ಶೂಟಿಂಗ್ ಸೆಟ್‌ನಲ್ಲಿ ದುರಂತ; 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ಮನ್ ಸಾವು
ಸಿನಿಮಾ ಚಿತ್ರೀಕರಣದ ವೇಳೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ದುರಂತಗಳು ಸಂಭವಿಸುತ್ತದೆ. ಸದ್ಯ ತಮಿಳಿನ 'ಸರ್ದಾರ್'-2 ಚಿತ್ರದ ಚಿತ್ರೀರಣದ ವೇಳೆ ಸ್ಟಂಟ್‌ಮನ್ ಏಳುಮಲೈ ಎಂಬುವವರು 20 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ.
ಆಕ್ಷನ್ ಸನ್ನಿವೇಶವೊಂದರ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಸೂರ್ಯ ಸಹೋದರ ಕಾರ್ತಿ ಹೀರೊ ಆಗಿ ನಟಿಸುತ್ತಿರುವ ಸಿನಿಮಾ 'ಸರ್ದಾರ್-2'. ಏಳುಮಲೈ ಕೆಳಗೆ ಬೀಳುತ್ತಿದ್ದಂತೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. 54 ವರ್ಷದ ಏಳುಮಲೈ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಂತರಿಕ ರಕ್ತಸ್ರಾವದಿಂದ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

ದುರಂತ ಸಂಬಂಧ ಚಿತ್ರ ನಿರ್ಮಾಣ ಸಂಸ್ಥೆ ಪ್ರೆಸ್‌ನೋಟ್ ರಿಲೀಸ್ ಮಾಡಿದೆ. "ನಮ್ಮ ಸರ್ದಾರ್- 2 ಚಿತ್ರದ ಸೆಟ್‌ನಲ್ಲಿ ರಿಗ್ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸ್ಟಂಟ್ ಯೂನಿಯನ್ ಸದಸ್ಯರಾದ ಶ್ರೀ ಎಲುಮಲೈ ಅವರ ನಿಧನ ವಾರ್ತೆ ತಿಳಿಸಲು ನಾವು ವಿಷಾದಿಸುತ್ತೇವೆ. ಜುಲೈ 16 ರ ಮಂಗಳವಾರ ಸಂಜೆ, ಸ್ಟಂಟ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಿದ ನಂತರ ಶೂಟಿಂಗ್ ಮುಗಿಸುವ ಮಸಯದಲ್ಲಿ ಏಳುಮಲೈ ಅವರು ಆಕಸ್ಮಿಕವಾಗಿ 20 ಅಡಿ ಎತ್ತರದ ರೋಸ್ಟ್ರಮ್‌ನಿಂದ ಬಿದ್ದು ಗಾಯಗೊಂಡರು.
"ಕೂಡಲೇ ಏಳುಮಲೈ ಅವರನ್ನು ಹತ್ತಿರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡಿತು. ಆದಾಗ್ಯೂ, ಜುಲೈ 16, 2024 ರಂದು ರಾತ್ರಿ 11.30 ರ ಸುಮಾರಿಗೆ, ತೀವ್ರವಾದ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ, ಏಳುಮಲೈ ದುರದೃಷ್ಟವಶಾತ್ ನಿಧನರಾದರು. ನಮ್ಮ ಇಡೀ ತಂಡವು ಅವರ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಸಂತಾಪ ಸೂಚಿಸುತ್ತೇವೆ. ಈ ದುಃಖದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ" ಎಂದು ತಿಳಿಸಿದ್ದಾರೆ.

ವಾರದ ಹಿಂದೆ 'ಸರ್ದಾರ್-2' ಸಿನಿಮಾ ಸೆಟ್ಟೇರಿತ್ತು. ಸೋಮವಾರ(ಜುಲೈ 15)ದಿಂದ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. 2ನೇ ದಿನವೇ ಸೆಟ್‌ನಲ್ಲಿ ಈ ದುರಂತ ಸಂಭವಿಸಿದೆ. ಪಿ. ಎಸ್ ಮಿತ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2 ವರ್ಷಗಳ ಹಿಂದೆ 'ಸರ್ದಾರ್' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಹಾಗಾಗಿ ಸೀಕ್ವೆಲ್ ಆರಂಭಿಸಲಾಗಿತ್ತು.
ಸ್ಪೈ ಥ್ರಿಲ್ಲರ್ 'ಸರ್ದಾರ್' ಚಿತ್ರದಲ್ಲಿ ಕಾರ್ತಿ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಪೊಲೀಸ್ ಆಫೀಸರ್ ಆಗಿ ಖಡಕ್ ರೋಲ್‌ನಲ್ಲಿ ಅಬ್ಬರಿಸಿದ್ದರು. ರಾಶಿ ಖನ್ನಾ ನಾಯಕಿಯಾಗಿ ಮಿಂಚಿದ್ದರು. ರಾಜಿಶಾ ವಿಜಯನ್, ಚಂಕಿ ಪಾಂಡೆ, ಲೈಲಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.


Click it and Unblock the Notifications











