Ekka Review: ನೆಮ್ಮದಿ ಹುಡುಕುವ ಹಾವು ಏಣಿ ಆಟದಲ್ಲಿ ಏದುಸಿರು ಬಿಡುವ 'ಎಕ್ಕ'
ಈ ವರ್ಷ ದೊಡ್ಡ ಸಿನಿಮಾಗಳಿಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗದಲ್ಲೀಗ 'ಎಕ್ಕ'ನ ಆಗಮನವಾಗಿದೆ. ಯುವ ರಾಜ್‌ಕುಮಾರ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿತ್ತು. ಈಗ ಸಿನಿಮಾ ಬಂದಾಯ್ತು, ಇನ್ನು ಪ್ರೇಕ್ಷಕರಿಗೆ ಬಿಟ್ಟಿದ್ದು.
'ಯುವ' ಬಳಿಕ ರಾಘಣ್ಣನ ಕಿರಿಮಗ ನಟನೆಯ 2ನೇ ಸಿನಿಮಾ ಇದು. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. 'ಎಕ್ಕ' ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಮ್ಯೂಸಿಕ್‌ನಲ್ಲಿ ಚಿತ್ರದ 'ಬ್ಯಾಂಗಲ್ ಬಂಗಾರಿ' ಸಾಂಗ್ ಹಿಟ್ ಆಗಿ ಗಮನ ಸೆಳೆದಿತ್ತು. ಶ್ರುತಿ, ಡೆಡ್ಲಿ ಆದಿತ್ಯ, ಅತುಲ್ ಕುಲಕರ್ಣಿ ಸೇರಿ ಚಿತ್ರದ ತಾರಾಗಣ ಕುತೂಹಲ ಮೂಡಿಸಿದ್ದು ಸುಳ್ಳಲ್ಲ.

'ಎಕ್ಕ' ಕಥೆ
ಬೆಂಗಳೂರು ಭೂಗತಲೋಕದಲ್ಲಿ ಗುರ್ತಿಸಿಕೊಂಡ ಮುತ್ತು(ಯುವ ರಾಜ್‌ಕುಮಾರ್) ವಾರಣಾಸಿಯಲ್ಲಿ ತಲೆಮರೆಸಿಕೊಂಡಿರುತ್ತಾನೆ. ಪ್ರೇಯಸಿಯಿಂದಲೇ ಪೊಲೀಸರ ಕೈಗೆ ಸಿಕ್ಕಿಬೀಳುವಂತಾಗುತ್ತದೆ. ಬಳಿಕ ಅವನ ಹಳೆಯ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಪಾರ್ವತಿಪುರದ ಮುತ್ತು ದೊಡ್ಡ ಸಂಕಷ್ಟದಿಂದ ಪಾರಾಗಿ ನೆಮ್ಮದಿ ಜೀವನ ನಡೆಸಲು ಬೆಂಗಳೂರಿಗೆ ಬರಬೇಕಾಗುತ್ತದೆ. ಮಗುವಿನಂತ ಮನಸ್ಸಿನ ಮುತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮೃಗದಂತಾಗುತ್ತಾನೆ. ಅದಕ್ಕೆ ಕಾರಣ ಏನು? ಪೊಲೀಸರಿಂದ ಬಂಧನವಾದ ಆತನ ಮುಂದಿನ ಕಥೆ ಏನು ಅಂತ ತೆರೆಮೇಲೆ ನೋಡಬೇಕು.

ಸಿನಿಮಾ ಹೇಗಿದೆ?
