ವಿವೇಕ್ ಸ್ಥಿತಿ ಗಂಭೀರ: ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣವಲ್ಲ ಎಂದ ವೈದ್ಯರು
ತಮಿಳಿನ ಖ್ಯಾತ ಹಾಸ್ಯ ನಟ, ಪದ್ಮಶ್ರೀ ಪುರಸ್ಕೃತ ವಿವೇಕ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಚೆನ್ನೈನ ಎಸ್‌ಐಎಂಎಸ್ ಆಸ್ಪತ್ರೆ ಹೇಳಿದೆ.
Recommended Video
ವಿವೇಕ್ ಆರೋಗ್ಯ ಸ್ಥಿತಿ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಆಸ್ಪತ್ರೆಯು, 'ವಿವೇಕ್ ಆರೋಗ್ಯ ಚಿಂತಾಜನಕವಾಗಿದ್ದು, ಚಿಕಿತ್ಸೆ ಚಾಲ್ತಿಯಲ್ಲಿದೆ' ಎಂದಿದೆ. ಹೃದಯಾಘಾತಕ್ಕೆ ಒಳಗಾದ ವಿವೇಕ್ ಅವರನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
'ಬೆಳಿಗ್ಗೆ 11 ಗಂಟೆ ವೇಳೆಗೆ ವಿವೇಕ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಯಿತು. ಕೂಡಲೇ ಅವರಿಗೆ ಅಗತ್ಯ ಪ್ರಥಮ ಚಿಕಿತ್ಸೆಯನ್ನು ತಜ್ಞ ವೈದ್ಯರು ನೀಡಿದರು. ನಂತರ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು' ಎಂದು ಮಾಹಿತಿ ನೀಡಿದೆ ಎಸ್‌ಐಎಂಎಸ್ ಆಸ್ಪತ್ರೆ.

ವಿವೇಕ್ ಅವರ ಹೃದಯದ ಅಬಧಮನಿಯು 100% ಮುಚ್ಚಿಹೋಗಿತ್ತು ಎಂದಿರುವ ತಜ್ಞ ವೈದ್ಯರು, ವಿವೇಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಇಸಿಎಂಒ ಯಂತ್ರದ ಸಹಾಯದಲ್ಲಿ ಐಸಿಯುನಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ವಿವೇಕ್ ನಿನ್ನೆಯಷ್ಟೆ ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಅದೇ ಕಾರಣಕ್ಕೆ ಈ ಸಮಸ್ಯೆ ಆಗಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿತ್ತು. ಆದರೆ ಇದನ್ನು ಅಲ್ಲಗಳೆದಿರುವ ವೈದ್ಯರು, 'ಇದೊಂದು ಪ್ರತ್ಯೇಕ ಹೃದಯ ಸಮಸ್ಯೆ. ಕೊರೊನಾ ವ್ಯಾಕ್ಸಿನ್‌ಗೂ ಇದಕ್ಕೂ ಸಂಬಂಧ ಇರುವ ಸಾಧ್ಯತೆ ತೀರ ಕಡಿಮೆ' ಎಂದಿದ್ದಾರೆ.

ವಿವೇಕ್ ಅವರು ತಮಿಳಿನ ಖ್ಯಾತ ಹಾಸ್ಯನಟ. ಈವರೆಗೆ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರನ್, ಶಿವಾಜಿ, ಬಾಯ್ಸ್, ಕಾದಲ್ ವೈರಸ್, ಸಿಂಗಂ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿವೇಕ್ ಶೀಘ್ರ ಗುಣಮುಖರಾಗಲಿ ಎಂದು ತಮಿಳಿನ ಹಲವು ಸಿನಿಮಾ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದಾರೆ. ವಿವೇಕ್ ಅವರಿಗೆ ಮೂವರು ಮಕ್ಕಳಿದ್ದಾರೆ.


Click it and Unblock the Notifications











