Welcome To The Jungle X Review ; ನಕ್ಕು ನಲಿಸುತ್ತಾ ಅಕ್ಷಯ್ ಕುಮಾರ್ ಗ್ಯಾಂಗ್ ? ಹೆಂಗೈತೆ ಸಿನಿಮಾ ?
ಜನರನ್ನು ನಗಿಸುವುದು ಸುಲಭ ಅಲ್ಲ. ತುಂಬಾನೇ ಕಷ್ಟಕರವಾದ ಕೆಲಸ ಅದು. ಆದರೂ ಕೂಡ ಅನೇಕರು ನಗಿಸುವ ಪ್ರಯತ್ನ ಮಾಡುತ್ತಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಹಾಸ್ಯದ ರಸದೌತಣವನ್ನು ಉಣಬಡಿಸುವ ಪ್ರಯತ್ನವನ್ನು ಮೇಲಿಂದ ಮೇಲೆ ಮಾಡುತ್ತಾರೆ.
ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ತಮ್ಮ ಎಲ್ಲ ಚಿಂತೆ ಮರೆತು ಹೊಟ್ಟೆ ಹುಣ್ಣಾಗುವಂತೆ ನಗಬೇಕೆನ್ನುವುದೇ ಇವರ ಏಕಮಾತ್ರ ಉದ್ದೇಶ ಆಗಿರುತ್ತೆ. ಹೀಗಾಗಿ ಇಲ್ಲಿ ಲಾಜಿಕ್‌ಗೆ ಕೆಲಸ ಇರಲ್ಲ. ಇದೇ ದಿಸೆಯಲ್ಲಿ ಮೂಡಿ ಬಂದಿರುವ ಚಿತ್ರ ''ವೆಲ್ಕಮ್ ಟು ದಿ ಜಂಗಲ್'' ಇಂದು (ಜೂನ್ 26) ವಿಶ್ವದೆಲ್ಲೆಡೆ ತೆರೆಗೆ ಬಂದಿದೆ.

ಇನ್ನು ಈ ಚಿತ್ರದಲ್ಲಿ ಒಬ್ಬರಲ್ಲ. ಇಬ್ಬರಲ್ಲ. ಮೂರು ನಾಲ್ಕು ಜನರಲ್ಲ. ಒಂದು ಡಜನ್‌ಗೂ ಅಧಿಕ ಸ್ಟಾರ್ ಗಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ಷಯ್ ಕುಮಾರ್ ಗೆಲುವಿನ ಲಯಕ್ಕೆ ಮರಳಿದ್ದಾರೆ. ಈ ಹಿನ್ನೆಲೆ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ. ಈ ನಿರೀಕ್ಷೆಯ ಪರೀಕ್ಷೆಯಲ್ಲಿ ಚಿತ್ರ ಪಾಸ್ ಆಯ್ತಾ..? ಮೊದಲ ದಿನವೇ ಚಿತ್ರವನ್ನು ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಮಜವಾದ ಅನುಭವ
''ವೆಲ್ಕಮ್ ಟು ದಿ ಜಂಗಲ್'' ತುಂಬಾನೇ ಮನರಂಜನಾತ್ಮಕವಾದ ಚಿತ್ರ. ಕ್ರೇಜಿ.. ಅಲ್ಟ್ರಾ ಮಾಸ್.. ಫುಲ್ ಫನ್.. ಸೆಕೆಂಡ್ ಹಾಫ್ ಸ್ವಲ್ಪ ಸ್ಲೋ ಅನ್ಸಿದ್ರೂ, ಸಿನಿಮಾ ಮಾತ್ರ ಕ್ರೇಜಿ ಕಾಮಿಡಿ ರೈಡ್. ಎಲ್ಲರ ಎನರ್ಜಿ ಮತ್ತು ನಾನ್‌ಸ್ಟಾಪ್ ತಲೆ ಹರಟೆ ನೆಕ್ಸ್ಟ್ ಲೆವಲ್ ಅಷ್ಟೇ ಎಂದು ಹೇಳಿರುವ ಪ್ರೇಕ್ಷಕರೊಬ್ಬರು ಚಿತ್ರಕ್ಕೆ 4.2 ಸ್ಟಾರ್ ನೀಡಿದ್ದಾರೆ. ಪಕ್ಕಾ ಮಾಸ್ ಮಜಾ ರೈಡ್ ಸಿನಿಮಾ ಎಂದು ಹೇಳಿದ್ದಾರೆ.
