ರಜನಿ ರಾಜಕೀಯ ನಿರ್ಧಾರ ಹಾಗೂ ಆರೋಗ್ಯ ಕುರಿತು ಖುಷ್ಬೂ ಟ್ವೀಟ್
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂಬ ಸುದ್ದಿಗಳು ಕಳೆದ ಎರಡು ದಿನದಿಂದ ಭಾರಿ ಚರ್ಚೆಯಾಗುತ್ತಿತ್ತು. ಈ ವದಂತಿಗಳಿಗೆ ಸ್ವತಃ ರಜನಿ ಸ್ಪಷ್ಟನೆ ನೀಡಿ, ಅದೆಲ್ಲವೂ ಸುಳ್ಳು ಎಂದಿದ್ದರು.
ಆದರೆ, ಆರೋಗ್ಯವಾಗಿ ತಾನು ಆಯಾಸಗೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಇದು ಸಹಜವಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ರಜನಿಕಾಂತ್ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ, ಆ ನಂತರ ಏನೂ ಬೇಕಾದರೂ ಮಾಡಿ ಎಂಬ ಸಲಹೆ ನೀಡುತ್ತಿದ್ದಾರೆ.
ಇದೀಗ, ಬಹುಭಾಷಾ ನಟಿ ಖುಷ್ಬೂ ಸಹ ರಜನಿಕಾಂತ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷ ಸೇರಿರುವ ಖುಷ್ಬೂ ''ನಿಮ್ಮ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಿಂತ ಬೇರೇನೂ ಮುಖ್ಯವಲ್ಲ. ನೀವು ನಮ್ಮ ಅಮೂಲ್ಯ ರತ್ನ'' ಎಂದಿದ್ದಾರೆ.

''ಪ್ರೀತಿಯ ರಜನಿಕಾಂತ್ ಸರ್. ನಿಮ್ಮ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಿಂತ ಬೇರೇನೂ ಮುಖ್ಯವಲ್ಲ. ನೀವು ನಮ್ಮ ಅಮೂಲ್ಯ ರತ್ನ. ನೀವು ನಮ್ಮ ನಿಧಿ. ಆರೋಗ್ಯದೃಷ್ಟಿಯಿಂದ ಮತ್ತು ಇತರೆ ದೃಷ್ಟಿಯಿಂದ ನಿಮಗೆ ಉತ್ತಮವಾದುದನ್ನು ನೀವು ಮಾಡಿ. ನಿಮ್ಮ ಮೇಲಿನ ನಮ್ಮ ಪ್ರೀತಿಯನ್ನು ಯಾವುದೂ ಬದಲಾಗುವುದಿಲ್ಲ. ನಮ್ಮ ಜೀವನದುದ್ದಕ್ಕೂ ನಿಮ್ಮನ್ನು ಆರಾಧಿಸುವುದನ್ನು ಮುಂದುವರಿಸುತ್ತೇವೆ'' ಎಂದು ಖುಷ್ಬೂ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಪ್ರಸ್ತುತ, ಶಿವ ನಿರ್ದೇಶನದಲ್ಲಿ 'ಅಣ್ಣಾತೆ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಖುಷ್ಬೂ ಸಹ ನಟಿಸುತ್ತಿದ್ದಾರೆ. ರಜನಿ, ಖುಷ್ಬೂ, ಮೀನಾ, ಕೀರ್ತಿ ಸುರೇಶ್, ನಯನತಾರ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ.

2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಅಷ್ಟೊತ್ತಿಗೆ ರಜನಿಕಾಂತ್ ರಾಜಕೀಯ ಪಕ್ಷ ಘೋಷಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ರಜನಿಗೆ ಇದು ಸವಾಲು ಎನಿಸಿದೆ. ಆರೋಗ್ಯ ಮತ್ತು ಒತ್ತಡಗಳ ನಡುವೆ ಚುನಾವಣೆ ಎದುರಿಸಲು ಸಾಧ್ಯನಾ ಎಂಬ ಪ್ರಶ್ನೆ ಮೂಡಿರಬಹುದು.


Click it and Unblock the Notifications











