»   » ಎಲ್ಲರಿಂದ ನಾಲಾಯಕ್‌ ಎನಿಸಿಕೊಂಡು ಕೊತ್ತಂಬರಿ ಬೀಜನಾಗಿದ್ದ ರಾಜ ‘ಯುವರಾಜ’ನಾದ ಕಥೆ, ಜೋ ಜೀತಾ ವಹೀ ಸಿಕಂದರ್‌ ಅಲ್ಲದೆ ಮತ್ತೇನೂ ಅಲ್ಲ

ಎಲ್ಲರಿಂದ ನಾಲಾಯಕ್‌ ಎನಿಸಿಕೊಂಡು ಕೊತ್ತಂಬರಿ ಬೀಜನಾಗಿದ್ದ ರಾಜ ‘ಯುವರಾಜ’ನಾದ ಕಥೆ, ಜೋ ಜೀತಾ ವಹೀ ಸಿಕಂದರ್‌ ಅಲ್ಲದೆ ಮತ್ತೇನೂ ಅಲ್ಲ

Subscribe to Filmibeat Kannada


ಈ ಚಿತ್ರದ ನಾಯಕನ ಹೆಸರು ರಾಜ. ಹೆಸರು ರಾಜನಾದರೂ ಅಪ್ಪನಿಂದ ಸದಾ ನಾಲಾಯಕ್ಕು ಅಂತ ಬೈಸಿಕೊಂಡು ಕೊತ್ತಂಬರಿ ಬೀಜ ಆಗಿ ಹೋಗಿರುತ್ತಾನೆ. ಬೈದ ಮಾತ್ರಕ್ಕೆ ಅಪ್ಪ ಏನೂ ಕೆಟ್ಟವನಲ್ಲ. ಆತನೂ ಒಳ್ಳೆಯವನೆ. ಮಿಗಿಲಾಗಿ ವೃದ್ಧ (ನಿವೃತ್ತ) ಬಾಕ್ಸರ್‌. ದೊಡ್ಡ ಮಗನನ್ನು (ಕುಮಾರ್‌ ಗೋವಿಂದು) ಖ್ಯಾತ ಬಾಕ್ಸರ್‌ ಮಾಡಲು ಶಪಥಗೈಯುತ್ತಾನೆ.

ಪ್ರತಿವರ್ಷ ಮಾಡೆಲ್‌ ಕಾಲೇಜಿನ ವಿದ್ಯಾರ್ಥಿ (ಖಳನಾಯಕ) ಹಾಗೂ ಸರ್ಕಾರಿ ಕಾಲೇಜಿನ ಕುಮಾರ್‌ ಗೋವಿಂದು ನಡುವೆ ನಡೆಯುವ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಮಗ ಜಯಶಾಲಿ ಆಗಬೇಕು ಅಂತ ಬಯಸುತ್ತಾನೆ. ಮೊದಲ ವರ್ಷ ಸ್ಪರ್ಧೆಯಲ್ಲಿ ಅಪ್ಪನ ನಿರೀಕ್ಷೆ ಹುಸಿ ಮಾಡಿ ಸೋಲುಂಡ ಕುಮಾರ್‌ ಗೋವಿಂದು, ಎರಡನೇ ವರ್ಷದ ಸ್ಪರ್ಧೆಯಲ್ಲಿ ಗೆದ್ದೇತೀರುತ್ತೇನೆಂದು ಛಲದ ಸಿದ್ಧತೆಯಲ್ಲಿ ತೊಡಗಿರುತ್ತಾನೆ.

ಅವನ ಅಭ್ಯಾಸ ನೋಡಿದವರು ಈ ಸ್ಪರ್ಧೆಯಲ್ಲಿ ಗೋವಿಂದ್‌ ಗೆಲ್ಲುವುದು ಖಚಿತ ಎನ್ನುತ್ತಾರೆ. ಸುದ್ದಿ ಜಗಜ್ಜಾಹೀರಾಗುತ್ತದೆ. ಇದನ್ನರಿತ ಎದುರಾಳಿ ಸ್ಪರ್ಧೆಗೆ 15 ದಿನ ಇದೆ ಅನ್ನುವಾಗ, ಕುಮಾರ್‌ ಗೋವಿಂದ್‌ ಮೇಲೆ ದಾಳಿ ಮಾಡುತ್ತಾನೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ಚಚ್ಚುತ್ತಾನೆ. ಆಸ್ಪತ್ರೆ ಸೇರುವಂತೆ ಮಾಡುತ್ತಾನೆ.

ಇದನ್ನು ತಿಳಿದ ಉಂಡಾಡಿ ಗುಂಡನಾಗಿದ್ದ ನಾಯಕ ರಾಜ ಬಾಕ್ಸಿಂಗ್‌ನ ಗಂಧಗಾಳಿ ಇಲ್ಲದಿದ್ದಾಗ್ಯೂ ಛಲದಿಂದ ಹದಿನೈದೇ ದಿನದಲ್ಲಿ ಬಾಕ್ಸಿಂಗ್‌ ಕಲಿತು, ಹೋರಾಡಿ ಎದುರಾಳಿಯನ್ನು ಹಣ್ಣು ಗಾಯಿ ನೀರುಗಾಯಿ ಮಾಡಿ ‘ಯುವರಾಜ’ ಆಗುತ್ತಾನೆ ಎಂಬಲ್ಲಿಗೆ ತಮ್ಮುಡು, ಜೋ ಜೀತಾ ವಹೀ ಸಿಕಂದರ್‌ ಕನ್ನಡಾರ್ಪಣವಾಗಿದೆ.

ಈ ಮಧ್ಯೆ ರಣರಂಗಕ್ಕೆ ಅರ್ಥಾತ್‌ ಬಾಕ್ಸಿಂಗ್‌ಗಾಂಗಣಕ್ಕೆ ಒದೆ ತಿಂದು ಆಸ್ಪತ್ರೆ ಸೇರಿದ್ದ ಅಣ್ಣ ಗಾಲಿ ಕುರ್ಚಿಯಲ್ಲಿ ಬರುತ್ತಾನೆ. ಇತ್ತ ನಾಯಕನ ಬಹುವಾಗಿ ಮೆಚ್ಚಿದ್ದ ಜಾನಕಿ ವಿಷ ಕುಡಿದು ಸಾಯಲು ಬಾಂಕ್ಸಿಂಗ್‌ ಅಕಾಡಕ್ಕೇ ಬರುತ್ತಾಳೆ. ಖಳನಾಯಕನ ಚಿಂದಿ, ಚಿಂದಿ ಮಾಡಿದ ನಂತರ, ನಾಯಕ ನಾಯಕಿಯ ಪ್ರಾಣವನ್ನೂ ಕಾಪಾಡುತ್ತಾನೆ, ಅಪ್ಪನ ಶಪಥವನ್ನೂ ಪೂರೈಸುತ್ತಾನೆ. ಅಣ್ಣನ ಮಾನವನ್ನೂ ಉಳಿಸುತ್ತಾನೆ.

ಮಧ್ಯಂತರದವರೆಗೂ ಶಿವಮಯವಾಗಿರುವ ಚಿತ್ರದಲ್ಲಿ, ಎರಡು ಹಾಡು ನಾಲ್ಕು ಸೀನ್‌ ಬಳಿಕ ಲೀಸಾರೇ ಮಾಯವಾಗಿ ಹೋಗುತ್ತಾಳೆ. ಎರಡು ಹಾಡುಗಳ ಚಿತ್ರೀಕರಣ ಇಂಗ್ಲೆಂಡ್‌ನಲ್ಲಿ ನಡೆದಿರೋದ್ರಿಂದ ರಮಣ ಗೋಗುಲ ಸಂಗೀತವೂ ಇಂಗ್ಲಿಷ್‌ ವರಸೆಯನ್ನೇ ಹಿಡಿದಿದೆ.

ಅಪಾಚಿ ಇಂಡಿಯನ್‌ ಸ್ಟೈಲ್‌ನಲ್ಲಿ ರ್ಯಾಪ್‌ ನೃತ್ಯ ಮಾಡಿರುವ ಶಿವರಾಜ್‌ ಅಭಿಮಾನಿಗಳಿಂದ ಸೈ ಎನಿಸಿಕೊಳ್ಳುತ್ತಾರೆ. (ಇದು ಸಿನಿಮಾ ಅನ್ನೋದನ್ನೂ ಮರೆತು ಅಭಿಮಾನಿಗಳು ಓನ್ಸ್‌ ಮೋರ್‌ ಅಂತಾರೆ) ರಮೇಶ್‌ ಭಟ್‌ ಮಾತುಗಾರಿಕೆಯಲ್ಲಿ ಗೆದ್ದಿದ್ದಾರೆ. ಭಾವನಾ ಕುಣಿತ ಕಂಡ ಪ್ರೇಕ್ಷಕರ ಜನ್ಮ ಪಾವನ. ನೃತ್ಯ ಸಂಯೋಜನೆ ಓಕೆ. ಖಳನಾಯಕ ಧರ್ಮ ಭರವಸೆ ಮೂಡಿಸಿದ್ದಾರೆ. ಕಾಲೇಜು ವಾತಾವರಣದ ಈ ಚಿತ್ರ ಯುವಕರಿಗೆ ಇಷ್ಟ ಆದರೆ ಅಚ್ಚರಿ ಇಲ್ಲ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada