Yuva Review : ಕ್ಲಾಸ್-ಮಾಸ್ ; ಸ್ಯಾಂಡಲ್ ವುಡ್ ನ ಹೊಸ ಪರ್ವ ಈ ಯುವ, ಹೇಗಿದೆ ದೊಡ್ಮನೆ ಕುಡಿಯ ಅಬ್ಬರ..?

Rating:
3.0/5
Star Cast: ಯುವ ರಾಜ್‌ಕುಮಾರ್, ಸಪ್ತಮಿ ಗೌಡ, ಅಚ್ಯುತ್‌ ಕುಮಾರ್, ಸುಧಾರಾಣಿ ಮುಂತಾದವರು
Director: ಸಂತೋಷ್ ಆನಂದ್‌ರಾಮ್

ಸಾಮಾನ್ಯಕ್ಕೆ ಹುಟ್ಟಿನಿಂದನೇ ಸೆಲೆಬ್ರಿಟಿ ಎಂಬ ಟ್ಯಾಗ್ ಹೊಂದಿರುವವರಿಗೆ ಮುಂದೊಂದು ದಿನ ಇದೇ ಟ್ಯಾಗ್, ಬ್ಯಾಗ್ ನ ಪ್ಯಾಕ್ ಮಾಡಿಸಿ ಮನೆಗೆ ಕಳಿಸುತ್ತೆ. ಹಿಂದಿ ಚಿತ್ರರಂಗದಲ್ಲಿ ಇಂತಹ ದಂಡಿಗಟ್ಟಲೆ ಉದಾಹರಣೆಗಳು ಇವೆ. ಆದರೆ ಯುವರಾಜ್ ಕುಮಾರ್ ಅವರ ವಿಚಾರದಲ್ಲಿ ಈ ಮಾತು ನಿಜವಾಗಲ್ಲ. ಆಗಲು ಸಾಧ್ಯವೂ ಇಲ್ಲ. ಯಾಕೆಂದರೆ ಯುವ ಇಲ್ಲಿ ಗಟ್ಟಿ ನೆಲೆಯೂರಲು ಎಂದೇ ಬಂದವರು. ಯುವ ಚಿತ್ರದ ಮೂಲಕ ಯುವರಾಜ್ ಕುಮಾರ್ ಇದನ್ನ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಕೂಡ

ಹೌದು, ಪುನೀತ್ ರಾಜ್ ಕುಮಾರ್ ಅವರ ಉತ್ತಾರಾಧಿಕಾರಿ ಎಂದೇ ಬಿಂಬಿತವಾಗಿರುವ ಯುವರಾಜ್ ಕುಮಾರ್ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಮೊದಲನೇ ಸಿನಿಮಾ, ಹೇಗೋ ಏನೋ ಎಂಬ ಆತಂಕ ಸಹಜವಾಗಿ ದೊಡ್ಮನೆ ಅಭಿಮಾನಿಗಳಲ್ಲಿತ್ತು. ಇನ್ನೂ ಸಂತೋಷ್ ಆನಂದ್ ರಾಮ್ ಅವರ ಹೆಗಲ ಮೇಲೆ ಜವಾಬ್ದಾರಿಯ ಮೂಟೆಯೇ ಇತ್ತು. ಸಮಾಧಾನದ ಸಂಗತಿ ಅಂದರೆ ಯುವ ನಿರೀಕ್ಷೆಯನ್ನ ಹುಸಿ ಮಾಡಿಲ್ಲ. ಸಂತೋಷ್ ಆನಂದ್ ರಾಮ್ ಸಂಪೂರ್ಣವಾಗಿ ನಿರಾಸೆ ಮಾಡಿಲ್ಲ.

