ದಿಢೀರ್ ಕಲ್ಯಾಣ ಮಂಟಪಕ್ಕೆ ಬಂದ ನಟ ಸೂರ್ಯ, ಮದುಮಗಳು ಶಾಕ್; ವಿಡಿಯೋ ವೈರಲ್
ಸ್ಟಾರ್ ನಟರನ್ನು ಭೇಟಿ ಮಾಡುವುದು ಅಷ್ಟು ಸುಲಭ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹಳ ಭದ್ರತೆ ಜೊತೆಗೆ ಜನಪ್ರಿಯ ಕಲಾವಿದರು ಓಡಾಡುತ್ತಾರೆ. ಅಭಿಮಾನಿಗಳು ದೂರದಿಂದ ನೋಡಬಹುದು, ಕೈ ಕುಲುಕಬಹುದು. ಅದೃಷ್ಟ ಚೆನ್ನಾಗಿದ್ದರೆ ಜೊತೆ ನಿಂತು ಒಂದು ಫೋಟೊ ಕ್ಲಿಕ್ಕಿಸಿಕೊಳ್ಳಬಹುದು. ಆದರೆ ಅಭಿಮಾನಿ ಮದುವೆಗೆ ನೆಚ್ಚಿನ ನಟ ಹಾಜರಾಗುವುದು ಅಂದ್ರೆ ತಮಾಷೆ ಮಾತಲ್ಲ.
ಅಭಿಮಾನಿಯ ಮದುವೆಗೆ ಸ್ಟಾರ್ ನಟರು ಹಾಜರಾಗುವುದು ಅಪರೂಪ. ಬಹಳ ಆಪ್ತನಾಗಿದ್ದರೆ ಮಾತ್ರ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ತಾನು ಮದುವೆ ಆಗುವ ಹುಡುಗಿ ನಟ ಸೂರ್ಯ ಅಭಿಮಾನಿ ಎಂದು ತಿಳಿದು ಮಧುಮಗ ಸ್ವೀಟ್ ಶಾಕ್ ಕೊಟ್ಟಿದ್ದಾನೆ. ತನ್ನ ಮದುವೆಗೆ ನಟ ಸೂರ್ಯ ಅವರನ್ನು ಕರೆತಂದು ಸಂಗಾತಿಗೆ ಅಚ್ಚರಿ ಮೂಡಿಸಿದ್ದಾನೆ. ಇದನ್ನು ನೋಡಿ ಸೂರ್ಯ ಅಭಿಮಾನಿಗಳು ಖುಷಿಯಾಗಿದ್ದಾರೆ.

ತಮಿಳು ನಟ, ನಿರ್ಮಾಪಕ ಸೂರ್ಯ ತಮ್ಮ ಸರಳ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಚಿತ್ರೀಕರಣಕ್ಕೆ ಬಂದಿದ್ದ ಸಹನಟನ ಒಂದು ವರ್ಷದ ಮಗುವಿಗೆ ಸೂರ್ಯ ಚಿನ್ನದ ಸರ ಉಡುಗೊರೆಯಾಗಿ ನೀಡಿದ್ದರು. ತಾಯಿ ಕಂಕುಳಲ್ಲಿ ಇದ್ದ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದರು. ಚಿನ್ನ ಸರವನ್ನು ಮಗುವಿನ ಕೊರಳಿಗೆ ಹಾಕಿದ್ದರು. ಇದೀಗ ಮಹಿಳಾ ಅಭಿಮಾನಿ ಮದುವೆ ಸಮಾರಂಭಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.
