ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ 'ಕವಿರತ್ನ ಕಾಳಿದಾಸ' ಸಿನಿಮಾ ನಟಿ
ಬಹುಭಾಷಾ ನಟಿ ನಳಿನಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಚೆನ್ನೈ ಮೂಲದ ನಟಿ ಆರಂಭದಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಳಿಕ ಖಳನಟಿ ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ಚೆನ್ನೈನ ತಿರುವೆರ್ಕಾಡು ಕರುಮಾರಿಯಮ್ಮ ದೇವಸ್ಥಾನದಲ್ಲಿ ನಳಿನಿ ಶುಕ್ರವಾರ(ಜುಲೈ 18) ಭಿಕ್ಷೆ ಬೇಡಿದರು.
ಖ್ಯಾತ ನಟಿ ಹೀಗೆ ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ್ದು ಕೆಲ ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿಗೆ ಆಶ್ಚರ್ಯ ತಂದಿತ್ತು. ದಕ್ಷಿಣದ 4 ಭಾಷೆಯ ಸಿನಿಮಾಗಳಲ್ಲಿ ನಟಿ ನಳಿನಿ ಬಣ್ಣ ಹಚ್ಚಿ ನಟಿಸಿದ್ದಾರೆ. ಡಾ. ರಾಜ್‌ಕುಮಾರ್, ರಜನಿಕಾಂತ್, ವಿಷ್ಣುವರ್ಧನ್ ಸೇರಿದಂತೆ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನಸಿನಲ್ಲಿ ದೇವರು ಬಂದು ನನಗಾಗಿ ಏನು ಮಾಡ್ತೀಯಾ? ಎಂದು ಕೇಳಿದಾಗ ಸೆರಗೊಡ್ಡಿ ಭಿಕ್ಷೆ ಬೇಡುತ್ತೇನೆ ಎಂದಿದ್ದರಂತೆ. ಅದರಂತೆ ಹರಕೆ ತೀರಿಸಿದ್ದಾಗಿ ಆಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

"ಕರುಮಾರಿಯಮ್ಮನಿಗಾಗಿ ನಾನು ಸೆರಗೊಡ್ಡಿ ಭಿಕ್ಷೆ ಬೇಡಿದೆ. ಅದು ಕೂಡ ಆಕೆ ಹೇಳಿದಂತೆ ಮಾಡಿದ್ದು. ನಂಬಿದವರನ್ನು ಆಕೆ ಎಂದಿಗೂ ಕೈಬಿಡಲ್ಲ. ನನ್ನ 13ನೇ ವಯಸ್ಸಿನಿಂದಲೂ ನಾನು ಆಕೆಯನ್ನು ಆರಾಧಿಸುತ್ತಿದ್ದೇನೆ. ನನ್ನ ಇಷ್ಟದ ದೈವ ಕರುಮಾರಿಯಮ್ಮ ನನ್ನ ಕನಸ್ಸಿನಲ್ಲಿ ಬಂದು ನೀನು ನನಗಾಗಿ ಏನು ಮಾಡ್ತೀಯಾ ಎಂದು ಕೇಳಿದ್ರು. ನನಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಹಾಗಾಗಿ ನನ್ನ ಸೆರಗೊಡ್ಡಿ ಭಿಕ್ಷೆ ಬೇಡಿ ಕೈಲಾದ ಕಾಣಿಕೆ ಕೊಡ್ತೀನಿ ಎಂದೆ. ಅದರಂತೆ ಇಲ್ಲಿಗೆ ಬಂದು ಸೇವೆ ಮಾಡಿದೆ" ಎಂದು ನಟಿ ನಳಿನಿ ಹೇಳಿದ್ದಾರೆ.
ರಜನಿಕಾಂತ್ ಹಾಗೂ ಚಿರಂಜೀವಿ ನಟನೆಯ 'ರಣುವ ವೀರನ್' ಚಿತ್ರದ ಮೂಲಕ ನಳಿನಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 1983ರಲ್ಲಿ ಬಂದ 'ಕವಿರತ್ನ ಕಾಳಿದಾಸ' ಚಿತ್ರದ ಮೂಲಕ ಚಂದನವನಕ್ಕೆ ಬಂದಿದ್ದರು. ಆ ಚಿತ್ರದಲ್ಲಿ ಕಾಳಿಮಾತೆಯ ಪಾತ್ರದಲ್ಲಿ ಅವರು ಮಿಂಚಿದ್ದರು. ಆ ಪಾತ್ರಕ್ಕೆ ನಳಿನಿ ಸೂಕ್ತವಾದ ಆಯ್ಕೆ ಎಂದು ಡಾ. ರಾಜ್‌ಕುಮಾರ್ ಕೂಡ ಹೇಳಿದ್ದರು.

