ಬಿಗ್‌ಬಾಸ್ ವಿರುದ್ಧ ಸರಣಿ ಆರೋಪ ಮಾಡಿದ 'ಕಿರಾತಕ' ನಾಯಕಿ
ಯಶ್ ಅವರ ಸೂಪರ್ ಹಿಟ್ ಸಿನಿಮಾ 'ಕಿರಾಕತ' ನಾಯಕಿಯನ್ನು ಹೆಚ್ಚಿನ ಜನ ಮರೆತಿಲ್ಲ. ಹೈಸ್ಕೂಲು ಹುಡುಗಿಯಾಗಿ ಮುದ್ದಾಗಿ, ಪೆದ್ದಾಗಿ ನಟಿಸಿದ್ದ ಒವಿಯಾ ಈಗಿನ ಅವತಾರ ಬೇರೆಯದ್ದೇ ಆಗಿದೆ.
ಒವಿಯಾ ತಮ್ಮ ಬೋಲ್ಡ್ ಪಾತ್ರಗಳ ಮೂಲಕ ಮಾತ್ರವಲ್ಲ, ಬೋಲ್ಡ್ ಮಾತುಗಳ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಮೊನ್ನೆಯಷ್ಟೆ ಮದುವೆ, ಹಸ್ತಮೈಥುನ, ಮಹಿಳೆ ಎಂದೆಲ್ಲಾ ಬೋಲ್ಡ್ ಆಗಿ ಮಾತನಾಡಿದ್ದ ಒವಿಯಾ ಈಗ ಬಿಗ್‌ಬಾಸ್ ರಿಯಾಲಿಟಿ ಶೋ ವಿರುದ್ಧ ಹರಿಹಾಯ್ದಿದ್ದಾರೆ.
ಕಿರಾಕತ ನಟಿ ಒವಿಯಾ ಈ ಹಿಂದೆ ಬಿಗ್‌ಬಾಸ್ ಸ್ಪರ್ಧಾಳು ಆಗಿದ್ದರು. ಆದರೆ ಈಗ ಬಿಗ್‌ಬಾಸ್ ಶೋ ಬ್ಯಾನ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗೆ ಇಳಿದಿದ್ದಾರೆ. ಅಷ್ಟು ಮಾತ್ರವಲ್ಲದೆ ಶೋ ಮೇಲೆ ಕೆಲವು ಆರೋಪಗಳನ್ನು ಸಹ ಮಾಡಿದ್ದಾರೆ.

ಬಿಗ್‌ಬಾಸ್ ಶೋ ರದ್ದಾಗಬೇಕೆ: ಒವಿಯಾ ಪ್ರಶ್ನೆ
ಎರಡು ದಿನದ ಹಿಂದೆ ಟ್ವೀಟ್ ಮಾಡಿದ್ದ ಒವಿಯಾ, 'ಬಿಗ್‌ಬಾಸ್ ಶೋ ರದ್ದಾಗಬೇಕು ಎಂಬುದಕ್ಕೆ ನಿಮ್ಮ ಸಮ್ಮತಿ ಅಥವಾ ಅಸಮ್ಮತಿ ಇದೆಯೇ? ಎಂದು ಪ್ರಶ್ನಿಸಿದ್ದರು. ಆ ಮೂಲಕ ಜನರ ಅಭಿಪ್ರಾಯ ಪಡೆಯಲು ಮುಂದಾಗಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.

ಟಿಆರ್‌ಪಿಗಾಗಿ ಮಾನಸಿಕ ಹಿಂಸೆ ನೀಡಲಾಗುತ್ತದೆ: ಒವಿಯಾ
ಪೋಸ್ಟ್‌ಗೆ ಬಂದ ಕಮೆಂಟ್ ಒಂದಕ್ಕೆ ಪ್ರತಿಕ್ರಿಯಿಸುತ್ತಾ, 'ಬಿಗ್‌ಬಾಸ್‌ನವರು ತಮ್ಮ ಟಿಆರ್‌ಪಿಗಾಗಿ ಸ್ಪರ್ಧಾಳುಗಳಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಸಾಕು' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಆ ಮೂಲಕ ಬಿಗ್‌ಬಾಸ್ ಶೋನಲ್ಲಿ ಕಿರುಕುಳ ನೀಡಲಾಗುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳುವ ಯತ್ನ ಮಾಡಿದ್ದರು ಒವಿಯಾ.

'ಮಾನಸಿಕ ಕಿರುಕುಳ ನೀಡಲು ಒಪ್ಪಿಗೆ ಪತ್ರವಾಗಬಾರದು'
ನಂತರ ಮತ್ತೊಂದು ಪೋಸ್ಟ್‌ನಲ್ಲಿ ನೇರವಾಗಿಯೇ ಬಿಗ್‌ಬಾಸ್ ವಿರುದ್ಧ ಆರೋಪಿಸಿದ ಒವಿಯಾ, 'ಬಿಗ್‌ಬಾಸ್ ನ ಒಪ್ಪಂದದ ಕಾಗದ, ಮಾನಸಿಕ ಕಿರುಕುಳ ನೀಡಲು, ಆತ್ಮಹತ್ಯೆಗೆ ಪ್ರೇರೇಪಿಸಲು ಸ್ಪರ್ಧಾಳುಗಳು ನೀಡುವ ಒಪ್ಪಿಗೆ ಪತ್ರವಾಗಬಾರದು. ಶೋ ಬ್ಯಾನ್ ಆಗದಿದ್ದರೂ ಪರವಾಗಿಲ್ಲ, ಸ್ಪರ್ಧಾಳುಗಳ ಮೇಲೆ ತುಸು ಕನಿಕರ ಇರಲಿ' ಎಂದಿದ್ದರು ಒವಿಯಾ.

ಹುಚ್ಚಿ ಎಂದು ಕರೆದು ಹೊರಹಾಕಲಾಗಿತ್ತು: ಒವಿಯಾ
ನೀವು ಬಿಗ್‌ಬಾಸ್ ಸ್ಪರ್ಧಿಆಗಿದ್ದಾಗಲೇ (2017) ರಲ್ಲೇ ಏಕೆ ಈ ಬಗ್ಗೆ ದನಿ ಎತ್ತಲಿಲ್ಲ ಈಗೇಕೆ ಮಾತನಾಡುತ್ತಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಒವಿಯಾ, 'ನನ್ನನ್ನು ಹುಚ್ಚಿ ಎಂದು ತೀರ್ಮಾನಿಸಿ ನನ್ನನ್ನು ಶೋ ನಿಂದ ಹೊರಗೆ ಹಾಕಲಾಗಿತ್ತು. ಈಗಲೂ ನಾನಿದನ್ನೆಲ್ಲಾ ನನ್ನ ಆತ್ಮಸಂತೋಶಕ್ಕೆ ಮಾತನಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.


Click it and Unblock the Notifications