ಅರವಿಂದ್ ಎಂಬ ಯುವಕ ಕಾಜಲ್ ಎಂಬ ಯುವತಿ ಜೊತೆ ಮದುವೆ ಆಗಿದ್ದಾರೆ. ತಾನು ಮದುವೆ ಆಗುತ್ತಿರುವ ಹುಡುಗಿ ತಮಿಳು ನಟ ಸೂರ್ಯ ಅವರ ದೊಡ್ಡ ಅಭಿಮಾನಿ ಎಂದು ತಿಳಿದು ಸರ್‌ಪ್ರೈಸ್ ಕೊಡುವ ಪ್ರಯತ್ನ ಮಾಡಿದ್ದಾರೆ. ನಟ ಸೂರ್ಯ ಅವರನ್ನು ಭೇಟಿ ಮಾಡಿ ಮದುವೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ ಅರವಿಂದ್. ಕೊನೆ ಕ್ಷಣದವರೆಗೂ ಈ ವಿಚಾರವನ್ನು ಕಾಜಲ್‌ಗೆ ಹೇಳಿರಲಿಲ್ಲ. ಅಂತಿಮವಾಗಿ ಮದುವೆ ಮಂಟಪಕ್ಕೆ ನೆಚ್ಚಿನ ನಟ ಸೂರ್ಯ ಬಂದಿದ್ದು ನೋಡಿ ಆ ಯುವತಿ ಶಾಕ್ ಆಗಿದ್ದಾರೆ.
ಈ ಹಿಂದೆ ಕೂಡ ಕೆಲ ಅಭಿಮಾನಿಗಳ ಮದುವೆಗೆ ನಟ ಸೂರ್ಯ ಹಾಜರಾಗಿ ನವಜೋಡಿಗೆ ಶುಭ ಕೋರಿದ್ದರು. ಆದರೆ ಇದು ನಿಜಕ್ಕೂ ಕಾಜಲ್ ಅವರಿಗೆ ಅಚ್ಚರಿ ತಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ. ಮದುವೆಯಾಗುವ ಹುಡುಗಿಗೆ ಅರವಿಂದ್ ಎಂತಹ ಗಿಫ್ಟ್ ಕೊಟ್ಟಿದ್ದಾರೆ ನೋಡಿ. ಇದು ನಿಜವಾದ ಪ್ರೀತಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಟ ಸೂರ್ಯ ಸರಳತೆಗೆ ಅಭಿಮಾನಿಗಳು ಮತ್ತೊಮ್ಮೆ ಬಹುಪರಾಕ್ ಎನ್ನುತ್ತಿದ್ದಾರೆ.
ಅದ್ಯಾಕೋ ಇತ್ತೀಚೆಗೆ ಸೂರ್ಯ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಕಂಗುವ' ಬಳಿಕ ಬಂದ 'ರೆಟ್ರೋ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. 'ಜೈಭೀಮ್' ಬಳಿಕ 'ವಿಕ್ರಂ' ಚಿತ್ರದಲ್ಲಿ ಸೂರ್ಯ ರೊಲೆಕ್ಸ್ ಆಗಿ ಅಬ್ಬರಿಸಿದ್ದರು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ.
ಸದ್ಯ 'ಕರುಪು' ಎಂಬ ಚಿತ್ರದಲ್ಲಿ ಸೂರ್ಯ ನಟಿಸಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ತಮ್ಮ 46 ಹಾಗೂ 46ನೇ ಸಿನಿಮಾಗಳಲ್ಲಿ ಸದ್ಯ ಸೂರ್ಯ ನಟಿಸುತ್ತಿದ್ದಾರೆ. ಇನ್ನು ಎರಡೂ ಚಿತ್ರಗಳಿಗೆ ಟೈಟಲ್ ಫಿಕ್ಸ್ ಆಗಿಲ್ಲ. ಈ ವರ್ಷ 'ರೆಟ್ರೋ' ಚಿತ್ರಕ್ಕೆ ಸಹ ನಿರ್ಮಾಪಕರು ಆಗಿದ್ದರು. ಲೀಡಿಂಗ್ ಲೈಟ್ ಅನ್ನೋ ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದರು.
ಸೂರ್ಯ ಹಾಗೂ ಸಹೋದರ ಕಾರ್ತಿ ಒಟ್ಟಿಗೆ ನಟಿಸಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. 'ಮೇಯಳಗನ್' ಸೀಕ್ವೆಲ್ ಮಾಡಬೇಕು ಎಂದು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದೆ.


Click it and Unblock the Notifications











