ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಆಸ್ಪತ್ರೆಗೆ ದಾಖಲು
ನಟ ರಜನೀಕಾಂತ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಕಾರಣದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈನ ಕಾವೇರಿ ಆಸ್ಪತ್ರೆಗೆ ರಜನೀಕಾಂತ್ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಅಭಿಮಾನಿಗಳು ಆತಂಕಗೊಳ್ಳುವುದು ಬೇಡವೆಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ರಜನೀಕಾಂತ್ ಸಾಮಾನ್ಯ ಆರೋಗ್ಯ ತಪಾಸಣೆಗೆಂದು ಕಾವೇರಿ ಆಸ್ಪತ್ರೆಗೆ ಬಂದಿದ್ದಾರೆ. ಅವರ ಆರೋಗ್ಯದಲ್ಲಿ ವ್ಯತ್ಯವವಾಗಿಲ್ಲವೆಂದು ರಜನೀಕಾಂತ್‌ರ ಪ್ರಚಾರ ವ್ಯವಸ್ಥಾಪಕ ರಿಯಾಜ್ ಕೆ ಅಹ್ಮದ್ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ವೇಳೆ ರಜನೀಕಾಂತ್ ಆರೋಗ್ಯದಲ್ಲಿ ವ್ಯತ್ಯಯವುಂಟಾದ ಕಾರಣ ಆಸ್ಪತ್ರೆ ಸೇರಿದ್ದರು. ಎರಡು ದಿನ ಹೈದರಾಬಾದ್‌ನ ಆಸ್ಪತ್ರೆಯಲ್ಲಿದ್ದ ರಜನೀಕಾಂತ್ ಆ ನಂತರ ಕೆಲ ತಿಂಗಳುಕಾಲ ವಿಶ್ರಾಂತಿ ಪಡೆದಿದ್ದರು. ರಾಜಕೀಯ ಪ್ರವೇಶಕ್ಕೆ ಮನಸ್ಸು ಮಾಡಿದ್ದ ರಜನೀಕಾಂತ್ ಆರೋಗ್ಯ ಸಮಸ್ಯೆಯಿಂದಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲವೆಂದು ಘೋಷಿಸಿದರು. ಇದರಿಂದಾಗಿ ರಜನೀಕಾಂತ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ಮಾಡಿದ್ದರು.
ಆ ನಂತರ ಇದೇ ವರ್ಷದ ಜುಲೈ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಸೇರಿದಂತೆ ಕೆಲವು ಚಿಕಿತ್ಸೆಗಳನ್ನು ಪಡೆದು ವಾಪಸ್ಸಾಗಿದ್ದರು. ಅನಾರೋಗ್ಯ ಆಗಾಗ್ಗೆ ಕಾಡುತ್ತಿದ್ದರೂ 'ಅಣ್ಣಾತೆ' ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ ರಜನೀಕಾಂತ್ ಇದೀಗ ಬಿಡುಗಡೆಗೆ ಎದುರು ನೋಡುತ್ತಿರುವ ಸಂದರ್ಭದಲ್ಲಿಯೇ ಇದೀಗ ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂರು ದಿನಗಳ ಹಿಂದಷ್ಟೆ ರಜನೀಕಾಂತ್ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ರಜನೀಕಾಂತ್ ಕೆಲ ಸಮಯ ವೇದಿಕೆ ಮೇಲೆ ಮಾತನಾಡಿದ್ದರು ಸಹ. ಆ ಸಮಯದಲ್ಲಿ ಗೆಲುವಾಗಿಯೇ ರಜನೀಕಾಂತ್ ಕಾಣಿಸಿಕೊಂಡಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ಗುರುಗಳಾದ ಕೆ.ಬಾಲಚಂದರ್, ಅಣ್ಣ ಸತ್ಯನಾರಾಯಣ್ ಗಾಯಕ್‌ವಾಡ್ ಹಾಗೂ ಗೆಳೆಯ, ಬೆಂಗಳೂರು ನಿವಾಸಿ ರಾಜ್ ಬಹದ್ದೂರ್‌ಗೆ ಅರ್ಪಿಸುವುದಾಗಿ ಹೇಳಿದ್ದರು.
ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಟ್ರೇಲರ್‌ನಲ್ಲಿ ಉತ್ಸಾಹ ಭರಿತವಾಗಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ. ವಯಸ್ಸಾಗಿದ್ದರೂ ಕೆಲವು ದೃಶ್ಯಗಳಲ್ಲಿ ಆಡುತ್ತಾ-ಓಡುತ್ತಾ ನಟಿಸಿದ್ದಾರೆ. ಸಿನಿಮಾವು ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ರಜನೀಕಾಂತ್ ತಂಗಿಯಾಗಿ, ನಯನತಾರಾ ರಜನೀಕಾಂತ್ ಮಡದಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿಮಾರನ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