Yuva Review  Yuva Rajkumar  Sapthami Gowda  Achyuth Kumar Starrer Action-Romance Movie Review

ಯುವ ಕಥಾಹಂದರ

ಒಳಗಿನವರು ಹಾಗೂ ಹೊರಗಿನವರ ನಡುವಿನ ಸಮರದ ಮೂಲಕ ಯುವ ಅಧ್ಯಾಯ ಆರಂಭವಾಗುತ್ತೆ. ಹಾಗಂಥ ಇದು 'ಲೋಕಲ್ ಎಕ್ಸ್ ಪ್ರೆಸ್' ಅಲ್ಲ.ಬದಲಿಗೆ ಇದು 'ಮಂಗಳೂರು' ಎಕ್ಸ್ ಪ್ರೆಸ್. ಮಂಗಳೂರಿನ ಕಾಲೇಜ್ ವೊಂದರಲ್ಲಿನ 'ಲೋಕಲ್ ಗ್ಯಾಂಗ್' ಹಾಗೂ 'ಹಾಸ್ಟೆಲ್ ಗ್ಯಾಂಗ್' ನಡುವಿನ ಹೊಡೆದಾಟ ಬಡೆದಾಟದಲ್ಲಿಯೇ ಮೊದಲಾರ್ಧ ಮುಗಿದು ಹೋಗುತ್ತೆ. ಇದರ ನಡುವೆ ಮೊದಲ ಪ್ರೇಮದ ಅನುರಾಗ ಇದೆ. ಹುಸಿ ಮುನಿಸು ಹಾಗೂ ಕೋಪವೂ ಇದೆ. ಈ ಕಾರಣಕ್ಕೆ ಇದು ಕೂಡ ಮಾಮೂಲಿ 'ಗ್ಯಾಂಗ್ ವಾರ್' ಸಿನಿಮಾ ಎಂಬ ಭಾವನೆ ಮೂಡುತ್ತೆ. ಆದರೆ ಚಿತ್ರದ 'ಮಧ್ಯಂತರ'ದ ಸಮಯದಲ್ಲಿ ಸಂತೋಷ್ ಆನಂದ್ ರಾಮ್ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿಸುತ್ತಾರೆ. ಭಾವನಾತ್ಮಕವಾದ ಮೆರವಣಿಗೆಗೆ ಸಿದ್ಧವಾಗಿ ಕುಳಿತುಕೊಳ್ಳುವಂತೆ ಸೂಚನೆಯನ್ನ ಕೊಡ್ತಾರೆ.

ಇನ್ನೂ ಯುವ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದೇಕೆ..? ಎಂಬ ಪ್ರಶ್ನೆಗೆ ಮೊದಲಾರ್ಧದಲ್ಲಿಯೇ ಉತ್ತರ ಸಿಗುತ್ತೆ. ಆದರೆ ನಿಜಕ್ಕೂ ಯುವ ಯಾರು..? ಆತನ ಹಿನ್ನೆಲೆ ಏನು..? ಯುವ ನಿಜಕ್ಕೂ ಕಂಡಿದ್ದ ಕನಸೇನು..? ಅವನ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಆಘಾತ ಏನು..? ಮೊದಲಾರ್ಧದಲ್ಲಿ 'ರಣಬೇಟೆಗಾರ'ನಂತೆ ಕಾಣಿಸುವ ಯುವ, ಚಿತ್ರದ ದ್ವೀತಿಯಾರ್ಧದಲ್ಲಿ ಬದಲಾಗುವುದು ಯಾಕೆ..? ಇವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನ ನೀವು ಪರದೆಯ ಮೇಲೆ ನೋಡಿಯೇ ಪಡೆಯಬೇಕು.

ಯುವರಾಜ್ ಕುಮಾರ್ ಅಭಿನಯ..!

ರಾಜ್ ಕುಟುಂಬದ ಯಾರೇ ಆಗಲಿ, ಚಿತ್ರರಂಗಕ್ಕೆ ಬರುವ ಮುನ್ನ ಏಕಾಏಕಿ ಬಂದವರಲ್ಲ. ಸಿನಿಮಾದಲ್ಲಿ ನಟಿಸುವುದು ಅಂತಾ ನಿರ್ಧಾರವಾಗುತ್ತಿದ್ದಂತೇ, ಅದಕ್ಕೆ ಬೇಕಿರುವ ಪೂರ್ವಸಿದ್ಧತೆ, ತಾಲೀಮುಗಳನ್ನು ನಡೆಸಿಯೇ ಬಂದವರು. ಈಗ ಯುವರಾಜ್ ಕುಮಾರ್ ಸಹ ನಟನೆ, ಡ್ಯಾನ್ಸು, ಸಾಹಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತರಬೇತಿ ಪಡೆದಿದ್ದಾರೆ. ಯುವರಾಜ್ ಕುಮಾರ್ ಅವರ ಶ್ರದ್ಧೆ ಹಾಗೂ ಭಕ್ತಿ ಎರಡು ತೆರೆಯ ಮೇಲೆ ಎದ್ದು ಕಾಣುತ್ತೆ. ಭಾವನೆಗಳನ್ನ ವ್ಯಕ್ತಪಡಿಸುವ ಕಲೆಯನ್ನ ಯುವ ಇನ್ನೊಂದು ಚೂರು ಕರಗತ ಮಾಡಿಕೊಂಡರೆ, ಯುವ ಭವಿಷ್ಯದ ಸೂಪರ್ ಸ್ಟಾರ್ ಆಗುವುದರಲ್ಲಿ ಅನುಮಾನವೇ ಇಲ್ಲ.

Yuva Review  Yuva Rajkumar  Sapthami Gowda  Achyuth Kumar Starrer Action-Romance Movie Review

ಇನ್ನೂ ಸಿಕ್ಕ ಅವಕಾಶವನ್ನ ಸಪ್ತಮಿಗೌಡ ಸದ್ಭಳಕೆ ಮಾಡಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಈ ಚಿತ್ರದ ಇನ್ನೊಂದು ಪ್ರಮುಖ ಆಧಾರ ಸ್ತಂಭ. ಕಾಲೇಜ್ ನ ಪ್ರಾಂಶುಪಾಲರಾಗಿ ಗೋಪಾಲ್ ಕೃಷ್ಣ ದೇಶಪಾಂಡೆ ಇಷ್ಟವಾಗ್ತಾರೆ. ಯುವ ಬದುಕಿನಲ್ಲಿ ಬರುವ ಬಹುಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಿಶೋರ್ ಕೂಡ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೃದಯ ಗೆಲ್ತಾರೆ. ಸುಧಾರಾಣಿ ಹಾಗೂ ಹಿತಾ ಚಂದ್ರಶೇಖರ್ ತಮ್ಮ ಪಾತ್ರಗಳಿಗೆ ಸಂಪೂರ್ಣವಾದ ನ್ಯಾಯ ಸಲ್ಲಿಸಿದ್ದಾರೆ

ಸಂತೋಷ್ ಆನಂದ್ ರಾಮ್ ನಿರ್ದೇಶನ ಹೇಗಿದೆ.

ಚಿತ್ರದ ಕ್ಯಾಪ್ಟನ್ ಸಂತೋಷ್ ಆನಂದ್ ರಾಮ್, ತಾವು ನಿಜಕ್ಕೂ ಪ್ರತಿಭಾವಂತ ಅನ್ನುವುದನ್ನ ತಮ್ಮ ಹಿಂದಿನ ಸಿನಿಮಾಗಳಲ್ಲಿಯೇ ಸಾಬೀತು ಮಾಡಿದ್ದಾರೆ. ವ್ಯತ್ಯಾಸ ಏನೆಂದರೆ ಅಲ್ಲಿ ಸ್ಟಾರ್ ಗಳ ಜೊತೆ ಸಂತೋಷ್ ಆನಂದ್ ರಾಮ್ ಕೆಲಸ ಮಾಡಿದ್ದರು. ಇಲ್ಲಿ ಯುವ ಬಳಿ ಕೆಲಸ ತೆಗೆಸಿದ್ದಾರೆ. 'ಪರಿಸ್ಥಿತಿ' ಹಾಗೂ 'ಮನಸ್ಥಿತಿ' ಇವೆರಡರ ಆಧಾರದ ಮೇಲೆ ಕಥೆಯನ್ನ ಹೆಣೆದಿರುವ ಸಂತೋಷ್ ಆನಂದ್ ರಾಮ್ ಇಲ್ಲಿಯೂ ಕೂಡ ತಂದೆ ಹಾಗೂ ಮಗನ ಭಾಂದವ್ಯದ ಕಥೆಯ ಮೂಲಕ ಕಣ್ಣೀರು ಹಾಕಿಸುವ ಪ್ರಯತ್ನ ಮಾಡಿದ್ದಾರೆ. ಬಹುತೇಕ ತಮ್ಮ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ. ಇನ್ನೂ ಇದು ಯುವರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾ. ಈ ಕಾರಣಕ್ಕೆ ಅಲ್ಲಲ್ಲಿ ಅಪ್ಪು ನೆರಳಿನಡಿ ಯುವ ಬದುಕಿನ ಹೋರಾಟದ ಕಥೆಯನ್ನ ಕಟ್ಟಿ ಕೊಟ್ಟಿದ್ದಾರೆ ಸಂತೋಷ್ ಆನಂದ್ ರಾಮ್. ಉದಾಹರಣೆಗೆ ''ಪಟಾಕಿ ಯಾರದೇ ಆಗಿರಲಿ, ಹಚ್ಚೋರು ನಾವಾಗಿರಬೇಕು'' ಎಂಬ ಸಂಭಾಷಣೆ.

