ತಮಿಳು ಚಿತ್ರಕ್ಕೆ ಸಹಿಹಾಕಿದ ನಟಿ ನಿಖಿತಾ ತುಕ್ರಲ್
ನಟ ದರ್ಶನ್ ಗಲಾಟೆಯಲ್ಲಿ ನಲುಗಿದ ಹೂವು ನಿಖಿತಾ ತುಕ್ರಲ್ ಈಗ ಸದ್ಯಕ್ಕೆ ಕನ್ನಡಕ್ಕೆ ಎಂಟ್ರಿ ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ನೇರವಾಗಿ ಮನೆಗೆ ಬರುವ ಮುನ್ನ ಪಕ್ಕದ ಮನೆಗೆ ಭೇಟಿ ನೀಡುವ ಸಿದ್ಧತೆಯಲ್ಲಿದ್ದಾರೆ! ಅಂದರೆ ತಮಿಳು ಚಿತ್ರವೊಂದಕ್ಕೆ ಸಹಿಹಾಕಿದ್ದಾರೆ.
ನಟ ದರ್ಶನ್ ಪ್ರಕರಣ ಸ್ವಲ್ಪ ತಣ್ಣಗಾಗುತ್ತಿದ್ದಂತೆ ನಿಖಿತಾ ನಿಧಾನಕ್ಕೆ ಫಾರಂಗೆ ಮರಳಿದ್ದಾರೆ. ತಮಿಳು ನಟ ಕಾರ್ತಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಿಖಿತಾ ನಿಕ್ಕಿಯಾಗಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಮತ್ತೊಬ್ಬರು ಬೆಂಗಳೂರು ಮೂಲದ ಬ್ಯೂಟಿ ಅನುಷ್ಕಾ ಶೆಟ್ಟಿ. ಚಿತ್ರದಲ್ಲಿ ತಮ್ಮದು ಹಳ್ಳಿ ಹುಡುಗಿ ಪಾತ್ರ ಎಂದಿರುವ ನಿಖಿತಾ, ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯಸಲ್ಲಿಸುವುದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿ ಎರಡನೆ ನಾಯಕಿಯಾಗಿ ನಿಖಿತಾ ಕಾಣಿಸಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನಿಖಿತಾ ಹರ್ಷ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬೆಂಗಳೂರಿಗೆ ಯಾವಾಗ ಬರ್ತೀಯಾ ಅಮ್ಮಣ್ಣಿ ಎಂದರೆ, ಅಕ್ಟೋಬರ್‌ನಲ್ಲಿ ಎಂದಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ 'ಕಾಟನ್‌ಪೇಟೆ' ಚಿತ್ರದ ಮೂಲಕ ನಿಖಿತಾ ಮತ್ತೆ ಕನ್ನಡಕ್ಕೆ ವಾಪಸಾಗಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











