ಕೋರ್ಟ್ ಹೊರಗೆ ಡಿವೋರ್ಸ್ ಡೀಲ್ ಕುದುರಿಸಿದ ನಟ ವಿಜಯ್; ಪತ್ನಿ, ಮಕ್ಕಳಿಗೆ ಏನೆಲ್ಲಾ ಕೊಡಲು ಒಪ್ಪಿದ್ರು?
ಒಂದ್ಕಡೆ ಹೊಸ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿರುವ ತಮಿಳು ನಟ ವಿಜಯ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ವಿಜಯ್ ಹಾಗೂ ಸಂಗೀತಾ ಸೊರ್ನಲಿಂಗಂ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ದಿನಗಳ ಹಿಂದೆ ಪತಿಯಿಂದ ಡಿವೋರ್ಸ್ ಕೋರಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಹೊರಗಡೆ ಈ ವಿವಾದ ಬಗೆಹರಿಸಿಕೊಳ್ಳಲು ವಿಜಯ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ ನೀಡುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಆದರೆ ಈಗ ಕೇವಲ 35 ಕೋಟಿ ರೂ. ಕೊಟ್ಟು ಡಿವೋರ್ಸ್ ಡೀಲ್ ಕುದುರಿಸಿದ್ದಾರೆ ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಅದಕ್ಕೂ ಮುನ್ನ ನಾಳೆ(ಏಪ್ರಿಲ್ 20) ಕೋರ್ಟ್‌ನಲ್ಲಿ ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯಲಿದೆ. ಇದೇ ಕಾರಣಕ್ಕೆ ಇಬ್ಬರೂ ಒಪ್ಪಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ವಿಜಯ್ ಹಾಗೂ ಸಂಗೀತಾ ದಂಪತಿ ಮತ್ತೆ ಒಂದಾಗಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಆದರೆ ಸಂಗೀತಾ ಡಿವೋರ್ಸ್ ಅರ್ಜಿ ಸಲ್ಲಿಸಿದ ಒಂದೇ ವಾರಕ್ಕೆ ನಟಿ ತ್ರಿಷಾ ಜೊತೆ ಒಟ್ಟಿಗೆ ಬಂದು ಮದುವೆ ಸಮಾರಂಭದಲ್ಲಿ ವಿಜಯ್ ಭಾಗವಹಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರ ತಮಿಳು ಚಿತ್ರರಂಗ ಹಾಗೂ ತಮಿಳುನಾಡು ರಾಜಕೀರಂಗದಲ್ಲಿ ಚರ್ಚೆ ಹುಟ್ಟಾಕ್ಕಿತ್ತು. ಪರಸ್ಪರ ಪ್ರೀತಿಸಿ ಮದುವೆ ಆಗಿದ್ದ ವಿಜಯ್ ಹಾಗೂ ಸಂಗೀತಾ ಜೋಡಿ 25 ವರ್ಷಗಳ ಬಳಿಕ ದೂರಾಗುತ್ತಾರೆ ಎನ್ನುವ ವಿಚಾರವನ್ನು ಕೆಲವರು ಊಹಿಸಿಕೊಳ್ಳಲು ಇನ್ನು ಸಿದ್ಧರಿಲ್ಲ.
ನಟಿಯೊಬ್ಬಳ ಕಾರಣಕ್ಕೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಸ್ವತಃ ಸಂಗೀತಾ ಡಿರ್ವೋರ್ಸ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಯಾವುದೇ ರಾಜಿಗೆ ಒಪ್ಪದ ವಿಜಯ್ ಪತ್ನಿಯಿಂದ ದೂರಾಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಏನು ಮಾಡಬೇಕು ಎನ್ನುವ ಕೋನದಲ್ಲಿ ಯೋಚಿಸುತ್ತಿದ್ದಾರೆ. ಕುಟುಂಬಕ್ಕೆ ಬಹಳ ಆಪ್ತರಾದ ಜ್ಯೋತಿಷಿಯೊಬ್ಬರ ಸಮ್ಮುಖದಲ್ಲಿ ವಿಜಯ್ ಹಾಗೂ ಸಂಗೀತಾ ನಡುವೆ ಒಪ್ಪಂದದ ಮಾತುಕತೆ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬಹಳ ವರ್ಷಗಳಿಂದ ಆ ಜ್ಯೋತಿಷಿ ವಿಜಯ್ ಕುಟುಂಬಕ್ಕೆ ಆಪ್ತರಾಗಿದ್ದು ಅವರ ಮಾತನ್ನು ಇಬ್ಬರೂ ಕೇಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಸದ್ಯಕ್ಕೆ ಪತ್ನಿಗೆ 35 ಕೋಟಿ ರೂ. ನೀಡಲು ವಿಜಯ್ ಒಪ್ಪಿದ್ದು ಮಕ್ಕಳಿಬ್ಬರ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಹೇಳಿದ್ದಾರಂತೆ. ನಾಳೆ ಕೋರ್ಟ್‌ನಲ್ಲಿ ಇದೇ ವಿಚಾರವನ್ನು ಹೇಳಿ ಡಿವೋರ್ಸ್ ವಿವಾದಕ್ಕೆ ಅಂತ್ಯ ಹಾಡಿ ಇಬ್ಬರೂ ದೂರಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇಬ್ಬರೂ ಪರಸ್ಪರ ಒಪ್ಪಿ ಡಿವೋರ್ಸ್ ಪಡೆದು ದೂರಾಗಲು ಮುಂದಾಗಿದ್ದು ಈ ಬಗ್ಗೆ ವಕೀಲರ ಜೊತೆಗೂ ಚರ್ಚಿಸಿದ್ದಾರೆ.
ಲಂಡನ್ ಮೂಲದ ಸಂಗೀತಾ ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಿದ್ದರು. ವಿಜಯ್ ಅವರ ದೊಡ್ಡ ಅಭಿಮಾನಿ ಆಗಿದ್ದರು. ಅಭಿಮಾನಿಯಾಗಿ ನೆಚ್ಚಿನ ನಟನನ್ನು ಭೇಟಿ ಆಗುವ ಪ್ರಯತ್ನ ಮಾಡುತ್ತಿದ್ದರು. ಇದೇ ವೇಳೆ ಇಬ್ಬರಿಗೂ ಲವ್ ಆಗಿತ್ತು. 'ಪೂವೆ ಉನಕ್ಕಾಗ' ಸಿನಿಮಾ ಬಳಿಕ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ದಂಪತಿಗೆ ಜೇಸನ್ ಹಾಗೂ ದಿವ್ಯಾ ಎಂಬ ಮಗಳು ಇದ್ದಾರೆ.
ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ವಿಜಯ್. ಸದ್ಯ ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. 620 ಕೋಟಿ ರೂ. ಆಸ್ತಿ ಸಂಪಾದಿಸಿರುವುದಾಗಿ ಇತ್ತೀಚೆಗೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ವಿಜಯ್ ಮಾಹಿತಿ ನೀಡಿದ್ದರು. ಹಾಗಾಗಿ ಸಂಗೀತಾ ಭಾರೀ ಮೊತ್ತದ ಜೀವನಾಂಶ ಕೇಳುತ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications