Abhinaya: ಕಿವಿ ಕೇಳದ, ಮಾತು ಬಾರದ ನಟಿ ಅಭಿನಯ ಭಾಷಣ ಕೇಳಿದವರು ಭಾವುಕ: ಆಕೆಯ ವಿಶೇಷ ಸಂದರ್ಶನ ನೋಡಿದ್ರಾ?
ಬಹುಭಾಷಾ ನಟಿ ಅಭಿನಯ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶಾಲ್ ನಟನೆಯ 'ಮಾರ್ಕ್ ಆಂಟನಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಭಿನಯ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಸಹೋದರಿ ಪಾತ್ರದಲ್ಲಿ ನಟಿಸಿದ್ದರು.
ಸಮುದ್ರ ಖನಿ ನಿರ್ದೇಶನದ 'ನಾಡೋಡಿಗಳ್' ಚಿತ್ರ ಆಕೆಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅದೇ ಚಿತ್ರ ಕನ್ನಡಕ್ಕೆ ರೀಮೆಕ್ ಆದಾಗ ಅದೇ ಪಾತ್ರವನ್ನು ಇಲ್ಲೂ ನಿಭಾಯಿಸಿದ್ದರು. ಆ ಬಳಿಕ 'ಕಿಚ್ಚು', 'ಆಟೋ ರಾಮಣ್ಣ' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ. ನೋಡಲು ಬಹಳ ಸುಂದರವಾಗಿರುವ ಚೆಲುವೆ ಅಷ್ಟೇ ಸೊಗಸಾಗಿ ನಟಿಸುತ್ತಾರೆ. ಆಕೆಯ ಭಾವಾಭಿನಯಕ್ಕೆ ಮನಸೋಲದವರಿಲ್ಲ.

ನೋಡಲು ಇಷ್ಟು ಸುಂದರವಾಗಿರುವ, ಇಷ್ಟು ಚೆನ್ನಾಗಿ ಅಭಿನಯಿಸುವ ನಟಿ ಅಭಿನಯಗೆ ಕಿವಿ ಕೇಳಿಸುವುದಿಲ್ಲ, ಸರಿಯಾಗಿ ಮಾತನಾಡಲು ಆಗುವುದಿಲ್ಲ ಎನ್ನುವ ಸತ್ಯ ಸಾಕಷ್ಟು ಜನರಿಗೆ ಗೊತ್ತಿಲ್ಲ. ಹೌದು ಹುಟ್ಟಿನಿಂದಲೇ ನಟಿ ಅಭಿನಯಗೆ ಕಿವಿ ಕೇಳಿಸುವುದಿಲ್ಲ. ಹಾಗಾಗಿ ಆಕೆಗೆ ಮಾತನಾಡಲು ಆಗಲ್ಲ. ಇತ್ತೀಚೆಗೆ 'ಮಾರ್ಕ್ ಆಂಟನಿ' ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಆಕೆಯ ಭಾಷಣ ಕೇಳಿದವರು ಭಾವುಕರಾಗಿದ್ದರು.
ಕಿವಿ ಕೇಳಿಸದ, ಮಾತನಾಡಲು ಬರದ ಅಭಿನಯ ಭಾಷಣ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಸಂಕೇತ ಭಾಷೆ (Sign Language) ಕಲಿತಿರುವ ನಟಿ ಅಭಿನಯ ಇನ್ನೊಬ್ಬರ ಸಹಾಯದೊಂದಿಗೆ ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಬಲ್ಲರು. ಅಷ್ಟೇ ಅಲ್ಲ, ಎದುರಿಗಿರುವವರ ತುಟಿ ಚಲನೆ ನೋಡಿ ಅವರು ಏನು ಮಾತನಾಡುತ್ತಿದ್ದಾರೆ ಎಂದು ಗ್ರಹಿಸಬಲ್ಲರು. ಸಂಕೇತ ಭಾಷೆಯ ಮೂಲಕವೇ ನಟಿ ಅಭಿನಯ ವೇದಿಕೆಯಲ್ಲಿ ಮಾತನಾಡಿದ್ದರು. ಇನ್ನು ಆಕೆ ಸಂಕೇತ ಭಾಷೆಯಲ್ಲಿ ಇಂಡಿಯಾ ಗ್ಲಿಟ್ಸ್ ತೆಲುಗು ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನ ಸಖತ್ ವೈರಲ್ ಆಗುತ್ತಿದೆ.
