"ಸ್ವಾರಿ.. ಪೊಲಿಟಿಕಲ್ ಪ್ರಶ್ನೆ ಬೇಡ" ಎಂದು ಹೊರಟು ಹೋದ ರಜನಿಕಾಂತ್; ವಿಡಿಯೋ ವೈರಲ್
ತಮಿಳುನಾಡಿನಲ್ಲಿ ಮತ್ತೆ ಸಿನಿಮಾ, ಪಾಲಿಟಿಕ್ಸ್ ಒಂದಾಗುತ್ತಿದೆ. ಅಂದರೆ ಸಿನಿಮಾ ನಟರು ರಾಜಕೀಯರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ದಳಪತಿ ವಿಜಯ್ ಪ್ರಾದೇಶಿಕ ಪಕ್ಷ ಘೋಷಣೆ ಮಾಡಿದ್ದಾರೆ. ನಟ ವಿಶಾಲ್ ಕೂಡ ಮುಂದಿನ ದಿನಗಳಲ್ಲಿ ನೋಡೋಣ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿಜಯ್, ವಿಶಾಲ್‌ಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯರಂಗ ಪ್ರವೇಶವಾಗಬೇಕಿತ್ತು. ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಲು ತಲೈವಾ ನಿರ್ಧರಿಸಿದ್ದರು. ಅದಕ್ಕಾಗಿ ಬಹುತೇಕ ವೇದಿಕೆ ಸಿದ್ಧಪಡಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆರೋಗ್ಯದ ಕಾರಣ ಕೊಟ್ಟು ನೋ ಪಾಟಿಟಿಕ್ಸ್, ಓನ್ಲಿ ಸಿನಿಮಾ ಎಂದುಬಿಟ್ಟಿದ್ದರು.

ಈಗಾಗಲೇ ಕಮಲ್ ಹಾಸನ್ 'ಮಕ್ಕಳ್ ನೀದಿಮಯ್ಯಂ' ಎನ್ನುವ ಪಕ್ಷ ಸ್ಥಾಪಿಸಿದ್ದಾರೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ ನಟ ಬಳಿಕ ವಿಜಯಕಾಂತ್ ಚಿತ್ರರಂಗದಿಂದ ರಾಜಕೀಯರಂಗಕ್ಕೆ ಬಂದು ಕೊಂಚ ಮಟ್ಟಿಗೆ ಗಮನ ಸೆಳೆದಿದ್ದರು. ಇದೀಗ ದಳಪತಿ ವಿಜಯ್ 'ತಮಿಳಗ ವೆಟ್ರಿ ಕಳಗಂ' ಎನ್ನುವ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಲಾಗುತ್ತಿದೆ.
ರಜನಿಕಾಂತ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಇತ್ತೀಚೆಗೆ ಸಂಘರ್ಷ ತಾರಕಕ್ಕೇರಿತ್ತು. ಆದರೆ ಹೊಸ ಪಕ್ಷ ಕಟ್ಟಲು ಮುಂದಾಗಿರುವ ವಿಜಯ್‌ಗೆ ಖುದ್ದು ತಲೈವಾ ಫೋನ್ ಮಾಡಿ ಶುಭಾಶಯ ಕೋರಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್‌ನಲ್ಲಿ 'ವೆಟ್ಟೈಯಾನ್' ಸಿನಿಮಾ ಚಿತ್ರೀಕರಣ ಮುಗಿಸಿ ಇತ್ತೀಚೆಗೆ ರಜನಿಕಾಂತ್ ಚೆನ್ನೈಗೆ ಮರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ರಜನಿಕಾಂತ್ ಉತ್ತರಿಸಲು ನಿರಾಕರಿಸಿದ್ದಾರೆ. ಇನ್ನುಳಿದಂತೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿ ಹೊರಟಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ.
"ಲಾಲ್ ಸಲಾಂ ಸಿನಿಮಾ ಅಭಿಮಾನಿಗಳು, ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ಗೊತ್ತಾಯಿತು. ಸಿನಿಮಾ ದೊಡ್ಡಮಟ್ಟದಲ್ಲಿ ಗೆಲುವು ಸಾಧಿಸಿದೆ. ಲೈಕಾ ಸಂಸ್ಥೆ, ನಿರ್ದೇಶಕಿ ಐಶ್ವರ್ಯ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ರಜನಿಕಾಂತ್ ಹೇಳಿದರು.
ವಿಜಯ್ ಬಳಿಕ ವಿಶಾಲ್ ಸಹ ರಾಜಕೀಯರಂಗಕ್ಕೆ ಬರ್ತೀನಿ ಎನ್ನುತ್ತಿದ್ದಾರೆ. ಕಲಾವಿದರೆಲ್ಲಾ ಪೊಲಿಟಿಕಲ್ ಎಂಟ್ರಿಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಗಾದಿ ಅಷ್ಟು ದೊಡ್ಡದಾ? ಸರ್ ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಆದರೆ ಇದಕ್ಕೆ ಉತ್ತರಿಸಿದ ರಜನಿಕಾಂತ್, "ಸ್ವಾರಿ, ಪೊಲಿಟಿಕಲ್ ಪ್ರಶ್ನೆ ಕೇಳುವುದು ಬೇಡ" ಎಂದಿದ್ದಾರೆ.
ಬಳಿಕ ತಮ್ಮ ಮುಂದಿನ ಸಿನಿಮಾಗಳ ಬಗ್ಗ ರಜನಿಕಾಂತ್ ಮಾತನಾಡಿದರು. "ವೆಟ್ಟೈಯಾನ್ ಸಿನಿಮಾ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಮುಂದೆ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದೇನೆ" ಎಂದು ಹೇಳಿ ರಜನಿಕಾಂತ್ ಕಾರ್ ಏರಿ ಹೊರಟ್ಟಿದ್ದಾರೆ. 'ವೆಟ್ಟೈಯಾನ್' ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಲೈಕಾ ಪ್ರೊಡಕ್ಷನ್ ಸಂಸ್ಥೆ 'ವೆಟ್ಟೈಯಾನ್' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಕಿಶೋರ್, ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ದ್ ರವಿಚಂದರ್ ಸಂಗೀತ, ಎಸ್. ಆರ್ ಕಥಿರ್ ಛಾಯಾಗ್ರಹಣ ಚಿತ್ರಕ್ಕಿದೆ. ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ 'ವೆಟ್ಟೈಯಾನ್' ಟೀಸರ್ ನಿರಾಸೆ ಮೂಡಿಸಿತ್ತು.


Click it and Unblock the Notifications











