ಎಲ್ಲಾ ಕಾಲದಲ್ಲು ಇಂಥವರು ಇರುತ್ತಾರೆ; ಪ್ರಕಾಶ್ ರಾಜ್ ಪಿಸುಮಾತಿನ ವೀಡಿಯೋ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ವಾಗ್ಯುದ್ಧ ಮುಂದುವರೆದಿದೆ. ತಿರುಪತಿ ಲಡ್ಡೂ ಪ್ರಸಾದ ವಿವಾದದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತಿಕ್ಕಾಟ ಶುರುವಾಗಿತ್ತು. ಪವನ್ ಟಾರ್ಗೆಟ್ ಮಾಡಿ ಪದೇ ಪದೇ ಪ್ರಕಾಶ್ ರಾಜ್ ಟ್ವೀಟ್ ಮಾಡುತ್ತಾ ಬರುತ್ತಿದ್ದಾರೆ. ಪವರ್ ಸ್ಟಾರ್ ಕೂಡ ತಿರುಗೇಟು ಕೊಡುತ್ತಿದ್ದಾರೆ.
ಪವನ್ ಅಭಿಮಾನಿಗಳು ಪ್ರಕಾಶ್ ರಾಜ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಅವರ ಪ್ರತಿ ಟ್ವೀಟ್ ಬಗ್ಗೆ ಟೀಕೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರನ್ನು ಹೊಗಳುವ ಭರದಲ್ಲಿ ಪವನ್ ಕಲ್ಯಾಣ್ ಬಗ್ಗೆ ಪ್ರಕಾಶ್ ರಾಜ್ ಪರೋಕ್ಷವಾಗಿ ಟೀಕಿಸಿದ್ದಾರೆ. ಒಬ್ಬ ಡಿಸಿಎಂ ಸನಾತನನದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಡಿಸಿಎಂ ಸಮಾನತೆ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಸಮಾನತೆ ಮುಖ್ಯ ಎಂದು ಪ್ರಕಾಶ್ ರಾಜ್ ಹೇಳಿದ್ದರು.

ತಿರುಪತಿ ಲಡ್ಡೂ ವಿವಾದದ ಹಿನ್ನೆಲೆಯಲ್ಲಿ 'ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ' ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದರು. ಇದನ್ನೇ ಪರೋಕ್ಷವಾಗಿ ಪ್ರಕಾಶ್ ರಾಜ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಇತ್ತೀಚೆಗೆ ಪವನ್ ಕಲ್ಯಾಣ್ ತಮಿಳಿನಲ್ಲಿ ಮಾತನಾಡಿ "ತಮಿಳುನಾಡಿನ ಯುವ ನಾಯಕರೊಬ್ಬರು ಸನಾತನ ಧರ್ಮವನ್ನು ನಾಶ ಮಾಡಬೇಕು ಎಂದಿದ್ದರು, ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ" ಎಂದಿದ್ದರು. ಇದಕ್ಕೆ "ಕಾದು ನೋಡೋಣ" ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾಗಿ ವರದಿಯಾಗಿದೆ. ತಮಿಳುನಾಡು ಡಿಸಿಎಂ ಬಗ್ಗೆ ಪವನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಪರೋಕ್ಷವಾಗಿ ಪವನ್ ಕಲ್ಯಾಣ್ ಬಗ್ಗೆ ಪ್ರಕಾಶ್ ರಾಜ್ ಹೇಳಿಕೆ ನೀಡಿರುವುದು ಭಾರೀ ಸದ್ದು ಮಾಡ್ತಿದೆ. ಇದೀಗ ಪ್ರಕಾಶ್ ರಾಜ್ ಸಂಬಂಧಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಶೇರ್ ಮಾಡಿ ಪವನ್ ಕಲ್ಯಾಣ್ ಅಭಿಮಾನಿಗಳು ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ತಮ್ಮ ಪಕ್ಕದಲ್ಲಿದ್ದವರ ಜೊತೆ ಪಿಸುಮಾತು ಆಡಿರುವುದನ್ನು ಇದರಲ್ಲಿ ನೋಡಬಹುದು.
