ಬಹುಭಾಷಾ ನಟಿ ಮೀನಾ ಕ್ರಶ್ ಯಾರು? ಆತನ ಮದುವೆ ದಿನ ನಟಿಯ ಹೃದಯ ಒಡೆದು ಹೋಗಿತ್ತಂತೆ!
ಬಹುಭಾಷಾ ನಟಿ ಮೀನಾ ಪತಿಯ ಅಗಲಿಕೆಯ ನೋವಿನಿಂದ ಹೊರಬಂದಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ನಟಿ ಸುಹಾಸಿನಿ ನಡೆಸಿಕೊಡುವ ಟಾಕ್‌ಶೋನಲ್ಲಿ ಭಾಗವಹಿಸಿದ್ದ ಮೀನಾ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ತಮ್ಮ ಕ್ರಶ್ ಯಾರು ಎನ್ನುವುದನ್ನು ವಿವರಿಸಿದ್ದಾರೆ. ನನ್ನ ಕ್ರಶ್ ಮದುವೆ ಅಂದಾಗ ನನ್ನ ಹೃದಯ ಒಡೆದು ಹೋಗಿತ್ತು ಎಂದಿದ್ದಾರೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ನಟಿ ಮೀನಾ ಮುಂದೆ ನಾಯಕಿಯಾಗಿಯೂ ಸಕ್ಸಸ್ ಕಂಡರು. ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ವಿಷ್ಣುವರ್ಧನ್ ದಕ್ಷಿಣ ಭಾರತದ ದಿಗ್ಗಜ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂದಿಗೂ ಲೀಡ್ ರೋಲ್‌ಗಳಲ್ಲಿ ಮೀನಾ ಮಿಂಚುತ್ತಿದ್ದಾರೆ. 2009ರಲ್ಲಿ ಮೀನಾ ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ಕಳೆದ ವರ್ಷ ವಿದ್ಯಾಸಾಗರ್ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ್ದರು. ನಟಿಗೆ ಒಬ್ಬ ಮಗಳು ಇದ್ದಾಳೆ.

ನಟಿ ಸುಹಾಸಿನಿ ಕಾರ್ಯಕ್ರಮದಲ್ಲಿ ಮೀನಾ ಅವರ ಹಳೇ ಫೋಟೊಗಳನ್ನು ತೋರಿಸಿ ಅದರ ಹಿನ್ನೆಲೆ ಕೇಳಿದ್ದಾರೆ. ಈ ವೇಳೆ ಹೃತಿಕ್ ರೋಷನ್ ಜೊತೆಗಿನ ಫೋಟೊ ಬಂದಿದೆ. ಆ ಫೋಟೊ ನೋಡಿ ಸಂಭ್ರಮದಿಂದ ಮೀನಾ ಮಾತನಾಡಿದ್ದಾರೆ. "ಅವರು ನನ್ನ ಫೇವರಿಟ್ ಆಕ್ಟರ್. ನಾನು ಅವರ ಡ್ಯಾನ್ಸ್ ಹಾಗೂ ನಟನೆಗೆ ದೊಡ್ಡ ಅಭಿಮಾನಿ. ಆ ಫೋಟೊ ನನ್ನ ಹೃದಯ ಒಡೆದು ಹೋದ ದಿನ ಕ್ಲಿಕ್ಕಿಸಿದ್ದು. ಅಂದರೆ ಹೃತಿಕ್ ರೋಷನ್ ಮದುವೆಗೆ ಹೋಗಿದ್ದಾಗ ತೆಗೆದ ಫೋಟೊ. ನನಗೆ ಇನ್ನು ಆಗ ಮದುವೆ ಆಗಿರಲಿಲ್ಲ".
"ನನ್ನ ಮದುವೆಗೆ ಅಮ್ಮ ಹುಡುಗನನ್ನು ಹುಡುಕುತ್ತಿದ್ದರು. ಆಗ ನಾನು ಅಮ್ಮ ನನಗೆ ಹೃತಿಕ್ ರೋಷನ್‌ನಂತಹ ಹುಡುಗನನ್ನು ಹುಡುಕು ಎಂದು ಹೇಳುತ್ತಿದ್ದೆ. ಅದು ನನ್ನ ಜೀವನದಲ್ಲಿ ಮರೆಯಲಾಗ ದಿನ. ಹೃತಿಕ್ ರೋಷನ್ ನೋಡಿ, ಮಾತಾಡಿ ಥ್ರಿಲ್ಲಾಗಿದ್ದೆ. ನಂತರ 'ವಿಲನ್' ಸಿನಿಮಾ ಶೂಟಿಂಗ್ ವೇಳೆ ನ್ಯೂಜಿಲ್ಯಾಂಡ್‌ನಲ್ಲಿ ಮತ್ತೊಮ್ಮೆ ಹೃತಿಕ್ ರೋಷನ್ ಭೇಟಿ ಆಗಿದ್ದೆ" ಎಂದು ಮೀನಾ ವಿವರಿಸಿದ್ದಾರೆ.

