America America Review ; ಇಂದಿನ ಜನರೇಷನ್‌ಗೂ ಆಪ್ತವಾಗುವ ಮಾಸ್ಟರ್‌ಪೀಸ್ ಅಮೆರಿಕಾ ಅಮೆರಿಕಾ
ಅದು ಜಾಗತೀಕರಣ ಮತ್ತು ಮಿಲೇನಿಯಲ್ಸ್‌ನತ್ತ ಜಗ ಹೆಜ್ಜೆ ಇಡುತ್ತಿದ್ದ ಕಾಲ. ಒಂದು ಕಡೆ ಭಾರತೀಯ ಸಂಪ್ರದಾಯದ ಜೊತೆ ಆಪ್ತವಾದ ನಂಟು, ಮತ್ತೊಂದು ಕಡೆ ಪಾಶ್ಚಿಮಾತ್ಯ ಸಂಸ್ಕ್ರತಿಯ ಸೆಳೆತ. ಈ ಎರಡರ ನಡುವೆ ಜನ ಸಿಲುಕ್ಕಿದ್ದ ಕಾಲವದು. 90ರ ದಶಕದಲ್ಲಿನ ಈ ಬದಲಾವಣೆ ಚಿತ್ರರಂಗದ ಮೇಲೂ ಕೂಡ ಪ್ರಭಾವ ಬೀರಿತ್ತು.
ಇಲ್ಲಿಯವರೆಗೆ ಸ್ಟುಡಿಯೋದಲ್ಲಿರುತ್ತಿದ್ದ ಹಲವರು ನಿಧಾನವಾಗಿ ಹೊರ ದೇಶದತ್ತ ಮುಖ ಮಾಡಲು ಶುರು ಮಾಡಿದ್ದರು. ತಮ್ಮ ಚಿತ್ರಗಳ ಚಿತ್ರೀಕರಣವನ್ನು ಹಂತ-ಹಂತವಾಗಿ ವಿದೇಶದಲ್ಲಿ ಮಾಡಲು ಶುರು ಮಾಡಿದರು. ಬದಲಾಗುತ್ತಿದ್ದ ಯುವ ಪೀಳಿಗೆಯ ನಾಡಿಮಿಡಿತವನ್ನು ಹಿಡಿಯಲು ಹೊಸ ಮಾದರಿಯ ಪ್ರಯೋಗಗಳನ್ನು ಮಾಡತೊಡಗಿದರು.

ಹಾಗಂಥ ಈ ಪ್ರಯೋಗಗಳೆಲ್ಲವೂ ಯಶಸ್ವಿಯಾದವು ಅಂತಲ್ಲ. ಎಲ್ಲ ಸಿನಿಮಾಗಳು ಗೆದ್ದಿವೆ ಎಂದಲ್ಲ. ಈ ಪರಿವರ್ತನೆಯ ಕಾಲದಲ್ಲಿ ಬಂದ ನೂರಾರು ಸಿನಿಮಾಗಳು ಇಂದು ಕಾಲಗರ್ಭದಲ್ಲಿ ಕಳೆದುಹೋಗಿವೆ. ಆದರೆ ಆ ಪೈಕಿ ಕೆಲವೇ ಕೆಲ ಅಪರೂಪದ ಚಿತ್ರಗಳು ಮಾತ್ರ ಅದ್ಭುತವನ್ನೇ ಸೃಷ್ಟಿಸಿವೆ. ಅವು ಕೇವಲ ಮನರಂಜನೆಯನ್ನು ಮಾತ್ರ ನೀಡಲಿಲ್ಲ, ಬದಲಿಗೆ ಒಂದು ಇಡೀ ತಲೆಮಾರಿನ ಸಾಂಸ್ಕೃತಿಕ ಕನ್ನಡಿಯಾದವು. ದಶಕಗಳು ಕಳೆದರೂ ಇಂದಿಗೂ ಆ ಚಿತ್ರಗಳನ್ನು ಜನ ಅಷ್ಟೇ ಪ್ರೀತಿಯಿಂದ ನೋಡುತ್ತಾರೆ, ಚರ್ಚಿಸುತ್ತಾರೆ. ಹೀಗಾಗಿಯೇ ಅವು ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳಾಗಿ ಉಳಿಯದೇ, ಸಾರ್ವಕಾಲಿಕ 'ಕಲ್ಟ್ ಕ್ಲಾಸಿಕ್' ಮಾಸ್ಟರ್‌ಪೀಸ್ ಎನಿಸಿಕೊಂಡವು.ಉದಾಹರಣೆಗೆ ''ಅಮೆರಿಕಾ ಅಮೆರಿಕಾ''.
ಹೌದು, ಕಥೆಗಾರರಾಗಿ, ಪಾಠ ಹೇಳುವ ಮೇಷ್ಟ್ರಾಗಿ, ಆ ನಂತರ ನಿರ್ದೇಶಕರಾಗಿ ಹೆಸರು ಮಾಡಿದವರು ನಾಗತಿಹಳ್ಳಿ ಚಂದ್ರಶೇಖರ್. ಉಂಡು ಹೋದ ಕೊಂಡು ಹೋದ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರಯಾಣ ಶುರು ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಆ ನಂತರ ''ಬಾ ನಲ್ಲೆ ಮಧು ಚಂದ್ರಕೆ'', ''ಕೊಟ್ರೇಶಿ ಕನಸು'', ''ಹೂಮಳೆ'' ಚಿತ್ರಗಳನ್ನು ಮಾಡಿದರು. ಆ ನಂತರ ಚಿತ್ರಮಂದಿರದಲ್ಲಿಯೇ ಕುಳಿತು ಅಮೆರಿಕಾ ನೋಡುವ ಅವಕಾಶವನ್ನು ಕನ್ನಡಿಗರಿಗೆ ನಾಗತಿಹಳ್ಳಿ ಚಂದ್ರಶೇಖರ್ ನೀಡಿದ್ದರು.
ಹಲವು ಮೊದಲುಗಳಿಗೆ ಸಾಕ್ಷಿಯಾದ ಚಿತ್ರ
ಆ ಕಾಲಕ್ಕೆ ಹಲವು ಮೊದಲುಗಳಿಗೆ ಸಾಕ್ಷಿಯಾದ ಚಿತ್ರ ''ಅಮೆರಿಕಾ ಅಮೆರಿಕಾ''. ಇಂದು ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದು ವಾರ ಪ್ರದರ್ಶನ ಕಾಣುವುದು ಕಷ್ಟವೆನ್ನುವ ವಾತಾವರಣ ಇದೆ. ಆದರೆ ಆ ಕಾಲದಲ್ಲಿ ಅಮೆರಿಕಾ ಅಮೆರಿಕಾ ಒಂದು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು.
ಭಾವನಾತ್ಮಕ ತ್ರಿಕೋನ ಪ್ರೇಮಕಥೆ
''ಅಮೆರಿಕಾ ಅಮೆರಿಕಾ'' ಅದ್ಭುತ ಗೆಲುವಿನ ಹಿಂದೆ ಹಲವು ಕಾರಣಗಳಿವೆ. ಆ ಪೈಕಿ ಚಿತ್ರದ ಕಥೆ ಪ್ರಮುಖವಾದದ್ದು. ಮೂರು ಅದ್ಭುತ ಪಾತ್ರಗಳ ಸುತ್ತ ಹೆಣೆಯಲಾದ ಭಾವನಾತ್ಮಕವಾದ ಪ್ರೇಮ ಕಥೆ ಇದು. ಸೂರ್ಯ (ರಮೇಶ್ ಅರವಿಂದ್) ಭೂಮಿ (ಹೇಮಾ ಪಂಚಮುಖಿ) ಮತ್ತು ಶಶಾಂಕ್ ( ಅಕ್ಷಯ್ ಆನಂದ್) ನಡುವಿನ ಸ್ನೇಹ-ಪ್ರೇಮದ ಸಂಗಮ ''ಅಮೆರಿಕಾ ಅಮೆರಿಕಾ''.