ಯುವ ಸಿನಿಮಾದ ಪ್ಲಸ್ ಏನು..?

ಕಲಾವಿದರ ಆಯ್ಕೆ,ಅಭಿನಯ ಹೊರತು ಪಡಿಸಿದರೆ, ಅಜನೀಶ್ ಲೋಕನಾಥ್ ಸಂಗೀತ, ಶ್ರೀಶಾ ಕುಡುವಳ್ಳಿ ಛಾಯಾಗ್ರಹಣ ಚಿತ್ರದ ತೂಕವನ್ನ ಹೆಚ್ಚಿಸಿವೆ. ಸ್ಟಂಟ್ ಮಾಸ್ಟರ್ ಗೆ ವಿಶೇಷವಾದ ಕ್ರೆಡಿಟ್ ಕೊಡಬೇಕು. ಇನ್ನೂ ನಿರ್ಮಾಣದ ವಿಚಾರದಲ್ಲಿ ಹೊಂಬಾಳೆ ಸಂಸ್ಥೆ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಚಿತ್ರದೂದ್ದಕ್ಕೂ ಅದ್ದೂರಿತನ ಹಾಸು ಹೊಕ್ಕಿದೆ.

ಇನ್ನೂ ಸಂತೋಷ್ ಆನಂದ್ ರಾಮ್ ಖುದ್ದು ಬರೆದಿರುವ ಒನ್ ಲೈನರ್ ಸಂಭಾಷಣೆಗಳೂ ಚೆನ್ನಾಗಿವೆ. ತಂದೆ ಹಾಗೂ ಮಗನ ನಡುವಿನ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಇನ್ನೂ ಈ ಚಿತ್ರದ ಮೂಲಕ ಫುಡ್ ಡೆಲಿವರಿ ಕೊಡುವ ಹುಡುಗ-ಹುಡುಗಿಯರ ಬದುಕು ಹಾಗೂ ಬವಣೆಯ ಕಥೆಯನ್ನೂ ಹೇಳುವ ಚಿಕ್ಕ ಪ್ರಯತ್ನವನ್ನ ಚೊಕ್ಕದಾಗಿ ಮಾಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್

ಯುವ ಚೊಚ್ಚಲ ಚಿತ್ರದ ಮೈನಸ್ ಏನು..?

ಯುವ ಚಿತ್ರದಲ್ಲಿ ಕೇವಲ ಹೊಡಿ ಬಡಿ ಕಥೆ ಅಷ್ಟೇ ಅಲ್ಲ. ತಂದೆ ಮಗನ ನಡುವಿನ ಸಂಬಂಧದ ಕಥನವೂ ಇಲ್ಲಿದೆ. ಪ್ರೀತಿಯ ಘಮಲು ಇದೆ. ಮಧ್ಯಮ ವರ್ಗದ ಕುಟುಂಬದ ಸಮಸ್ಯೆ ಇದೆ. ಹೊಟ್ಟೆ ಕಿಚ್ಚು ಇದೆ. ಇದೆಲ್ಲದರ ನಡುವೆ ಒಂದು ಹಂತದಲ್ಲಿ ಸ್ಫೋರ್ಟ್ಸ್ ಬ್ಯಾಕ್ ಡ್ರಾಪ್ ನಲ್ಲಿಯೂ ಕಥೆ ಸಾಗುತ್ತೆ.

