ತೆಲುಗು, ತಮಿಳಿಗೆ ಕನ್ನಡದ ಒಲವೇ ಮಂದಾರ
ಕನ್ನಡದಲ್ಲಿ ಹೊಸತನದಿಂದ ಕೂಡಿದ ವಿಭಿನ್ನ ಚಿತ್ರ 'ಒಲವೇ ಮಂದಾರ'. ಈಗ ಈ ಚಿತ್ರ ತೆಲುಗು, ತಮಿಳು ಭಾಷೆಗಳಿಗೂ ಡಬ್ ಆಗಿದ್ದು ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣುತ್ತಿದೆ. ತಮಿಳಿನಲ್ಲಿ ಚಿತ್ರಕ್ಕೆ 'ಕಾದಲ್ ಕಲೈವಾಣಿ' ಎಂದು ಹೆಸರಿಡಲಾಗಿದ್ದು ತೆಲುಗು ಚಿತ್ರಕ್ಕೆ 'ಮನಸೇ ಮಂದಾರಂ' ಎಂದು ಹೆಸರಿಡಲಾಗಿದೆ.
ತಮಿಳು ಚಿತ್ರದ ರೈಟ್ಸ್ ರಾಮ್ ನಾರಾಯಣ್ ಪಡೆದಿದ್ದಾರೆ. ತಮಿಳು ಭಾಷೆಯ ಚಿತ್ರದಲ್ಲಿ ಶ್ರೀಕಾಂತ್ ಒಂದು ವಾರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ರಂಗಾಯಣ ರಘು ಪಾತ್ರವನ್ನು ಇಲವರಸನ್ ಪೋಷಿಸಿದ್ದು, ಆ ಭಾಗದ ಚಿತ್ರೀಕರಣದಲ್ಲಿ ಶ್ರೀಕಾಂತ್ ಮತ್ತೊಮ್ಮೆ ಅಭಿನಯಿಸಿ ಬಂದಿದ್ದಾರೆ.
ತೆಲುಗು ಆವೃತ್ತಿಯಲ್ಲಿ ರಂಗಾಯಣ ರಘು ಪಾತ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ರಂಗಭೂಮಿಯಲ್ಲಿ ಪಳಗಿದ ಜಯತೀರ್ಥ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ನಿರ್ಮಾಪಕರ ಮಗ ಶ್ರೀಕಾಂತ್ ಹಾಗೂ ನಾಯಕಿ ಆಕಾಂಕ್ಷ ಅವರಿಗೆ ಇದು ಚೊಚ್ಚಲ ಚಿತ್ರ.
ಈ ಚಿತ್ರದ ಮೂಲಕ ಜಯತೀತೀರ್ಥರು ಪ್ರೀತಿಯ ಹಲವು ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಸತ್ಯ ಘಟನೆ ಆಧರಿಸಿದ ಎರಡು ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತವೆ. ಈ ಚಿತ್ರ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. (ಏಜೆನ್ಸೀಸ್)


Click it and Unblock the Notifications











