'ಜಾಣ' ಚಿತ್ರನಟಿಗೆ ಸಂಕಷ್ಟ; ತಮಿಳು ನಟಿ ಕಸ್ತೂರಿ ಬಂಧನ ಸಾಧ್ಯತೆ
ತಮಿಳು ನಟಿ ಕಸ್ತೂರಿ ಶಂಕರ್ ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಸದ್ಯ ತೆಲುಗು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಕಸ್ತೂರಿ ಆಗಾಗ್ಗೆ ಸುದ್ದಿ ಆಗುತ್ತಿರುತ್ತಿದ್ದಾರೆ. ಸದ್ಯ ಆಕೆಗೆ ಸಂಕಷ್ಟ ಎದುರಾಗಿದೆ.
ತೆಲುಗು ಮಹಿಳೆಯರ ಕುರಿತು ಇತ್ತೀಚೆಗೆ ನಟಿ ಕಸ್ತೂರಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಮೊದಲಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟಿ ಬಳಿಕ ತಪ್ಪು ಅರಿತು ಕ್ಷಮೆ ಕೇಳಿ ಟ್ವೀಟ್ ಮಾಡಿದ್ದರು. ಆದರೂ ಆಕೆಗೆ ಸಂಕಷ್ಟ ತಪ್ಪುತ್ತಿಲ್ಲ. ಶೀಘ್ರದಲ್ಲೇ ಆಕೆಯ ಬಂಧನವಾಗುವ ಸಾಧ್ಯೆತೆಯಿದೆ ಎಂದು ವರದಿಯಾಗಿದೆ. ಈ ವಿಚಾರ ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ.

ಮೂರು ದಿನಗಳ ಹಿಂದೆ ಚೆನ್ನೈನಲ್ಲಿ ನಟಿ ಕಸ್ತೂರಿ ಒಂದು ಹೇಳಿಕೆ ನೀಡಿದ್ದರು. "ಆಗಿನ ಕಾಲದಲ್ಲಿ ಅಂತಃಪುರದ ಮಹಿಳೆಯರಿಗೆ ಸೇವೆ ಮಾಡಲು ತೆಲುಗಿನವರು ಬಂದಿದ್ದರು. ಆ ರೀತಿ ಬಂದವರೆಲ್ಲಾ ಈಗ ನಾವು ತಮಿಳರು ಎಂದು ದೊಡ್ಡ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಕಸ್ತೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತೆಲುಗು ಜನರ ಬಗ್ಗೆ ಆಂಧ್ರ, ತೆಲಂಗಾಣ ಬಗ್ಗೆ ಕಸ್ತೂರಿ ಗುಣಗಾನ ಮಾಡಿದ್ದರು. ಡಿಎಂಕೆ ಪಕ್ಷದವರು ನನ್ನ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಬ್ರಾಹ್ಮಣೇತರ ಬಗ್ಗೆ ಆಕೆ ನೀಡಿದ ಹೇಳಿಕೆ ಬಗ್ಗೆಯೂ ವಿವಾದಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ತಮಿಳುನಾಡಿನ ಕೆಲ ಜಿಲ್ಲೆಗಳ ತೆಲುಗು ಮುಖಂಡರು ಆಕೆಯ ವಿರುದ್ಧ ದೂರು ನೀಡಿದ್ದಾರೆ.
ಇಂಡಿಯಾ ತೆಲುಗು ಸಮ್ಮೇಳನಂ ವತಿಯಿಂದ ಚೆನ್ನೈ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸರು ಆಕೆಯ ವಿರುದ್ಧ 192, 196(1A) 353, 353(2) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಆಕೆಯನ್ನು ವಿಚಾರಣೆ ಕರೆಸಲು ಸಮನ್ಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.
ಸಮನ್ಸ್ ಜಾರಿ ಬೆನ್ನಲ್ಲೇ ಪೊಲೀಸರು ನಟಿ ಕಸ್ತೂರಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆಕೆ ತನ್ನ ಹೇಳಿಕೆ ಹಿಂದಕ್ಕೆ ಪಡೆದು ಕ್ಷಮೆ ಕೇಳಿದ್ದರೂ ಸಂಕಷ್ಟ ಎದುರಿಸುವಂತಾಗಿದೆ.
ಸರ್ಕಾರಿ ನೌಕರರಲ್ಲಿ ಬ್ರಾಹ್ಮಣೇತರರು ಲಂಚ ಪಡೆಯುತ್ತಿದ್ದಾರೆ ಎಂದು ಕಸ್ತೂರಿ ನೀಡಿರುವ ಮತ್ತೊಂದು ಹೇಳಿಕೆ ಕೂಡ ಆಕೆಗೆ ಸಂಕಷ್ಟ ತಂದೊಡ್ಡಿದೆ. ಈ ಹೇಳಿಕೆ ಬಗ್ಗೆ ಕಾರ್ಮಿಕ ಸಂಘಗಳು ಗರಂ ಆಗಿವೆ. ನಟಿ ಕಸ್ತೂರಿ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಸರ್ಕಾರಿ ನೌಕರರ ಕೆಲವು ವರ್ಗಗಳ ವಿರುದ್ಧ ನಟಿ ಕಸ್ತೂರಿ ಹೇಳಿಕೆಯಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಸುತ್ತಿದೆ ಎಂದು ತಮಿಳುನಾಡು ಕಂದಾಯ ಅಧಿಕಾರಿಗಳ ಸಂಘ ತನ್ನ ಆಕ್ರೋಶ ಹೊರಹಾಕಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
90ರ ದಶಕದ ಆರಂಭದಲ್ಲೇ ನಟಿ ಕಸ್ತೂರಿ ಶಂಕರ್ ಚಿತ್ರರಂಗ ಪ್ರವೇಶಿಸಿದರು. 'ಆತ ಉವ್ ಕೋವಿಲಿಯೆ' ಎನ್ನುವ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ಚಿನ್ನವರ್', 'ಅಭಿರಾಮಿ', 'ಆತ್ಮ', 'ರಾಜಾಪಾಂಡಿ' ಹೀಗೆ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸಿದರು. 1994ರಲ್ಲಿ ಕನ್ನಡದ 'ಜಾಣ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿದ್ದರು.
'ಇಂಡಿಯನ್', 'ಮೆರುಪು', 'ಅನ್ನಮಯ್ಯ' ಹೀಗೆ ಕೆಲ ಹಿಟ್ ಸಿನಿಮಾಗಳಲ್ಲಿ ಕಸ್ತೂರಿ ಶಂಕರ್ ನಟಿಸಿದ್ದರು. ಕನ್ನಡದಲ್ಲಿ 'ಜಾಣ' ಬಳಿಕ 'ಹಬ್ಬ', 'ತುತ್ತಾಮುತ್ತಾ', 'ಒನ್‌ಮ್ಯಾನ್ ಆರ್ಮಿ' ಹಾಗೂ 'ಪ್ರೇಮಕ್ಕೆ ಸೈ' ಚಿತ್ರಗಳಲ್ಲಿ ಕೂಡ ಚೆನ್ನೈ ಚೆಲುವೆ ಮಿಂಚಿದ್ದರು.


Click it and Unblock the Notifications