'ಎಕ್ಕ' ಸಿನಿಮಾ ಟ್ರೈಲರ್ ನೋಡಿದಾಗಲೇ ಸಂಪೂರ್ಣ ಕಥೆ ರಿವೀಲ್ ಆಗಿತ್ತು. ಹಾಗಾಗಿ ಸಿನಿಮಾದಲ್ಲಿ ಅದನ್ನು ಎಷ್ಟು ಸೊಗಸಾಗಿ ಹೇಳಿದ್ದಾರೆ ಎನ್ನುವ ಕುತೂಹಲ ಮಾತ್ರ ಪ್ರೇಕ್ಷಕರಲ್ಲಿತ್ತು. ಅದನ್ನು ತಣ್ಣಿಸುವಲ್ಲಿ 'ಎಕ್ಕ' ಸಿನಿಮಾ ಸಂಪೂರ್ಣವಾಗಿ ಗೆದ್ದಿಲ್ಲ ಎಂದೇ ಹೇಳಬೇಕು. ವಾಹ್ ಮೊಮೆಂಟ್ಸ್ ಇಲ್ಲದೇ ಸಿನಿಮಾ ಸೀದಾಸಾದ ಎನಿಸಿಬಿಡುತ್ತದೆ. ಬೇರೆ ಯಾವುದೇ ಸಿನಿಮಾ ಜೊತೆಗೆ ನೇರಾನೇರ ಹೋಲಿಕೆ ಇಲ್ಲದಿದ್ದರೂ ಹೊಸತನ ಇಲ್ದೆ ಎಲ್ಲಾ ನೋಡಿರೋದೆ ಅಲ್ವಾ, ಹೊಸದೇನಿದೆ ಅಂತ ಪ್ರೇಕ್ಷಕನಿಗೆ ಅನಿಸದೇ ಇರದು.
ಕೆಲ ಭಾವನಾತ್ಮಕ ಸನ್ನಿವೇಶಗಳು ಮನಮುಟ್ಟುವಂತಿದೆ. 'ಬ್ಯಾಂಗ್ ಬಂಗಾರಿ' ಹಾಗೂ 'ಎಕ್ಕ ಮಾರ್' ಸಾಂಗ್ ಮಜಾ ಕೊಡುತ್ತದೆ. ಇನ್ನುಳಿದ ಹಾಡುಗಳು ಬಂದುಹೋಗುವುದು ಗೊತ್ತಾಗುವುದಿಲ್ಲ. ಕಥೆಗೆ ತಕ್ಕಂತೆ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಡ್ರೋಣ್ ಕ್ಯಾಮರಾದಲ್ಲಿ ಬೆಂಗಳೂರು ಪಕ್ಷಿನೋಟ ಆಗಾಗ್ಗೆ ತೆರೆಮೇಲೆ ಬರುತ್ತದೆ.
ಕಲಾವಿದರ ಅಭಿನಯ
ನಟನೆ ವಿಚಾರದಲ್ಲಿ ಯುವರಾಜ್‌ಕುಮಾರ್ ಮೊದಲ ಚಿತ್ರಕ್ಕಿಂತ ಮಾಗಿದ್ದಾರೆ. ಕ್ಯಾಬ್ ಡ್ರೈವರ್ ಮುತ್ತು ಆಗಿ ಇಷ್ಟವಾಗುತ್ತಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿದ್ದಾರೆ. ನಂದಿನಿ ಆಗಿ ಸಂಜನಾ ಆನಂದ್ ಇಷ್ಟವಾಗುತ್ತಾರೆ. ಮುತ್ತು ಮೇಲೆ ಕೋಪಗೊಂಡಾಗೆಲ್ಲಾ ಮಚ್ಚರ್ ಎನ್ನುತ್ತಾ 'ಲೇಡಿ ಡಾನ್' ರೀತಿ ಆಡುತ್ತಾರೆ. ಬಾರ್ ಗರ್ಲ್ ಮಲ್ಲಿಕಾ ಪಾತ್ರದಲ್ಲಿ ಸಂಪದಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ದೃಶ್ಯ ಶುರುವಾಗುವುದು, ಕೊನೆಯ ದೃಶ್ಯ ಮುಕ್ತಾಯವಾಗುವುದು ಈ ಪಾತ್ರದೊಂದಿಗೆ.
ಡಾನ್ ಮಸ್ತಾನ್ ಭಾಯ್ ಆಗಿ ಅತುಲ್ ಕುಲಕರ್ಣಿ, ಮುತ್ತು ತಾಯಿ ರತ್ನ ಪಾತ್ರದಲ್ಲಿ ಶ್ರುತಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಡಕ್ ಪೋಲಿಸ್ ಆಫೀಸರ್ ಆಗಿ ಆದಿತ್ಯಾ ಅಬ್ಬರಿಸಿದ್ದರೂ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ನಾಯಕಿ ನಂದಿನಿ ಸಹೋದರ ಒಂಟೆ ಪಾತ್ರದಲ್ಲಿ ಜಾಕಿ ತಿಮ್ಮೇಗೌಡ ನೆನಪಿನಲ್ಲಿ ಉಳಿಯುತ್ತಾರೆ.
