ಕೇವಲ 21 ದಿನದಲ್ಲಿ ಹೇಗಿದ್ದ ನಟ ಹೇಗಾದ್ರು? ವ್ಯಾಯಾಮ ಇಲ್ಲದೇ ಇದು ಹೇಗೆ ಸಾಧ್ಯ?
ಹೆಚ್ಚಾದ ದೇಹದ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ದೇಶ ವಿದೇಶದಲ್ಲಿ ಬೊಜ್ಜು ದೇಹ ಎನ್ನುವುದು ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಇದನ್ನು ನಿರ್ಲಕ್ಷಿಸಿದರೆ ಅಪಾರ ಕಟ್ಟಿಟ್ಟ ಬುತ್ತಿ. ಆದರೆ ಅಷ್ಟು ಸುಲಭವಾಗಿ ದೇಹದ ತೂಕ ಅಥವಾ ಬೊಚ್ಚು ಕರಗಿಸಲು ಸಾಧ್ಯವಿಲ್ಲ. ಕೆಲವರು ನಾನಾ ರೀತಿಯ ಡಯೆಟ್ ಮಾಡಿ ವ್ಯಾಯಾಮ ಮಾಡಿ ಪ್ರತಿಫಲ ಸಿಗದೇ ಸೋತು ಸುಮ್ಮನಾಗಿದ್ದಾರೆ.
ಚಿತ್ರರಂಗದಲ್ಲಿ ಕೂಡ ಇದು ದೊಡ್ಡ ಸಮಸ್ಯೆಯೇ ಸರಿ. ಹೇಳಿ ಕೇಳಿ ಸಿನಿಮಾ ರಂಗೀನ್ ಲೋಕ. ಇಲ್ಲಿ ಗ್ಲಾಮರ್ ಬಹಳ ಮುಖ್ಯ. ಅದು ನಟ ಆಗಿರಲಿ. ನಟಿಯಾಗಿರಲಿ. ತೆರೆಮೇಲೆ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಎಷ್ಟೇ ಜನ ನಟ, ನಟಿಯರು ದೇಹದ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ಚಿತ್ರರಂಗದಿಂದ ದೂರಾಗಿರುವ ಉದಾಹರಣೆಯಿದೆ. ಅದೇ ಕಾರಣಕ್ಕೆ ನಟ, ನಟಿಯರು ಡಯೆಟ್, ಜಿಮ್ ಅಂತ ಬಹಳ ಕಸರತ್ತು ನಡೆಸುತ್ತಿರುತ್ತಾರೆ.

'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ತೂಕ ಇಳಿಸುವ ಕಸರತ್ತು ಮಾಡಿದ್ದರು ನಟಿ ಅನುಷ್ಕಾ ಶೆಟ್ಟಿ. ಆದರೆ ಆಕೆಗೆ ಮೊದಲಿನ ಪಿಜಿಕ್ ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಆಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎನ್ನುವವರು ಇದ್ದಾರೆ. ತೂಕ ಇಳಿಸಲು ಯಾವುದೇ ಡಯೆಟ್, ವ್ಯಾಯಾಮ ಎಷ್ಟು ದಿನದಲ್ಲಿ ಫಲಿತಾಂಶ ಕೊಡುತ್ತದೆ? ಎಷ್ಟು ದಿನ ಪಾಲಿಸಬೇಕು? ಎನ್ನುವ ಪ್ರಶ್ನೆ ಕೆಲವರದ್ದು.
ಕೇವಲ 21 ದಿನದಲ್ಲಿ ನಟ ಮಾಧವನ್ ತಮ್ಮ ದೇಹದ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ವ್ಯಾಯಾಮ, ಸರ್ಜರಿ, ಯಾವುದೇ ಪೌಡರ್ ಸೇವಿಸದೇ ಬರೀ ಡಯೆಟ್‌ನಿಂದಲೇ ತಾವು ತೂಕ ಕಳೆದುಕೊಂಡಿದ್ದಾರೆ ವಿವರಿಸಿದ್ದಾರೆ. ಎಲ್ಲರೂ ಈ ರೀತಿ ತೂಕ ಇಳಿಸಬಹುದು ಎಂದು ಮಾಧವನ್ ಹೇಳಿದ್ದಾರೆ. ಮಾಧವನ್ ಡಯೆಟ್ ಟಿಪ್ಸ್ ಏನು ಎನ್ನುವುದನ್ನು ಮುಂದೆ ಓದಿ.
ಅಷ್ಟಕ್ಕೂ ಕೇವಲ 21 ದಿನದಲ್ಲಿ ತಾವು ತೂಕ ಇಳಿಸಿದ್ದು ಹೇಗೆ ಎನ್ನುವುದನ್ನು ಬಹುಭಾಷಾ ನಟ ಮಾಧವನ್ ವಿವರಿಸಿದ್ದಾರೆ. ಎರಡು ವರ್ಷದ ಹಿಂದೆ 'ರಾಕೆಟ್ರೀ; ದಿ ನಂಬಿ ಎಫೆಕ್ಟ್' ಎನ್ನುವ ಚಿತ್ರವನ್ನು ಮಾಧವನ್ ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದರು. ಈ ಚಿತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡು ನಟಿಸಿದ್ದರು. ಬಳಿಕ ದಿಢೀರನೆ ತೂಕ ಇಳಿಸಿಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ಮಾಧವನ್ "ನಾನು ತೂಕ ಹೆಚ್ಚಿಸಿಕೊಳ್ಳಲು 3 ತಿಂಗಳ ಕಾಲ ಇಷ್ಟಪಟ್ಟಿದ್ದೆನ್ನೆಲ್ಲಾ ತಿಂದೆ, ಕೇಕ್ ತಿಂದು ತಿಂದು ಬೇಗ ದಪ್ಪ ಆದೆ. ಆ ಸಮಯದಲ್ಲಿ ಮುಂದೆ ಬಾಗುವುದಕ್ಕೂ ಕಷ್ಟವಾಗುತ್ತಿತ್ತು. ಬಳಿಕ ಶೂಟಿಂಗ್ ಮುಗಿದು ನಾನು ಮತ್ತೆ ತೂಕ ಇಳಿಸಲು ಮುಂದಾಗಿದ್ದೆ. ಬಳಿಕ ನನಗೆ ಏನು ಬೇಕೋ ಅದು ಮಾತ್ರ ಸೇವಿಸಲು ಆರಂಭಿಸಿದೆ"
"ಯಾವುದೇ ವ್ಯಾಯಾಮ, ರನ್ನಿಂಗ್, ಸರ್ಜರಿ, ಧ್ಯಾನ ಏನು ಇಲ್ಲದೇ 21 ದಿನಕ್ಕೆ ಹೀಗಿದ್ದ ನಾನು ಹೀಗಾದೆ ಎಂದು ತಮ್ಮ ಎರಡೂ ಫೋಟೊಗಳನ್ನು ತೋರಿಸಿ ಅಚ್ಚರಿ ಮೂಡಿಸಿದ್ದಾರೆ. ಎಲ್ಲವೂ ಊಟದಿಂದಲೇ. ಅಂದರೆ ಡಯಟ್. ನಾನು ಮಾತನಾಡುವುದು ನಿಮಗೆ ಡಾಕ್ಟರ್ ಮಾತನಾಡುವಂತೆ ಅನಿಸಬಹುದು. ಇದೆಲ್ಲಾ ಸೈನ್ಸ್" ಎಂದು ಮಾಧವನ್ ವಿವರಿಸಿದ್ದಾರೆ. ಮಾಧವನ್ ತಾವು ಮಾತನಾಡಿರುವ ವೀಡಿಯೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವರು 21 ದಿನಕ್ಕೆ ಇದೆಲ್ಲಾ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ವೊಂದಕ್ಕೆ ರಿಪ್ಲೇ ಮಾಡಿರುವ ಮಾಧವನ್ ತಮ್ಮ ಡಯೆಟ್ ಬಗ್ಗೆ ಹೀಗೆ ಹೇಳಿದ್ದಾರೆ. "ಇಂಟರ್‌ಮೀಡಿಯೇಟ್ ಫಾಸ್ಟಿಂಗ್. ಊಟವನ್ನು ಚೆನ್ನಾಗಿ 45ರಿಂದ 60 ಬಾರಿ ಅಗಿಯುವುದು(ನಿಮ್ಮ ಊಟವನ್ನು ಕುಡಿಯಿರಿ, ನೀರನ್ನು ಅಗಿಯಿರಿ) ಸಂಜೆ 6.45ಕ್ಕೆ ಕೊನೆಯ ಊಟ.(ಮಧ್ಯಾಹ್ನ 3 ಗಂಟೆವರೆಗೆ ಬೇಯಿಸಿದ ಆಹಾರ ಮಾತ್ರ. ಯಾವುದೇ ಹಸಿ ಆಹಾರ ಬೇಡ) ಬೆಳಗಿನ ಜಾವ ಲಾಂಗ್ ವಾಕ್, ರಾತ್ರಿ ಒಳ್ಳೆಯ ನಿದ್ದೆ.(ಮಲಗಲು ಹೋಗುವ 90 ನಿಮಿಷಕ್ಕೂ ಮುನ್ನ ಸ್ಕ್ರೀನ್‌ಟೈಮ್ ಬೇಡ)
"ಹೆಚ್ಚು ದ್ರವಾಹಾರ. ನಿಮ್ಮ ದೇಹದಿಂದ ಸುಲಭವಾಗಿ ಚಯಾಪಚಯಗೊಳ್ಳುವ ಮತ್ತು ಆರೋಗ್ಯಕರ ಸಾಕಷ್ಟು ಹಸಿರು ತರಕಾರಿಗಳು ಮತ್ತು ಆಹಾರ. ಪ್ರೋಸೆಸ್ಡ್ ಫುಲ್ ಬೇಡವೇ ಬೇಡ" ಎಂದು ನಟ ಮಾಧವನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಇದು ಸಾಧ್ಯ ಎಂದರೆ ಮತ್ತೆ ಕೆಲವರು 21 ದಿನದಲ್ಲಿ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.


Click it and Unblock the Notifications











