ನನ್ನ ಪತ್ನಿಗೆ ಒಂದು ಸಿನ್ಮಾ ಛಾನ್ಸ್ ಕೊಡಿ, 'ಮ್ಯಾಕ್ಸ್' ನಿರ್ಮಾಪಕನ ಬಳಿ ₹2000 ಕೋಟಿ ಆಸ್ತಿ ಒಡೆಯ ಮನವಿ!
ಸಿನಿಮಾ ಸೆಳೆತ ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ. ನಾನು ಸಾಯುವ ಕೊನೆಯ ಕ್ಷಣದಲ್ಲಿ ಕೂಡ ನಟಿಸುತ್ತಲೇ ಇರಬೇಕು ಎಂದು ಆಸೆ ವ್ಯಕ್ತಪಡಿಸಿರುವವರು ಇದ್ದಾರೆ. ಕೆಲ ನಟಿಯರು ಮದುವೆ ಬಳಿಕ ಕುಟುಂಬ, ಮಕ್ಕಳು ಎಂದು ಚಿತ್ರರಂಗಕ್ಕೆ ಗುಡ್‌ಬೈ ಹೇಳಿಬಿಡುತ್ತಾರೆ. ಆದರೆ ಬಳಿಕ ಮತ್ತೆ ಕಂಬ್ಯಾಕ್ ಮಾಡಿರುವ ಉದಾಹರಣೆಗಳಿವೆ.
ಚಿತ್ರರಂಗದ ಸಹವಾಸವೇ ಬೇಡ ಎಂದು ಹೋದವರು ತಿರುಗಿ ಬಂದಿರುವ ಉದಾಹರಣೆಗಳಿವೆ. ಕರಿಯರ್, ನೇಮು, ಫೇಮ್‌ಗಾಗಿ ಚಿತ್ರರಂಗಕ್ಕೆ ಬಹುತೇಕರು ಬರ್ತಾರೆ. ಕೆಲವರು ಮಾತ್ರ ಸಿನಿಮಾ ನನ್ನ ಪ್ಯಾಷನ್ ಎನ್ನುತ್ತಾರೆ. ಕೋಟಿ ಕೋಟಿ ಆಸ್ತಿ ಒಡೆಯರು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ತಾವೇ ಸಿನಿಮಾ ನಿರ್ಮಿಸಿ ನಟಿಸಿರುವುದು ಇದೆ. 2000 ಕೋಟಿ ರೂ. ಆಸ್ತಿಯ ಒಡೆಯ ತನ್ನ ಪತ್ನಿಗೆ ಒಂದು ಸಿನಿಮಾ ಅವಕಾಶ ಕೊಡಿ ಎಂದು ನಿರ್ಮಾಪಕರ ಬಳಿ ಬೇಡಿಕೆ ಇಟ್ಟಿದ್ದಾರೆ.