ಟೆಕ್ನಿಕಲಿ ಸಿನಿಮಾ
'ದಯವಿಟ್ಟು ಗಮನಿಸಿ', 'ರತ್ನನ್ ಪ್ರಪಂಚ' ರೀತಿಯ ಯಶಸ್ವಿ ಸಿನಿಮಾಗಳ ಬಳಿಕ ರೋಹಿತ್ ಪದಕಿ ಕಟ್ಟಿಕೊಟ್ಟಿರುವ ಸಿನಿಮಾ ಇದು. ಕಥೆ, ಚಿತ್ರಕಥೆ ಎಲ್ಲವೂ ಚೆನ್ನಾಗಿದೆ. ಆದರೆ ದೊಡ್ಡಪರದೆಗೆ ಬೇಕಿದ್ದ ಆ ಮ್ಯಾಜಿಕ್ ಮಿಸ್ ಆಗಿದೆ. ಸಿನಿಮಾ ಎಲ್ಲಿಯೂ ಏರದೇ ಇಳಿಯದೇ ಒಂದೇ ವೇಗದಲ್ಲಿ ಮುಗಿದುಬಿಡುತ್ತದೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಅವರ ಸಂಗೀತ ಅಬ್ಬರಿಸಲು ಚಿತ್ರದಲ್ಲೇ ಯಾವುದೇ ಅವಕಾಶ ಸಿಗುವುದಿಲ್ಲ. ಇನ್ನು 'ಬ್ಯಾಂಗಲ್ ಬಂಗಾರಿ' ಸಾಂಗ್ ಚಿತ್ರಮಂದಿರದಲ್ಲಿ ಕುಳಿತವರು ಮೈ ಕುಣಿಸುವಂತೆ ಮಾಡುತ್ತದೆ. ಬೆಂಗಳೂರಿನ ಗಲ್ಲಿಯಿಂದ ವಾರಣಾಸಿ ಘಾಟ್‌ವರೆಗೂ ಸತ್ಯ ಹೆಗಡೆ ಕ್ಯಾಮರಾ ಕಣ್ಣು ಚೆಂದವಾಗಿರುವುದನ್ನೆಲ್ಲಾ ಸೆರೆ ಹಿಡಿದಿದೆ. ರೋಹಿತ್ ಪದಕಿ ಜೊತೆ ಸೇರಿ ಮಾಸ್ತಿ ಬರೆದಿರುವ ಸಂಭಾಷಣೆ ಚೆನ್ನಾಗಿದೆ. "ಅನ್ನಕ್ಕೆ ಎಲೆ ಇಲ್ಲ ಅಂದ್ರು ಬೆಲೆ ಇದೆ", "ಎಲ್ಲಕ್ಕಿಂತ ದೊಡ್ಡಾಟ ಉಸಿರಾಟ" ಎನ್ನುವ ಸಣ್ಣ ಸಣ್ಣ ಡೈಲಾಗ್ಸ್ ಗಮನ ಸೆಳೆಯುತ್ತೆ.
ಕೊನೆಯದಾಗಿ
ಅತಿಯಾದ ನಿರೀಕ್ಷೆಯೊಂದಿಗೆ 'ಎಕ್ಕ' ಸಿನಿಮಾ ನೋಡಲು ಹೋದರೆ ನಿರಾಸೆ ಕಟ್ಟಿಟ್ಟಬುತ್ತಿ. ಟೈಮ್ ಪಾಸ್ ಅಂತ ಒಮ್ಮೆ ನೋಡಿ ಸುಮ್ಮನಾಗಬಹುದು. ಕಳೆದ ಏಳೆಂಟು ತಿಂಗಳಿನಿಂದ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಬಂದಿಲ್ಲ. ಹಾಗಾಗಿ ವೀಕೆಂಡ್ ಫ್ಯಾಮಿಲಿ ಸಮೇತ ಥಿಯೇಟರ್‌ಗೆ ವಿಸಿಟ್ ಹಾಕಲು ಅಡ್ಡಿಯಿಲ್ಲ.


Click it and Unblock the Notifications











