ನಟಿ ಖುಷ್ಬುಗೆ ಮಕ್ಕಳಾಗಲ್ಲ ಎಂದಿದ್ದ ವೈದ್ಯರು, 'ಜೀವನದಿ' ಕಥೆಯನ್ನೇ ನೆನಪಿಸುತ್ತೆ ಆ ರಿಯಲ್ ಸ್ಟೋರಿ!
ನಿಜ ಜೀವನದಲ್ಲಿ ನಡೆಯುವುದನ್ನೇ ಸಿನಿಮಾಗಳಲ್ಲಿ ತೋರಿಸುತ್ತಾರೆ, ಅಥವಾ ಸಿನಿಮಾಗಳಲ್ಲಿ ತೋರಿಸುವುದು ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುತ್ತದೆ. ತಮಿಳು ನಟಿ ಖುಷ್ಬೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ನಿರ್ದೇಶಕ ಸುಂದರ್ ಕೈ ಹಿಡಿದ ಆ ನಂತರ ಕೂಡ ಸಿನಿಮಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರರಂಗ ಮಾತ್ರವಲ್ಲದೇ ಖುಷ್ಬೂ ಈಗ ರಾಜಕೀಯರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಸದ್ಯಕ್ಕೆ ಬಿಜೆಪಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ. ಪತಿ ಸುಂದರ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2000 ಇಸವಿಯಲ್ಲಿ ನಟಿ ಖುಷ್ಬೂ ಹಾಗೂ ಸುಂದರ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸದ್ಯ ಸುಂದರ್ ನಿರ್ದೇಶಿಸಿ ನಟಿಸಿರುವ 'ಅರಣ್ಮನೈ'-4 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಸುಂದರ್ ಭಾಗಿ ಆಗುತ್ತಿದ್ದಾರೆ. ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ನಿಜ ಜೀವನದ ಇಂಟ್ರೆಸ್ಟಿಂಗ್ ಸಂಗತಿಯನ್ನು ಅವರು ರಿವೀಲ್ ಮಾಡಿದ್ದಾರೆ.
ಸುಂದರ್ ಹಾಗೂ ಖುಷ್ಬೂ ಜೀವನದ ವಿಶೇಷ ಸಂದರ್ಭಗಳ ಫೋಟೊಗಳನ್ನು ಸಂದರ್ಶನದಲ್ಲಿ ತೋರಿಸಲಾಗಿದೆ. ಆ ಫೋಟೊಗಳಿಗೆ ಸಂಬಂಧಿಸಿದಂತೆ ಒಂದಷ್ಟು ವಿಚಾರಗಳನ್ನು ಸುಂದರ್ ವಿವರಿಸಿದ್ದಾರೆ. ಅದರಲ್ಲಿ ತಮ್ಮ ಮದುವೆ ಹಾಗೂ ಮೊದಲ ಮುಗು ಜನಿಸಿದ ಸಂದರ್ಧದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏಳೆಂಟು ವರ್ಷ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಆ ಸಂದರ್ಭದ ಕೆಲ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
"ದಿಢೀರನೆ ನಮ್ಮ ಮದುವೆ ನಿಶ್ಚಯವಾಗಿತ್ತು. ಹೆಚ್ಚು ಕಮ್ಮಿ 5 ವರ್ಷ ಡೇಟಿಂಗ್ ಮಾಡಿದ್ದೆವು. ಪದೇ ಪದೆ ಜಗಳ ಆಡುತ್ತಿದ್ದೆವು. ಮತ್ತೆ ಒಂದಾಗುತ್ತಿದ್ದೆವು. ನಾವಿಬ್ಬರು ದೂರಾಗಿದ್ದೇವೆ ಎಂದು ಪದೇ ಪದೆ ಸುದ್ದಿ ಬರುತ್ತಿತ್ತು. ಬಳಿಕ ಮತ್ತೆ ಒಟ್ಟಿಗೆ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಅದೆಲ್ಲಾ ಸುಳ್ಳು ಎನ್ನುವಂತಾಗುತ್ತಿತ್ತು. ಎಷ್ಟು ದಿನ ಅಂತ ಜಗಳ ಮಾಡಿಕೊಂಡು ಇರೋದು ಎಂದು ಕೊನೆಗೆ ಮದುವೆ ಆಗುವ ನಿರ್ಧರಿಸಿದೆವು" ಎಂದು ಸುಂದರ್ ಹೇಳಿದ್ದಾರೆ.

