ಯೂಟ್ಯೂಬರ್ ಅನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ ನಟಿ ರೇಖಾ
ಸಾಮಾಜಿಕ ಜಾಲತಾಣದ ಜಮಾನಾದಲ್ಲಿ ಫೇಕ್ ಸುದ್ದಿಗಳ ಸಂಖ್ಯೆ ಹೆಚ್ಚಾಗಿದೆ. ಫೇಕ್ ನ್ಯೂಸ್ ಒತ್ತಟ್ಟಿಗಿರಲಿ, ಸೆಲೆಬ್ರಿಟಿಗಳ ಬಗ್ಗೆ ಇಲ್ಲಸಲ್ಲದ್ದು ಹೇಳಿ ಮಾನನಷ್ಟ ಮಾಡುವವರಿಗಂತೂ ಲೆಕ್ಕಕ್ಕೆ ಇಲ್ಲ.
ಇದೀಗ ಯೂಟ್ಯೂಬ್ ಚಾನೆಲ್ ಮೂಲಕ ಯೂಟ್ಯೂಬ್ ಜರ್ನಲಿಸಂ ಸಹ ಹುಟ್ಟುಕೊಂಡಿದೆ. ಹಲವು ಖಾಸಗಿ ವ್ಯಕ್ತಿಗಳು ಯೂಟ್ಯೂಬ್ ಮೂಲಕ ಜನರಿಗೆ ಸುದ್ದಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲೂ ಸಿನಿಮಾ ಸುದ್ದಿಗಳಿಗೆ ಹಲವು ಯೂಟ್ಯೂಬ್ ಚಾನೆಲ್‌ಗಳು ಇದೀಗ ಹುಟ್ಟಿಕೊಂಡಿವೆ.
ನಿರ್ದಿಷ್ಟ ನಿಯಮ, ಕಟ್ಟುಪಾಡುಗಳು, ಸರ್ಕಾರದ ರೆಗ್ಯೂಲೇಟರಿಗಳು ಇರದ ಕಾರಣ ಯೂಟ್ಯೂಬ್ ಚಾನೆಲ್‌ಗಳು ಮನಬಂದಂತೆ, ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ನೀಡುತ್ತಿರುವ ಹಲವು ಉದಾಹರಣೆಗಳು ಕಣ್ಣಮುಂದಿವೆ. ಇದೇ ರೀತಿ ತಮಿಳಿನ ಸಿನಿಮಾ ಪತ್ರಕರ್ತನೊಬ್ಬ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ನಟಿಯರ ಬಗ್ಗೆ ತನಗೆ ಮನಬಂದಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬಂದಿದ್ದ, ಇದೀಗ ನಟಿಯೊಬ್ಬರು ಆತನನ್ನು ನಡು ರಸ್ತೆಯಲ್ಲಿ ತಡೆದು ಪ್ರಶ್ನೆ ಮಾಡಿದ್ದಾರೆ.
ತಮಿಳಿನ ನಟಿ ರೇಖಾ ನಾಯರ್ ಇತ್ತೀಚಿನ ತಮಿಳು ಸಿನಿಮಾ ಒಂದರಲ್ಲಿ ಅರೆ ಬೆತ್ತಲೆಯಾಗಿ ನಟಿಸಿರುವ ಬಗ್ಗೆ ಹಾಸ್ಯ ನಟ, ಸಿನಿಮಾ ಪತ್ರಕರ್ತ ಬೈಲ್ವಾನ್ ರಂಗನಾಥನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದರು.

ಅರೆ ಬೆತ್ತಲೆ ದೃಶ್ಯದಲ್ಲಿ ನಟಿಸಿರುವ ರೇಖಾ
ಪಾರ್ತಿಬನ್ ನಿರ್ದೇಶನದ 'ಇರವಿನ್ ನಿಳಲ್' ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ರೇಖಾ ನಾಯರ್ ನಟಿಸಿದ್ದರು. ಆ ಸಿನಿಮಾದಲ್ಲಿ ರೇಖಾ ನಾಯರ್ ಮಗು ಆಕೆಯ ಎದೆಯಿಂದ ಹಾಡು ಕುಡಿಯುವ ದೃಶ್ಯವಿದೆ. ಈ ದೃಶ್ಯದ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಬೈಲ್ವಾನ್ ರಂಗನಾಥನ್ ಮಾತನಾಡಿದ್ದರು. ಆ ದೃಶ್ಯಕ್ಕಾಗಿ ಅರ್ಧ ದೇಹವಲ್ಲ ಪೂರ್ತಿ ದೇಹವನ್ನೇ ತೋರಿಸಲು ರೇಖಾ ತಯಾರಾಗಿದ್ದಳು ಎಂದು ರಂಗನಾಥನ್ ಹೇಳಿದ್ದರು.

