ವಿಮರ್ಶೆ: ಕೆಂಪು 'ಚಿಟ್ಟೆ'ಯ ಸೇಡಿನ ಸುತ್ತ
'ದೆವ್ವ' ಭಯ ಪಡಿಸಬೇಕು, ಎದೆ ನಡುಗಿಸಬೇಕು, ಜೀವ ಝಲ್ ಎನಿಸಬೇಕು ನಿಜ. ಆದ್ರೆ, 'ಚಿಟ್ಟೆ' ಚಿತ್ರದಲ್ಲಿರುವ 'ದೆವ್ವ' ಹಾಗಿಲ್ಲ. ಇಲ್ಲಿರೋದು ಬಿಳಿ ಗೌನ್ ಧರಿಸಿರುವ ಸುಂದರ 'ದೆವ್ವ'. ವಿಕಾರವಾಗಿ ಕಾಣದ 'ದೆವ್ವ' ಕಾಫಿ ಬ್ರೇಕ್ ಕೊಡುತ್ತೆ, ಇನ್ನೊಬ್ಬರನ್ನ ಸಾಯಿಸುವಂತೆ ಸೂಚಿಸುತ್ತೆ, ಸತ್ಯ ಕಕ್ಕಿಸುತ್ತೆ, ಒಬ್ಬರಿಗೆ ಜೀವದಾನವನ್ನೂ ಮಾಡುತ್ತೆ. ಕೊನೆಗೆ ವಾಪಸ್ ಹೋಗುವಾಗ 'ಟಾಟಾ' ಕೂಡ ಮಾಡುವಷ್ಟು ಒಳ್ಳೆತನ 'ದೆವ್ವ'ಕ್ಕಿದೆ.!
ಹಾರರ್ ಸಿನಿಮಾ ಅಂದ್ರೆ ಹೀಗೇ ಇರಬೇಕು ಎಂಬ ಕಟ್ಟುಪಾಡಿಗೆ ಬೀಳದೆ, 'ಚಿಟ್ಟೆ' ಹಾರಿಸಿರುವ ನಿರ್ದೇಶಕರ ಪ್ರಯತ್ನ ಪರ್ವಾಗಿಲ್ಲ.
ಚಿತ್ರ: ಚಿಟ್ಟೆ
ನಿರ್ಮಾಣ: ಶ್ರೀ ವಾಗ್ದೇವಿ ಕ್ರಿಯೇಷನ್ಸ್
ಸಾಹಿತ್ಯ, ಸಂಗೀತ, ನಿರ್ದೇಶನ: ಎಂ.ಎಲ್.ಪ್ರಸನ್ನ
ಛಾಯಾಗ್ರಹಣ: ವಿಶ್ವಜಿತ್ ರಾವ್
ತಾರಾಗಣ: ಯಶಸ್ ಸೂರ್ಯ, ಹರ್ಷಿಕಾ ಪೊಣಚ್ಚ, ದೀಪಿಕಾ, ಬಿ.ಎಂ.ಗಿರಿರಾಜ್ ಮತ್ತು ಇತರರು
ಬಿಡುಗಡೆ: ಜೂನ್ 29, 2018
'ಚಿಟ್ಟೆ'ಯ ಸುತ್ತ
ಆಗಷ್ಟೇ ಮದುವೆ ಆಗಿರುವ ಮನು (ಯಶಸ್ ಸೂರ್ಯ) ಹಾಗೂ ಸೋನು (ಹರ್ಷಿಕಾ ಪೂಣಚ್ಚ) ಬಾಡಿಗೆ ಮನೆಯೊಂದರಲ್ಲಿ ಸಂಸಾರ ಶುರು ಮಾಡುತ್ತಾರೆ. ದಾಂಪತ್ಯ ಜೀವನ ಸುಖವಾಗಿ ಸಾಗುತ್ತಿದೆ ಎನ್ನುವಾಗಲೇ ವಿಚಿತ್ರ ಘಟನೆಗಳು ನಡೆಯಲಾರಂಭಿಸುತ್ತೆ. ಆ ವಿಚಿತ್ರ ಘಟನೆಗಳಿಗೆಲ್ಲ 'ಚಿಟ್ಟೆ' ಕಾರಣ.!
ಏನಿದು 'ಚಿಟ್ಟೆ'?
ಕೆಂಪು ಹಾಗೂ ಕಪ್ಪು ಬಣ್ಣದ 'ಚಿಟ್ಟೆ' ಇಡೀ ಚಿತ್ರದ ಸಸ್ಪೆನ್ಸ್. ಆ ಸಸ್ಪೆನ್ಸ್ ನ ನಾವು ಬಿಟ್ಟುಕೊಡುವುದಿಲ್ಲ. ನೀವು ಚಿತ್ರಮಂದಿರದಲ್ಲಿಯೇ ನೋಡಿ...
ಪರ್ಫಾಮೆನ್ಸ್ ಹೇಗಿದೆ.?
ಪ್ರೀತಿಸುವ ಪತಿಯಾಗಿ ಯಶಸ್ ಸೂರ್ಯ ಅಭಿನಯ ಚೆನ್ನಾಗಿದೆ. ಹರ್ಷಿಕಾ ಪೂಣಚ್ಚ ನಟನೆ ಅಚ್ಚುಕಟ್ಟಾಗಿದೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡರೂ ಬಿ.ಎಂ.ಗಿರಿರಾಜ್ ಕಚಗುಳಿ ಇಡುತ್ತಾರೆ. ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯುವುದು 'ಕುಲವಧು' ಧಾರಾವಾಹಿಯ ದೀಪಿಕಾ. ಅವರ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು.
ಚಿತ್ರಕಥೆಯಲ್ಲಿ ಗಟ್ಟಿತನ ಇರಬೇಕಿತ್ತು
ನಿರ್ದೇಶಕರು ಚಿತ್ರಕಥೆ ಬಗ್ಗೆ ಇನ್ನೂ ಹೆಚ್ಚು ಗಮನ ಹರಿಸಬೇಕಿತ್ತು. ಕಥೆಯಲ್ಲಿ ಅನವಶ್ಯಕವಾಗಿ ಹಾಡುಗಳನ್ನು ತುರುಕದೆ, ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿದ್ದರೆ 'ಚಿಟ್ಟೆ' ಹಾರಾಟ ಇನ್ನೂ ಚೆನ್ನಾಗಿರುತ್ತಿತ್ತು. ನಿರ್ದೇಶಕ ಎಂ.ಎಲ್. ಪ್ರಸನ್ನ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಹಾಡುಗಳು ಪರ್ವಾಗಿಲ್ಲ. ವಿಶ್ವಜಿತ್ ರಾವ್ ಛಾಯಾಗ್ರಹಣ ಓಕೆ. ಸಂಕಲನ ಇನ್ನೂ ಚುರುಕಾಗಿರಬೇಕಿತ್ತು.
ಫೈನಲ್ ಸ್ಟೇಟ್ಮೆಂಟ್
ಒಂದ್ಕಡೆ ನವ ದಂಪತಿಯ ಲವ್, ರೋಮ್ಯಾನ್ಸ್... ಇನ್ನೊಂದು ಕಡೆ ಸೇಡು ತೀರಿಸಿಕೊಳ್ಳುವ ದೆವ್ವ... ಇವೆರಡೂ ಹದವಾಗಿ ಬೆರೆತಿರುವ 'ಚಿಟ್ಟೆ' ನೋಡುವಂತಹ ಚಿತ್ರ.


Click it and Unblock the Notifications