"ಮಗು ಹುಟ್ಟಿದ್ದು ನಮ್ಮ ಜೀವನದಲ್ಲಿ ಮರೆಯಲಾಗದ ಮೊಮೆಂಟ್. ನನ್ನ ಮಗಳು ಆವಂತಿಕಾ ಹುಟ್ಟಿದ ದಿನ. ಒಂದು ವೈಯಕ್ತಿಕ ವಿಚಾರ ಹೇಳಬೇಕು. ಇಲ್ಲಿಯವರೆಗೂ ಎಲ್ಲೂ ಹೇಳಿಲ್ಲ. ಆಗ ಖುಷ್ಬುಗೆ ಆರೋಗ್ಯ ಸರಿ ಇರಲಿಲ್ಲ. ಆಗ ಯಾರೋ ವೈದ್ಯರು ನೀವು ಮಕ್ಕಳು ಹೆರಲು ಸಾಧ್ಯವಿಲ್ಲ ಎಂದುಬಿಟ್ಟಿದ್ದರು. ಇದು ಮದುವೆಗೂ ಮುನ್ನ. ವಿಚಾರ ಕೇಳಿ ಆಕೆ ನನ್ನ ಬಳಿ ಬಹಳ ಅತ್ತಿದ್ದಳು"
"ನೀವು ಬೇರೆ ಯಾರನ್ನಾದರೂ ಮದುವೆ ಮಾಡಿಕೊಳ್ಳಿ ಎಂದಿದ್ದಳು. ಆಗ ನಾವಿಬ್ಬರು ನಮಗೆ ಮಕ್ಕಳಾಗುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆವು. ದೇವರ ದಯೆಯಿಂದ ನಮಗೆ ಒಬ್ಬರಲ್ಲ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು" ಎಂದು ಸುಂದರ್ ವಿವರಿಸಿದ್ದಾರೆ.
ಅಂದಹಾಗೆ ಖುಷ್ಬೂ ಕನ್ನಡದ 'ಜೀವನದಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಮಡದಿಯಾಗಿ ಕಾಣಿಸಿಕೊಂಡಿದ್ದರು. ವಿಶೇಷ ಅಂದ್ರೆ ಆ ಚಿತ್ರದಲ್ಲಿ ಕೂಡ ಹೆಚ್ಚು ಕಡಿಮೆ ಖುಷ್ಬೂ ಜೀವನದಲ್ಲಿ ನಡೆದ ಸಂಗತಿಯೇ ಇಷ್ಟು. ಮದುವೆ ಬಳಿಕ ವೈದ್ಯರು ಕಾವೇರಿ (ಖುಷ್ಬು)ಗೆ ಮಕ್ಕಳು ಹುಟ್ಟಲ್ಲ ಎಂದು ಹೇಳಿಬಿಡುತ್ತಾರೆ. ಬಳಿಕ ಒಂದು ಮಗುವನ್ನು ದಂಪತಿ ದತ್ತು ಪಡೆದು ಸಾಕುತ್ತಾರೆ. ಆದರೆ ಕೊನೆಗೆ ಕಾವೇರಿಗೂ ಮಗು ಹುಟ್ಟುತ್ತದೆ. ಒಟ್ಟಾರೆ ಸುಂದರ್ ಹೇಳಿಕ ಸಂಗತಿ 'ಜೀವನದಿ' ಚಿತ್ರದ ಕಥೆಯನ್ನು ನೆನಪಿಸುವಂತಿದೆ.


Click it and Unblock the Notifications