ಅಭಿನಯ ತಂದೆ ಆನಂದ್ ವರ್ಮಾ ಸಾಕಷ್ಟು ತೆಲುಗು, ತಮಿಳು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ನಟಿಸಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಎಲ್ಲರೂ ಆಕೆಗೆ ಇರುವ ತನ್ನ ದೌರ್ಬಲ್ಯಗಳು ಗೊತ್ತಾದಂತೆ ನೋಡಿಕೊಳ್ಳುತ್ತಾರೆ. ಚಿಕ್ಕಂದಿನಿಂದಲೂ ಬಹಳ ಚೂಟಿಯಾಗಿದ್ದ ಮಗಳನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ತಂದೆ ಆಸೆ ಆಗಿತ್ತು. ಆದರೆ ಕಿವಿ ಕೇಳಿಸದೇ, ಮಾತನಾಡದೇ ಅಭಿನಯ ಹೇಗೆ ಸಾಧ್ಯ? ಎಂದಾಗ ಮಗಳನ್ನು ಮಾಡೆಲಿಂಗ್‌ಗೆ ಸೇರಿಸಿದರು. ಕ್ಯಾಮರಾ ಮುಂದೆ ನಿಲ್ಲಲು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಮಾತನಾಡುವ ಅವಶ್ಯಕತೆ ಇಲ್ಲ ಎಂದು ತಂದೆ ಅಂದುಕೊಂಡಿದ್ದರು.
ಜಾಹೀರಾತುಗಳಲ್ಲಿ ಆಕೆಯನ್ನು ನೋಡಿದ ನಿರ್ಮಾಪಕ, ನಿರ್ದೇಶಕರು ಕರೆದು ಅವಕಾಶ ಕೊಟ್ಟರು. 'ನಾಡೋಡಿಗಳ್' ಚಿತ್ರಕ್ಕೆ ಸಮುದ್ರಖನಿ ಮೊದಲಿಗೆ ಅವಕಾಶ ಕೊಟ್ಟಿದ್ದರು. ಆ ಚಿತ್ರದಲ್ಲಿ ಆಕೆ ನಟನೆಗೆ ಹೇಗಿತ್ತು ಅಂದ್ರೆ ತೆಲುಗು, ಕನ್ನಡಕ್ಕೆ ಸಿನಿಮಾ ರೀಮೆಕ್ ಆದಾಗ ಆ ಪಾತ್ರವನ್ನು ಆಕೆಯೇ ಮಾಡುವಂತಾಯಿತು. ಅಭಿನಯಗೆ ಶಸ್ತ್ರ ಚಿಕಿತ್ಸೆ ಬಳಿಕ ಮಿಷಿನ್ ಸಹಾಯದಿಂದ ಕೊಂಚಮಟ್ಟಿಗೆ ಕಿವಿ ಕೇಳಿಸುತ್ತದೆ. ವಿದೇಶದ ಯೂನಿವರ್ಸಿಟಿಯಲ್ಲಿ ನಟಿ ಅಭಿನಯ ಸಂಕೇತ ಭಾಷೆ ಹಾಗೂ ಇಂಗ್ಲೀಷ್ ಲಿಪ್ ರೀಡಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಮೊದ್ಲೆ ಸಿನಿಮಾ ಸ್ಟ್ರಿಪ್ಟ್, ಡೈಲಾಗ್ಸ್ ಪಡೆದು ಪಾತ್ರಕ್ಕಾಗಿ ತಾಯಾರಿ ಮಾಡಿಕೊಳ್ಳುತ್ತಾರೆ ಅಭಿನಯ. ಇನ್ನು ಸೆಟ್‌ನಲ್ಲಿ ಇರುವವರ ಸಹಾಯದಿಂದಲೂ ನಟಿಸೋದು ಸುಲಭವಾಗುತ್ತದೆಯಂತೆ. ಆದರೆ ಕೆಲವೊಮ್ಮೆ ಆಕೆಯನ್ನು ಸುತ್ತಮುತ್ತ ಇರುವವರು ವಿಚಿತ್ರವಾಗಿ ನೋಡುತ್ತಾರಂತೆ. ಅವರೆಲ್ಲಾ ಯಾಕೆ ಹೀಗೆ ನೋಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು 'ಮಾರ್ಕ್ ಆಂಟನಿ' ಕಾರ್ಯಕ್ರಮದಲ್ಲಿ ಅಭಿನಯ ಸಂಕೇತ ಭಾಷೆಯಲ್ಲಿ ಭಾವನಾತ್ಮಕ ಭಾಷಣಕ್ಕೆ ನಟ ವಿಶಾಲ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.


Click it and Unblock the Notifications











