83ನೇ ವಯಸ್ಸಿನಲ್ಲಿ ಖ್ಯಾತ ನಿರ್ದೇಶಕನಿಗೆ ಪುತ್ರ ಶೋಕ, ಹೃದಯಾಘಾತದಿಂದ ಕೊನೆಯುಸಿರೆಳೆದ ನಟ..!
ಇವತ್ತು ಇದ್ದಂಗೆ ನಾಳೆ ಇರಲ್ಲ. . ಈಗಿದ್ದಂಗೆ, ಇನ್ನೆರಡು ಸೆಕೆಂಡ್ ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಮನೋಜ್ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.
ಹೌದು, ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರತಿ ರಾಜಾ ಅವರ ಮಗ ಮನೋಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 48ರ ಪ್ರಾಯದಲ್ಲಿಯೇ ಬದುಕಿಗೆ ವಿದಾಯ ಹೇಳಿದ್ದಾರೆ. ಮನೋಜ್ ಅವರ ಈ ಹಠಾತ್ ನಿಧನ ಚಿತ್ರರಂಗಕ್ಕೆ ಆಘಾತಕ್ಕೀಡು ಮಾಡಿದ್ದು ಕಾಲಿವುಡ್‌ನ ಅನೇಕ ಹಿರಿಯ ಮತ್ತು ಕಿರಿಯರು ಮನೋಜ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲಿ ಮಗನನ್ನು ಕಳೆದುಕೊಂಡ ಭಾರತಿ ರಾಜ ಅವರಿಗೆ ಧೈರ್ಯವನ್ನು ತುಂಬುತ್ತಿದ್ದಾರೆ.

ತಂದೆ ಭಾರತಿ ರಾಜ ನಿರ್ದೇಶನದ ತಾಜ್‌ಮಹಲ್ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಮನೋಜ್ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದರು. ಆ ನಂತರ ಅಲ್ಲಿ ಅರ್ಜುನ, ಕಡಲ್ ಪೊಕ್ಕಲ್, ವರುಷಂ ತುಳ್ಳವ ವಸಂತಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡ ಮನೋಜ್ ಮಾನಾಡು, ವಿರುಮಾನ್, ಈಶ್ವರನ್ ಚಿತ್ರಗಳಲ್ಲಿ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಇನ್ನು ಚಿತ್ರರಂಗಕ್ಕೆ ನಾಯಕನಾಗಿ ಕಾಲಿಡುವ ಮುನ್ನ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದ ಮನೋಜ್ 2023ರಲ್ಲಿ ಮಾರ್ಗಳಿ ತಿಂಗಲ್ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದರು. ಮಗನ ಈ ಚಿತ್ರದಲ್ಲಿ ಭಾರತಿ ರಾಜ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸೌತ್ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಸಿನಿಮಾದ ಕುರಿತು ಅಧ್ಯಯನ ಕೂಡ ಮಾಡಿದ್ದ ಮನೋಜ್, ನವೆಂಬರ್ 19 2006ರಲ್ಲಿ ತಮ್ಮ ದೀರ್ಘಕಾಲದ ಸ್ನೇಹಿತೆ ಮತ್ತು ತಮಿಳು ನಟಿಯಾಗಿ ಕೂಡ ಹೆಸರು ಮಾಡಿರುವ ನಂದನಾ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದರು. ಪತ್ನಿಯ ಜೊತೆ ಇಬ್ಬರು ಪುತ್ರಿಯರಾದ ಆರ್ತಿಕಾ ಮತ್ತು ಮತಿವದಾನಿ ಅವರನ್ನು ಮನೋಜ್ ಅಗಲಿದ್ದಾರೆ.


Click it and Unblock the Notifications