ಸುದ್ದಿಗೋಷ್ಠಿಯಲ್ಲಿ ಮೈಕ್ ಬಿಟ್ಟು ಪಕ್ಕದಲ್ಲಿ ಇದ್ದ ವ್ಯಕ್ತಿ ಜೊತೆ ಆಫ್ ದ ರೆಕಾರ್ಡ್ ಎನ್ನುವಂತೆ ಪಿಸುಗುಟ್ಟಿರುವುದನ್ನು ನೋಡಬಹುದು. ಚೆನ್ನಾಗಿ ಮಾತನಾಡಿದ್ನಾ? ಸರಿಯಾಗಿ ಮಾತನಾಡ್ದೆ ಅಲ್ವಾ? ಎಂದು ಪ್ರಕಾಶ್ ರಾಜ್ ಕೇಳಿದ್ದು, ಸಿಎಂ ಬಗ್ಗೆ ಚೆನ್ನಾಗಿ ಮಾತಾಡಿ, ಆಡಳಿತ ಚೆನ್ನಾಗಿದೆ ಎಂದು ಹೇಳಿ ಎಂದು ಪಕ್ಕದಲ್ಲಿರುವ ವ್ಯಕ್ತಿ ಹೇಳಿಕೊಟ್ಟಂತೆ ಈ ವೀಡಿಯೋದಲ್ಲಿ ಕಾಣುತ್ತಿದೆ. ಈ ವೀಡಿಯೋ ಶೇರ್ ಮಾಡಿ ಪ್ರಕಾಶ್ ರಾಜ್‌ಗೆ ಒಳ್ಳೆ ಪೇಮೆಂಟ್ ಆಗಿರಬೇಕು ಅದಕ್ಕೆ ತಮಿಳುನಾಡು ಸಿಎಂ, ಡಿಸಿಎಂ ಪರ ಮಾತನಾಡಿತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗ್ತಿದೆ.
ಸದ್ಯ ವೈರಲ್ ಆಗಿರುವ ವೀಡಿಯೋ ಸತ್ಯಾಸತ್ಯತೆ ಗೊತ್ತಾಗಬೇಕಿದೆ. ಇದು ಒರಿಜಿನಲ್ ವೀಡಿಯೋನಾ? ಅಥವಾ ಎಡಿಟ್ ಮಾಡಿರುವ ವೀಡಿಯೋನಾ? ಎನ್ನುವುದು ಗೊತ್ತಾಗಬೇಕಿದೆ. ಸದ್ಯ ಈ ವೀಡಿಯೋ ಬಗ್ಗೆ ನಟ ಜಗ್ಗೇಶ್ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಕಾಲದಲ್ಲು ಇಂಥವರು ಇರುತ್ತಾರೆ, ಇರಬೇಕು, ಆಗಲೆ "ನ್ಯಾಯ ಅನ್ಯಾಯ", "ಒಳ್ಳೆಯದು ಕೆಟ್ಟ್ಟದ್ದು", "ಸತ್ಯ ಅಸತ್ಯ", ಜಗತ್ತಿಗೆ ಅರಿವಾಗೋದು ಎಂದು ಬರೆದುಕೊಂಡಿದ್ದಾರೆ.
ತಮಿಳುನಾಡು ಡಿಸಿಎಂ ಹಾಗೂ ಸಿಎಂ ಜೊತೆಗಿದ್ದ ಫೋಟೊವನ್ನು ಪ್ರಕಾಶ್ ರಾಜ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕಾಮೆಂಟ್ ಮಾಡಿದ್ದ ತಮಿಳು ನಿರ್ಮಾಪಕ ವಿನೋದ್ ಕುಮಾರ್ "ನಿಮ್ಮೊಂದಿಗೆ ಕುಳಿತಿರುವ ಇತರ ಮೂವರು ವ್ಯಕ್ತಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ, ಆದರೆ ನೀವು ಠೇವಣಿ ಕಳೆದುಕೊಂಡಿದ್ದೀರಿ, ಅದೇ ವ್ಯತ್ಯಾಸ. ನನ್ನ ಶೂಟಿಂಗ್ ಸೆಟ್‌ನಲ್ಲಿ ನೀವು 1 ಕೋಟಿ ನಷ್ಟ ಮಾಡಿದ್ದೀರಿ, ನಮಗೆ ಹೇಳದೇ ಕಾರವಾನ್‌ನಿಂದ ನಾಪತ್ತೆ ಆಗಿದ್ದಿರಿ. ಕಾರಣವೇನು?" ಎಂದುವ ಪ್ರಶ್ನಿಸಿದ್ದರು. ಈ ಪೋಸ್ಟ್ ವೈರಲ್ ಆಗಿದೆ.


Click it and Unblock the Notifications











