಂದು ಸಿನಿಮಾ ಶುರುವಾಗುತ್ತೆ.
ಆದರೆ, ಬದುಕಿನಲ್ಲಿ ಸೋತು ನಿರಾಶರಾದ ಎಲ್ಲರು ಚಿತ್ರ ಮಾಡುತ್ತಿರುವಾಗ, ಇವರೆಲ್ಲ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿರುವ, ಯಾರಿಗೂ ಸೇರದ ''ನೋ ಮ್ಯಾನ್ಸ್ ಲ್ಯಾಂಡ್'' ಎನ್ನುವ ವಿವಾದಿತ ಪ್ರದೇಶಕ್ಕೆ ತಮಗೆ ಗೊತ್ತಿಲ್ಲದಂತೆ ಕಾಲಿಡುತ್ತಾರೆ. ಇಲ್ಲಿ ಅಲ್ಲಿನ ಗ್ರಾಮಸ್ಥರಿಗೆ ಸ್ಥಳಿಯ ಉಗ್ರರು ಹಿಂಸೆ ಕಿರುಕುಳ ಕೊಡುತ್ತಿರುತ್ತಾರೆ. ಇಂತಹ ವಾತಾವರಣದಲ್ಲಿ ಸಿಲುಕಿಕೊಳ್ಳುವ ಚಿತ್ರತಂಡ ಅಲ್ಲಿನ ಗ್ರಾಮಸ್ಥರ ರಕ್ಷಣೆಯನ್ನು ಮಾಡುತ್ತಾ..? ತಮ್ಮ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಾ..? ಎನ್ನುವುದೇ ಚಿತ್ರದ ತಿರುಳು.
ಅಕ್ಷಯ್ ಕುಮಾರ್ ಕಿಂಗ್ ಆಫ್ ಕಾಮಿಡಿ
ಅಕ್ಷಯ್ ಕುಮಾರ್ ಇಲ್ಲದೇ ಈ ಚಿತ್ರವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಅಷ್ಟರ ಮಟ್ಟಿಗೆ ಇಡೀ ಚಿತ್ರವನ್ನು ಆವರಿಸಿಕೊಂಡಿದ್ಧಾರೆ ಅಕ್ಷಯ್ ಕುಮಾರ್. ಮೊದಲಿಂದ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ ಮತ್ತೊಮ್ಮೆ ತಾವು ಬಾಲಿವುಡ್‌ನ ಕಿಂಗ್ ಆಫ್ ಕಾಮಿಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇವರ ಕಾಮಿಡಿ ಟೈಮಿಂಗ್, ಎಕ್ಸ್‌ಪ್ರೆಶನ್, ಸಿಂಪ್ಲಿ ಸೂಪರ್ಬ್.

ಬೇರೆಯವರ ಅಭಿನಯ ಹೇಗಿದೆ..?
ಅಕ್ಷಯ್ ಕುಮಾರ್ ಅವರಿಗೆ ಸುನಿಲ್ ಶೆಟ್ಟಿ ಮತ್ತು ಅರ್ಷದ್ ವಾರ್ಸಿ ಹೆಗಲಿಗೆ ಹೆಗಲು ನೀಡಿದ್ಧಾರೆ. ವಿಶೇಷವಾಗಿ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ನಡುವಿನ ಜುಗಲಬಂದಿ ಚೆನ್ನಾಗಿದೆ. ಪರೇಶ್ ರಾವಲ್ ಎಂದಿನಂತೆ ತಮ್ಮ ವಿಶಿಷ್ಠ ಅಭಿನಯದಿಂದ ಗಮನ ಸೆಳೆಯುತ್ತಾರೆ. ಆರಂಭದಲ್ಲೇ ಹೇಳಿದಂತೆ ಬಹುತಾರಾಗಣದ ಚಿತ್ರ ಇದು. ಚಿತ್ರಪ್ರೇಮಿಗಳಿಗೆ ಚಿರಪರಿಚಿತ ಇರುವ ಹೆಚ್ಚು ಕಡಿಮೆ 34ಜನ ಚಿತ್ರದಲ್ಲಿದ್ದಾರೆ. ಇವರೆಲ್ಲರ ಅಭಿನಯದ ಕುರಿತು ಇಲ್ಲಿ ಹೇಳುವುದು ಅಸಾಧ್ಯ. ಸರಳವಾಗಿ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಎಲ್ಲರೂ ತಮಗೆ ನೀಡಿದ ಜವಾಬ್ಧಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ ಇವರೆಲ್ಲರಿಗಿಂತ ಹೆಚ್ಚಿನ ಅಂಕ ಪಡೆದಿದ್ದು ಮಾತ್ರ ಅಕ್ಷಯ್ ಕುಮಾರ್.
