ಚುನಾವಣೆಯಲ್ಲಿ ಪತ್ನಿ ಗೆಲುವಿಗಾಗಿ ಉರುಳು ಸೇವೆ ಮಾಡಿದ್ದ ಖ್ಯಾತ ನಟ; ಆದರೂ ಆಕೆ ಗೆಲ್ಲಲಿಲ್ಲ
ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಟ್ಟು 543 ಕ್ಷೇತ್ರ ಕ್ಷೇತ್ರಗಳಲ್ಲಿ ಯಾರು ಗೆದ್ದರು? ಯಾರು ಸೋತರು? ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲವೆಡೆ ಅಚ್ಚರಿಯ ಫಲಿತಾಂಶ ಹೊರ ಬಂದಿದೆ. ಗೆಲ್ಲುತ್ತಾರೆ ಎಂದುಕೊಂಡವರು ಸೋತಿದ್ದರೆ, ಕೆಲವರು ಮಾತ್ರ ನಿರೀಕ್ಷೆ ಮೀರಿ ಮತಗಳನ್ನು ಗಳಿಸಿದ್ದಾರೆ.
ಸಾಕಷ್ಟು ಸಿನಿಮಾ ತಾರೆಯರು ಕೂಡ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ ಕೆಲವರಿಗೆ ಮತದಾರರ ಆಶೀರ್ವಾದ ಸಿಕ್ಕಿದೆ. ಮತ್ತೆ ಕೆಲವರು ನಿರಾಸೆಗೊಂಡಿದ್ದಾರೆ. ಕರ್ನಾಟಕದಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಿ ಗೀತಾ ಶಿವರಾಜ್‌ಕುಮಾರ್ ಸೋಲುಂಡಿದ್ದಾರೆ. ನಟ ದರ್ಶನ್ ಪ್ರಚಾರ ಮಾಡಿದರೂ ಮಂಡ್ಯದಲ್ಲಿ ಸ್ಟಾರ್ ಚಂದ್ರು ಗೆಲ್ಲೋಕೆ ಸಾಧ್ಯವಾಗಲಿಲ್ಲ. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಗೆದ್ದು ಕೇರಳದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ.

ಆಂಧ್ರ ವಿಧಾನಸಬೆ ಚುನಾವಣೆಯಲ್ಲಿ ಪವನ್ ಕಲ್ಯಾಣ್, ಬಾಲಕೃಷ್ಣ ಗೆಲುವಿನ ನಗೆ ಬೀರಿದ್ದಾರೆ. ಆದರೆ ನಟಿ ರೋಜಾ ಸೋಲುಂಡಿದ್ದಾರೆ. ಇನ್ನುಳಿದಂತೆ ಕಂಗನಾ ರಾಣಾವತ್, ಹೇಮಾ ಮಾಲಿನಿ, ಅರುಣ್ ಗೋವಿಲ್, ಶತ್ರುಜ್ಞ ಸಿನ್ಹಾ ಸೇರಿದಂತೆ ಕೆಲವರು ಗೆದ್ದಿದ್ದಾರೆ. ತಮಿಳುನಾಡಿನಲ್ಲಿ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಹೀನಾಯ ಸೋಲುಂಡಿದ್ದಾರೆ. ರಾಧಿಕಾ ಹಾಗೂ ಪತಿ ಶರತ್‌ಕುಮಾರ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ತಮಿಳುನಾಡಿದ ವಿರುಧು ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಧಿಕಾ ಶರತ್ ಕುಮಾರ್ ಸ್ಪರ್ಧಿಸಿದ್ದರು. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಒಂದಾದರೂ ಕ್ಷೇತ್ರ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಿತ್ತು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೋಯಂಬತ್ತೂರು ಕ್ಷೇತ್ರದಲ್ಲಿ ಗೆಲುವುದು ಗ್ಯಾರೆಂಟಿ ಎನ್ನಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಹುಟ್ಟುಹಬ್ಬದ ದಿನವೇ ಅವರಿಗೆ ಸೋಲಿನ ಕಹಿ ಎದುರಾಗಿದೆ.
ಇನ್ನು ಸೋಮವಾರವಷ್ಟೆ ನಟ ಶರತ್‌ಕುಮಾರ್ ಹಾಗೂ ರಾಧಿಕಾ ದಂಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದರು. ನರೇಂದ್ರ ಮೋದಿ ಮತ್ತೆ ಗೆದ್ದು ಪ್ರಧಾನಿ ಆಗಬೇಕು, ಜೊತೆಗೆ ತಮ್ಮ ಪತ್ನಿ ರಾಧಿಕಾ ಗೆದ್ದು ಸಂಸದೆ ಆಗಬೇಕು ಎಂದು ಶರತ್‌ಕುಮಾರ್ ಆಲಯದಲ್ಲಿ ಉರುಳುಸೇವೆ ಸಹ ಮಾಡಿದ್ದಾರೆ. ಆದರೆ ಪ್ರಾರ್ಥನೆ ಫಲಿಸಲಿಲ್ಲ. ವಿರುಧು ನಗರ ಕ್ಷೇತ್ರದಲ್ಲಿ ರಾಧಿಕಾ ಶರತ್‌ಕುಮಾರ್ 3ನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಸಿನಿಮಾ ನಟರು ಅಂದಮಾತ್ರಕ್ಕೆ ಜನ ಮತ ಹಾಕಲ್ಲ ಎನ್ನುವುದು ಅಲ್ಲಿ ಸಾಬೀತಾಗಿದೆ.
ವಿರುಧು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಣಿಕ್ಯಂ ಟಾಗೂರ್ 385256 ಮತಗಳನ್ನು ಪಡೆದು ಗೆದ್ದಿದ್ದಾರೆ. ಇತ್ತೀಚೆಗೆ ನಿಧನರಾದ ನಟ ವಿಜಯ್‌ಕಾಂತ್ ಪುತ್ರ ಡಿಎಂಡಿಕೆ ಪಕ್ಷದ ಅಭ್ಯರ್ಥಿ ವಿಜಯಪ್ರಭಾಕರನ್ 2ನೇ ಸ್ಥಾನ ಪಡೆದಿದ್ದಾರೆ. ಕೇವಲ 4379 ಮತಗಳಿಂದ ಸೋಲುವಂತಾಗಿದೆ. ಆದರೆ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ 166271 ಮತಗಳನ್ನು ಮಾತ್ರ ಪಡೆದಿದ್ದಾರೆ. ಸೋಲಿನ ಅಂತರ 218985 ಮತಗಳು.
ಒಂದ್ಕಾದಲ್ಲಿ ರಾಧಿಕಾ ಹಾಗೂ ಶರತ್‌ಕುಮಾರ್ ಇಬ್ಬರೂ ನಾಯಕ-ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶರತ್‌ಕುಮಾರ್ ಕನ್ನಡದ 'ಸಾರಥಿ', 'ಮೈನಾ', 'ಸೀತಾರಾಮ ಕಲ್ಯಾಣ', 'ರಾಜಕುಮಾರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪ್ರಚಂಡ ಕುಳ್ಳ', 'ಜೀವನಚಕ್ರ' ಚಿತ್ರಗಳಲ್ಲಿ ರಾಧಿಕಾ ನಾಯಕಿಯಾಗಿ ಮಿಂಚಿದ್ದರು.


Click it and Unblock the Notifications











