ಶಿವಣ್ಣನ ಮುಂದಿನ ಚಿತ್ರದಲ್ಲಿ ಖ್ಯಾತ ತಮಿಳು ನಟ; ಇಬ್ಬರ ಏಟು- ಎದಿರೇಟು ಹೇಗಿರುತ್ತೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಬೈರತಿ ರಣಗಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಇನ್ನು ಮೂರ್ನಾಲ್ಕು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಅದರಲ್ಲಿ ಅರ್ಜುನ್ ಜನ್ಯಾ ನಿರ್ದೇಶನದ ಮಲ್ಟಿಸ್ಟಾರರ್ ಸಿನಿಮಾ ಕೂಡ ಒಂದು.
ತಮಿಳಿನ ಕಾರ್ತಿಕ್ ಅದ್ವೈತ್ ನಿರ್ದೇಶನದ ಚಿತ್ರಕ್ಕೂ ಶಿವರಾಜ್‌ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಪಾಯುಂ ಒಲಿ ನೀ ಎನಕ್ಕು' ಎನ್ನುವ ತಮಿಳು ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕರು ಗೆದ್ದಿದ್ದರು. ಸುಧೀರ್ ಚಂದ್ರ ಪದಿರಿ ನಿರ್ಮಾಣದಲ್ಲಿ ಸಿದ್ಧವಾಗುವ ಚಿತ್ರಕ್ಕೆ ಶಿವಣ್ಣ-ಕಾರ್ತಿಕ್ ಕೈ ಜೋಡಿಸಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಬಳಿಕ ಇದೇ ಚಿತ್ರವನ್ನು ಶಿವಣ್ಣ ಆರಂಭಿಸಲಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರದಲ್ಲಿ ತಮಿಳು, ನಟ ನಿರ್ದೇಶಕ ಎಸ್. ಜೆ ಸೂರ್ಯ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿದೆ. ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ರಿಲೀಸ್ ಪ್ಲ್ಯಾನ್ ಮಾಡುತ್ತಿದ್ದಾರೆ. 'ವಾಲಿ', 'ಖುಷಿ' ಹಿಟ್ ಸಿನಿಮಾಗಳನ್ನು ನೋಡಿ ಎಸ್. ಜೆ ಸೂರ್ಯ ಸದ್ದು ಮಾಡಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳ ಮೂಲಕ ಕ್ಯಾಮರಾ ಮುಂದೆ ಬಂದಿದ್ದರು.
ಕೆಲ ಸಿನಿಮಾಗಳಲ್ಲಿ ಹೀರೊ ಆಗಿಯೂ ನಟಿಸಿದ ಎಸ್. ಜೆ ಸೂರ್ಯ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. ವಿಲನ್ ರೋಲ್‌ಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಅಂಥದ್ದೇ ಪಾತ್ರ ಶಿವಣ್ಣನ ಮುಂದಿನ ಚಿತ್ರದಲ್ಲಿ ಅವರು ಮಾಡುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯ ಏಳೆಂಟು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ನಟನೆಯ 'ಇಂಡಿಯನ್'-2, ರಾಮ್‌ಚರಣ್ 'ಗೇಂಮ್ ಚೇಂಜರ್', ಧನುಷ್ 'ರಾಯನ್' ಚಿತ್ರಗಳಲ್ಲಿ ಎಸ್. ಜೆ ಸೂರ್ಯ ಅಬ್ಬರಿಸಲು ಸಿದ್ಧರಾಗಿದ್ದಾರೆ.

ನಟನಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದಿದ್ದ ಎಸ್. ಜೆ ಸೂರ್ಯ ಮೊದಲಿಗೆ ನಿರ್ದೇಶಕ ವಸಂತ್ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದರು. ಭಾರತೀರಾಜ ಬಳಿಯೂ ಕೆಲಸ ಮಾಡಿದ್ದರು. ಬಳಿಕ ನಟ ಅಜಿತ್ 'ವಾಲಿ' ಸಿನಿಮಾ ನಿರ್ದೇಶನದ ಅವಕಾಶ ಕೊಟ್ಟಿದ್ದರು. ಮೊದಲ ಸಿನಿಮಾ ಬಿಡುಗಡೆಗೂ ಮುನ್ನ ಬರೀ ಪ್ರೀಮಿಯರ್ ಶೋ ನೋಡಿ 'ಖುಷಿ' ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿತ್ತು. ದಳಪತಿ ವಿಜಯ್ ನಟಿಸಿದ 'ಖುಷಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮರುವರ್ಷ ಅದೇ ಚಿತ್ರವನ್ನು ತೆಲುಗಿನಲ್ಲಿ ಕಟ್ಟಿಕೊಟ್ಟು ಗೆದ್ದರು.
ತಾವು ಕೆಲಸ ಮಾಡುವ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಎಸ್. ಜೆ ಸೂರ್ಯ ಬಳಿಕ 'ಅನ್ಬೆ ಆರುಯಿರೆ' ಚಿತ್ರದಲ್ಲಿ ಹೀರೊ ಆಗಿದ್ದರು. ಸದ್ಯ ಶಿವಣ್ಣ ಹಾಗೂ ಎಸ್. ಜೆ ಸೂರ್ಯ ಒಟ್ಟಿಗೆ ನಟಿಸೋ ಸುದ್ದಿ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಣ್ಣ ಕೆಲ ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. 'ಉತ್ತರಕಾಂಡ' ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