ಅಂದಹಾಗೆ ಇಂತಾದೊಂದು ಬೇಡಿಕೆ ಇಟ್ಟಿದ್ದು ಬೇರೆ ಯಾರು ಅಲ್ಲ, ಖ್ಯಾತ ನಟಿ ರಂಭಾ ಅವರ ಪತಿ ಇಂದ್ರಕುಮಾರ್ ಪದ್ಮನಾಥನ್. 15 ವರ್ಷಗಳ ಹಿಂದೆ ಇವರಿಬ್ಬರ ಮದುವೆ ನಡೆದಿತ್ತು. ದೇಶ ವಿದೇಶದಲ್ಲಿ ರಂಭಾ ಪತಿ, ಉದ್ಯಮಿ ಇಂದ್ರಕುಮಾರ್ ಆಸ್ತಿ ಸಂಪಾದಿಸಿದ್ದಾರೆ. ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಇತ್ತೀಚೆಗೆ ರಂಭಾ ಚಿತ್ರರಂಗಕ್ಕೆ ವಾಪಸ್ ಬರ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ.
ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರ ನಿರ್ಮಿಸಿದ ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಹಾಗೂ ಇಂದ್ರಕುಮಾರ್ ಸ್ನೇಹಿತರು. 'ರಾಬರ್' ಎಂಬ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ನಟಿ ರಂಭಾ ಕೂಡ ಕಾಣಿಸಿಕೊಂಡಿದ್ದರು. ಈ ವೇಳರ ರಂಭಾ ಬಗ್ಗೆ ಮಾತನಾಡುತ್ತಾ ಅವರ ಪತಿ ಬೇಡಿಕೆ ಇಟ್ಟ ಬಗ್ಗೆ ಕಲೈಪುಲಿ ಎಸ್. ತನು ಮಾತನಾಡಿದ್ದಾರೆ.
"ವೇದಿಕೆಯಲ್ಲಿ ಕುಳಿತಿರುವ ನಟಿ ರಂಭಾ ಅವರ ಪತಿ ಇಂದ್ರಕುಮಾರ್ 2000 ಕೋಟಿ ಆಸ್ತಿ ಒಡೆಯ. ಇತ್ತೀಚೆಗೆ ಇಂದ್ರಕುಮಾರ್ ನನ್ನ ಜೊತೆ ಮಾತನಾಡಿದರು. ನಿಮ್ಮ ಆಶೀರ್ವಾದದಿಂದ ನಾವು ಸುಖವಾಗಿ ಬಾಳುತ್ತಿದ್ದೇವೆ. ಆದರೆ ಮನೆಯಲ್ಲೇ ಇರುವುದು ರಂಭಾಗೆ ಕೊಂಚ ಇರಿಸುಮುರಿಸು ತಂದಿದೆ ಎನಿಸುತ್ತಿದೆ ಎಂದು ನನಗೆ ಅನ್ನಿಸ್ತಿದೆ. ಚಿತ್ರರಂಗದಲ್ಲಿ ಮತ್ತೆ ಅವಕಾಶ ಕೊಡಬೇಕು ಎಂದರು. ಅದಕ್ಕಾಗಿ ನೀನು ಸಿನಿಮಾ ಮಾಡಬೇಡ, ನಾನೇ ನನ್ನ ಚಿತ್ರದಲ್ಲಿ ಅವಕಾಶ ಕೊಡ್ತೀನಿ, ಅಥವಾ ನನಗೆ ಗೊತ್ತಿರುವ ಕಂಪನಿಗಳಿಗೆ ಹೇಳ್ತಿನಿ ಅಂತ ಹೇಳಿದ್ದೇನೆ" ಎಂದು ಕಲೈಪುಲಿ ತನು ಹೇಳಿದ್ದಾರೆ.

ಆಂಧ್ರದ ವಿಜಯವಾಡದಲ್ಲಿ ಹುಟ್ಟಿ ಬೆಳೆದ ನಟಿ ರಂಭಾ ತಮ್ಮ 15ನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದರು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಭೋಜ್‌ಪುರಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಆಕೆ ನಟಿಸಿ ಗೆದ್ದಿದ್ದರು. ಮದುವೆ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ತನ್ನ ಮಾದಕ ಮೈಮಾಟದಿಂದ ಒಂದ್ಕಾಲದಲ್ಲಿ ಬಹಳ ಕ್ರೇಜ್ ಸೃಷ್ಟಿಸಿಕೊಂಡಿದ್ದವರು ರಂಭಾ. ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ರಂಭಾ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 'ಬಾವ ಬಾಮೈದಾ', 'ಸಾಹುಕಾರ' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಿ ಗೆದ್ದಿದ್ದಾರೆ. 'ಅನಾಥರು' ಚಿತ್ರದ ಹಾಡೊಂದಕ್ಕೆ ಕೊನೆಯದಾಗಿ ಹೆಜ್ಜೆ ಹಾಕಿದ್ದರು. ರಜನಿಕಾಂತ್, ಚಿರಂಜೀವಿ, ರವಿಚಂದ್ರನ್ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಶೀಘ್ರದಲ್ಲೇ ರಂಭಾ ಚಿತ್ರರಂಗಕ್ಕೆ ಮರಳುವ ಸುಳಿವ ಸಿಗುತ್ತಿದೆ.


Click it and Unblock the Notifications











