ಓಟಿಟಿಯಲ್ಲಿರುವ ತಮಿಳಿನ ಈ 5 ಹಾರರ್ ಚಿತ್ರಗಳನ್ನು ನೀವು ನೋಡಲೇಬೇಕು!
ಕಾಲಿವುಡ್ ಚಿತ್ರರಂಗ ಭಿನ್ನ ವಿಭಿನ್ನ ಕಥಾಹಂದರವಿರುವ ಚಿತ್ರಗಳನ್ನು ತಯಾರಿಸಲು ಹೆಚ್ಚು ಹೆಸರುವಾಸಿಯಾಗಿರುವ ಚಿತ್ರರಂಗ. ಯಾವುದೇ ವಿಭಾಗದ ಚಿತ್ರವಾದರೂ ಸಹ ಸಿನಿ ರಸಿಕರ ಮನ ಗೆಲ್ಲುವಂತಹ ಕಥೆಯನ್ನು ಹೆಣೆಯುವಲ್ಲಿ ನೈಪುಣ್ಯತೆ ಹೊಂದಿರುವ ನಿರ್ದೇಶಕರ ದಂಡನ್ನೇ ಹೊಂದಿದೆ ತಮಿಳು ಚಿತ್ರರಂಗ.
ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಹಾಗೂ ಕಂಟೆಂಟ್ ಆಧಾರಿತ ಚಿತ್ರಗಳನ್ನು ಹೆಚ್ಚಾಗಿ ತೆರೆಗೆ ತರುವ ತಮಿಳು ಚಿತ್ರರಂಗದಲ್ಲಿ ಹಾರರ್ ಚಿತ್ರಗಳೂ ಸಹ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಹೌದು, ತಮಿಳು ಚಿತ್ರರಂಗದಲ್ಲಿ ಎಪಿಕ್ ಹಾರರ್ ಚಿತ್ರಗಳು ತೆರೆಗೆ ಬಂದಿವೆ.

ಕ್ರೈಮ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಅಚ್ಚುಕಟ್ಟಾಗಿ ಸ್ಕ್ರೀನ್ ಪ್ಲೇ ಬರೆದು ತಯಾರಿಸುವ ಸಾಮರ್ಥ್ಯ ಇರುವ ತಮಿಳು ಚಿತ್ರರಂಗದಲ್ಲಿ ವೀಕ್ಷಕರು ಬೆಚ್ಚಿ ಬೀಳುವಂತ ಹಾರರ್ ಚಿತ್ರಗಳೂ ಸಹ ತೆರೆಗೆ ಬಂದಿವೆ. ಹೀಗೆ ಸಿನಿ ರಸಿಕರಿಗೆ ಥ್ರಿಲ್ ನೀಡುವಂತಹ ತಮಿಳಿನ ಟಾಪ್ 5 ಹಾರರ್ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿದೆ.
1. ಮಾಯಾ: ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ ಮಾಯಾ ಚಿತ್ರ ತಮಿಳು ಚಿತ್ರರಂಗದಲ್ಲಿ ಬಂದ ಬೆಸ್ಟ್ ಹಾರರ್ ಚಿತ್ರಗಳಲ್ಲಿ ಒಂದು. ಚಿತ್ರದಲ್ಲಿ ನಾಯಕಿಯನ್ನು ಕಾಡುವ ದೆವ್ವವೊಂದು ಆಕೆಗೆ ಪರಿಚಯವಿರುವ ಕೆಲವರನ್ನು ಸಾಯಿಸುತ್ತಾ ಸಾಗುತ್ತದೆ. ಹೀಗೆ ಇಂತಹ ಕಥೆಯನ್ನು ಹೊಂದಿರುವ ಚಿತ್ರ ನಿಮಗೆ ಭಯ ಹುಟ್ಟಿಸದೇ ಇರಬಹುದು. ಆದರೆ ಚಿತ್ರದ ಸ್ಕ್ರೀನ್‌ಪ್ಲೇ ನಿಮ್ಮಲ್ಲಿ ಭಯ ಹುಟ್ಟಿಸದೇ ಇರದು. ಚಿತ್ರವನ್ನು ನಿರ್ದೇಶಕರು ಹೆಣೆದಿದ್ದ ರೀತಿಗೆ ಫಿದಾ ಆಗಿದ್ದ ಸಿನಿ ರಸಿಕರು ಕಲಾವಿದರ ನಟನೆಗೂ ಸಹ ಜೈ ಎಂದಿದ್ರು. ಈ ಚಿತ್ರವನ್ನು ಜೀ ಫೈವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.
2. ಪಿಜ್ಜಾ: ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿಗೆ ಬಿಗ್ಗೆಸ್ಟ್ ಬ್ರೇಕ್ ಕೊಟ್ಟ ಚಿತ್ರ ಪಿಜ್ಜಾ. ಕನ್ನಡದಲ್ಲಿ ವಿಜಿಲ್ ಎಂದೂ ಸಹ ಈ ಚಿತ್ರ ರಿಮೇಕ್ ಆಗಿತ್ತು. ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಪಿಜಾ ಡೆಲಿವರಿ ಮಾಡುವ ನಾಯಕ ಪಿಜಾ ನೀಡಲು ಹೋದಾಗ ಮನೆಯೊಂದರಲ್ಲಿ ದೆವ್ವ ಇರುವಂತಹ ಸನ್ನಿವೇಶಗಳನ್ನು ಎದುರಿಸುತ್ತಾನೆ. ಈ ಕಥೆ ಸಾಮಾನ್ಯವೆನಿಸಿದರೂ ಕ್ಲೈಮ್ಯಾಕ್ಸ್ ಟ್ವಿಸ್ಟ್ ಎಲ್ಲರಲ್ಲೂ ಸಹ ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತದೆ. ಈ ಚಿತ್ರ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಲಭ್ಯವಿದೆ.
3. ಪಿಸಾಸು: ಹಾರರ್ ಥ್ರಿಲ್ಲರ್ ಸಿನಿಮಾಗಳಲ್ಲಿ ಹೆಚ್ಚಾಗಿ ಎಮೋಷನಲ್ ಅಂಶಗಳಿಗೆ ಜಾಗವಿಲ್ಲ ಎಂಬ ಮಾತಿದೆ. ಆದರೆ ತಮಿಳಿನ ಪಿಸಾಸು ಎಂಬ ಚಿತ್ರದಲ್ಲಿ ಹಾರರ್ ಕಥೆ ಜತೆಗೆ ಸಿನಿ ರಸಿಕರು ಎಮೋಷನಲ್ ಅಗುವಂತಹ ಕಥೆ ಇದೆ. ಆಕ್ಸಿಡೆಂಟ್‌ನಲ್ಲಿ ನಿಧನ ಹೊಂದುವ ಹುಡುಗಿ ತನ್ನನ್ನು ಬದುಕಿಸಲು ಪ್ರಯತ್ನಿಸಿದ ಹುಡುಗನ ಹಿಂದೆ ಬಿದ್ದು ಆತನಿಗೆ ಸಹಾಯ ಮಾಡುವ ಕಥೆ ಇದಾಗಿದ್ದು, ನಿರ್ದೇಶಕ ಮಿಸ್ಕಿನ್ ಜಾಣ್ಮೆಯ ನಿರ್ದೇಶನಕ್ಕೆ ಸಿನಿ ರಸಿಕರು ಮಾರು ಹೋಗಿದ್ದರು. ಈ ಚಿತ್ರ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಲಭ್ಯವಿದೆ.
4. ಯಾವರು ನಾಲಮ್: ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವ ಹವ್ಯಾಸವಿರುವ ಸಿನಿ ರಸಿಕರಿಗೆ ಈ ಚಿತ್ರ ಗೊತ್ತೇ ಇರುತ್ತದೆ. ಕುಟುಂಬವೊಂದು ಹೊಸ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲಿದ್ದು, ಅಲ್ಲಿಗೆ ಬಂದ ನಂತರ ಅವರ ಸಂತಸವೆಲ್ಲಾ ಕರಗಿ ಆತಂಕ, ದುಃಖ ಆವರಿಸಿಕೊಳ್ಳಲಿದೆ. ಹೀಗೆ ರೋಚಕವೆನಿಸುವ ಕಥೆಯನ್ನು ಹೊಂದಿರುವ ಚಿತ್ರಕಥೆಯನ್ನು ಹೊಂದಿರುವ ಈ ಚಿತ್ರವನ್ನು ಮಿಸ್ ಮಾಡದ ನೋಡಿ. ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.
5. ಡೆಮಾಂಟೆ ಕಾಲೋನಿ: ತಮಿಳು ಚಿತ್ರರಂಗದಿಂದ ಬಂದ ಬೆಸ್ಟ್ ಹಾರರ್ ಮೂವಿಗಳಲ್ಲಿ ಈ ಡೆಮಾಂಟಿ ಕಾಲೋನಿ ಸಹ ಒಂದು. ಡೆಮಾಂಟೆ ಕಾಲೋನಿಯಲ್ಲಿನ ಫ್ರೆಂಚ್ ರಾಜನ ಭೂತಬಂಗಲೆಗೆ ತೆರಳುವ ನಾಲ್ವರು ಸ್ನೇಹಿತರ ಗುಂಪು ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಕಥೆ ಇದಾಗಿದೆ. ಈ ನಾಲ್ವರಲ್ಲಿ ಓರ್ವ ಅಲ್ಲಿನ ನೆಕ್‌ಲೇಸ್ ಕಳ್ಳತನ ಮಾಡಿದ ಕಾರಣ ವಿಚಿತ್ರಗಳು ನಡೆಯಲು ಆರಂಭವಾಗಲಿದ್ದು, ಆ ಯುವಕರ ಗುಂಪು ಏನೆಲ್ಲಾ ಕಷ್ಟಗಳನ್ನು ಎದುರಿಸಲಿದೆ ಎಂಬುದೇ ಚಿತ್ರವಾಗಿದೆ. ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.


Click it and Unblock the Notifications