ಸೂರ್ಯಗೆ ಈ ನೆಲದ ಮಣ್ಣಿನ ಮೇಲೆ ಪ್ರೀತಿ ಆದರೆ ಶಶಾಂಕ್ ಕನಸೆಂಬ ಕುದರೆಯನ್ನೇರಿದವನು. ದುಡ್ಡು, ಅಂತಸ್ತು, ಐಷಾರಾಮಿ ಜೀವನಕ್ಕಾಗಿ ಭಾರತವನ್ನು ತೊರೆದು ವಿದೇಶಕ್ಕೆ ಹಾರುವ ಹಪಾಹಪಿಯ ವ್ಯಕ್ತಿತ್ವ ಇವನದ್ದು. ಇವರಿಬ್ಬರ ನಡುವೆ ಭಾರತೀಯ ಮೌಲ್ಯಗಳನ್ನೇ ಉಸಿರಾಡುವ ಭೂಮಿ ಮದುವೆಯಾಗಿ ಅಮೆರಿಕಾ ಸೇರಿದಾಗ, ಎರಡು ಭಿನ್ನ ಸಂಸ್ಕೃತಿಗಳ ನಡುವಿನ ಸಂಘರ್ಷವೇ ''ಅಮೆರಿಕಾ ಅಮೆರಿಕಾ''.
ಕಥಾಹಂದರ
ಸೂರ್ಯ, ಶಶಾಂಕ್ ಹಾಗೂ ಭೂಮಿ ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರಾಗಿರುತ್ತಾರೆ. ಶಶಾಂಕ್ ಕೆಲಸದ ನಿಮಿತ್ತ ಅಮೆರಿಕಾಕ್ಕೆ ಹೋಗುತ್ತಾನೆ. ಸೂರ್ಯ ಹಾಗೂ ಭೂಮಿ ಊರಿನಲ್ಲಿ ಜೊತೆಯಲ್ಲಿಯೇ ಕಲಿಯುತ್ತಿರುತ್ತಾರೆ. ಭೂಮಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸೂರ್ಯ ಯಾರಿಗೂ ಕೂಡಾ ತನ್ನ ಪ್ರೀತಿಯ ವಿಚಾರವನ್ನು ತಿಳಿಸುವುದಿಲ್ಲ.
ಭೂಮಿಗೂ ಕೂಡಾ ಓದೆಲ್ಲಾ ಮುಗಿದ ಬಳಿಕ ಇನ್ನೇನು ಸೂರ್ಯ ಭೂಮಿಗೆ ತನ್ನ ಪ್ರೀತಿಯನ್ನು ಹೇಳಬೇಕು ಎಂದು ಬರುತ್ತೆ. ಆಗ ಮನೆಯವರು ಭೂಮಿ ಹಾಗೂ ಶಶಾಂಕ್‌ಗೆ ಮದುವೆ ನಿಶ್ಚಯ ಮಾಡುತ್ತಾರೆ. ಮದುವೆ ಬಳಿಕ ಭೂಮಿ, ಶಶಾಂಕ್ ಜೊತೆಗೆ ಅಮೆರಿಕಾಗೆ ಶಿಫ್ಟ್ ಆಗುತ್ತಾಳೆ. ಕೆಲಸದ ಸಲುವಾಗಿ ಸೂರ್ಯ ಅಮೆರಿಕಾಗೆ ಹೋದ ಸಂದರ್ಭದಲ್ಲಿ ಸೂರ್ಯ ಭೂಮಿಯನ್ನು ಪ್ರೀತಿಸುತ್ತಿದ್ದ ವಿಚಾರ ಹೊರಬರುತ್ತದೆ.
ಸಣ್ಣ ಮನ:ಸ್ತಾಪ ಬರುತ್ತದೆ. ಮುಂದೆ ಅದು ಇನ್ನೇನು ಸರಿಹೋಗಬೇಕು ಎನ್ನುವಷ್ಟರಲ್ಲಿ ಶಶಾಂಕ್ ಅಪಘಾತದಲ್ಲಿ ಸಾಯುತ್ತಾನೆ. ಶಶಾಂಕ್‌ನ ಸಾವಿನ ಬಳಿಕ ಭೂಮಿ ಏನು ಮಾಡುತ್ತಾಳೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ? ಅಮೆರಿಕಾದಿಂದ ಭಾರತಕ್ಕೆ ಬರುವುದಾದರೂ ಯಾಕೆ ಎಂಬ ಪ್ರಶ್ನೆಗೆ ಉತ್ತರ ಹಲವರಿಗೆ ಗೊತ್ತಿರುತ್ತೆ. ಒಂದು ವೇಳೆ ಗೊತ್ತಿಲ್ಲದಿದ್ದರೆ ಈ ಚಿತ್ರ ಅಮೆಜಾನ್ ಪ್ರೈಂನಲ್ಲಿದೆ. ಆಸಕ್ತರು ನೋಡಿ ಉತ್ತರವನ್ನು ಪಡೆದುಕೊಳ್ಳಬಹುದು.
ಅದ್ಭುತ ಚಿತ್ರಕಥೆ
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಅದ್ಭುತ ಚಿತ್ರಕಥೆಯೇ ಈ ಸಿನಿಮಾದ ಜೀವಾಳ. ಇಡೀ ಚಿತ್ರದೂದ್ದಕ್ಕೂ ನಾಗ್ತಿಹಳ್ಳಿ ಚಂದ್ರಶೇಖರ್ ಪಾಶ್ಚಿಮಾತ್ಯ ಜೀವನದ ವಿರುದ್ಧ ಹೋಗಿಲ್ಲ, ಭಾರತೀಯರ ಭಾವನೆಗಳಿಗೆ ಧಕ್ಕೆಯನ್ನು ತಂದಿಲ್ಲ.
ಬದಲಿಗೆ ಹಣದಾಸೆಗೆ, ವ್ಯಾಮೋಹಕ್ಕೆ ವಿದೇಶಕ್ಕೆ ವಲಸೆ ಹೋಗುವ ಭಾರತದ ಪ್ರತಿಭಾವಂತರ ''ಬ್ರೈನ್ ಡ್ರೈನ್'' ಸಮಸ್ಯೆಗೆ ಮತ್ತು ಅಮೇರಿಕಾದ ಅತಿಯಾದ ಯಾಂತ್ರಿಕ ಜೀವನ ತಂದೊಡ್ಡುವ ಒಂಟಿತನಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ನಾಗತಿಹಳ್ಳಿ ಚಂದ್ರಶೇಖರ್ ಮಾಡಿದ್ದರು. ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯೂ ಆದರು.
ದುಡ್ಡಿದ್ದರೂ ನೆಮ್ಮದಿಯಿಲ್ಲದ ಶಶಾಂಕ್‌ನ ಪಾತ್ರದ ಮೂಲಕ ಅನಿವಾಸಿ ಭಾರತೀಯರ ಅಂತರಂಗದ ನೋವನ್ನು ತೋರಿಸಿದರೆ, ಸೂರ್ಯನ ಪಾತ್ರದ ಮೂಲಕ ತಾಯ್ನಾಡಿನಲ್ಲೇ ಸಿಗುವ ನೆಮ್ಮದಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು ನಾಗತಿಹಳ್ಳಿ ಚಂದ್ರಶೇಖರ್.
'ನೂರು ಜನ್ಮ'ಕೂ ನೆನಪುಳಿಯುವ ಸಂಗೀತ
ಈ ಕಲ್ಟ್ ಕ್ಲಾಸಿಕ್ ಚಿತ್ರದ ಬಗ್ಗೆ ಮಾತನಾಡುವಾಗ ಮಾಂತ್ರಿಕ ಸಂಗೀತ ನಿರ್ದೇಶಕ ಮನೋ ಮೂರ್ತಿ ಅವರನ್ನು ನೆನೆಯದಿದ್ದರೆ ಆ ವಿಮರ್ಶೆ ಅಪೂರ್ಣ. ಈ ಚಿತ್ರದ ಹಾಡುಗಳು ಕೇವಲ ಸಾಂಗ್ಸ್ ಅಲ್ಲ, ಅವು ಈ ಇಡೀ ಸಿನಿಮಾದ ಆತ್ಮ. ''ನೂರು ಜನ್ಮಕೂ ನೂರಾರು ಜನ್ಮಕೂ'' ಮತ್ತು ''ಯಾವ ಮೋಹನ ಮುರಳಿ ಕರೆಯಿತು'' ಹಾಡುಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಅಂತರಂಗದಲ್ಲಿ ಭದ್ರವಾಗಿವೆ.
ಅಭಿನಯದ ಕುರಿತು
ಅಭಿನಯದ ವಿಚಾರಕ್ಕೆ ಬಂದರೆ, ಇದು ರಮೇಶ್ ಅರವಿಂದ್ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲೊಂದು. ಪ್ರೀತಿಯನ್ನು ತ್ಯಾಗ ಮಾಡಿ, ಒಳಗೆ ಅಳುತ್ತಾ ಹೊರಗೆ ನಗುವ 'ಸೂರ್ಯ'ನ ಪಾತ್ರವನ್ನು ರಮೇಶ್ ಅವರಲ್ಲದೇ ಇನ್ಯಾರು ನಿರ್ವಹಿಸಲು ಸಾಧ್ಯವೇ ಇಲ್ಲ. ಅತ್ತ ಹೆಂಡತಿಯ ಪ್ರೀತಿಯೂ ಸಿಗದೇ, ಇತ್ತ ತಾಯ್ನಾಡಿನ ನೆನಪಿನಲ್ಲೂ ತೊಳಲಾಡುವ ಶಶಾಂಕ್ ಪಾತ್ರದಲ್ಲಿ ಅಕ್ಷಯ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಇಬ್ಬರು ನಾಯಕರ ನಡುವೆ ಸಿಲುಕಿ ಒದ್ದಾಡುವ ಸಾಂಪ್ರದಾಯಿಕ ಹೆಣ್ಣುಮಗಳಾಗಿ ಹೇಮಾ ಪಂಚಮುಖಿ ಅವರ ಅಭಿನಯ ಇಂದಿಗೂ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ.
ಸೂರ್ಯ-ಭೂಮಿ ಮದುವೆ ಆಗಿದ್ರೆ 'ಅಮೆರಿಕಾ ಅಮೆರಿಕಾ' ಸಿನಿಮಾ ಹಿಟ್ ಆಗ್ತಿರಲಿಲ್ಲ
''ಅಮೆರಿಕಾ ಅಮೆರಿಕಾ'' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಜನ ಹೇಮಾ ಅವರಿಗೆ ಬೈದಿದ್ದರಂತೆ. ಭೂಮಿ ಸೂರ್ಯನನ್ನು ಮದುವೆಯಾಗದೇ ಇರುವುದೇ ಅವರ ಬೈಗುಳಿಗೆ ಕಾರಣವಾಗಿತ್ತಂತೆ. ಆ ಸಮಯದಲ್ಲಿ ಏನೂ ಹೇಳದ ಹೇಮಾ ಪ್ರಭಾತ್ ನಕ್ಕು ಸುಮ್ಮನಾಗಿದ್ದರಂತೆ. ಯಾಕೆಂದರೆ ಅಪ್ಪಿ ತಪ್ಪಿ ಭೂಮಿ ಸೂರ್ಯನನ್ನು ಮದುವೆಯಾಗಿರುತ್ತಿದ್ದರೆ ''ಅಮೆರಿಕಾ ಅಮೆರಿಕಾ'' ಸಿನಿಮಾ ಖಂಡಿತ ಸೂಪರ್ ಹಿಟ್ ಆಗುತ್ತಿರಲಿಲ್ಲ. ಈ ಮಾತನ್ನು ಖುದ್ದು ಹೇಮಾ ಸರಿಗಮಪ ಶೋನಲ್ಲಿ ಹಿಂದೆ ಹೇಳಿಕೊಂಡಿದ್ದರು.
ಕೊನೆ ಮಾತು
ಒಟ್ನಲ್ಲಿ ''ಅಮೆರಿಕಾ ಅಮೆರಿಕಾ'' ತೆರೆಗೆ ಬಂದು ಹತ್ ಹತ್ರ 30 ವರ್ಷಗಳಾಗುತ್ತ ಬರುತ್ತಿವೆ. ಆದರೆ ಈ ಕಥೆ ಇಂದಿಗೂ ಪ್ರಸ್ತುತ. ಇವತ್ತು ಕೂಡ ವಲಸೆ ಹಕ್ಕಿಗಳ ಕಲರವ ಕಡಿಮೆಯಾಗಿಲ್ಲ. ದುಡ್ಡಿನಾಸೆಗೆ ದೇಶ ಬಿಡುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ನಮ್ಮ ಬೇರು ಮರೆತು ನಾವು ಗಳಿಸುವ ಯಶಸ್ಸಿಗೆ ಬೆಲೆ ಇದೆಯಾ..? ಎನ್ನುವ ಪ್ರಶ್ನೆ ಈ ಚಿತ್ರ ನೋಡುತ್ತಿದ್ದರೆ ಮೂಡದಿರದು. ಇದು ಕೇವಲ ಒಂದು ಸಿನಿಮಾವಲ್ಲ, ಪ್ರತಿಯೊಬ್ಬರು ತಪ್ಪದೇ ಒಮ್ಮೆಯಾದರೂ ನೋಡಲೇಬೇಕಾದ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ.


Click it and Unblock the Notifications