ಇವೆಲ್ಲವನ್ನೂ ಎರಡೂವರೆ ಘಂಟೆಯಲ್ಲಿ ಹೇಳುವ ಪ್ರಯತ್ನವನ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾಡಿದ್ದಾರೆ. ಈ ಕಾರಣಕ್ಕಾಗಿ ಅಲ್ಲಲ್ಲಿ ಯುವ ಮ್ಯಾಜಿಕ್ ನಷ್ಟೇ ಕಣ್ತುಂಬಿಕೊಳ್ಳಬೇಕೆ ಹೊರತು ಲಾಜಿಕ್ ಕೇಳುವಂತೆ ಇಲ್ಲ. ಉದಾಹರಣೆಗೆ ತಂದೆಯನ್ನ ವಂಚಿಸಿದವರಿಗೆ ಯುವ ಡೆಡ್ ಲೈನ್ ನೀಡುತ್ತಾರೆ. ಆದರೆ ಆ ಡೆಡ್ ಲೈನ್ ಮುಕ್ತಾಯಗೊಳ್ಳುವುದು ಯಾವಾಗ ಅನ್ನುವುದಕ್ಕೆ ಉತ್ತರ ಇಲ್ಲ. ಯುವ ಹಾಗೂ ಸಿರಿಯ ಪ್ರೇಮಕಥೆ ಕೂಡ ಅಪೂರ್ಣವೆನಿಸುತ್ತದೆ.

ಚಿತ್ರ ನೋಡುವಾಗ ಎಣ್ಣೆ ಹಾಗೂ ಸಿಗರೇಟ್ ತುಸು ಹೆಚ್ಚೇ ಆಯಿತು ಎಂಬ ಭಾವ ಬರದೇ ಇರದು. ಇನ್ನೂ ಆಕ್ಷನ್ ಟ್ರ್ಯಾಕ್ ಕಡೆ ಗಮನ ಕೊಟ್ಟಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇಲ್ಲಿ ಕಾಮಿಡಿ ಟ್ರ್ಯಾಕ್ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಂಡಂತೆ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದಲ್ಲಿ ಹಾಸ್ಯದ ಕೊರತೆ ಕಾಣುತ್ತೆ. ಇನ್ನೂ ಕ್ಲೈಮ್ಯಾಕ್ಸ್ ಬಗ್ಗೆ ಒಬ್ಬೊಬ್ಬರಲ್ಲಿ ಒಂದು ಅಭಿಪ್ರಾಯ ವ್ಯಕ್ತವಾಗಬಹುದು. ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರವಾದ ಕಾರಣಕ್ಕೆ ಈ ಚಿಕ್ಕ ಪುಟ್ಟ ಲೋಪ ದೋಷಗಳನ್ನ ಕಡೆಗಣಿಸಬಹುದು.

ಒಟ್ಟಾರೆಯಾಗಿ ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾಗಳನ್ನ ಮಾಡುತ್ತಾ ಬಂದವರು ನಿರ್ದೇಶಕ ಸಂತೋಷ್ ಆನಂದ್ ರಾಮ್. ಯುವ ಚಿತ್ರದ ಮೂಲಕ ಕೂಡ ಯುವಕರನ್ನೇ ಗಮನದಲ್ಲಿಟ್ಟುಕೊಂಡು, ಆ ಮೂಲಕ ಅವರ ಹೆತ್ತವರನ್ನೂ ಸೆಳೆಯುವ ಪ್ರಯತ್ನವನ್ನ ಸಂತೋಷ್ ಆನಂದ್ ರಾಮ್ ಇಲ್ಲಿ ಮಾಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಹಾಗೂ ಯುವ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.

More from Filmibeat

English summary
Yuva Rajkumar Starrer Yuva Movie Review In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X