Vijayakanth: ಹಿರಿಯ ನಟ, ಡಿಎಂಡಿಕೆ ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್ ಆಸ್ಪತ್ರೆಗೆ ದಾಖಲು, ಆರೋಗ್ಯ ಸಚಿವ ಹೇಳಿದ್ದೇನು?
ಕಳೆದೆರಡು ದಿನಗಳಿಂದ ತಮಿಳುನಾಡಿನ ಪ್ರಸಿದ್ಧ ನಟ ಮತ್ತು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ಕ್ಯಾಪ್ಟನ್ ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ರಾಜ್ಯದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಮಾಧ್ಯಮಗಳು ಅವರ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದೆ ಎಂದು ವರದಿ ಮಾಡುತ್ತಿದೆ. ಇದರ ಬೆನ್ನಲ್ಲೆ ವಿಜಯಕಾಂತ್ ಅವರ ಪಕ್ಷ ಮತ್ತು ತಮಿಳುನಾಡು ಆರೋಗ್ಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಶನಿವಾರದಂದು (ನವೆಂಬರ್ 18 ) ರೋಟಿನ್ ಚೆಕ್‌ಅಪ್‌ಗಾಗಿ ಕ್ಯಾಪ್ಟನ್ ವಿಜಯಕಾಂತ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ಮನೆಗೆ ಮರಳುವ ಸಾಧ್ಯತೆಯಿದೆ ಎಂದು ಅವರ ಪಕ್ಷ ಸೋಮವಾರ ತಿಳಿಸಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಒಮ್ಮೆ ವಿರೋಧ ಪಕ್ಷದ ನಾಯಕರಾಗಿ (ಎಲ್‌ಒಪಿ) ಸೇವೆ ಸಲ್ಲಿಸಿದ್ದ 71 ವರ್ಷದ ವಿಜಯಕಾಂತ್ ಅವರು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದಾರೆ ಎಂದಿದೆ.

ಮಾಧ್ಯಮ ವರದಿಗಳನ್ನು ನಂಬಬೇಡಿ ಎಂದ ವಿಜಯಕಾಂತ್ ಪಕ್ಷ!
ಇನ್ನು, ಮಾಧ್ಯಮಗಳು ವಿಜಯಕಾಂತ್ ಞಾರೋಗ್ಯದ ಬ್ಗಗೆ ತಪ್ಪು ಮಾಹಿತಿ ಹರಡುತ್ತಿವೆ ಎಂದು ಕಿಡಿ ಕಾರಿರುವ ಡಿಎಂಡಿಕೆ, ವಿಜಯಕಾಂತ್ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದು ಹೇಳಿರುವ ಕೆಲವು ಮಾಧ್ಯಮ ವರದಿಗಳನ್ನು ಡಿಎಂಡಿಕೆ ತಳ್ಳಿಹಾಕಿದೆ. "ಇದು ಸಂಪೂರ್ಣ ಸುಳ್ಳು ಸುದ್ದಿ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾವು ಜನರಲ್ಲಿ ಮನಚಿ ಮಾಡುತ್ತೇವೆ" ಎಂದು ಪಕ್ಷವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
''ಡಿಎಂಡಿಕೆ ಅಧ್ಯಕ್ಷ ವಿಜಯಕಾಂತ್ ಅವರು ನವೆಂಬರ್ 18 ರಂದು ದಿನನಿತ್ಯದ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದೆರೆಡು ದಿನದಲ್ಲಿ ಮನೆಗೆ ಮರಳುವ ಸಾಧ್ಯತೆ ಇದೆ. ಅವರಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ ಎಂಬ ಟಿವಿ ವಾಹಿನಿಗಳ ಸುಳ್ಳು ಸುದ್ದಿಯನ್ನು ಯಾರೂ ನಂಬಬಾರದು. ಇದು ಸಂಪೂರ್ಣ ಸುಳ್ಳು ಸುದ್ದಿ, ಯಾವುದೇ ವದಂತಿಗಳನ್ನು ನಂಬಬೇಡಿ. ಇನ್ನು ಮುಂದೆ ಸುಳ್ಳು ಸುದ್ದಿ ಹರಡದಂತೆ ನಾವು ವಿನಂತಿಸುತ್ತೇವೆ" ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಿಜಯಕಾಂತ್ ಆರೋಗ್ಯ ಸ್ಥಿರವಾಗಿದೆ: ತಮಿಳುನಾಡು ಆರೋಗ್ಯ ಸಚಿವ
ಇನ್ನು, ಡಿಎಂಡಿಕೆ ನಾಯಕ ವಿಜಯಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ. "ಕಳೆದ ಎರಡು ದಿನಗಳಿಂದ, ಅವರು ಕೆಮ್ಮಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾನು ಒಂದು ಗಂಟೆಯ ಹಿಂದೆ ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದೆ. ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತಾದರೂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ನನಗೆ ತಿಳಿಸಿದ್ದಾರೆ. ಅವರು ಕಿಡ್ನಿ ಕಸಿ ಮಾಡಿಸಿಕೊಂಡಿದ್ದರಿಂದ ಈ ಹಿಂದೆ ಚಿಕಿತ್ಸೆ ನೀಡಿದ ವೈದ್ಯರೇ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದಾರೆ" ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ ವಿಜಯಕಾಂತ್ ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆವೇಶಭರಿತ ಭಾಷಣಗಳಿಗೆ ಹೆಸರಾದ ವಿಜಯಕಾಂತ್ ಅವರು ಕೆಲವು ವರ್ಷಗಳ ಹಿಂದೆ ತಮ್ಮಗೆ ಪದೇ ಪದೇ ಅನಾರೋಗ್ಯ ಉಂಟಾಗುತ್ತಿದ್ದ ಕಾರಣ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಲು ಕಾರಣವಾಯಿತು. ಅವರ ಪಕ್ಷವು 2006 ರಲ್ಲಿ ಮೊದಲ ಬಾರಿಗೆ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆದ್ದುಕೊಂಡಿತು. ಮುಂದಿನ ಚುನಾವಣೆಯಲ್ಲಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು 29 ಸ್ಥಾನಗಳನ್ನು ಗಳಿಸಿತು. ವಿಜಯಕಾಂತ್ 2011 ರಿಂದ 2016ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು.


Click it and Unblock the Notifications