ಅಹ್ಮದ್ ಖಾನ್ ನಿರ್ದೇಶನ
ಮಲ್ಟಿಸ್ಟಾರ್ ಚಿತ್ರವನ್ನು ಮಾಡುವುದೇ ಸವಾಲಿನ ಕೆಲಸ. ಅದರಲ್ಲಿಯೂ 34 ಜನರನ್ನು ಒಂದು ಕಡೆ ಗುಡ್ಡೆ ಹಾಕಿ ಚಿತ್ರ ಮಾಡುವುದು, ಯಾರೆಂದರೆ ಯಾರಿಗೂ ನಿರಾಸೆ ಮಾಡದೇ ಕೆಲಸ ಹೊರ ತೆಗೆಯುವುದು ಇನ್ನು ಕಷ್ಟಕರ ಕೆಲಸ. ಈ ಕೆಲಸವನ್ನು ತುಂಬಾನೇ ಸುಲಭ ಎನ್ನುವಂತೆ ಅಹ್ಮದ್ ಖಾನ್ ಮಾಡಿದ್ದಾರೆ, ಯಶಸ್ವಿಯಾಗಿ ಚಿತ್ರವನ್ನು ನಿಭಾಯಿಸಿದ್ದಾರೆ. ಆದರೆ ನಾಯಕಿಯರತ್ತ ಚೂರು ಹೆಚ್ಚಿನ ಗಮನ ವಹಿಸಬೇಕಿತ್ತು.
ಪ್ಲಸ್ ಪಾಯಿಂಟ್
ಆನಂದ್ ರಾಜ್ ಆನಂದ್ ಮತ್ತು ವಿಕ್ರಂ ಮಾಂಟ್ರೋಸ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ''ಊಚಾ ಲಂಬಾ ಕದ್'' ಹಾಡನ್ನು ಸುಂದರವಾಗಿ ಮರುಸೃಷ್ಟಿಸಲಾಗಿದೆ. ದ್ವೀತಿಯಾರ್ಧದಲ್ಲಿನ ಅರಣ್ಯದ ದೃಶ್ಯಗಳನ್ನು ಕಬೀರ್ ಲಾಲ್ ತಮ್ಮ ಕ್ಯಾಮರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಇನ್ನು ಫರ್ಹಾದ್ ಸಾಮ್ಜಿ ಅವರ ಪಂಚ್ ಡೈಲಾಗ್, ಓನ್ ಲೈನರ್ ಜೋಕ್‌ಗಳು ಚಿತ್ರದ ಜೀವಾಳ. ಸಿಚುವೇಷನಲ್ ಕಾಮಿಡಿ ದೃಶ್ಯಗಳು ಸೊಗಸಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಮಿಡಿ ಚಿತ್ರಗಳು ಅಂದ ಮೇಲೆ ಡಬಲ್ ಮೀನಿಂಗ್ ಜೋಕ್‌ಗಳಿರಲೇಬೇಕೆಂಬ ಅಲಿಖಿತ ನಿಯಮವನ್ನು ಬಹುತೇಕ ಎಲ್ಲರು ಅನುಸರಿಸುತ್ತಿದ್ದಾರೆ. ಇದಕ್ಕೆ ''ವೆಲ್ಕಮ್ ಟು ದಿ ಜಂಗಲ್'' ಅಪವಾದ. ಮಕ್ಕಳು, ಯುವಕರು ಮತ್ತು ಹಿರಿಯರು ಎಲ್ಲರೂ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನಕ್ಕು ಆನಂದಿಸಬಹುದಾದ ಅಪರೂಪದ ಚಿತ್ರ ಇದು.
ಮೈನಸ್ ಪಾಯಿಂಟ್
ಮೇಲೆ ಹೇಳಿದಂತೆ ಬಹುದೊಡ್ಡ ತಾರಾಬಳಗದ ಚಿತ್ರ ಇದು. ಈ ಚಿತ್ರದಲ್ಲಿ ನಾಯಕಿಯರ ದಂಡು ಕೂಡ ಇದೆ. ಆದರೆ, ನಾಯಕಿಯರು ಇಲ್ಲಿ ಗ್ಲಾಮರ್ ಗೊಂಬೆಯಂತೆ ಕೆಲ ಕಡೆ ಭಾಸವಾಗುತ್ತೆ. ಮೊದಲಾರ್ಧ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತೆ. ಅಲ್ಲಲ್ಲಿ ಡಬ್ಬಿಂಗ್ ಕೈ ಕೊಟ್ಟಿದೆ.
ಕೊನೆ ಮಾತು
ಒಟ್ನಲ್ಲಿ ವೆಲ್ಕ್‌ಮ್ ಟು ದಿ ಜಂಗಲ್'' ಈ ವರ್ಷ ತೆರೆಗೆ ಬಂದಿರುವ ಅತ್ಯುತ್ತಮವಾದ ಕಾಮಿಡಿ ಚಿತ್ರಗಳಲ್ಲೊಂದು. ದೈನಂದಿನ ಒತ್ತಡದ ಬದುಕಿನಿಂದ ಕೆಲ ಕಾಲ ದೂರ ಇಡುವ, ಮನಸ್ಸಿಗೆ ನಿರಾಳತೆಯನ್ನು ನೀಡುವ ಚಿತ್ರ ಇದು. ಅಲ್ಲಲ್ಲಿ ಕೆಲ ನೂನ್ಯತೆಗಳಿವೆಯಾದರೂ ಚಿತ್ರ ನೋಡಿಸಿಕೊಂಡು ನಗಿಸಿಕೊಂಡು ಹೋಗುತ್ತೆ. ವೀಕೆಂಡ್‌ನಲ್ಲಿ ಮನೆ ಮಂದಿ ಎಲ್ಲ ಕುಳಿತು ಮುಲಾಜಿಲ್ಲದೇ ಒಮ್ಮೆ ನೋಡಬಹುದಾದ ಚಿತ್ರ ಇದು.


Click it and Unblock the Notifications