29 ವರ್ಷಗಳ ನಂತರ ಒಂದಾದ ರಜಿನಿಕಾಂತ್ ಮತ್ತು ಅಮೀರ್ ಖಾನ್, ಜೈಪುರದಲ್ಲಿ ನಡೆಯುತ್ತಿದೆ ಶೂಟಿಂಗ್..!
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಯಾವುದೇ ಪಾತ್ರ ನೀಡಿದರೂ, ಅದಕ್ಕೆ ಸೂಪರ್ರೋ ಸೂಪರ್ರು ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತೆ. ಇಳಿ ವಯಸ್ಸಿನಲ್ಲಿಯೂ ಒಪ್ಪಿಕೊಂಡ ಪಾತ್ರ ಮತ್ತು ಚಿತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಇಂದಿನ ಹದಿ ಹರೆಯದ ಹೀರೋಗಳೂ ಕೂಡ ನಾಚುವಂತೆ ಅಮೋಘ ಅಭಿನಯ ಮಾಡುವ ರಜಿನಿಕಾಂತ್ ಅವರ ಜೊತೆ ಈಗ ಅಮೀರ್ ಖಾನ್ ಕೈ ಜೋಡಿಸಿದ್ದಾರೆ.
ಹೌದು. ಆರಂಭದಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡುತ್ತಾ, ನಿರೀಕ್ಷೆಯನ್ನು ಹೆಚ್ಚಿಸುತ್ತಾನೇ ಬರುತ್ತಿರುವ ರಜಿನಿಕಾಂತ್ ಅಭಿನಯದ 'ಕೂಲಿ' ಚಿತ್ರಕ್ಕೆ ಈಗ ಬಾಲಿವುಡ್‌ನ ಸ್ಟಾರ್ ಅಮೀರ್ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಕೂಲಿ ಚಿತ್ರತಂಡವಾಗಲಿ ಅಮೀರ್ ಖಾನ್ ಆಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ ಕೂಲಿ ಚಿತ್ರದ ಚಿತ್ರೀಕರಣ ರಾಜಸ್ತಾನದಲ್ಲಿಯೇ ನಡೆಯುತ್ತಿರುವ ಹಿನ್ನೆಲೆ ಅಮೀರ್ ಖಾನ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ಜೈಪುರಕ್ಕೆ ಬಂದಿದ್ದಾರೆ ಎಂದು ಭಾವಿಸಿದ್ದಾರೆ.

ಅಂದ್ಹಾಗೇ ಅಮೀರ್ ಖಾನ್ ಮತ್ತು ರಜಿನಿಕಾಂತ್ ಈ ಹಿಂದೆ 1995ರಲ್ಲಿ ಆತಂಕ್ ಹೀ ಆತಂಕ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆ ಹಾಗೊಂದು ವೇಳೆ ಅಮೀರ್ ಖಾನ್ ನಿಜವಾಗಿಯೂ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇ ಆದಲ್ಲಿ 29 ವರ್ಷದ ನಂತರ ರಜಿನಿಕಾಂತ್ ಜೊತೆ ಅಮೀರ್ ಖಾನ್ ತೆರೆ ಹಂಚಿಕೊಂಡಂತೆ ಆಗಲಿದೆ.
ಇನ್ನೂ .. ಸಹಜವಾಗಿ ರಜಿನಿಕಾಂತ್ ಚಿತ್ರದಲ್ಲಿ ಅಮೀರ್ ಖಾನ್ ಅವರ ಪಾತ್ರದ ವಿನ್ಯಾಸ ಹೇಗಿರುತ್ತೆ ಎನ್ನುವ ಪ್ರಶ್ನೆ ಈ ಸುದ್ದಿ ಹೊರ ಬಂದ ಕ್ಷಣದಿಂದ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಸ್ಪಷ್ಟವಾದ ಉತ್ತರ ಸದ್ಯಕ್ಕೆ ಇಲ್ಲವಾದರೂ ಕೂಲಿ ಚಿತ್ರದಲ್ಲಿ ಚಿತ್ರದ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಅಮೀರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನುಳಿದಂತೆ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ನಮ್ಮ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇದ್ದಾರೆ. ಇನ್ನು ಕೇವಲ ಉಪೇಂದ್ರ ಮಾತ್ರ ಅಲ್ಲ ಕೂಲಿ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಇದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ. ರಚಿತಾ ರಾಮ್ ಆಗಲಿ ಚಿತ್ರದ ಲೋಕೇಶ್ ಕನಕರಾಜ್ ಆಗಲಿ ಈ ಸುದ್ದಿಯ ಕುರಿತು ಪ್ರತಿಕ್ರಿಯೆಯನ್ನು ನೀಡಿಲ್ಲ. ಸುದ್ದಿಯನ್ನು ಅಲ್ಲಗೆಳೆದಿಲ್ಲ.
ರಜಿನಿಕಾಂತ್, ಉಪೇಂದ್ರ ಅವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ನಾಗಾರ್ಜುನ, ಸೌಬಿನ್ ಶಾಹಿರ್, ಸತ್ಯರಾಜ್ ಮತ್ತು ಶ್ರುತಿ ಹಾಸನ್ ಕೂಡ ಇದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ. ಸನ್ ಪಿಕ್ಚರ್ಸ್ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದೆ. ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗಲಿದ್ದು ಮುಂದಿನ ವರ್ಷ ಮಧ್ಯಂತರದ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ರಜಿನಿಕಾಂತ್ ವೃತ್ತಿ ಬದುಕಿನ ವಿಶೇಷ ಮತ್ತು ವಿಶಿಷ್ಠವಾದ ಚಿತ್ರ ಕೂಲಿ ಆಗಲಿದೆ ಎನ್ನುವ ಮಾತು ಕೂಡ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ಸದ್ಯ ಅಮೀರ್ ಖಾನ್ ಕೂಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದ್ದು ಅಮೀರ್ ಖಾನ್ ಈ ಚಿತ್ರವನ್ನು ಹೊರತು ಪಡಿಸಿದರೆ ಸಿತಾರೆ ಜಮೀನ್ ಪರ್ ಚಿತ್ರವನ್ನು ಮಾಡುತ್ತಿದ್ದಾರೆ. 2025ರ ಕ್ರಿಸ್ಮಸ್‌ಗೆ ಈ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆಯನ್ನು ಮಾಡಿದ್ದಾರೆ.


Click it and Unblock the Notifications











