ತಮಿಳುನಾಡು ರಾಜಕೀಯರಂಗದಲ್ಲಿ ಬಿಗ್ ಟ್ವಿಸ್ಟ್; ಮತ್ತೆ ಮುನ್ನಲೆಗೆ ಬಂತು ನಟಿ ತ್ರಿಶಾ ಹೆಸರು
ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಅಧಿಕಾರ ಹಿಡಿದಿದೆ. ರಾಜ್ಯ ರಾಜಕೀಯ ಚಿತ್ರಣ ಬದಲಿಸುವುದಾಗಿ ಸಿಎಂ ವಿಜಯ್ ಹೇಳ್ತಾ ಬರ್ತಿದ್ದಾರೆ. ಇನ್ನು ಸಿಎಂ ವಿಜಯ್ ಹಾಗೂ ತ್ರಿಶಾ ನಡುವಿನ ಆತ್ಮೀಯ ಒಡನಾಟ ಕೂಡ ಪದೇ ಪದೆ ಸುದ್ದಿ ಆಗ್ತಿದೆ.
ತಮಿಳುನಾಡು ರಾಜಕೀಯರಂಗದಲ್ಲಿ ಏನಾಗ್ತಿದೆ ಎನ್ನುವ ಕುತೂಹಲ ವಿಜಯ್ ಅಭಿಮಾನಿಗಳಲ್ಲಿದೆ. ಇನ್ನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದ ವಿಜಯ್ ಒಂದು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಿರುಚ್ಚಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಯಾರು ಟಿವಿಕೆ ಪಕ್ಷದಿಂದ ಅಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಮತ್ತೊಂದು ಕಡೆ ಮಾಜಿ ಸಿಎಂ ಎಂ. ಕೆ ಸ್ಟಾಲಿನ್ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಚರ್ಚೆ ನಡೀತಿದೆ.

ಇತ್ತೀಚೆಗೆ ನಟ, ನಿರ್ದೇಶಕ, ಕೊರಿಯೋಗ್ರಫರ್ ರಾಘವ ಲಾರೆನ್ಸ್ ಪೊಲಿಟಿಕಲ್ ಎಂಟ್ರಿ ಸುಳಿವು ಕೊಟ್ಟಿದ್ದರು. ತಿರುಚ್ಚಿ ಕ್ಷೇತ್ರದಿಂದ ಅವರಿಗೆ ಟಿವಿಕೆ ಪಕ್ಷದ ಟಿಕೆಟ್ ಸಿಗಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಲಾರೆನ್ಸ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ತಿರುಚ್ಚಿ ಕ್ಷೇತ್ರದಿಂದ ತ್ರಿಶಾ ನಟಿಸುತ್ತಾರಾ? ಎನ್ನುವ ಚರ್ಚೆ ಮತ್ತೆ ಶುರುವಾಗಿದೆ. ವಿಜಯ್ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ತ್ರಿಶಾ ಪೊಲಿಟಿಕಲ್ ಎಂಟ್ರಿ ಬಗ್ಗೆ ಚರ್ಚೆ ಶುರುವಾಗಿತ್ತು.
ಎಂಜಿಆರ್ ಜೊತೆ ಜಯಲಲಿತಾ ರಾಜಕೀಯರಂಗದಲ್ಲಿ ಮಿಂಚಿದಂತೆ ವಿಜಯ್ ಜೊತೆ ತ್ರಿಶಾ ಕೂಡ ಕಾಣಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ನಡೀತಿದೆ. ವಿಜಯ್ ಪತ್ನಿ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ ಬಳಿಕ ಆಗಾಗ್ಗೆ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಮದುವೆ ಸಮಾರಂಭಕ್ಕೆ ತ್ರಿಶಾ ಜೊತೆ ಹೋಗಿ ವಿಜಯ್ ಅಚ್ಚರಿ ಮೂಡಿಸಿದ್ದರು. ಇನ್ನು ಚುನಾವಣೆಯಲ್ಲಿ ಟಿವಿಕೆ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದಂತೆ ವಿಜಯ್ ಮನೆಗೆ ಹೋಗಿ ತ್ರಿಶಾ ಅಭಿನಂದನೆ ತಿಳಿಸಿ ಬಂದಿದ್ದರು.
ವಿಜಯ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಟ ಅಜಿತ್ ತಾಯಿ ನಿಧನರಾದಾಗ ವಿಜಯ್ ಜೊತೆ ಹೋಗಿ ತ್ರಿಶಾ ಅಂತಿಮ ನಮನ ಸಲ್ಲಿಸಿ ಬಂದಿದ್ದರು. ಇತ್ತೀಚೆಗೆ ವಿಜಯ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದ ಫೋಟೊವನ್ನು ತ್ರಿಶಾ ಪೋಸ್ಟ್ ಮಾಡಿದ್ದರು. ಈ ಮೂಲಕ ತಮ್ಮಿಬ್ಬರ ಅನುಬಂಧ ಎಂಥದ್ದು ಎಂದು ಸಾರಿ ಹೇಳಿದ್ದರು. ತ್ರಿಶಾ ಕೂಡ ಬಹಳ ಹಿಂದೆಯೇ ತಮಿಳುನಾಡು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ ಆಕೆ ರಾಜಕೀಯರಂಗಕ್ಕೆ ಬರುವುದು ಖಚಿತ ಎನ್ನಲಾಗ್ತಿದೆ. ತಿರುಚ್ಚಿ ಉಪಚುನಾವಣೆಯಲ್ಲೇ ಆಕೆಗೆ ಟಿಕೆಟ್ ಕೊಟ್ಟು ವಿಜಯ್ ಗೆಲ್ಲಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ನನಗೆ ಸದ್ಯಕ್ಕೆ ರಾಜಕೀಯರಂಗ ಪ್ರವೇಶ ಮಾಡುವ ಆಸೆ ಇಲ್ಲ ಎಂದು ರಾಘವ ಲಾರೆನ್ಸ್ ಹೇಳಿದ್ದಾರೆ. ತಿರುಚ್ಚಿ ಕ್ಷೇತ್ರದಿಂದ ಸ್ಪರ್ಧಿಸುವುದು ದೂರದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಆ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಮೂಡಿದೆ. ಟಿವಿಕೆ ಪಕ್ಷದಿಂದ ತ್ರಿಶಾಗೆ ಟಿಕೆಟ್ ಸಿಕ್ಕರೂ ಸಿಗಬಹುದು ಎನ್ನುವ ಊಹಾಪೋಹ ಶುರುವಾಗಿದೆ.
ತಿರುಚ್ಚಿ ಕ್ಷೇತ್ರದಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಸ್ಟಾಲಿನ್ ಸ್ಪರ್ಧಿಸಬಹುದು ಎನ್ನುವ ಗುಸುಗುಸು ಶುರುವಾಗಿದೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸ್ಟಾಲಿನ್ ತಮ್ಮದೇ ಕ್ಷೇತ್ರದಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿದ್ದರು. ಮತ್ತೆ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೀತಿದೆ. ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಸ್ಟಾಲಿನ್ ಬಗ್ಗೆ ಮುಖ್ಯಮಂತ್ರಿ ವಿಜಯ್ ಮಾಡಿದ್ದ ಕಾಮೆಂಟ್ ವೈರಲ್ ಆಗಿತ್ತು. ವಿಜಯ್ ಟಾಂಗ್ ಕೊಟ್ಟಿದ್ದು ನೋಡಿ ಮತ್ತೆ ವಿಧಾನಸಭೆಗೆ ಬಂದು ಸ್ಟಾಲಿನ್ ತಿರುಗೇಟು ಕೊಡುತ್ತಾರೆ ಎಂದು ಡಿಎಂಕೆ ಪಕ್ಷದವರು ಭಾವಿಸುತ್ತಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಗ್ಗೆ ವಿಜಯ್ ವ್ಯಂಗ್ಯವಾಡಿದ್ದರು. ಪುಟ್ಟ ಕಥೆ ಹೇಳ್ತೀನಿ ಎಂದು ಹೇಳಿ "ಎಲ್ಲಪ್ಪಾ ನಿಮ್ಮ ಅಪ್ಪ, ಕಾಣಿಸ್ತಾನೆ ಇಲ್ಲ" ಎಂದು ಅಣಕವಾಡಿದ್ದರು. ಹಾಗಾಗಿ ತಿರುಚ್ಚಿ ಕ್ಷೇತ್ರದಿಂದ ಸ್ಟಾಲಿನ್ ಕೂಡ ಸ್ಪರ್ಧಿಸುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications