ತಮಿಳು ನಟಿ ನಮಿತಾ - ವೀರೇಂದ್ರ ಚೌಧರಿ ದಾಂಪತ್ಯದಲ್ಲಿ ಬಿರುಕು?
ಗುಜರಾತ್ ಮೂಲದ ನಟಿ ನಮಿತಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೆರೆದವರು. ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಚೆಲುವೆ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ರವಿಚಂದ್ರನ್, ದರ್ಶನ್ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಂಡರು.
ಮಾದಕ ಮೈಮಾಟದ ಚೆಲುವೆ ನಮಿತಾ ಬಿಂದಾಸ್ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದ ಚೆಲುವೆ 'ಸ್ವತಂ' ಎನ್ನುವ ತೆಲುಗು ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಸಾಲು ಸಾಲಾಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದರು. 'ನೀಲಕಂಠ' ಸಿನಿಮಾ ಮೂಲಕ ಕನ್ನಡಕ್ಕೂ ಬಂದರು. ಬಳಿಕ ತಮಿಳುನಾಡು ರಾಜಕೀಯರಂಗದಲ್ಲೂ ಗುರ್ತಿಸಿಕೊಂಡರು.

7 ವರ್ಷಗಳ ಹಿಂದೆ ಉದ್ಯಮಿ ವೀರೇಂದ್ರ ಚೌಧರಿ ಜೊತೆ ನಮಿತಾ ಹಸೆಮಣೆ ಏರಿದರು. 2017ರಲ್ಲಿ ತಿರುಪತಿಯಲ್ಲಿ ಮದುವೆ ನಡೆಯಿತು. 2 ವರ್ಷಗಳ ಹಿಂದೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಇನ್ನು ನಮಿತಾ ಹಾಗೂ ವೀರೇಂದ್ರ ದೂರಾಗುತ್ತಿದ್ದಾರೆ. ಇಬ್ಬರೂ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಅಂತೆಕಂತೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.
ಸಾಕಷ್ಟು ಜನ ನಮಿತಾ ಹಾಗೂ ವೀರೇಂದ್ರ ದೂರಾಗುತ್ತಾರಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ನಮಿತಾ ಡಿವೋರ್ಸ್ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. "ಮೊನ್ನೆ ಮೊನ್ನೆ ನಮ್ಮ ಪತಿಯ ಜೊತೆಗಿರುವ ಫೋಟೊ ಶೇರ್ ಮಾಡಿದ್ದೀನಿ. ಮರುದಿನವೇ ಡಿವೋರ್ಸ್ ಎನ್ನುವ ಸುದ್ದಿ ಹಾಕುತ್ತಾರೆ. ಯಾವುದೇ ಆಧಾರವಿಲ್ಲದೇ ನಾವು ದೂರಾಗುತ್ತೇವೆ ಅಂತ ಹೇಗೆ ಪ್ರಚಾರ ಮಾಡುತ್ತಾರೆ?" ಎಂದು ಆಕೆ ಪ್ರಶ್ನಿಸಿದ್ದಾರೆ.
"ಒಬ್ಬ ನಟಿಯಾಗಿ ನಾನು ಸಾಕಷ್ಟು ವದಂತಿಗಳನ್ನು ಕೇಳಿದ್ದೇನೆ. ಈ ಡಿವೋರ್ಸ್ ಬಗ್ಗೆ ಕೂಡ ನಾನು, ನಮ್ಮ ಪತಿ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಸ್ನೇಹಿತರು, ಆಪ್ತರು ಕರೆ ಮಾಡಿ ಕೇಳುತ್ತಿರುತ್ತಾರೆ. ಏನಿದು ಸುದ್ದಿ. ನಿಜಾನಾ? ಅಂತೆಲ್ಲಾ ಪದೇ ಪದೆ ಕರೆ ಮಾಡುತ್ತಾರೆ. ನನಗೂ ಸ್ಪಷ್ಟನೆ ಕೊಟ್ಟು ಕೊಟ್ಟು ಸಾಕಾಗಿದೆ. ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇರ್ತೀನಿ. ಕೆಲವೊಮ್ಮೆ ಯಾರಿಗೂ ಪ್ರತಿಕ್ರಿಯಿಸಲು ಆಗಲ್ಲ, ಈ ಸುದ್ದಿ ಕೇಳಿ ನಾನು ನಮ್ಮ ಪತಿ ಬಿದ್ದು ಬಿದ್ದು ನಗ್ತೀವಿ ಅಷ್ಟೇ" ಎಂದಿದ್ದಾರೆ.

'ನೀಲಕಂಠ' ಬಳಿಕ ಕನ್ನಡದಲ್ಲಿ ನಟ ದರ್ಶನ್ ಜೋಡಿಯಾಗಿ 'ಇಂದ್ರ' ಚಿತ್ರದಲ್ಲಿ ನಮಿತಾ ಮಿಂಚಿದ್ದರು. ಆ ನಂತರ ಮತ್ತೆ ಕ್ರೇಜಿ ಸ್ಟಾರ್ ಜೊತೆ 'ಹೂ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ನಮಿತಾ ಕುಟುಂಬ, ಮಕ್ಕಳು, ರಾಜಕೀಯ ಎಂದು ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಕೊನೆಯದಾಗಿ ತಮಿಳಿನ 'ಮಿಯಾ' ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡಿದ್ದರು.
'ಜೆಮಿನಿ', 'ವ್ಯಾಪಾರಿ', 'ಬಿಲ್ಲಾ'(ತಮಿಳು), ಥೀ, 'ಬಿಲ್ಲಾ'(ತೆಲುಗು), 'ಸಿಂಹ' ನಮಿತಾ ನಟಿಸಿದ ಕೆಲ ತೆಲುಗು, ತಮಿಳಿನ ಹಿಟ್ ಸಿನಿಮಾಗಳು. ಕನ್ನಡದಲ್ಲಿ 'ನೀಲಕಂಠ', 'ಇಂದ್ರ', 'ಹೂ', 'ನಮಿತಾ ಐ ಲವ್ ಯು' ಹಾಗೂ 'ಬೆಂಕಿ ಬಿರುಗಾಳಿ' ಸಿನಿಮಾಗಳಲ್ಲಿ ನಮಿತಾ ಮಿಂಚಿದ್ದರು.
2016ರಲ್ಲಿ AIADMK ಪಕ್ಷಕ್ಕೆ ನಮಿತಾ ಸೇರ್ಪಡೆ ಆಗಿದ್ದರು. 3 ವರ್ಷಗಳ ಬಳಿಕ ತಮಿಳುನಾಡು ಬಿಜೆಪಿ ಸೇರಿದರು. ಸದ್ಯ ತಮಿಳುನಾಡಿನ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆಗಿ ನಮಿತಾ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ನಮಿತಾ ಪ್ರಚಾರ ನಡೆಸಿದ್ದರು.


Click it and Unblock the Notifications