ಇನ್ನು 'ತೆರಿ' ಸಿನಿಮಾದಲ್ಲಿ ಮೀನಾ ಪುತ್ರಿ ನೈನಿಕಾ ಬಾಲನಟಿಯಾಗಿ ನಟಿಸಿದ್ದಾಳೆ. ಆಕೆಯ ನಟನೆಗೆ ಒಳ್ಳೆ ರೆಸ್ಪಾನ್ಸ್ ನಟಿಸಿತ್ತು. ಈ ಸಿನಿಮಾದಲ್ಲಿ ನೈನಿಕಾಗೆ ಅವಕಾಶ ಸಿಕ್ಕ ಇಂಟ್ರೆಸ್ಟಿಂಗ್ ಕಥೆಯನ್ನು ಮೀನಾ ಮತ್ತೊಮ್ಮೆ ಹೇಳಿದ್ದಾರೆ. "ಮೊದಲಿಗೆ ಪ್ರೊಡಕ್ಷನ್ ಸಂಸ್ಥೆಯಿಂದ ಫೋನ್ ಬಂತು. ನಿರ್ದೇಶಕ ಅಟ್ಲಿ ನಿಮ್ಮನ್ನು ಭೇಟಿ ಮಾಡಬೇಕು ಎಂದರು. ನಾನು ಅಪಾಯಿಂಟ್‌ಮೆಂಟ್ ಕೊಟ್ಟೆ. ಅವರು ಬಂದು 'ಅನ್ಬುಳ್ಳಾ ರಜನಿಕಾಂತ್' ಸಿನಿಮಾ ರೀತಿಯ ಒಂದು ಕಥೆ ಎಂದರು. ನಾನು ಹಾಗಾದ್ರೆ ಆ ಚಿತ್ರದಲ್ಲಿ ನನ್ನನ್ನು ಯಾವ ಪಾತ್ರಕ್ಕೆ ಕೇಳುತ್ತಿರಬಹುದು ಎಂದು ಯೋಚಿಸುತ್ತಿದ್ದೆ."
"ವಿಜಯ್ ಸರ್ ಒಬ್ಬ ಪೊಲೀಸ್ ಆಫೀಸರ್ ರೋಲ್ ಮಾಡುತ್ತಿದ್ದಾರೆ. ಓಕೆ, ಸರಿ ಎಂದೆ. ಅವರಿಗೆ ಒಬ್ಬ ಮಗಳು. ತಂದೆ ಮಗಳ ಬಾಂದವ್ಯದ ಕಥೆ ಎಂದರು. ಎಲ್ಲಾ ಸರಿ. ನಾನು ಹೇಗೆ ಮಗಳ ಪಾತ್ರ ಮಾಡೋದು ಎಂದು ಯೋಚಿಸುತ್ತಿದ್ದೆ. ನನಗೆ ಅರ್ಥ ಆಗಲಿಲ್ಲ. ನಂತರ ನಾನು ಅಟ್ಲಿ ನನಗೆ ಅರ್ಥ ಆಗಲಿಲ್ಲ ಎಂದೆ. ಆಗ ಮೇಡಂ ನಿಮಗೆ ಒಬ್ಬ ಮಗಳು ಇದ್ದಾಳಲ್ಲ ಎಂದರು. ಆಗ ನಾನು, ಅಯ್ಯೋ ನೀವು ನನ್ನ ಮಗಳ ಕಾಲ್‌ಶೀಟ್‌ಗಾಗಿ ಬಂದ್ರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದೆ."

"ಮೂರ್ನಾಲ್ಕು ವರ್ಷದ ಹುಡುಗಿ ಹೇಗೆ ಸಿನಿಮಾದಲ್ಲಿ ಎಂದು ಅನುಮಾನ ಇತ್ತು. ಆಮೇಲೆ ಅನ್ನಿಸಿತು. ನಾನು ಕೂಡ ಅದೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದೆ. ಆದರೆ ಆಕೆಗೆ ಸಿನಿಮಾ ಬಗ್ಗೆ ಗೊತ್ತಿರಲಿಲ್ಲ. ಸಿನಿಮಾ ಹೆಚ್ಚು ನೋಡಿರಲಿಲ್ಲ. ನಟನೆ ಬಗ್ಗೆ ಗೊತ್ತಿರಲಿಲ್ಲ. ಆಕೆಯನ್ನು ಸಿನಿಮಾದಲ್ಲಿ ನಟಿಸ್ತಿಯಾ ಎಂದು ಕೇಳಲು ಆಗಲ್ಲ. ಕೊನೆಗೆ ನಮ್ಮ ಪತಿ ಕೂಡ ಒಪ್ಪಿದರು. ನನಗೆ ಸಿನಿಮಾ ಬಗ್ಗೆ ಗೊತ್ತಿಲ್ಲ. ನಿನಗೆ ಚೆನ್ನಾಗಿ ಗೊತ್ತು ಅಂದರು. ನಾನು ಕೊನೆಗೆ ಧೈರ್ಯ ಮಾಡಿ ಒಪ್ಪಿದೆ" ಎಂದು ಹೇಳಿದ್ದಾರೆ.


Click it and Unblock the Notifications











