ಲಕ್ಷಾಂತರ ರೂಪಾಯಿ ಕಳ್ಳತನ, ಮನೆ ಕೆಲಸದ ಮಹಿಳೆಯರನ್ನು ಕೂಡಿಹಾಕಿದ ರವಿ ಮೋಹನ್? ಏನಿದು ಡೈಮಂಡ್ ನೆಕ್ಲೇಸ್ ವಿವಾದ
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಹೆಸರನ್ನೇಳಿಕೊಂಡು ದೊಡ್ಡ ದೊಡ್ಡವರಿಗೆ ಪಂಗನಾಮ ಹಾಕುತ್ತಿದ್ದ ಕಿರಾತಕರು ಈಗ ದೊಡ್ಡ ದೊಡ್ಡವರ ಮನೆಯ ಬಾಗಿಲನ್ನೇ ಮುರಿದು ಒಳಹೊಕ್ಕುತ್ತಿದ್ದಾರೆ. ಕಳ್ಳತನ ಮಾಡಿ ಅಲ್ಲಿಂದ ಅನಾಯಾಸವಾಗಿ ಪಾರಾಗುತ್ತಿದ್ದಾರೆ.
ಇದಕ್ಕೆ ಇನ್ನೊಂದು ಉದಾಹರಣೆ ಜಯಂ ರವಿ ಮನೆಯಲ್ಲಿ ನಡೆದ ಕಳ್ಳತನದ ಪ್ರಕರಣ. ಹೌದು, ರವಿ ಮೋಹನ್ ಅಲಿಯಾಸ್ ಜಯಂ ರವಿ ಅವರ ದಾಂಪತ್ಯ ಕಲಹ ಬೀದಿಗೆ ಬಿದ್ದಿರುವುದು ಎಲ್ಲರಿಗೆ ಗೊತ್ತಿರುವುದೇ. ಕೆಲವರ ಪ್ರಕಾರ ಇವರ ದಾಂಪತ್ಯ ಮುರಿದು ಬೀಳಲು ಗಾಯಕಿ ಕೆನಿಶಾ ಕಾರಣ. ಈ ಹಿನ್ನೆಲೆ ಕೆಲ ದಿನಗಳ ಹಿಂದೆ ಕೆನಿಶಾ ಅವರನ್ನು ಕುಂತಲ್ಲಿ ನಿಂತಲ್ಲಿ ಹಲವರು ನಿಂದಿಸುತ್ತಿದ್ದರು.

ತಮ್ಮ ಮೇಲಾಗುತ್ತಿರುವ ಈ ಸೈಬರ್ ದಾಳಿಯಿಂದ ಹೈರಾಣಾದ ಕೆನಿಶಾ ಕೊನೆಗೆ ಊರನ್ನೇ ಬಿಟ್ಟರು. ಇದರಿಂದ ನೊಂದು ಬೆಂದು ಹೋದ ಜಯಂ ರವಿ ಏಕಾಏಕಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾದರು. ಮೊದಲಿಗೆ ತಮ್ಮ ಪತ್ನಿ ಆರತಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಜಯಂ ರವಿ ನನ್ನ ಮೌನ ನನ್ನ ದೌರ್ಬಲ್ಯವಲ್ಲ ಎಂದು ಹೇಳಿದರು. ಸಿನಿಮಾದಲ್ಲಿ ಆಕ್ಟ್ ಮಾಡಲ್ಲ ಎಂದು ಘೋಷಿಸಿದರು. ಆ ನಂತರ ಯೂ ಟರ್ನ್ ಹೊಡೆದು ಸಿನಿಮಾಗಳನ್ನು ಕೂಡ ಒಪ್ಪಿಕೊಂಡರು.
ಇಂಥಾ ಜಯಂ ರವಿ ಅಲಿಯಾಸ್ ರವಿ ಮೋಹನ್ ತಮ್ಮ ಐಶಾರಾಮಿ ಮನೆಯಲ್ಲಿ ಮನೆಕೆಲಸದವರನ್ನು ಕೂಡಿ ಹಾಕುತ್ತಾರೆ ಎಂದರೆ ನೀವು ನಂಬ್ತೀರಾ..? ನಂಬ್ಲೇಬೇಕು. ಯಾಕೆಂದರೆ ಸದ್ಯ ಹೊರ ಬಂದಿರುವ ಸುದ್ದಿ ಎಲ್ಲವೂ ನಿಜಾ ಎಂದೇ ಹೇಳುತ್ತಿವೆ.
ಹೌದು, ಅಸಲಿಗೆ ಚೆನ್ನೈನ ಇಂಜಂಬಾಕ್ಕಂ ತೀರ ಪ್ರದೇಶದಲ್ಲಿ ನಟ ರವಿ ಮೋಹನ್ ಅವರ ನಿವಾಸವಿದೆ. ಈ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಸೋಮವಾರ ಕೆಲಸಕ್ಕೆಂದು ಹೋದವರು ಮರಳಿ ಮನೆಗೆ ಬರಲೇ ಇಲ್ಲ.
ಸಹಜವಾಗಿಯೇ ಆತಂಕಕ್ಕೀಡಾಗುವ ವಿಷಯ ಇದು. ಈ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ಗೆ ದೂರು ನೀಡಿದ್ದಾರೆ. ಆ ನಂತರ ಕಾರ್ಯಪ್ರವತ್ತರಾದ ನೀಲಂಕರೈ ಪೊಲೀಸರು
ಜಯಂ ರವಿ ಉರ್ಫ್ ರವಿ ಮೋಹನ್ ಮನೆಯ ಬಾಗಿಲು ಬಡಿದಿದ್ದಾರೆ. ಅಚ್ಚರಿ ಅಂದರೆ ಕಾಣೆಯಾದ ಮೂವರು ಮನೆಯಲ್ಲಿ ಪತ್ತೆಯಾಗಿದ್ದಾರೆ.

ರವಿ ಮೋಹನ್ ಮ್ಯಾನೇಜರ್ ನಿಂದ ದೂರು ಸಲ್ಲಿಕೆ
ಇನ್ನೂ ಅಚ್ಚರಿ ಅಂದರೆ ಇದೆಲ್ಲವೂ ಆದ ನಂತರ ರವಿ ಮೋಹನ್ ಮ್ಯಾನೇಜರ್ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಮನೆಯಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಹಾಗೂ 40 ಸಾವಿರ ರೂಪಾಯಿ ಹಣವನ್ನು ಈ ಕೆಲಸದವರೇ ಕದ್ದಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ. ಇದೆಲ್ಲವೂ ನಡೆಯುವಾಗ ರವಿ ಮೋಹನ್ ಮನೆಯಲ್ಲಿದ್ದರಾ..? ಇಲ್ವಾ..? ಈ ಪ್ರಶ್ನೆಗೆ ಸದ್ಯ ಉತ್ತರ ಇಲ್ಲ. ಸದ್ಯದ ಮಾಹಿತಿಯ ಪ್ರಕಾರ ಖಾಸಗಿಯಾಗಿ ಯಾರನ್ನೂ ಕೂಡಿಹಾಕುವಂತಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಕಳ್ಳತನ ನಡೆದಿದ್ದರೆ ಕಾನೂನುಬದ್ಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೇ ಹೊರತು, ಈ ರೀತಿ ಅಕ್ರಮವಾಗಿ ಬಂಧಿಸಿ ವಿಚಾರಣೆ ನಡೆಸಲು ಯಾರಿಗೂ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಸದ್ಯ ಇಬ್ಬರು ಮಹಿಳೆಯರು ಮತ್ತು ಬಾಲಕನನ್ನು ರವಿ ಮೋಹನ್ ನಿವಾಸದಿಂದ ಕರೆದೊಯ್ದಿದ್ದಾರೆ. ರವಿ ಮೋಹನ್ ರಿಯ್ಯಾಕ್ಟ್ ಮಾಡ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ರವಿ ಮೋಹನ್ ವಿರುದ್ದ ಆಕ್ರೋಶದ ಅಲೆ ಎದ್ದಿದೆ.


Click it and Unblock the Notifications