'ಶಪಥ' ಚಿತ್ರದಲ್ಲಿ ಶಂಕರ್ ನಾಗ್ ಜೊತೆ ನಳಿನಿ ತೆರೆ ಹಂಚಿಕೊಂಡಿದ್ದರು. ಟೈಗರ್ ಪ್ರಭಾಕರ್ ನಟನೆಯ 'ಬೆಳ್ಳಿ ನಾಗ' ಚಿತ್ರದಲ್ಲಿ ಕೂಡ ಆಕೆ ಮಿಂಚಿದ್ದರು. ವಿಷ್ಣುವರ್ಧನ್ ನಟನೆಯ 'ಜೀವನಜ್ಯೋತಿ' ಚಿತ್ರದಲ್ಲಿ ಕೂಡ ಒಳ್ಳೆ ಪಾತ್ರ ಸಿಕ್ಕಿತ್ತು. ಬಳಿಕ 'ಆಸೆಯ ಬಲೆ' ಚಿತ್ರದಲ್ಲಿ ಮತ್ತೆ ವಿಷ್ಣುಗೆ ಜೊತೆಯಾಗಿದ್ದರು. 'ನಮ್ಮ ಭೂಮಿ' ಹಾಗೂ 'ಗಂಡೆಂದರೆ ಗಂಡು' ನಳಿನಿ ನಟಿಸಿದ ಮತ್ತೆರಡು ಕನ್ನಡ ಸಿನಿಮಾಗಳು.
ತಮಿಳು ಚಿತ್ರನಟ, ನಿರ್ದೇಶಕ ರಾಮರಾಜನ್ ಅವರನ್ನು ನಟಿ ನಳಿನಿ ಕೈಹಿಡಿದಿದ್ದರು. ಬಳಿಕ ಕಾರಣಾಂತರಳಿಂದ ಅವರು ದೂರಾಗಿದ್ದರು. 'ಅರಣ್ಮನೆ- 3' ಪೋಷಕ ನಟಿಯಾಗಿ ನಳಿನಿ ನಟಿಸಿದ ಇತ್ತೀಚಿನ ಸಿನಿಮಾ. 'ಕೊಂಜಂ ಕಾದಲ್ ಕೊಂಜಂ ಮೋದಲ್' ಇದೇ ವರ್ಷ ತೆರೆಗೆ ಬಂದಿತ್ತು.
15 ವರ್ಷ ವಯಸ್ಸಿನಲ್ಲೇ ನಟಿ ನಳಿನಿ ಚಿತ್ರರಂಗದಲ್ಲಿ ಬ್ಯುಸಿಯಾಗಿಬಿಟ್ಟರು. ಹಾಗಾಇ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. 'ಸತ್ತತೈ ತಿರುತುಂಗಲ್', 'ನಲ್ಲ ನಾಲ್', '24 ಮಣಿ ನೇರಂ', 'ಉರಿಮೈ', 'ಎಂಗಳ್ ಕುರಳ್', 'ಸಾಧನೈ', 'ಜಾತಿ ಪೂಕ್ಕಲ್', 'ರಾಜಾ ರಿಷಿ', 'ಮೀಡುಂ ಪರಾಶಕ್ತಿ' ನಟಿ ನಳಿನಿ ನಟಿಸಿದ ಕೆಲ ಜನಪ್ರಿಯ ಸಿನಿಮಾಗಳು.


Click it and Unblock the Notifications











