ತಮಿಳು ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅಪ್ಪುವನ್ನು ನೆನದ ನಾಗಾರ್ಜುನ
ಅಪ್ಪುವನ್ನು ಅಭಿಮಾನಿಗಳಿಂದ ದೂರ ಮಾಡಿದ ಆ ಕರಾಳ ದಿನ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಬರಲಿದೆ. ಅಪ್ಪು ದೈಹಿಕವಾಗಿ ಅಗಲಿದರೂ ಅವರ ನೆನಪು ಎಳ್ಳಷ್ಟೂ ಅಭಿಮಾನಿಗಳಿಗೆ ಕಡಿಮೆ ಆಗಿಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ ಅಪ್ಪುವನ್ನು ನೆನಪು ಮಾಡಿಕೊಳ್ಳುವವರು ದೇಶದ ಎಲ್ಲೆಡೆ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ ನಟಿಯರು ಸಹ ತಮ್ಮ ಸಿನಿಮಾಗಳ ಬಿಡುಗಡೆ, ಯಶಸ್ಸಿನ ಖುಷಿಯ ಸಂದರ್ಭದಲ್ಲಿಯೂ ಪುನೀತ್ ರಾಜ್‌ಕುಮಾರ್ ಅನ್ನು ಸ್ಮರಿಸುತ್ತಿದ್ದಾರೆ.
ತಮಿಳಿನ ಖ್ಯಾತ ನಟ ಕಾರ್ತಿಯ ಹೊಸ ಸಿನಿಮಾ 'ಸರ್ದಾರ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟ ನಾಗಾರ್ಜುನ, ಪುನೀತ್ ರಾಜ್‌ಕುಮಾರ್ ಅವರನ್ನು ವೇದಿಕೆಯ ಮೇಲೆ ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಬಗ್ಗೆ ನಾಗಾರ್ಜುನ್ ಮಾತು
ಕಾರ್ತಿಯ 'ಸರ್ದಾರ್' ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಾಗಾರ್ಜುನ ನಟ ಕಾರ್ತಿ ಬಗ್ಗೆ ಮಾತನಾಡುತ್ತಾ, ''ಕಾರ್ತಿಯ ಅಣ್ಣ ಸೂರ್ಯ ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಹೀಗೆ ಅಣ್ಣ ಸೂಪರ್ ಸ್ಟಾರ್ ಆಗಿದ್ದು, ಅಣ್ಣನ ನೆರಳಿನಿಂದ ಹೊರಬಂದು ಸ್ಟಾರ್ ಆದವರು ಕೆಲವರೇ, ಮೆಗಾಸ್ಟಾರ್ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಹಾಗೂ ಕರ್ನಾಟಕದಲ್ಲಿ ಶಿವಣ್ಣ ಸಹೋದರ ಪುನೀತ್ ರಾಜ್‌ಕುಮಾರ್'' ಎಂದರು ನಾಗಾರ್ಜುನ.

ದೊಡ್ಮನೆಯೊಂದಿಗೆ ಆಪ್ತ ಬಂಧ
ದೊಡ್ಮನೆ ಕುಟುಂಬದೊಟ್ಟಿಗೆ ಅಕ್ಕಿನೇನಿ ಕುಟುಂಬಕ್ಕೆ ಬಹಳ ಹಳೆಯ ಅನುಬಂಧ. ನಾಗಾರ್ಜುನ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಗೆಳೆತನ ಹೊಂದಿದ್ದರು. ನಾಗಾರ್ಜುನ ಅವರು ಆ ಗೆಳೆತನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶಿವರಾಜ್ ಕುಮಾರ್ ಅವರ ಆಪ್ತ ಗೆಳೆಯರಲ್ಲಿ ನಾಗಾರ್ಜುನ ಸಹ ಒಬ್ಬರು. ಪುನೀತ್ ನಿಧನದ ಬಳಿಕ ನಾಗಾರ್ಜುನ ಅವರು ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತು
ಆ ಸಮಯದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ನಾಗಾರ್ಜುನ, ''ಪುನೀತ್ ರಾಜ್‌ಕುಮಾರ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ಕಾಲವಾಗಿದ್ದಾರೆ ಎಂದರೆ ನಂಬಲೂ ಸಹ ನನಗೆ ಸಾಧ್ಯವಾಗುತ್ತಿಲ್ಲ. ಅವರೊಬ್ಬ ಅದ್ಭುತವಾದ ವ್ಯಕ್ತಿ. ಅವರ ಬಗ್ಗೆಯೂ ಋಣಾತ್ಮಕವಾಗಿ ಮಾತನಾಡಲು ಯಾರ ಬಳಿಯೂ ಒಂದು ಪದ ಸಹ ಇಲ್ಲ. ಎಷ್ಟೋ ಮಕ್ಕಳಿಗೆ ಶಿಕ್ಷಣ ಒದಗಿಸಿದ್ದರು, ಹಲವರಿಗೆ ನೆರವು ನೀಡಿದ್ದರು. ಅಂಥಹಾ ವ್ಯಕ್ತಿ ಅಗಲಿರುವುದು ತುಂಬಲಾರದ ನಷ್ಟ'' ಎಂದಿದ್ದರು.

ಬಿಗ್‌ಬಾಸ್ ನಿರೂಪಣೆ ಮಾಡುತ್ತಿರುವ ನಾಗಾರ್ಜುನ
ನಾಗಾರ್ಜುನ ನಟನೆಯ 'ದಿ ಗೋಸ್ಟ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ನಾಗಾರ್ಜುನ ಪ್ರಸ್ತುತ ತೆಲುಗು ಬಿಗ್‌ಬಾಸ್ ಸಹ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಕಾರ್ತಿ ನಟನೆಯ 'ಸರ್ದಾರ್' ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾರ್ತಿ ನಟಿಸಿದ್ದಾರೆ. ರಾಶಿ ಖನ್ನ ನಾಯಕಿಯಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾ 'ಇರುಂಬು ತಿರಯ್' ನಿರ್ದೇಶಿಸಿದ್ದ ಪಿ.ಎಸ್.ಮಿತ್ರನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











