2ನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅಮಲಾ ಪೌಲ್: ಹೇಳಿದ್ದೇನು?
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅಮಲಾ ಪೌಲ್ ಸೀಕ್ರೆಟ್ ಆಗಿ ಮದುವೆಯಾಗುವ ಮೂಲಕ ಇತ್ತೀಚಿಗೆ ಸುದ್ದಿಯಾಗಿದ್ದರು. ಯಾರಿಗೂ ಹೇಳದೆ ಗುಟ್ಟಾಗಿ ದೂರದ ವಿದೇಶದಲ್ಲಿ ಬಹುಕಾಲದ ಗೆಳೆಯ ಭವ್ನಿಂದರ್ ಸಿಂಗ್ ಜೊತೆ ಹಸೆಮಣೆ ಏರಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Recommended Video
ನಿಜಕ್ಕೂ ಅಮಲಾ ಹಸೆಮಣೆ ಏರಿದ್ರಾ ಎನ್ನುವ ಅನುಮಾನ ಸಹ ಮೂಡಿಸಿತ್ತು. ಫೋಟೋಗಳು ವೈರಲ್ ಆದ ಬಳಿಕ ಇವು ಮದುವೆ ಫೋಟೋಗಳಲ್ಲ, ಫೋಟೋಶೂಟ್ ಅಷ್ಟೆ ಎನ್ನುವ ಮಾತುಗಳು ಹರಿದಾಡಲು ಪ್ರಾರಂಭಿಸಿತ್ತು. ಪಂಜಾಬಿ ಶೈಲಿಯಲ್ಲಿ ಅಮಲಾ ಮಧುಮಗಳಂತೆ ಕಂಗೊಳಿಸುತ್ತಿದ್ದರು. ಇವು ಪಕ್ಕಾ ಮದುವೆ ಫೋಟೋಗಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಅಮಲಾ ಎಲ್ಲಿಯೂ ಮಾತನಾಡಿರಲಿಲ್ಲ. ಸದ್ಯ ಹೆಬ್ಬುಲಿ ನಟಿ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ವಿಜಯ್ ಜೊತೆ ಮೂರು ವರ್ಷದ ದಾಂಪತ್ಯ
ತಮಿಳು ನಿರ್ದೇಶಕ ಎ.ಎಲ್ ವಿಜಯ್ ಜೊತೆ ನಟಿ ಅಮಲಾ ಪೌಲ್ 2014ರಲ್ಲಿ ಹಸೆಮಣೆ ಏರಿದ್ದರು. ಆದರೆ ಕೇವಲ 3 ವರ್ಷಗಳಲ್ಲಿಯೆ ಅಮಲಾ ಪತಿಯಿಂದ ದೂರ ಆದರು. 2017ರಲ್ಲಿ ಅಮಲಾ ಮತ್ತು ವಿಜಯ್ ಜೋಡಿ ವಿಚ್ಛೇದನ ಪಡೆಯುವ ಮೂಲಕ ದಾಂಪತ್ಯ ಜೀವನ ಮುರಿದುಕೊಂಡು ಬೇರೆ ಬೇರೆ ಆದರು.

ಭವ್ನಿಂದರ್ ಸಿಂಗ್ ಪ್ರೀತಿಯಲ್ಲಿ ಅಮಲಾ
ಪತಿ ವಿಜಯ್ ಯಿಂದ ದೂರದ ಬಳಿಕ ಅಮಲಾ ಪೌಲ್ ಮುಂಬೈ ಮೂಲದ ಗಾಯಕ ಭವ್ನಿಂದರ್ ಸಿಂಗ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಸಂದರ್ಶವೊಂದರಲ್ಲಿ ಮಾತನಾಡುವ ವೇಳೆ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದರು. "ನಾನೊಂದು ನಿಜವಾದ ಪ್ರೀತಿಯಲ್ಲಿದ್ದೇನೆ. ಆ ಪ್ರೀತಿ ನನ್ನನ್ನು ಮಾನಸಿಕವಾಗಿ ಗುಣಮುಖ ಮಾಡಿದೆ" ಎಂದು ಹೇಳುವ ಮೂಲಕ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದರು. ಆದರೆ ಭವ್ನಿಂದರ್ ಬಗ್ಗೆ ಯಾವುದೆ ಮಾಹಿತಿ ನೀಡಿರಲಿಲ್ಲ.

ಫೋಟೋ ಡಿಲೀಟ್ ಮಾಡಿದ್ದ ಭವ್ನಿಂದರ್
ಅಮಲಾ ಮತ್ತು ಭವ್ನಿಂದರ್ ಸಿಂಗ್ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಲು ಕಾರಣ ಭವ್ನಿಂದರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಭವ್ನಿಂದರ್ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಆಗಲೆ ಫೋಟೋಗಳು ವೈರಲ್ ಆಗಿವೆ.

ಸಮಯ ಬಂದಾಗ ಹೇಳುತ್ತೇನೆ
ತೆಲುಗು ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಲಾ "ನನ್ನ ಮದುವೆಗೆ ಇನ್ನೂ ಸಮಯವಿದೆ. ನಾನೂ ಈಗ ಸಿನಿಮಾಗಳಲ್ಲಿ ಬ್ಯುಸಿ ಇದ್ದೀನಿ. ಮದುವೆ ನಡೆದರೆ ಖಂಡಿತ ಬಹಿರಂಗವಾಗಿ ಹೇಳುತ್ತೇನೆ. ನನ್ನ ಪ್ರೀತಿ ಬಗ್ಗೆ, ನನ್ನ ಮದುವೆ ಬಗ್ಗೆ ಗಾಳಿ ಸುದ್ದಿ ಹಬ್ಬಿಸಬೇಡಿ. ಸಮಯ ಬಂದಾಗ ನಾನೆ ಹೇಳುತ್ತೇನೆ" ಎಂದು ಹೇಳುವ ಮೂಲಕ 2ನೇ ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ಅಮಲಾ ಬಳಿ ಇರುವ ಸಿನಿಮಾಗಳು
ಅಮಲಾ ಪೌಲ್ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆಯು ಬಂದಿದ್ದಾರೆ. ಅಮಲಾ ಸದ್ಯ ಅಂಧೋ ಅಂಧ ಪಾರವೈ ಪೋಲಾ, ಆಡುಜೀವಿತಂ, ಕಡವೇರ್, ಲಸ್ಟ್ ಸ್ಟೋರಿ ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