ಲಘುವಾಗಿ ಮಾತನಾಡಿದ್ದ ರಂಗನಾಥನ್
ಅಲ್ಲದೆ ರೇಖಾ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದ ರಂಗನಾಥನ್, ಪೂನಮಲ್ಲೆ ಹೋಟೆಲ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾದ ಚಿತ್ರಾ ಹಾಗೂ ರೇಖಾ ನಡವೆ ಸಂಬಂಧವಿತ್ತು ಎಂದು ಸಹ ಹೇಳಿದ್ದರು. ರೇಖಾ ಯಾವ ರೀತಿಯ ಪಾತ್ರಕ್ಕಾದರೂ ಸೈ ಎನ್ನುತ್ತಾಳೆ, ಸಂಭಾವನೆ ಕೊಟ್ಟರೆ ಯಾವ ರೀತಿಯ ಪಾತ್ರವನ್ನಾದರೂ ಮಾಡುತ್ತಾಳೆ ಎಂಬರ್ಥದ ಮಾತುಗಳನ್ನು ರಂಗನಾಥನ್ ಆಡಿದ್ದರು.

ರೇಖಾ ಎದುರು ಸಿಕ್ಕ ರಂಗನಾಥನ್
ಆ ಬಳಿಕ ತಿರುವಣ್ಣಮಯೂರ್ ಬೀಚ್‌ನಲ್ಲಿ ರೇಖಾ ನಾಯರ್‌ಗೆ ಎದುರಾಗಿ ರಂಗನಾಥನ್ ಸಿಕ್ಕಿದ್ದಾರೆ. ಆಗ ರೇಖಾ ರಂಗನಾಥನ್ ಅನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಹೇಗಾದರೂ ನಟಿಸಿಕೊಳ್ಳುತ್ತೇನೆ ಅದು ನನ್ನ ಇಷ್ಟ ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡಲು ನೀನು ಯಾರು? ನಾನೇನು ನಿನ್ನ ಹೆಂಡತಿಯೋ, ಅಥವಾ ಮಗಳಾ ನನ್ನ ನಟನೆ ನನ್ನ ಇಷ್ಟ ಪ್ರಶ್ನೆ ಮಾಡಲು ನೀನು ಯಾರು ಎಂದು ನಡು ರಸ್ತೆಯಲ್ಲಿ ರೇಖಾ ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ಸಣ್ಣ ಮಟ್ಟಿನ ನೂಕಾಟ ತಳ್ಳಾಟವೂ ಆಗಿದೆ.

ರಾಧಿಕಾ ಶರತ್‌ಕುಮಾರ್ ಸಹ ಚಳಿ ಬಿಡಿಸಿದ್ದರು
ರಂಗನಾಥನ್‌ಗೆ ಈ ರೀತಿ ನಟಿಯರಿಂದ ಮಂಗಳಾರತಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಖ್ಯಾತ ನಟ ಶರತ್ ಕುಮಾರ್ ಪತ್ನಿ ರಾಧಿಕಾ ಶರತ್‌ಕುಮಾರ್ ಬಗ್ಗೆ ಹೀಗೆ ಇಲ್ಲ ಸಲ್ಲದ ಮಾತುಗಳನ್ನು ರಂಗನಾಥನ್ ಆಡಿದ್ದ. ರಾಧಿಕಾ ಸಹ ಬೀಚ್‌ನಲ್ಲಿ ವಾಕ್ ಮಾಡಬೇಕಾದರೆ ಎದುರು ಸಿಕ್ಕ ರಂಗನಾಥನ್ ಅನ್ನು ಸರಿಯಾಗಿ ಜಾಡಿಸಿದ್ದರು. ಮಲಯಾಳಂ ನಟಿ, ಕನ್ನಡದ ಕಿರಾತಕ ಸಿನಿಮಾದಲ್ಲಿಯೂ ನಟಿಸಿರುವ ಒವಿಯಾ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದ ಇದೇ ರಂಗನಾಥನ್, ಒವಿಯಾ ತಂಗದ ಹೋಟೆಲ್‌ಗಳು ಚೆನ್ನೈನಲ್ಲಿ ಇಲ್ಲವೇ ಇಲ್ಲ ಎಂದಿದ್ದ.


Click it and Unblock the Notifications











