For Quick Alerts
  ALLOW NOTIFICATIONS  
  For Daily Alerts

  Yuvarathnaa Movie Review: ಪುನೀತ್ ನಟನೆಯ 'ಯುವರತ್ನ' ಹೇಗಿದೆ?

  |

  ಭಾರತೀಯ ಶಿಕ್ಷಣ ವ್ಯವಸ್ಥೆ ಬಹುದೊಡ್ಡ ಚರ್ಚೆಯ ವಿಷಯ. ಸರ್ಕಾರಿ ಶಾಲೆ-ಕಾಲೇಜುಗಳ ಸ್ಥಿತಿ, ಕಾರ್ಪೊರೇಟ್ ಹಿಡಿತದ ಶಿಕ್ಷಣ ಸಂಸ್ಥೆಗಳು. ಶಾಲೆ-ಕಾಲೇಜುಗಳಲ್ಲಿ ಕಲಿಸಲಾಗುತ್ತಿರುವ ಶಿಕ್ಷಣ, ಆಧುನಿಕ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವ ಒತ್ತಡ, ಶಿಕ್ಷಣದ ಖಾಸಗೀಕರಣದಿಂದ ಪೋಷಕರ ಮೇಲೆ ಆಗುತ್ತಿರುವ ಆರ್ಥಿಕ ಹೊರೆ ಹೀಗೆ ಈ ಚರ್ಚೆಯ ವ್ಯಾಪ್ತಿ ಹಿಗ್ಗುತ್ತಾ ಸಾಗುತ್ತದೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಿನಿಮಾ ಮಾಡುವುದಾದರೆ ಕೈಇಟ್ಟಲ್ಲೆಲ್ಲಾ 'ಕಂಟೆಂಟ್' ಸಿಗುತ್ತದೆ. ಇಂಥಹಾ ವಿಶಾಲ ವ್ಯಾಪ್ತಿಯ ವಿಷಯವನ್ನು ಕತೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ (?!) ಪುನೀತ್ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಯುವರತ್ನ' ಸಿನಿಮಾದ ನಿರ್ದೇಶಕ ಸಂತೋಶ್ ಆನಂದ್ ರಾಮ್.

  ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಾಕೆ ತಾನು ಕಲಿತ ಸರ್ಕಾರಿ ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯದಿಂದ ಸಿನಿಮಾ ಆರಂಭವಾಗುತ್ತದೆ. ಮೆರಿಟ್ ಇದ್ದರೂ ಸೀಟು ನಿರಾಕರಿಸಿದ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಯ ವಿರುದ್ಧ ಹೋರಾಟ ಆರಂಭಿಸುತ್ತಾರೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ. ಸಿನಿಮಾದ ಆರಂಭ ಬಹಳ ಚೆನ್ನಾಗಿದೆ. ಘನವಾದ ವಿಚಾರವೊಂದನ್ನು ಸಿನಿಮಾ ಅನಾವರಣ ಮಾಡಲಿದೆ ಎಂಬ ನಿರೀಕ್ಷೆಯನ್ನು ಆರಂಭಿಕ ದೃಶ್ಯಗಳು ಮೂಡಿಸುತ್ತವೆ. ಆದರೆ ಸಿನಿಮಾದ ಕತೆ ಮುಂದುವರೆದಂತೆ ಕತೆಯ ವ್ಯಾಪ್ತಿ ಕಿರಿದಾಗುತ್ತಾ ಆಗುತ್ತಾ ಕೇವಲ ಒಂದು ಕಾಲೇಜಿಗೆ ಸೀಮಿತಗೊಂಡುಬಿಡುತ್ತದೆ.

  Rating:
  3.5/5

  ಸರ್ಕಾರಿ ಶಾಲೆ-ಕಾಲೇಜುಗಳನ್ನು ಉಳಿಸಬೇಕು ಎಂದು ಹೋರಾಡುವ ಪ್ರಾಂಶುಪಾಲ, ಅವರಿಗೆ ಸಾಥ್ ನೀಡುವ ಹಳೆಯ ವಿದ್ಯಾರ್ಥಿಗಳು. ಪ್ರಾಂಶುಪಾಲನ ಹೋರಾಟವನ್ನು ಹತ್ತಿಕ್ಕಬ್ಬೇಕು, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಾಳು ಮಾಡಿ ಕಾಲೇಜು ಮುಚ್ಚಿಸಬೇಕು ಎಂದು ಟೊಂಕಕಟ್ಟಿ ನಿಂತಿರುವ ಖಳ ಪಡೆ. ಸರ್ಕಾರಿ ಕಾಲೇಜು ಉಳಿಸಲು ತನ್ನ ಶಕ್ತಿ-ಯುಕ್ತಿ ಎಲ್ಲವನ್ನೂ ಬಳಸಿ ಹೋರಾಡುವ ನಾಯಕ. ಇವು ಕತೆಯ ಮುಖ್ಯ ಮೂರು ಬಿಂದುಗಳು. ಈ ಮೂರು ಬಿಂದುಗಳ ನಡುವೆ ಸಿನಿಮಾ ಹೆಣೆದಿದ್ದಾರೆ ನಿರ್ದೇಶಕ ಸಂತೋಶ್ ಆನಂದ್‌ ರಾಮ್.

  ಹೊಡೆದಾಟಕ್ಕಷ್ಟೆ ಸೀಮಿತವಾಗಿಲ್ಲ 'ಯುವರತ್ನ' ಸಿನಿಮಾ

  ಹೊಡೆದಾಟಕ್ಕಷ್ಟೆ ಸೀಮಿತವಾಗಿಲ್ಲ 'ಯುವರತ್ನ' ಸಿನಿಮಾ

  ಸಿನಿಮಾವನ್ನು ಖಳನಾಯಕ-ನಾಯಕನ ನಡುವಿನ ಹೊಡೆದಾಟಕ್ಕೆ ಸೀಮಿತ ಮಾಡಿಲ್ಲ. ಬದಲಿಗೆ ಶಿಕ್ಷಣದ ಮಹತ್ವ, ಗುರುವಿನ ಕರ್ತವ್ಯ, ಶಿಕ್ಷಣದಲ್ಲಿ ಪೋಷಕರ ಪಾತ್ರ. ಶಿಕ್ಷಣದ ಹೊರತಾದ ಜೀವನ ಇನ್ನೂ ಕೆಲವು ವಿಷಯಗಳ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ವಿದ್ಯಾರ್ಥಿಗಳು ಇರುವಲ್ಲಿಗೆ ಶಿಕ್ಷಕ ಹೋಗಿ ಪಾಠ ಮಾಡುವ ದೃಶ್ಯಗಳು, ವಿದ್ಯಾರ್ಥಿಗಳ ಕಷ್ಟ ತಿಳಿಸಲು ಪೋಷಕರಿಗೆ ಪಾಠ ಹೇಳಿ ಪರೀಕ್ಷೆ ನೀಡಲು ಮುಂದಾಗುವ ಶಿಕ್ಷಕ, ಈ ದೃಶ್ಯಗಳು ನಗು ತರಿಸುವ ಜೊತೆಗೆ ಗಂಭೀರ ಸಂದೇಶವನ್ನೂ ದಾಟಿಸುತ್ತವೆ. ಸಿನಿಮಾದಲ್ಲಿ ಕಣ್ಣು ತೇವಗೊಳಿಸುವ ಹಲವು ದೃಶ್ಯಗಳಿವೆ. ಜೊತೆಗೆ ಶಿಳ್ಳೆ ಹೊಡೆಸುವ ದೃಶ್ಯಗಳೂ ಇವೆ.

  ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ

  ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ

  ಕೆಲ ದೃಶ್ಯಗಳನ್ನು ನಾಯಕನ ವೈಭವೀಕರಣಕ್ಕೆಂದೇ ಸೃಷ್ಟಿಸಲಾಗಿದೆ. ಕಮರ್ಶಿಯಲ್ ಸಿನಿಮಾಗಳಲ್ಲಿ ಇದು ಸಾಮಾನ್ಯವೂ ಹೌದು. ಇದರ ಜೊತೆಗೆ ಕೆಲವು ಉತ್ತರ ಸಿಗದ ಅಂಶಗಳೂ ಸಿನಿಮಾದಲ್ಲಿವೆ. ಪ್ರೊಫೆಸರ್ ಕೈಗೆ ಬಂದೂಕು ಬಂದದ್ದು ಏಕೆ. ಆತ ಶೂಟ್ ಮಾಡಿದ್ದು ಏಕೆ? ಅಷ್ಟೊಂದು ಕಷ್ಟಪಟ್ಟು ಸಹಿಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಕತೆ ಏನಾಯ್ತು? ವಿದ್ಯಾರ್ಥಿನಿ ಹೆಸರಲ್ಲಿ ಆರಂಭವಾದ ಅಭಿಯಾನ ಎಲ್ಲಿಗೆ ಮುಟ್ಟಿತು? ಆಕೆಗೆ ನ್ಯಾಯ ದೊರಕಿತೆ? ದೊಡ್ಡ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳ ಮಾಲೀಕ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಿಸಲು ಅಷ್ಟೊಂದು ಪ್ರಯತ್ನ ಮಾಡುವುದೇಕೆ. ಒಂದು ಸರ್ಕಾರಿ ಶಾಲೆ ಮುಚ್ಚುವುದರಿಂದ ಅವನಿಗಾಗುವ ಲಾಭವೇನು? ಇನ್ನೂ ಕೆಲವು ಪ್ರಶ್ನೆಗಳು ಸಿನಿಮಾ ಮುಗಿದ ಮೇಲೆ ತಲೆಗೆ ಸುಳಿಯಬಹುದು ಆದರೆ ಅದಕ್ಕೆಲ್ಲಾ ಉತ್ತರ ಕೇಳುವ ಗೋಜಿಗೆ ಪ್ರೇಕ್ಷಕ ಹೋಗುವಂತಿಲ್ಲ. ಏಕೆಂದರೆ ಇದು 'ಕಮರ್ಶಿಯಲ್' ಸಿನಿಮಾ. ಇಲ್ಲಿ ಲಾಜಿಕ್‌ಗೆ ಅವಕಾಶವಿಲ್ಲ.

  ಪುನೀತ್ ಡ್ಯಾನ್ಸ್-ಪೈಟ್ ಎರಡೂ ಸೂಪರ್

  ಪುನೀತ್ ಡ್ಯಾನ್ಸ್-ಪೈಟ್ ಎರಡೂ ಸೂಪರ್

  ಪುನೀತ್ ಅವರ ಉತ್ಸಾಹಭರಿತ ನಟನೆ ಸಿನಿಮಾದ ಧನಾತ್ಮಕ ಅಂಶ. ಕಾಲೇಜು ಯುವಕನಾಗಿ ಜವಾಬ್ದಾರಿಯುತ ಭೋದಕನಾಗಿ ಅವರ ಅಭಿನಯ ಚೆನ್ನಾಗಿದೆ. ಡ್ಯಾನ್ಸ್‌-ಫೈಟ್‌ಗಳಲ್ಲಿ ಪುನೀತ್ ಅವರನ್ನು ನೋಡುವುದು ಕಣ್ಣಿಗೆ ಹಬ್ಬ. ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಅವರಿಗೆ ಯಾವ ಪಾತ್ರವೂ ಸವಾಲಲ್ಲ. ನಟ ಧನಂಜಯ್ ವಿಲನ್ ಆಗಿ ಮಿಂಚಿದ್ದಾರೆ. ಸಾಯಿಕುಮಾರ್ ಹಾಗೂ ಧನಂಜಯ್‌ ಪರಸ್ಪರ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ದಿಗಂತ್, ಸೋನು ಗೌಡ ಅವರದ್ದು ಪಾತ್ರಕ್ಕೆ ತಕ್ಕಷ್ಟು ನಟನೆ. ಇನ್ನು ನಾಯಕಿ ಸಾಯೆಷಾಗೆ ಸಿನಿಮಾದಲ್ಲಿ ಹೆಚ್ಚಿನ ಕೆಲಸವಿಲ್ಲ.

  ದೊಡ್ಡ ಪೋಷಕ ಪಾತ್ರ ವರ್ಗ ಸಿನಿಮಾದಲ್ಲಿದೆ

  ದೊಡ್ಡ ಪೋಷಕ ಪಾತ್ರ ವರ್ಗ ಸಿನಿಮಾದಲ್ಲಿದೆ

  ದೊಡ್ಡ ಪೋಷಕ ಪಾತ್ರ ವರ್ಗ ಸಿನಿಮಾದಲ್ಲಿದೆ. ಅಚ್ಯುತ್‌ಕುಮಾರ್, ರಂಗಾಯಣ ರಘು, ಅವಿನಾಶ್, ಸುಧಾರಾಣಿ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ಕುರಿ ಪ್ರತಾಪ್, ಸಾಧುಕೋಕಿಲ ಇನ್ನೂ ಹಲವರಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿಲ್ಲವಾದರೂ, ಅವಿನಾಶ್, ಅಚ್ಯುತ್‌ ಕುಮಾರ್, ಸುಧಾರಾಣಿ, ರಾಜೇಶ್ ನಟರಂಗ, ಇನ್ಸ್‌ಪೆಕ್ಟರ್ ಪಾತ್ರಧಾರಿ ತಾರಕ್ ಪೊನ್ನಪ್ಪ ಅವರ ಪಾತ್ರಗಳಿಗೆ ಅಗತ್ಯ ಪ್ರಾಮುಖ್ಯತೆ ದೊರಕಿದೆ. ಕಾಮಿಡಿಗಾಗಿ ಸಾಧುಕೋಕಿಲ, ಕುರಿ ಪ್ರತಾಪ್ ಇದ್ದಾರಾದರೂ ಅವರ ಹಾಸ್ಯ ಸನ್ನಿವೇಶಗಳು ವರ್ಕ್‌ಔಟ್ ಆಗಿಲ್ಲ ಬದಲಿಗೆ ಪುನೀತ್ ಅವರ ಕೆಲವು ಸಂಭಾಷಣೆಗಳೇ ಕಾಮಿಕ್ ರಿಲೀಫ್ ಒದಗಿಸುತ್ತವೆ.

  Recommended Video

  ದಾವಣಗೆರೆಯಲ್ಲಿ ಯುವರತ್ನ ನೋಡಲು ನೂಕುನುಗ್ಗಲು:ಪೊಲೀಸರಿಂದ ಲಾಠಿ ಚಾರ್ಜ್ | Filmibeat Kannada
  ಪುನೀತ್ 'ಸ್ಟಾರ್ ಪ್ರಭೆ' ಸಿನಿಮಾಕ್ಕೆ ಆಧಾರ

  ಪುನೀತ್ 'ಸ್ಟಾರ್ ಪ್ರಭೆ' ಸಿನಿಮಾಕ್ಕೆ ಆಧಾರ

  ತಾಂತ್ರಿಕ ವರ್ಗದಲ್ಲಿ ಕ್ಯಾಮೆರಾ ಕೆಲಸಕ್ಕೆ, ಸಾಹಸ ಹಾಗೂ ನೃತ್ಯ ನಿರ್ದೇಶಕರಿಗೆ ಹೆಚ್ಚು ಅಂಕ ನೀಡಲೇಬೇಕು. ಆರಂಭದಲ್ಲಿ ಬರುವ ಬಿಜಿಎಂ ಪವರ್‌ಫುಲ್‌ ಆಗಿದೆ. ಆದರೆ ಇದೇ ಮಾತನ್ನು ಒಟ್ಟಾರೆ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಅನ್ವಯಿಸಲಾಗದು. ಒಟ್ಟಾರೆಯಾಗಿ ನಿರ್ದೇಶಕ ಸಂತೋಶ್ ಆನಂದ್‌ರಾಮ್ ಅವರು ಸಿನಿಮಾದ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವ ಭಾರವನ್ನು ಹೆಗಲ ಮೇಲೆ ಹೊತ್ತು ಸಂದೇಶವನ್ನೂ ಪೂರ್ಣ ತಲುಪಿಸಲಾಗದೆ 'ಸಂದೇಶಭರಿತ ಕಮರ್ಶಿಯಲ್ ಸಿನಿಮಾ' ಮಾಡುವ ಒತ್ತಡಕ್ಕೆ ಸಿಕ್ಕು ಹೆಣಗಾಡಿದ್ದಾರೆ ಎನ್ನಿಸುತ್ತದೆ. ಪುನೀತ್ ಅವರ 'ಸ್ಟಾರ್‌ ಪ್ರಭೆ' ಸಿನಿಮಾದ ಓರೆ-ಕೋರೆಗಳನ್ನು ಮರೆಮಾಚಲಿದೆ.

  English summary
  Puneeth Rajkumar starer Yuvarathnaa Kannada movie review in Kannada.
  Thursday, April 1, 2021, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X