ರಜನಿಕಾಂತ್ 'ಜೈಲರ್'-2 ಪ್ರೋಮೊ ಬಗ್ಗೆ ಹೊಸ ಕ್ಯಾತೆ; ಸನ್ ಪಿಕ್ಚರ್ಸ್ ತಿರುಗೇಟು!
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಕನ್ನಡ ನಟ ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. ಶಿವಣ್ಣನ ನರಸಿಂಹ ಪಾತ್ರ ಅಂತೂ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ಸೀಕ್ವೆಲ್ ಘೋಷಣೆ ಆಗಿದೆ.
ಭರ್ಜರಿ ಪ್ರೋಮೊ ಶೂಟ್ ಮಾಡಿ 'ಜೈಲರ್- 2' ಸಿನಿಮಾ ಘೋಷಣೆ ಮಾಡಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ ಮತ್ತೆ ತಲೈವಾ ಅಬ್ಬರಿಸೋಕೆ ಬರ್ತಿದ್ದಾರೆ. ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಅನೌನ್ಸ್‌ಮೆಂಟ್ ಪ್ರೋಮೊವನ್ನು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿಲಾಗಿತ್ತು. ಸಣ್ಣ ಝಲಕ್‌ನಲ್ಲಿ ಸೂಪರ್ ಸ್ಟಾರ್ ಸ್ಟೈಲ್, ಸ್ವ್ಯಾಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಳೆದ 5 ದಿನಗಳಿಂದ 'ಜೈಲರ್-2' ಪ್ರೋಮೊ ಟ್ರೆಂಡಿಂಗ್‌ನಲ್ಲಿದೆ. ವಯಸ್ಸು 70 ದಾಟಿದ್ರು ಸೂಪರ್ ಸ್ಟಾರ್ ಚಾರ್ಮ್ ಕಮ್ಮಿ ಆಗಿಲ್ಲ. ಆ ಸ್ಟೈಲ್‌ಗೆ ಇನ್ನು 20ರ ಹರೆಯ ಅಂತೆಲ್ಲಾ ಅಭಿಮಾನಿಗಳು ಮೆಚ್ಚಿಕೊಂಡಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಪ್ರೋಮೊ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಪ್ರೋಮೊದಲ್ಲಿ ರಜನಿಕಾಂತ್‌ಗಿಂತ ಡ್ಯೂಪ್ ಹೆಚ್ಚು ನಟಿಸಿರುವಂತೆ ಕಾಣುತ್ತಿದೆ.
ಸಾಮಾನ್ಯವಾಗಿ ನಟರಿಗೆ ಡ್ಯೂಪ್‌ಗಳನ್ನು ಬಳಸಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತದೆ. ಅದರಲ್ಲೂ ಆಕ್ಷನ್ ಸನ್ನಿವೇಶಗಳಲ್ಲಿ ಡ್ಯೂಪ್ ಬಳಕೆ ಹೆಚ್ಚು. ಕೆಲ ಸ್ಟಾರ್ ನಟರು ಮಾತ್ರ ತಾವೇ ಎಲ್ಲಾ ಸ್ಟಂಟ್ಸ್ ಮಾಡುತ್ತಾರೆ. ರಜನಿಕಾಂತ್ ಅವರಿಗೂ ಸಾಕಷ್ಟು ಸಿನಿಮಾಗಳಲ್ಲಿ ಡ್ಯೂಪ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಆದರೆ 'ಜೈಲರ್'-2 ಪ್ರೋಮೊದಲ್ಲಿ ಡ್ಯೂಪ್ ಬಳಕೆ ಹೆಚ್ಚಾಗಿದೆ. ತಲೈವಾ ನಡೆದುಕೊಂಡು ಬರುವುದು ಹೋಗುವುದಕ್ಕೂ ಡ್ಯೂಪ್ ಬಳಸಿದರೆ ಹೇಗೆ? ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸೂಪರ್ ಸ್ಟಾರ್ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ.
ಪ್ರೋಮೊದಲ್ಲಿ ಕ್ಲೋಸ್‌ಅಪ್ ಶಾಟ್ಸ್ ಬಿಟ್ಟು ಬಹುತೇಕ ಎಲ್ಲಾ ಸನ್ನಿವೇಶಗಳಲ್ಲಿ ಡ್ಯೂಪ್ ನಟಿಸಿರುವಂತೆ ಕಾಣುತ್ತಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ಡ್ಯೂಪ್ ಬಳಸುವಂತಿದ್ದರೆ ರಜನಿಕಾಂತ್ ಆಕ್ಷನ್ ಸಿನಿಮಾಗಳನ್ನು ಮಾಡುವುದು ಯಾಕೆ? ಹೀರೊ ಆಗಿ ಮುಂದುವರೆಯುವುದು ಬೇಕಾ? ಎಂದು ಕೆಲವರು ಕುಹಕವಾಡುತ್ತಿದ್ದಾರೆ. ಆದರೆ ಪ್ರೋಮೊ ಶೂಟ್ ಮಾಡಲು ಯಾವುದೇ ಡ್ಯೂಪ್ ಬಳಸಿಲ್ಲ. ಸ್ವತಃ ರಜನಿಕಾಂತ್ ನಟಿಸಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಇನ್ನು ಪ್ರೋಮೊ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಸನ್ ಪಿಕ್ಚರ್ಸ್ ಸಂಸ್ಥೆ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದೆ. ನೋಡ್ರಪ್ಪಾ ಯಾರು ನಟಿಸಿರೋದು? ಯಾವುದು ಡ್ಯೂಪ್ ಎಂದು ಅಭಿಮಾನಿಗಳು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಡ್ಯೂಪ್ ಹಾಕುವುದು ಸಾಮಾನ್ಯ. ಒಂದು ರಜನಿಕಾಂತ್ ಬದಲು ಆ ದೃಶ್ಯಗಳಲ್ಲಿ ಡ್ಯೂಪ್ ಕಲಾವಿದರು ನಟಿಸಿದ್ದರು ಪರವಾಗಿಲ್ಲ. ಆ ವಯಸ್ಸಿನಲ್ಲಿ ತಲೈವಾ ನಟಿಸುತ್ತಿರುವುದೇ ಹೆಚ್ಚು, ಬರೀ ಕ್ಲೋಸ್ ಅಪ್ ದೃಶ್ಯಗಳಲ್ಲಿ ಅವರನ್ನು ನೋಡಲು ನಾವು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ.
'ಜೈಲರ್- 2' ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ ಕೂಡ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. 'ಜೈಲರ್' ಚಿತ್ರ ಭಾರೀ ಲಾಭ ತಂದುಕೊಟ್ಟಿತ್ತು. ಇದರಿಂದ ಖುಷಿಯಾಗಿದ್ದ ನಿರ್ಮಾಪಕರು ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್ ರವಿಚಂದರ್‌ಗೆ ಒಂದೊಂದು ಕಾರ್ ಉಡುಗೊರೆಯಾಗಿ ಕೊಟ್ಟಿದ್ದರು. ಲಾಭದಲ್ಲಿ ಭಾಗವನ್ನು ಮೂವರಿಗೆ ಕೊಟ್ಟು ಸೀಕ್ವೆಲ್ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಅಂತೂ ಇಂತೂ ಸಿನಿಮಾ ಬರುವುದು ಇದೀಗ ಖಚಿತವಾಗಿದೆ.
ಸದ್ಯ ರಜನಿಕಾಂತ್ 'ಕೂಲಿ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಪೇಂದ್ರ, ರಚಿತಾ ರಾಮ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಕೂಲಿ' ಬಳಿಕ 'ಜೈಲರ್-2' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











