»   » ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!

ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!

Posted By:
Subscribe to Filmibeat Kannada

ಓಪನ್ನಿಂಗ್ ನಲ್ಲೇ ಒಂದು ಫೈಟು, ಹೀರೋ ಎಂಟ್ರಿಗೆ ಒಂದು ಹಾಡು, ಬೇಕು ಅಂದಾಗೆಲ್ಲಾ ಬಿಲ್ಡಪ್ಪು, ಮಧ್ಯದಲ್ಲಿ ಡ್ಯುಯೆಟ್ಟು, ಆಗಾಗ ಕಾಮಿಡಿ, ಫಸ್ಟ್ ಹಾಫ್ ನಿಲ್, ಸೆಕೆಂಡ್ ಹಾಫ್ ನಲ್ಲಿ ಕಥೆ ಓಪನ್ನು, ಕ್ಲೈಮ್ಯಾಕ್ಸ್, ಶುಭಂ.! ಇದು ಗಾಂಧಿನಗರದ ಹೊಚ್ಚ ಹೊಸ ಯಶಸ್ಸಿನ ಫಾರ್ಮುಲಾ.! ಇದನ್ನ 'ಸಂತು Straight Forward' ಚಿತ್ರದಲ್ಲಿ ನಿರ್ದೇಶಕ ಮಹೇಶ್ ರಾವ್ ಚಾಚೂ ತಪ್ಪದೇ ಪಾಲಿಸಿರುವ ಹಾಗಿದೆ. ಯಾಕಂದ್ರೆ, 'ಸಂತು Straight Forward' ಸಿನಿಮಾದಲ್ಲಿ ಏನಿಲ್ಲ ಅಂತ ಕೇಳುವ ಹಾಗಿಲ್ಲ...ಯಶಸ್ವಿ ಚಿತ್ರಕ್ಕೆ ಬೇಕಾದ ಎಲ್ಲಾ ಸರಕುಗಳೂ ಇವೆ. ಕಥೆಯಲ್ಲಿ ಹೊಸತನವೊಂದನ್ನು ಬಿಟ್ಟು.!


Rating:
3.5/5

ಚಿತ್ರ : 'ಸಂತು Straight Forward'
ಚಿತ್ರಕಥೆ-ನಿರ್ದೇಶನ : ಮಹೇಶ್ ರಾವ್
ನಿರ್ಮಾಣ : ಕೆ.ಮಂಜು
ಸಂಗೀತ : ವಿ.ಹರಿಕೃಷ್ಣ
ತಾರಾಗಣ : ಯಶ್, ರಾಧಿಕಾ ಪಂಡಿತ್, ಶ್ಯಾಮ್, ದೇವರಾಜ್, ಅನಂತ್ ನಾಗ್, ಅವಿನಾಶ್, ರವಿಶಂಕರ್ ಮತ್ತು ಇತರರು
ಬಿಡುಗಡೆ : ಅಕ್ಟೋಬರ್ 28, 2016


ಕಥಾಹಂದರ

ಕೆಲಸ ಕಾರ್ಯ ಇಲ್ಲದ ಸಂತು (ಯಶ್)ಗೆ ಅನನ್ಯ (ರಾಧಿಕಾ ಪಂಡಿತ್) ನೋಡಿದ ತಕ್ಷಣ ಲವ್ @ ಫಸ್ಟ್ ಸೈಟ್ ಆಗುತ್ತೆ. ಅಂದಿನಿಂದ ಸಂತುಗೆ ಅನನ್ಯ ಹಿಂದೆ ಸುತ್ತುವುದೇ ಫುಲ್ ಟೈಮ್ ಡ್ಯೂಟಿ. ಅದೇ ಗ್ಯಾಪ್ ನಲ್ಲಿ ತಂಗಿಗೆ ರೇಗಿಸಿದವರನ್ನ, ತಂದೆ (ದೇವರಾಜ್) ಕಾಲರ್ ಹಿಡಿದವರನ್ನ ಚಚ್ಚಿ ಬಿಸಾಕುವ ಸಂತು ಎಲ್ಲರ ಕಣ್ಣಿಗೂ 'ಸ್ಮಾರ್ಟ್' ಅಂಡ್ 'ಸ್ಟ್ರೈಟ್ ಫಾರ್ವರ್ಡ್'.


ಲವ್ ಸ್ಟೋರಿಯಲ್ಲಿ 'ವಿಲನ್' ಯಾರು?

ಸಂತು-ಅನನ್ಯ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಗುವುದು ದೇವು (ಶ್ಯಾಮ್) ಎಂಟ್ರಿಯಿಂದ. ಅಸಲಿಗೆ ಈ ದೇವು ಯಾರು? ಅನನ್ಯಗೂ ದೇವುಗೂ ಏನು ಸಂಬಂಧ? ಸಂತು-ಅನನ್ಯ ಮದುವೆ ನಡೆಯುತ್ತಾ ಎಂಬುದು ಬಾಕಿ ಸ್ಟೋರಿ.


