For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮ ಸೇರಿ 11 ಮಂದಿ ವಿರುದ್ಧ ದೂರು ನೀಡಿದ ವಿಜಯ್

  |

  ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್‌ ತನ್ನ ತಂದೆ-ತಾಯಿ ಸೇರಿ 11 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

  ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ವಿಜಯ್ ಚೆನ್ನೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ತನ್ನ ಹೆಸರನ್ನು ಬಳಸದಂತೆ ಅವರಿಗೆ ಸೂಚನೆ ನೀಡಬೇಕೆಂದು ವಿಜಯ್ ಮನವಿ ಮಾಡಿದ್ದಾರೆ.

  ತನ್ನ ಹೆಸರು ಅಥವಾ ತನ್ನ ಅಭಿಮಾನಿ ಬಳಗದ ಹೆಸರನ್ನು ಪೋಷಕರು ಹಾಗೂ ಇತರ ಕೆಲವು ಮಂದಿ ಯಾವುದೇ ರಾಜಕೀಯ ಸಭೆಗಳಲ್ಲಿ ಬಳಸದಂತೆ ಸೂಚನೆ ನೀಡಬೇಕು ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ವಿಜಯ್ ನ್ಯಾಯಾಲಯವನ್ನು ಕೋರಿದ್ದಾರೆ. ವಿಜಯ್‌ರ ಅರ್ಜಿಯ ವಿಚಾರಣೆಯು ಸೆಪ್ಟೆಂಬರ್ 27ಕ್ಕೆ ನಡೆಯಲಿದೆ.

  ತಂದೆ-ತಾಯಿ ವಿರುದ್ಧ ದೂರು ನೀಡಿದ ವಿಜಯ್

  ತಂದೆ-ತಾಯಿ ವಿರುದ್ಧ ದೂರು ನೀಡಿದ ವಿಜಯ್

  ಕಳೆದ ವರ್ಷ ನಟ ವಿಜಯ್‌ರ ತಂದೆ, ಸಿನಿಮಾ ನಿರ್ದೇಶಕ ಎಸ್‌ಎ ಚಂದ್ರಶೇಖರ್ 'ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್' ಹೆಸರಿನ ರಾಜಕೀಯ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೊಂದಣಿ ಮಾಡಿಸಿದರು. ಆ ಪಕ್ಷದ ಕಾರ್ಯದರ್ಶಿಯಾಗಿ ಎಸ್‌ಎ ಚಂದ್ರಶೇಖರ್ ಮತ್ತು ಖಜಾಂಚಿಯಾಗಿ ವಿಜಯ್‌ ತಾಯಿ ಶೋಭಾ ಚಂದ್ರಶೇಖರ್ ಇದ್ದಾರೆ. ಪದ್ಮನಾಭನ್ ಹಾಗೂ ಇನ್ನೂ ಕೆಲವರು ಪಕ್ಷದ ವಿವಿಧ ಹುದ್ದೆಗಳಲ್ಲಿದ್ದಾರೆ. ಪಕ್ಷದಲ್ಲಿರುವವರ ವಿರುದ್ಧವೇ ವಿಜಯ್ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ಹೇಳಿಕೆ ಬಿಡುಗಡೆ ಮಾಡಿದ್ದ ವಿಜಯ್

  ಹೇಳಿಕೆ ಬಿಡುಗಡೆ ಮಾಡಿದ್ದ ವಿಜಯ್

  ಕಳೆದ ವರ್ಷ ಎಸ್‌.ಎ.ಚಂದ್ರಶೇಖರ್ 'ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್' ಪಕ್ಷ ಸ್ಥಾಪನೆ ಮಾಡಿದಾಗ ವಿಜಯ್‌ ಸಹ ಇದರ ಹಿಂದೆ ಇದ್ದಾರೆ, ವಿಜಯ್ ಇದೇ ಪಕ್ಷ ಸೇರುತ್ತಾರೆ, ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನಲಾಗಿತ್ತು. ಆದರೆ ಕೂಡಲೇ ಹೇಳಿಕೆ ಬಿಡುಗಡೆ ಮಾಡಿದ ನಟ ವಿಜಯ್, ''ನನಗೂ, ನಮ್ಮ ತಂದೆ ಚಂದ್ರಶೇಖರನ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ನನಗೆ ಇಲ್ಲ. ಯಾರದ್ದೋ ರಾಜಕೀಯ ಆಸಕ್ತಿಗಳನ್ನು ಪೂರ್ಣಗೊಳಿಸಲು ನಾನು ತಯಾರಿಲ್ಲ. ಈ ಪಕ್ಷ (ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್) ನನ್ನ ಪಕ್ಷವೆಂದುಕೊಂಡು ಇದಕ್ಕೆ ಸೇರಿಕೊಳ್ಳಬೇಡಿ. ಹಾಗೂ ಈ ಪಕ್ಷವು ನನ್ನ ಚಿತ್ರ, ನನ್ನ ಹೆಸರು ಅಥವಾ ನನ್ನ ಫ್ಯಾನ್ಸ್ ಕ್ಲಬ್‌ಗಳ ಹೆಸರನ್ನು ಬಳಸಿದರೆ ನಾನು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ'' ಎಂದು ಎಚ್ಚರಿಕೆ ನೀಡಿದ್ದರು.

  ಮಗನ ಬಗ್ಗೆ ತಂದೆ ಚಂದ್ರಶೇಖರ್ ಮಾತು

  ಮಗನ ಬಗ್ಗೆ ತಂದೆ ಚಂದ್ರಶೇಖರ್ ಮಾತು

  ವಿಜಯ್‌ ತಂದೆ ಎಸ್‌.ಎ.ಚಂದ್ರಶೇಖರ್ ಸಹ ಈ ಬಗ್ಗೆ ಮಾತನಾಡಿ, ''ನನ್ನನ್ನು ನನ್ನ ಮಗನನ್ನು ದೂರ ಮಾಡಲು ಯತ್ನಿಸಲಾಗುತ್ತಿದೆ'' ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದರು. ಕೆಲವು ದಿನಗಳ ಹಿಂದಷ್ಟೆ ಯಾವುದೋ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ತಂದೆ ಚಂದ್ರಶೇಖರ್, ''ನಾನು ನನ್ನ ಮಗನ ಜಾತಿ ಹಾಗೂ ಧರ್ಮದ ಕಾಲಂನಲ್ಲಿ 'ತಮಿಳನ್' ಎಂದು ಬರೆಸಿದ್ದೆ'' ಎಂದಿದ್ದರು.

  'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

  'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ವಿಜಯ್ ಪ್ರಸ್ತುತ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಆಗಿರುವ 'ಬೀಸ್ಟ್‌'ಗೆ ಬಂಡವಾಳ ಹಾಕಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್. ನೆಲ್ಸನ್ ದಿಲೀಪ್‌ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಜಯ್ ನಟಿಸಿದ್ದ ಈ ಹಿಂದಿನ ಸಿನಿಮಾ 'ಮಾಸ್ಟರ್' ಕೊರೊನಾ ನಡುವೆಯೇ ಬಿಡುಗಡೆ ಆಗಿ ಗಳಿಕೆಯಲ್ಲಿ ದಾಖಲೆ ಬರೆದಿತ್ತು. ವಿಜಯ್‌, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.

  English summary
  Tamil star actor Vijay moved to court against 11 people including his parents. Vijay requests court to restrain them from using his name and photo for their political agendas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X