ಮದುವೆ ಆಗುವ ಅಭಿಮಾನಿಗಳಿಗೆ ರಾಘವ ಲಾರೆನ್ಸ್ ವಿಶೇಷ ಉಡುಗೊರೆ: ತಮಿಳು ನಟನ ಮಹತ್ಕಾರ್ಯಕ್ಕೆ ಬಹುಪರಾಕ್
ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ನಟನೆಯ 'ಜಿಗರ್‌ತಾಂಡ ಡಬಲ್ ಎಕ್ಸ್' ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಇದನ್ನು ಮುನ್ನ ಪಿ. ವಾಸು ನಿರ್ದೇಶನದಲ್ಲಿ ಬಂದಿದ್ದ 'ಚಂದ್ರಮುಖಿ'-2 ಸಿನಿಮಾ ಹೀನಾಯವಾಗಿ ಸೋತಿತ್ತು. 'ಜಿಗರ್‌ತಾಂಡ ಡಬಲ್ ಎಕ್ಸ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಅಭಿಮಾನಿಗಳಿಗೆ ನಟ ರಾಘವ ಲಾರೆನ್ಸ್ ವಿಶೇಷ ಉಡುಗೊರೆ ಘೋಷಿಸಿದ್ದಾರೆ.
'ಜಿಗರ್‌ತಾಂಡ ಡಬಲ್ ಎಕ್ಸ್' ಚಿತ್ರದಲ್ಲಿ ಎಸ್. ಜೆ ಸೂರ್ಯ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಓಟಿಟಿಯಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುವ ಸುಳಿವು ಸಿಗುತ್ತಿದೆ. ಡಿಸೆಂಬರ್ 8 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾ ಸಕ್ಸಸ್ ಮೀಟ್ ನಡೀತು. ಈ ವೇಳೆ ತಮ್ಮ ಅಭಿಮಾನಿಗಳ ಬಗ್ಗೆ ಲಾಘವ ಲಾರೆನ್ಸ್ ಮಾತನಾಡಿದ್ದಾರೆ.

ಕೆಲ ದಿನಗಳ ಹಿಂದೆ ಲಾರೆನ್ಸ್ ಅಭಿಮಾನಿಗಳನ್ನು ಉದ್ದೇಶಿಸಿ ಒಂದು ಮನವಿ ಮಾಡಿದ್ದರು. ನನ್ನ ಸಿನಿಮಾ ಕಾರ್ಯಕ್ರಮಗಳಿಗೆ ನೀವು ದೂರದ ಊರಿಗಳಿಂದ ಬರುವುದು ಬೇಡ ಎಂದಿದ್ದರು. ಅದಕ್ಕೆ ಕಾರಣವನ್ನು ವಿವರಿಸಿದ್ದರು. 'ಜಿಗರ್‌ತಾಂಡ ಡಬಲ್ ಎಕ್ಸ್' ಸಿನಿಮಾ ಸಕ್ಸಸ್ ಮೀಟ್‌ನಲ್ಲೂ ಈ ವಿಚಾರ ನೆನಪಿಸಿಕೊಂಡರು. "ನಾನು ನನ್ನ ಅಭಿಮಾನಿಗಳಿಗೆ ಬರಬೇಡಿ ಎಂದು ಹೇಳಿದ್ದು ಯಾವುದೇ ಬೇರೆ ಉದ್ದೇಶದಿಂದ ಅಲ್ಲ. ನೀವು ನನ್ನನ್ನು ಪದೇ ಪದೆ ನೋಡೋಕೆ ಬರಬೇಡಿ. ನಾನೇ ನಿಮ್ಮನ್ನು ನೋಡೋಕೆ ಬರ್ತೀನಿ. ನೀವು ಬರುವಾಗ ಅಪಘಾತವಾಗುವುದು, ಹಣ ವೆಚ್ಚ ಮಾಡುವುದು ಬೇಡ ಎಂದಿದ್ದೆ. ನೀವು ನನ್ನ ನೋಡಲು ಬರುವುದಕ್ಕೆ ಸಾಲ ಮಾಡಿ ಬಟ್ಟೆ ಹಾಕ್ಕೊಂಡು ಬರೋದು, ನೀವು ಸಾಲದ್ದಕ್ಕೆ ಸ್ನೇಹಿತರನ್ನು ಕರ್ಕೊಂಡು ಬರೋದು, ಅಪಘಾತವಾಗಿ ಸಮಸ್ಯೆ ಆಗುವುದು ಬೇಡ ಅಂತ. ನಾನು ಹೀಗೆ ಹೇಳಿದ್ದನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ದಯವಿಟ್ಟು ತಪ್ಪಾಗಿ ಭಾವಿಸಬೇಡಿ. ನಾನೇ ಪ್ರತಿ ಊರಿಗೂ ಬರ್ತೀನಿ. ನನಗೆ ಇಷ್ಟು ದೊಡ್ಡ ಗೆಲುವು ಕೊಟ್ಟ ಅಭಿಮಾನಿಗಳಿಗೆ ಧನ್ಯವಾದ."
"ನಾನು ಪ್ರತಿಯೊಂದು ಸಿನಿಮಾ ಸಮಯದಲ್ಲಿ ಅಡ್ವಾನ್ಸ್ ಪಡೆಯುವಾಗ ಒಂದು ಧರ್ಮಕಾರ್ಯ ಮಾಡ್ಬೇಕು ಅಂತ ಒಂದಷ್ಟು ಹಣ ಎತ್ತಿಡುತ್ತೇನೆ. ಈ ಹಿಂದೆ ಕೂಡ ನಾನು ಸಹಾಯ ಮಾಡಿದ್ದೇನೆ. ಚಂದ್ರಮುಖಿ-2 ಸಿನಿಮಾ ಸಮಯದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದೆ. ಈಗ 'ಜಿಗರ್‌ತಾಂಡ ಡಬಲ್ ಎಕ್ಸ್' ಚಿತ್ರದ ಸಮಯದಲ್ಲಿ ಏನು ಮಾಡಿಲ್ಲ"
"ಒಮ್ಮೆ ಒಂದು ಹುಡುಗ(ಅಭಿಮಾನಿ) ನನ್ನ ಬಂದು ಭೇಟಿ ಮಾಡಿದ. ದೊಡ್ಡ ಲಗ್ನಪತ್ರಿಕೆ ಹಿಡಿದು ತಂದಿದ್ದ, ಪತ್ರಿಕೆ ಕೊಟ್ಟು ಅಣ್ಣ ನೀವು ಮದುವೆಗೆ ಖಂಡಿತ ಬರಬೇಕು ಎಂದ. ಎಲ್ಲಿ ಮದುವೆ, ಯಾವ ಕಲ್ಯಾಣ ಮಂಟಪ ಎಂದೆ. ಮನೆಯಲ್ಲಿ ಅಣ್ಣ, ಕಲ್ಯಾಣ ಮಂಟಪದಲ್ಲಿ ಮಾಡ್ಕೊಳ್ಳೊಕೆ ಹಣವಿಲ್ಲ. ನನ್ನ ಸ್ನೇಹಿತರ ಪ್ರಿಂಟಿಂಗ್ ಪ್ರೆಸ್ ಇತ್ತು ಅವ್ನು ಪತ್ರಿಕೆ ಪ್ರಿಂಟ್ ಮಾಡಿ ಕೊಟ್ಟ"
"ದೇವಸ್ಥಾನದಲ್ಲಿ ಮದುವೆ ಆದ್ರು ಕೂಡ ಒಂದಷ್ಟು ಹಣವನ್ನು ಕೊಡಬೇಕು. ಹಣವಿಲ್ಲ. ಮನೆಯಲ್ಲೇ ಮದುವೆ ಬರ್ಬೇಕು ಎಂದ. ಪತ್ರಿಕೆ ಮಾತ್ರ ದೊಡ್ಡದಾಗಿತ್ತು. ಅವತ್ತು ಆ ಹುಡುಗನ ಮುಖದಲ್ಲಿ ಬೇಸರವಿತ್ತು. ಅದೇ ಕಾರಣಕ್ಕೆ ಒಂದು ನಿರ್ಧಾರ ಕೈಗೊಂಡಿದ್ದೀನಿ. ನಮ್ಮ ತಾಯಿಯ ಹೆಸರಿನಲ್ಲಿ ಒಂದು ಕಲ್ಯಾಣ ಮಂಟಪ ಕಟ್ಟಿಸುತ್ತೇನೆ. ನನ್ನ ಅಭಿಮಾನಿಗಳು ಅಲ್ಲಿ ಉಚಿತವಾಗಿ ಮದುವೆ ಮಾಡಿಕೊಳ್ಳಬಹುದು. ಅದಕ್ಕೆ ನೀರಿನ ಬಿಲ್ ಕಟ್ಟಿದರೆ ಸಾಕು."
"ಇನ್ನೊಂದು ವರ್ಷದಲ್ಲಿ ಕಲ್ಯಾಣ ಮಂಟಪ ಉದ್ಘಾಟನೆ ಆಗಲಿದೆ. ಜಾಗ ಕೂಡ ನೋಡಿದ್ದೀನಿ. ಇದು ನಾನು ನನ್ನ ಅಭಿಮಾನಿಗಳಿಗೆ ಮಾಡುತ್ತಿರುವುದು. ಇದೇ ರೀತಿ ನಾನು ನನ್ನ ಅಭಿಮಾನಿಗಳ ಬಳಿಗೆ ಬರ್ತೀನಿ. ನೀವು ನನ್ನ ಬಳಿ ಬರಬೇಕು ಎಂದುಕೊಂಡರೆ ನಾನು ದೂರ ಹೋಗುತ್ತೇನೆ. ನೀವು ನನ್ನನ್ನು ಬದುಕಿಸುತ್ತಿರುವ ದೇವರು. ದೇವರನ್ನು ನೋಡಲು ನಾನು ಬರಬೇಕು. ದೇವರು ನನ್ನ ಬಳಿ ಬರಬಾರದು."
"ನಮ್ಮ ತಾಯಿ ಹೆಸರಿನಲ್ಲಿ ಕಣ್ಮಣಿ ಕಲ್ಯಾಣ ಮಂಟಪ ಕಟ್ಟಿಸುತ್ತೇನೆ. ಅಲ್ಲಿ ನೀವು ಉಚಿತವಾಗಿ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬಹುದು. ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವಂತೆ ನನ್ನ ಬೆಂಬಲಕ್ಕೆ ನಿಂತಿರುವ ಅಭಿಮಾನಿಗಳು ಮಾಡಿಕೊಂಡು ಹೇಳಿಕೊಳ್ಳುವಂತೆ ಆ ಕಲ್ಯಾಣ ಮಂಟಪ ಇರುತ್ತದೆ" ಎಂದು ಹೇಳಿದ್ದಾರೆ. ಲಾರೆನ್ಸ್ ಈ ಹಿಂದೆ ಕೂಡ ತಮ್ಮ ಸಮಾಜಮುಖಿ ಕೆಲಸಗಳಿಂದ ಅಭಿಮಾನಿಗಳ ಮನಗೆದ್ದಿದ್ದರು. ಈಗ ಮತ್ತೊಮ್ಮೆ ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆ.


Click it and Unblock the Notifications