ಎಂಟರ್ ಟೇನಿಂಗ್ ಚಿತ್ರ
ಸಿನಿಮಾ ಮಾತ್ರ ಸಖತ್ ಎಂಟರ್‌ಟೇನಿಂಗ್ ಆಗಿದೆ. ಚಿತ್ರದಲ್ಲಿನ ಕಾಮಿಡಿ ಮತ್ತು ತಲೆಹರಟೆಯೇ ಜೋಕ್‌ಗಳೇ ಈ ಸಿನಿಮಾದ ಪ್ಲಸ್ ಪಾಯಿಂಟ್. ಫ್ಯಾಮಿಲಿ ಪ್ರೇಕ್ಷಕರಿಗಂತೂ ಇದು ಖಂಡಿತ ಇಷ್ಟ ಆಗುತ್ತೆ. ಥಿಯೇಟರ್‌ನಲ್ಲಿದ್ದ ಜನ ಎಲ್ಲಾ ಹೊಟ್ಟೆ ಹುಣ್ಣಾಗೋ ತರ ಬಿದ್ದು ಬಿದ್ದು ನಗ್ತಾ ಇದ್ರು ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ ಮೂರು ಸ್ಟಾರ್ ನೀಡಿದ್ದಾರೆ.
ನೋಡಲೇಬೇಕಾದ ಚಿತ್ರ
ಅಕ್ಷಯ್ ಕುಮಾರ್ ಅವರ ದ್ವಿಪಾತ್ರ ಮತ್ತು ಬಹುದೊಡ್ಡ ತಾರಾಗಣ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. ಹಳೆಯ ನೆನಪುಗಳ ಜೊತೆ ಚಿತ್ರದಲ್ಲಿನ ಹಾಸ್ಯ ಸಖತ್ ವರ್ಕ್ ಆಗಿದೆ. ''ಊಚಾ ಲಂಬಾ ಕದ್'' ಹಾಡಂತೂ ಥಿಯೇಟರ್ ನಲ್ಲಿ ಧೂಳೆಬ್ಬಿಸುತ್ತೆ. ನಿಜ ಹೇಳಬೇಕು ಅಂದರೆ ಚಿತ್ರದ ಎಳೆ ತುಂಬಾನೇ ಸರಳವಾಗಿದೆ. ಆದರೆ ಪ್ರಮುಖ ವಿಷಯ ಅಂದರೆ ಇಲ್ಲಿ ಲಾಜಿಕ್‌ಗೆ ಕೆಲಸ ಇಲ್ಲ. "ಝೀರೋ ಬ್ರೈನ್ ಫನ್". ಅಲ್ಟಿಮೇಟ್ ಮಜಾ ಕೊಡುತ್ತೆ. ಮಿಸ್ ಮಾಡ್ದೆ ನೋಡಲೇಬೇಕಾದ ಸಿನಿಮಾ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 5ಕ್ಕೆ 4 ಅಂಕ ನೀಡಿದ್ದಾರೆ.
ನಕ್ಕು ನಲಿಯುವ ಸಿನಿಮಾ
''ವೆಲ್ಕಮ್ ಟು ದಿ ಜಂಗಲ್'' ಕ್ಲೀನ್ ಸಿನಿಮಾ. ಇದು ''ಹೌಸ್‌ಫುಲ್ 5'' ರೀತಿ ಇಲ್ಲ. ಹೆಣ್ಣುಮಕ್ಕಳನ್ನು ಇಲ್ಲಿ ಗ್ಲಾಮರ್ ಗೊಂಬೆಯನ್ನಾಗಿ ಮಾತ್ರ ಬಳಸಿಕೊಂಡಿಲ್ಲ. ಡಬಲ್ ಮೀನಿಂಗ್ ಜೋಕ್‌ಗಳಿಲ್ಲ. ಅಶ್ಲೀಲತೆ ಇಲ್ಲದ, ಫ್ಯಾಮಿಲಿ ಜೊತೆ ಕೂತು ಆರಾಮಾಗಿ ನಕ್ಕು ನಲಿಯುವಂತಹ ಕ್ರೇಜಿ ಸಿನಿಮಾ. ಇಂತಹ ಚಿತ್ರಗಳಲ್ಲಿ ಲಾಜಿಕ್ ಹುಡುಕಬಾರದು, ಥಿಯೇಟರ್‌ಗೆ ಹೋಗುವಾಗ ಬುದ್ಧಿನ ಮನೆಯಲ್ಲೇ ಬಿಟ್ಟು ಹೋಗ್ಬೇಕು. ಯಾಕಂದ್ರೆ, ಈ ತರಹದ ಸಿನಿಮಾಗಳು ಇರೋದೇ ಹೀಗೆ. ನಾವು ಇಂಥಾ ಜಾನರ್ ಚಿತ್ರಗಳನ್ನು ಸಪೋರ್ಟ್ ಮಾಡ್ಬೇಕು. ನಮ್ಮನ್ನ ನಗಿಸೋಕೆ ಈ ನಟರು ಅಷ್ಟೊಂದು ಕಷ್ಟಪಡ್ತಿದ್ದಾರೆ ಅಲ್ವಾ?
ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅಂತೂ ಸಖತ್ ಎಂಜಾಯ್ ಮಾಡ್ಕೊಂಡು ಆಕ್ಟ್ ಮಾಡಿದ್ದಾರೆ. ಫರಿದಾ ಜಲಾಲ್ ಅವರ ಕಾಮೆಡಿ ಸಖತ್ ಫನ್ನಿಯಾಗಿದೆ. ಇನ್ನು ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಜಾನಿ ಲಿವರ್ ಅವರನ್ನೆಲ್ಲಾ ಪರದೆ ಮೇಲೆ ನೋಡ್ತಾ ಇದ್ರೆ ಅವರೂ ಕೂಡ ತಮ್ಮ ಕ್ಯಾರೆಕ್ಟರ್‌ಗಳನ್ನ ಸಖತ್ ಎಂಜಾಯ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅದನ್ನ ನೋಡೋದೇ ಒಂದು ಚೆಂದ ಎಂದು ಮತ್ತೊಬ್ಬರು ಸುದಿರ್ಘವಾದ ವಿಮರ್ಶೆ ಹಂಚಿಕೊಂಡಿದ್ಧಾರೆ.
ಹಾಗಂಥ ಎಲ್ಲರಿಗೆ ಈ ಚಿತ್ರ ಇಷ್ಟ ಆಗಿದೆ ಅಂತೇನು ಇಲ್ಲ. ಅಲ್ಲಲ್ಲಿ ಕೆಲವರು ಈ ಚಿತ್ರದ ಕುರಿತು ಕೂಡ ಅಪಸ್ವರ ಎತ್ತಿದ್ದಾರೆ. ನಿರ್ದೇಶಕ ಮತ್ತು ಚಿತ್ರದಲ್ಲಿನ ಸ್ಟಾರ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ, ಬಹುತೇಕ ಪ್ರೇಕ್ಷಕರು ಮಾತ್ರ ''ವೆಲ್ಕಮ್ ಟು ದಿ ಜಂಗಲ್'' ಚಿಂತೆಯನ್ನೆಲ್ಲಾ ಮರೆತು ಮೂರು ಗಂಟೆ ನಕ್ಕು ನಲಿಯುವ ಸಿನಿಮಾ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.


Click it and Unblock the Notifications