'ಸಂತು' ಆಕ್ಟಿಂಗ್ ಸೂಪರ್.!

ನಟ ಯಶ್ ರವರ Body Language, Attitude, ಸ್ಟೈಲ್...ಎಲ್ಲವೂ ಸೂಪರ್. ಡ್ಯಾನ್ಸ್ ಮತ್ತು ಸ್ಟಂಟ್ ಸನ್ನಿವೇಶಗಳಲ್ಲಿ ನಟ ಯಶ್ ಶಿಳ್ಳೆ-ಚಪ್ಪಾಳೆ ಗಿಟ್ಟಿಸುತ್ತಾರೆ. ಯಶ್ ರವರ ಕಾಮಿಡಿ ಟೈಮಿಂಗ್ ಕೂಡ ಚೆನ್ನಾಗಿದೆ.


ರಾಧಿಕಾ ಪಂಡಿತ್ ಅಭಿನಯ ಹೇಗಿದೆ?

ನಟಿ ರಾಧಿಕಾ ಪಂಡಿತ್ ಸ್ನಿಗ್ಧ, ಸುಂದರ, 'ಅಭಿನಯ' ಮನೋಹರ. ಸೆಕೆಂಡ್ ಹಾಫ್ ನಲ್ಲಿ ಡೈಲಾಗ್ ಗಳಿಗಿಂತ ರಾಧಿಕಾ ಪಂಡಿತ್ ಕಣ್ಣಲ್ಲೇ ಹೆಚ್ಚು ಮಾತನಾಡುತ್ತಾರೆ.


ಗಮನ ಸೆಳೆಯುವ ಶ್ಯಾಮ್.!

ನೆಗೆಟಿವ್ ಶೇಡ್ ಇದ್ದರೂ, ದೇವು ಪಾತ್ರದಲ್ಲಿ ನಟ ಶ್ಯಾಮ್ ರವರದ್ದು ಅಬ್ಬರವಿಲ್ಲದ ಅಭಿನಯ.


ಉಳಿದವರು....

ಕೊಟ್ಟ ಪಾತ್ರಕ್ಕೆ ನಟ ಅನಂತ್ ನಾಗ್, ಅವಿನಾಶ್, ದೇವರಾಜ್ ನ್ಯಾಯ ಒದಗಿಸಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡರೂ, ರವಿಶಂಕರ್ 'steals the show'.


ಬಿಲ್ಡಪ್ ಜೋರು

ಈಗಾಗಲೇ 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಮಾಸ್ಟರ್ ಪೀಸ್' ಚಿತ್ರಗಳಲ್ಲಿ ಇರುವ ಹಾಗೆ 'ಸಂತು Straight Forward' ಚಿತ್ರದಲ್ಲೂ ಯಶ್ ಗೆ ಬಿಲ್ಡಪ್ ಕೊಡಲಾಗಿದೆ.


ಫಸ್ಟ್ ಹಾಫ್ ಸುಮಾರು

ಬಿಲ್ಡಪ್, ಹಾಡು, ಫೈಟ್, ಡ್ಯುಯೆಟ್ ನಲ್ಲೇ 'ಸಂತು Straight Forward' ಚಿತ್ರದ ಮೊದಲಾರ್ಧ ಕಳೆದುಹೋಗುತ್ತದೆ. ಅಸಲಿ ಕಥೆ ಶುರುವಾಗುವುದೇ ಸೆಕೆಂಡ್ ಹಾಫ್ ನಲ್ಲಿ. ಹೀಗಾಗಿ, ಫಸ್ಟ್ ಹಾಫ್ ಗಿಂತ ಸೆಕೆಂಡ್ ಹಾಫ್ ಹೆಚ್ಚು ಮಜಾ.


ಅಲ್ಲಲ್ಲಿ 'ವಾಲು' ಛಾಯೆ

'ಸಂತು Straight Forward' ಸಿನಿಮಾ ನೋಡುತ್ತಿರುವಾಗ, ನಿಮಗೆ ತಮಿಳಿನಲ್ಲಿ ಸಿಂಬು ಅಭಿನಯದ 'ವಾಲು' ಚಿತ್ರ ನೆನಪಿಗೆ ಬಂದರೆ ಅದಕ್ಕೆ ನಿರ್ದೇಶಕರೇ ನೇರ ಹೊಣೆ. ಯಾಕಂದ್ರೆ, 'ಸಂತು Straight Forward' ಚಿತ್ರಕಥೆಯ ಎಳೆ ಹಾಗು ತಿರುವು 'ವಾಲು' ಚಿತ್ರವನ್ನ ಹೋಲುತ್ತದೆ.


ಹಾಗಾದ್ರೆ, ರೀಮೇಕ್ ಸಿನಿಮಾ?

ಪಾತ್ರ ಪೋಷಣೆ, ಕಥೆಯ ಮೇಜರ್ ಟ್ವಿಸ್ಟ್ ಹಾಗೂ ಒಂದೆರಡು ಸನ್ನಿವೇಶ ಬಿಟ್ಟರೆ 'ಸಂತು Straight Forward' ಚಿತ್ರಕಥೆಯಲ್ಲಿ ಅನೇಕ ಬದಲಾವಣೆ ಮಾಡಲಾಗಿದೆ. ಹೀಗಾಗಿ, 'ಸಂತು Straight Forward' ತಮಿಳಿನ 'ವಾಲು' ಚಿತ್ರದ ರೀಮೇಕ್ ಎನ್ನುವುದಕ್ಕಿಂತ 'Rehashed' ಎಂಬ ಪದ ಬಳಕೆ ಮಾಡಬಹುದೇನೋ?!


ಟೆಕ್ನಿಕಲಿ ಸಿನಿಮಾ ಹೇಗಿದೆ?

ವಿದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಹಾಡುಗಳಲ್ಲಿನ ಕ್ಯಾಮರಾ ವರ್ಕ್ ಬೊಂಬಾಟ್. ಸಂಕಲನ ಕೂಡ ಚುರುಕಾಗಿದೆ.


ಸಂಗೀತ ಹೇಗಿದೆ?

ವಿ.ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಅಷ್ಟಕಷ್ಟೆ. ಬ್ಯಾಕ್ ಗ್ರೌಂಡ್ ಸ್ಕೋರ್ ಚೆನ್ನಾಗಿದೆ.


ಸೆಲ್ಫ್ ಮೇಡ್ ಶೆಹಝಾದಾ.!

'ಸಂತು Straight Forward' ಚಿತ್ರಕ್ಕಿಂತ, ಪ್ರಸ್ತುತ ವಿದ್ಯಮಾನಕ್ಕೆ 'ಸೆಲ್ಫ್ ಮೇಡ್ ಶೆಹಝಾದಾ' ಹಾಡು ಕರೆಕ್ಟ್ ಆಗಿದೆ.


ಮಹೇಶ್ ರಾವ್ ಇನ್ನೂ ಗಮನ ಹರಿಸಬೇಕಿತ್ತು.!

'ಸಂತು Straight Forward' ಚಿತ್ರಕ್ಕಾಗಿ ನಿರ್ದೇಶಕ ಮಹೇಶ್ ರಾವ್ ಒಂದುವರೆ ವರ್ಷ ಕಷ್ಟ ಪಟ್ಟಿದ್ದಾರೆ ನಿಜ. ಇನ್ನೊಂದ್ಚೂರು ಜಾಗರೂಕತೆ ವಹಿಸಿ, ಕಥೆಯಲ್ಲಿ ಹೊಸತನ ತಂದಿದ್ದರೆ, 'ಸಂತು Straight Forward' ಖಂಡಿತ ಉತ್ತಮ ಸಿನಿಮಾವಾಗುತ್ತಿತ್ತೇನೋ.?!


ಅಭಿಮಾನಿಗಳಿಗೆ ರಸದೌತಣ

'ಸಂತು Straight Forward' ಚಿತ್ರ 'ಯಶ್' ಅಭಿಮಾನಿಗಳಿಗೆ ಖಂಡಿತ ನಿರಾಸೆ ಮಾಡಲ್ಲ. ಇದಂತೂ ಪಕ್ಕಾ. ಯಾಕಂದ್ರೆ, ಫ್ಯಾನ್ಸ್ ಗೆ ಬೇಕಾಗಿರುವ ಎಲ್ಲಾ ಎಂಟರ್ ಟೇನಿಂಗ್ ಎಲಿಮೆಂಟ್ಸ್ ಈ ಚಿತ್ರದಲ್ಲಿದೆ.


ಫೈನಲ್ ಸ್ಟೇಟ್ ಮೆಂಟ್

ಎಲ್ಲೂ ಬೋರಾಗದ, ಆಕಳಿಕೆ ತರಿಸದ, ಅಶ್ಲೀಲತೆ ಇಲ್ಲದ, ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ ಸಿನಿಮಾ 'ಸಂತು Straight Forward'. ಯಾವುದೇ ಮುಜುಗರ ಇಲ್ಲದೇ, ಆರಾಮಾಗಿ ಖಂಡಿತ ಫ್ಯಾಮಿಲಿ ಆಡಿಯನ್ಸ್ ನೋಡಬಹುದಾದ ಸಿನಿಮಾ ಇದು.


ವಿಡಿಯೋ ನೋಡಿ

'ಸಂತು Straight Forward' ಚಿತ್ರವನ್ನ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ಅಂತ ತಿಳಿಯಲು ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ....


English summary
Rocking Star Yash and Radhika Pandit starrer 'Santhu Straight Forward' has hit the screens today (October 28th). 'Santhu Straight Forward' is a treat for Yash fans. The movie is directed by Mahesh Rao, Produced by K.Manju. Here is the complete review of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada